ಭ್ರಷ್ಟಾಚಾರ ಪ್ರಕರಣ: ನೈತಿಕತೆ ಇದ್ದರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ
ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭ್ರಷ್ಟಾಚಾರ ಪ್ರಕರಣದಲ್ಲಿ ರಾಜ್ಯಪಾಲರು ವಿಚಾರಣೆಗೆ ಅವಕಾಶ ಕೊಟ್ಟಿದ್ದು, ಅದನ್ನು ಸಿದ್ದರಾಮಯ್ಯನವರು ಬಹಳ ನೈತಿಕವಾಗಿ ಪರಿಗಣಿಸಿ ರಾಜೀನಾಮೆ ಕೊಡಬೇಕು ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆಗ್ರಹಿಸಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರಕಾರದ ಭ್ರಷ್ಟಾಚಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಹಿಂದೆ ಇಂಥದ್ದೇ ಪ್ರಕರಣದಲ್ಲಿ ಸಿದ್ದರಾಮ್ಯನವರು ಮಾನ್ಯ ಬಿ.ಎಸ್.ಯಡಿಯೂರಪ್ಪ ಅವರನ್ನು ರಾಜೀನಾಮೆಗೆ ಒತ್ತಾಯ ಮಾಡಿದ್ದು ಕೂಡ ಸತ್ಯ. 4 ದಶಕಗಳ ಕಾಲ ಸಾರ್ವಜನಿಕ ಜೀವನ ಮಾಡಿದ ಸಿದ್ದರಾಮ್ಯನವರು, ತಾವು ಪರಿಶುದ್ಧರು ಎಂದು ತಮಗೆ ತಾವೇ ಅಫಿಡವಿಟ್ ಹಾಕಿಕೊಂಡು ಅನೇಕ ಸಂದರ್ಭಗಳಲ್ಲಿ ಅವರ ಮೇಲೆ ಬಂದ ಎಲ್ಲ ಆರೋಪಗಳನ್ನು ಲೋಕಾಯುಕ್ತ ಮುಂದಿದ್ದ 106 ಕೇಸುಗಳಲ್ಲಿ 65 ಪ್ರಕರಣಗಳಲ್ಲಿ ಅವರೇ ಅವುಗಳಿಗೆ ಬಿ ರಿಪೋರ್ಟ್ ಹಾಕಿಸಿಕೊಂಡಿದ್ದರು. ಚಳವಳಿ ರೂಪದಲ್ಲಿ ನಡೆಯುತ್ತಿದ್ದ ಲೋಕಾಯುಕ್ತವನ್ನು (ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ನ್ಯಾ. ವೆಂಕಟಾಚಲಯ್ಯ ಮೊದಲಾದವರ ನೇತೃತ್ವ) ಆ ಸಂಸ್ಥೆಯನ್ನೇ ಮುಚ್ಚಿಸಲು ಕಾರಣರಾಗಿದ್ದರು ಎಂದು ಕ್ಯಾಪ್ಟನ್ ಚೌಟ ಹೇಳಿದರು.