ಮಂಕಿ ಪಾಕ್ಸ್ ಕರಿನೆರಳು… ನಾಗರಿಕರೇ ಎಚ್ಚರ
ಜಗತ್ತಿನಲ್ಲಿ ಚಿತ್ರ ವಿಚಿತ್ರವಾದ ಕಾಯಿಲೆಗಳು ೨೦೧೯ರಿಂದ ಪ್ರಾರಂಭವಾಗುತ್ತಿರುವುದು ನಾವಿಂದು ಕಾಣಬಹುದು. ಅದಕ್ಕೆಲ್ಲಾ ಮುನ್ನುಡಿ ಬರೆದಿದ್ದು ಕೋವಿಡ್ ೧೯. ಆನಂತರದಲ್ಲಿ ಹೊಸ ಹೊಸ ಕಾಯಿಲೆಗಳ ಪರ್ವ ಶುರುವಾದಂತಿದೆ. ಈಗಿನ ಸಂದರ್ಭ ಹೇಗಿದೆ ಎಂದರೆ ಯಾರಿಗೆ ಯಾವುದೇ ಸಂದರ್ಭದಲ್ಲಿ ಯಾವುದೇ ತರಹದ ಕಾಯಿಲೆ ಹೇಳದೆ ಕೇಳದೆ ಬರಬಹುದು. ಪ್ರಸ್ತುತ ಈ ಟ್ರೆಂಡಿಂಗ್‌ನಲ್ಲಿ ಇರುವುದು "ಮಂಕಿ ಪಾಕ್ಸ್". ಬೇರೆ ಬೇರೆ ದೇಶಗಳಲ್ಲಿ ಈಗಾಗಲೇ ಸಾಕಷ್ಟು ಹರಡಿ ಪ್ರಸ್ತುತ ಈಗ ನಮ್ಮ ದೇಶಕ್ಕೂ ಲಗ್ಗೆ ಇಟ್ಟಂತಿದೆ. ಮೊಟ್ಟ ಮೊದಲ ಬಾರಿಗೆ ಇದನ್ನು ಆಫ್ರಿಕಾ ಖಂಡದಿಂದ ಹೊರಗೆ ಕಂಡುಬಂದ ವೈರಸ್ ಎಂದು ಗುರುತಿಸಲಾಗಿದೆ. ಮೊನ್ನೆಯಷ್ಟೇ ಕೇರಳದಲ್ಲಿ ಮಂಕಿ ಪಾಕ್ಸ್ ಕಾಯಿಲೆ ಪತ್ತೆಯಾಗಿದೆ. ಮಂಕಿ ಪಾಕ್ಸ್ ಎಂದರೆ ಇದೊಂದು ಪ್ರಾಣಿಗಳಿಂದ ಮನುಷ್ಯರಿಗೆ ವರ್ಗಾವಣೆಯಾಗುವ ರೋಗವಾಗಿದೆ. ಮಂಕಿ ಫಾಕ್ಸ್ ಸಾಮಾನ್ಯವಾಗಿ ವ್ಯಕ್ತಿಯು ಸೋಂಕಿತ ಪ್ರಾಣಿಯ ಸಂಪರ್ಕಕ್ಕೆ ಬಂದರೆ ಅಂದರೆ ಸೋಂಕಿತ ಪ್ರಾಣಿ ಉಗುರಿನಿಂದ ಪರಚಿದರೆ ಅದರ ಗಾಯದಿಂದ ಸೋರುತ್ತಿರುವ ದ್ರವ ಮನುಷ್ಯನ ಚರ್ಮದ ಮೇಲೆ ಬಿದ್ದರೆ ಅಥವಾ ಸೋಂಕಿತ ಪ್ರಾಣಿ ಮನುಷ್ಯನನ್ನು ಕಚ್ಚಿದರೆ ಹೀಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕಕ್ಕೆ ಬರುವ ಮನುಷ್ಯನಿಗೆ ಸೋಂಕು ತಗಲುತ್ತದೆ. ಈಗ ಲಭ್ಯವಾಗುತ್ತಿರುವ ಹೊಸ ಪ್ರಕರಣಗಳು ಮನುಷ್ಯನಿಂದ ಮನುಷ್ಯನಿಗೆ ಹರಡುತ್ತಿರುವ ಸಾಧ್ಯತೆಯನ್ನು ಹೆಚ್ಚಾಗಿ ಸೂಚಿಸುತ್ತಿವೆ. ಲೈಂಗಿಕ ಕ್ರಿಯೆ ಮೂಲಕ ಕೂಡ ವ್ಯಕ್ತಿಯಿಂದ ವ್ಯಕ್ತಿಗೆ, ಪರಸ್ಪರ ಬಟ್ಟೆ ಬದಲಾಯಿಸಿಕೊಳ್ಳುವುದರಿಂದ ಹರಡಬಲ್ಲದು ಎಂಬುದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಒಂದು ವೇಳೆ ಒಬ್ಬ ವ್ಯಕ್ತಿಗೆ ಇದ್ದಕ್ಕಿದ್ದಂತೆ ಮಂಕಿ ಪಾಕ್ಸ್ ಸೋಂಕು ತಗುಲಿದಲ್ಲಿ ಅದು ತಕ್ಷಣವೇ ಯಾವುದೇ ಸೂಚನೆಗಳನ್ನು ತೋರಿಸುವುದಿಲ್ಲ ಎಂದು ಹೇಳಲಾಗುತ್ತದೆ. ಏಕೆಂದರೆ ಸೋಂಕು ವೈರಸ್ ತನ್ನ ಪ್ರಭಾವ ತೋರಿಸುವುದು ೭ ದಿನದಿಂದ ೨೧ ದಿನಗಳ ಮೇಲೆ. ಮಂಕಿ ಪಾಕ್ಸ್ ಪತ್ತೆ ಆದವರ ಜೊತೆ ಇರಬೇಕಾದ ಸಂದರ್ಭ ಬಂದರೆ ಮಾಸ್ಕ್ ಧರಿಸುವುದು ಉತ್ತಮ.
ಮಂಕಿ ಫಾಕ್ಸ್ನ ಇತರ ಲಕ್ಷಣಗಳು ಜ್ವರ, ಮೈ ಕೈ ನೋವು, ತಲೆ ನೋವು, ಬೆನ್ನು ನೋವು, ಮೈನಡುಕ, ವಿಪರೀತ ದೈಹಿಕ ಆಯಾಸ, ದುಗ್ಧರಸ ಗ್ರಂಥಿಗಳು ಊದಿಕೊಂಡಿರುವುದು, ರಕ್ತದೊತ್ತಡದಲ್ಲಿ ಏರಿಳಿತ. ಈ ಮೇಲಿನ ಎಲ್ಲ ರೋಗ ಲಕ್ಷಣಗಳು ಒಬ್ಬ ವ್ಯಕ್ತಿಯಲ್ಲಿ ಕಂಡುಬಂದ ನಂತರದಲ್ಲಿ ಮುಖದ ಮೇಲೆ ಇದ್ದಕ್ಕಿದ್ದಂತೆ ದದ್ದುಗಳು ಉಂಟಾಗಲು ಪ್ರಾರಂಭವಾಗಿ ಕ್ರಮೇಣವಾಗಿ ಮೈತುಂಬ ಹರಡುತ್ತವೆ. ಮೊದಲಿಗೆ ಯಾವುದೇ ಬಣ್ಣದಿಂದ ಕೂಡಿಲ್ಲದ ಹಾಗೆ ಕಂಡುಬರುವ ದದ್ದುಗಳು ನಂತರದಲ್ಲಿ ಗಟ್ಟಿಯಾಗುತ್ತವೆ, ದಪ್ಪ ಆಗುತ್ತದೆ ಜೊತೆಗೆ ಅವುಗಳಲ್ಲಿ ನೀರು ಸಹ ತುಂಬಿಕೊಳ್ಳುತ್ತದೆ, ಕೆಲವೊಮ್ಮೆ ಕೀವು ಸಹ ತುಂಬಿಕೊಳ್ಳುತ್ತದೆ ಅನಂತರ ಅವುಗಳು ಒಣಗಿ ಹೋಗಿ ಬಿದ್ದು ಹೋಗುತ್ತವೆ. ಒಟ್ಟಿನಲ್ಲಿ ಈ ಸಂದರ್ಭದಲ್ಲಿ ಬಂದಂತ ಆರೋಗ್ಯ ಅಸ್ವಸ್ಥತೆ ೨ ರಿಂದ ೪ ವಾರಗಳವರೆಗೆ ಇರುತ್ತದೆ. ಮಂಕಿ ಪಾಕ್ಸ್ ಸಮಸ್ಯೆ ಉಸಿರಾಟದ ನಾಳದಲ್ಲಿ ಕಂಡುಬರುತ್ತದೆ ಆನಂತರದಲ್ಲಿ ದೇಹದ ಚರ್ಮದ ಮೇಲೆ ಅಲ್ಲಲ್ಲಿ ಗುಳ್ಳೆಗಳ ರೀತಿ ಕಾಣಿಸಿಕೊಳ್ಳುತ್ತದೆ. ಇದುವರೆಗೆ ಮಂಕಿ ಪಾಕ್ಸ್ ಸಮಸ್ಯೆಗೆ ಯಾವುದೇ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ, ಕೆಲವು ವೈದ್ಯರು ದೇಹದ ಅಸ್ವಸ್ಥತೆಯನ್ನು ತಡೆಯಲು ಆಂಟಿವೈರಲ್ ಔಷಧಿಗಳನ್ನು ನೀಡುತ್ತಾರೆ. ಕೆಲವು ಆಂಟಿ ವೈರಲ್ ಔಷಧಿಗಳು ಸಣ್ಣಪುಟ್ಟ ಅಡ್ಡ ಪರಿಣಾಮಗಳ ಜೊತೆಗೆ ಕೆಲಸ ಮಾಡುತ್ತವೆ. ಅಷ್ಟೇ ಅಲ್ಲದೆ ಎದುರಾದ ಆರೋಗ್ಯದ ಅಸ್ವಸ್ಥತೆಯನ್ನು ಕಡಿಮೆ ಮಾಡಲು ನೀಡಲಾದ ವ್ಯಾಕ್ಸಿಂಗ್ ಶೇ. ೮೫ರಷ್ಟು ಪರಿಣಾಮಕಾರಿಯಾಗಿದೆ, ವೈದ್ಯರು ಹೇಳುವ ರೀತಿಯಲ್ಲಿ ಇದಕ್ಕೆ ಸಂಬಂಧಪಟ್ಟಂತೆ ವ್ಯಾಕ್ಸಿನ್ ಅನ್ನು ಎರಡು ಡೋಸ್‌ಗಳಲ್ಲಿ ೨೮ ದಿನಗಳ ಅಂತರದಲ್ಲಿ ನೀಡಲಾಗುತ್ತದೆ. ಮಕ್ಕಳು ಈ ಸೋಂಕಿಗೆ ತುತ್ತಾಗಬಹುದಾದರೂ ಬಹುತೇಕ ಎಲ್ಲಾ ಮಕ್ಕಳಲ್ಲಿ ಅಪಾಯವೂ ಕಡಿಮೆ ಎನ್ನುತ್ತಾರೆ ವೈದ್ಯರು. ಸೋಂಕಿನ ಕುರಿತು ಸರಿಯಾದ ರೋಗ ನಿರ್ಣಯಕ್ಕಾಗಿ ಮಕ್ಕಳ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ವೈರಸ್ ಅರಳುವ ಹಾಗೂ ಹರಡುವ ಮೊದಲು ಅದನ್ನು ತಡೆಗಟ್ಟಲು ಉತ್ತಮ ನೈರ್ಮಲ್ಯ ಅಭ್ಯಾಸವನ್ನು ನಿರ್ವಹಿಸುವುದು ಅತ್ಯಗತ್ಯ. ಸೌಮ್ಯವಾದ ಸೋಪ್ ಅಥವಾ ಸ್ಯಾನಿಟೈಸರ್ ನಿಂದ ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳುವುದು, ಯಾರಿಗಾದರೂ ಮಂಕಿ ಪಾಕ್ಸ್ ವೈರಸ್ ಇರುವುದು ಪತ್ತೆಯಾದರೆ ಅವರ ನಿಕಟ ಸಂಪರ್ಕವನ್ನು ತಪ್ಪಿಸುವುದು ಸುರಕ್ಷಿತವಾಗಿದೆ. ಸದ್ಯಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವ ಪ್ರಕಾರ ಇಲಿಗಳು ಹಾಗೂ ಮಂಗ, ಕಾಡು ಪ್ರಾಣಿಗಳಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದ್ದು ಇದು ಇತರೆ ಸಾಕು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸಾಧ್ಯತೆಗಳೂ ಇರುವುದರಿಂದ ಬೆಕ್ಕು, ನಾಯಿ, ಪಾರಿವಾಳ, ಗಿಳಿ ಪಕ್ಷಿಗಳಂತ ಸಾಕು ಪ್ರಾಣಿಗಳ ವಿಚಾರದಲ್ಲಿ ಹೆಚ್ಚಿನ ಜಾಗೃತಿ ತೆಗೆದುಕೊಳ್ಳುವುದು ಅತಿ ಮುಖ್ಯವಾಗಿದೆ. ಇದರ ಜೊತೆಗೆ ನಾವು ತೆಗೆದುಕೊಳ್ಳುವ ಆಹಾರದ ಮೇಲೂ ಎಚ್ಚರ ವಹಿಸಬೇಕು, ಆದಷ್ಟು ಹೆಚ್ಚು ಕಾಯಿಸಿದ ನೀರನ್ನೇ ಕುಡಿಯಬೇಕು, ಪ್ರೋಟೀನ್ ತುಂಬಿದ ಆಹಾರವನ್ನು ತೆಗೆದುಕೊಳ್ಳುವುದು ಬಹಳ ಒಳ್ಳೆಯದು. ಜೊತೆಗೆ ಮನೆ ಮದ್ದನ್ನು ಮಾಡುವುದರ ಜೊತೆಗೆ ನಮ್ಮ ದೇಹದೊಳಗಿನ ವೈರಸ್ ಅನ್ನು ಆದಷ್ಟು ಕಡಿಮೆ ಮಾಡಬಹುದು. ಪ್ರಾಣಿಗಳ ದೇಹದಲ್ಲಿರುವ ತಿಗಣೆ, ಉಣ್ಣಿ, ತೋಟಗಳಲ್ಲಿರುವ ಜಿಗಣೆಗಳು ಮನುಷ್ಯನಿಗೆ ಕಚ್ಚಿದಲ್ಲಿ ಮೊದಲಿಗೆ ಅವುಗಳು ಸೋಂಕಿತ ರಕ್ತವನ್ನು ಹೊರಬಿಟ್ಟು ನಂತರ ನಮ್ಮ ರಕ್ತವನ್ನು ಎಳೆದುಕೊಳ್ಳುತ್ತವೆ. ಇದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ದೇಹಕ್ಕೆ ಪ್ರಾಣಿಗಳ ಮೈಯಲ್ಲಿ ಇರುವ ಉಣ್ಣಿ, ತಿಗಣೆಗಳು, ಜಿಗಣೆಗಳು ಅಂಟಿಕೊಳ್ಳದಂತೆ ದಪ್ಪ ಮೈಮುಚ್ಚುವ ಬಟ್ಟೆ ಧರಿಸಿ. ಹೊರಗಡೆ ತಿರುಗಾಡುವಾಗ ಶೂ ಧರಿಸುವುದನ್ನು ಮರೆಯಬೇಡಿ. ಎಲ್ಲದಕ್ಕೂ ಮುನ್ನೆಚ್ಚರಿಕೆಯೇ ಇದಕ್ಕೆ ಪ್ರಮುಖ ಪರಿಹಾರ.