For the best experience, open
https://m.samyuktakarnataka.in
on your mobile browser.

ಮಂಗಳೂರಿನ ಜನತೆಗೆ ಕಲುಷಿತ ನೀರು

03:46 PM Jan 20, 2025 IST | Samyukta Karnataka
ಮಂಗಳೂರಿನ ಜನತೆಗೆ ಕಲುಷಿತ ನೀರು

ಮನೆಯಲ್ಲಿರುವ 13 ಸಿಬ್ಬಂದಿಗೆ ಸಂಬಳ

ಮಂಗಳೂರು: ಮಹಾನಗರಕ್ಕೆ ಪೂರೈಕೆಯಾಗುತ್ತಿರುವ ನೀರು ಕಲುಷಿತವಾಗಿದೆ. ಎಸ್ ಟಿಪಿಗಳು ನೀರಿನ ಮೂಲವನ್ನು ಸೇರುತ್ತಿದ್ದು ಕೊಳಚೆ ನೀರನ್ನೇ ಜನರಿಗೆ ಪೂರೈಕೆ ಮಾಡಲಾಗುತ್ತಿದೆ. ಈ ಬಗ್ಗೆ ಮೇಯರ್ ಅವರಿಗೆ ಈಗಾಗಲೇ ಎರಡು ಬಾರಿ ಮನವಿ ಮಾಡಿ ಸದನದ ಬಾವಿಗಿಳಿದರೂ ಪ್ರಯೋಜನವಾಗಿಲ್ಲ. ಸತ್ಯಶೋಧನಾ ಸಮಿತಿ ರಚಿಸುವುದಕ್ಕೂ ಪಾಲಿಕೆಯ ಆಡಳಿತ ಮುಂದಾಗಿಲ್ಲ. ಹೀಗಾಗಿ ನಾವೇ ಸಮಿತಿ ರಚಿಸಿ ತನಿಖೆ ಮಾಡಿದ್ದೇವೆ. ಎಲ್ಲಿ ಎಸ್ ಟಿಪಿ ಕೊಳಚೆ ನೀರು ಸೇರುತ್ತಿದೆಯೋ ಅಲ್ಲಿ ಹೋಗಿ ಪ್ರತ್ಯಕ್ಷ ವರದಿ ತಯಾರಿಸಿ ಅದನ್ನು ಮೊನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರು ಭೇಟಿಯ ಸಂದರ್ಭದಲ್ಲಿ ನೀಡಿದ್ದೇವೆ“ ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
”ಈ ಬಗ್ಗೆ ತನಿಖೆ ಮಾಡುವಂತೆ ಪಾಲಿಕೆಯ ನೂತನ ಕಮಿಷನರ್ ಅವರಿಗೆ ಸತ್ಯಶೋಧನಾ ವರದಿ ನೀಡಿದ್ದೇವೆ. ನಾವು ದೂರು ಕೊಟ್ಟು ಸುಮ್ಮನೆ ಇರುವುದಿಲ್ಲ. ಅದು ನಿಜವೇ ಸುಳ್ಳೇ ಎಂಬ ಬಗ್ಗೆ ತನಿಖೆ ಮಾಡುತ್ತೇವೆ. ಪಚ್ಚನಾಡಿ, ಬಜಾಲ್, ಮಧ್ಯದಲ್ಲಿರುವ ಎಸ್ ಟಿಪಿಯನ್ನು ನಿರ್ವಹಣೆ ಮಾಡಲು ಎಂಆರ್ ಪಿಎಲ್ ಕಂಪೆನಿಗೆ ಒಪ್ಪಿಸಬೇಕಿದೆ. ಇದರಿಂದ ನಿರ್ವಹಣೆ ವೆಚ್ಚ ಕಡಿಮೆಯಾಗುವುದಲ್ಲದೆ ಮಂಗಳೂರಿನ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತದೆ. ಮಧ್ಯದಲ್ಲಿರುವ ಎಸ್ ಟಿಪಿಯಲ್ಲಿ ನೀರು ಶುದ್ಧೀಕರಣಗೊಳ್ಳುತ್ತಿಲ್ಲ. ಇದರಿಂದಾಗಿ ಅಲ್ಲಿಗೆ ಸಮೀಪದ ಖಂಡಿಗೆ ಎಂಬಲ್ಲಿ ತೋಡು, ಕೆರೆಯ ನೀರು ಕಲುಷಿತಗೊಂಡಿದೆ. ಇದರಿಂದಾಗಿ ವರ್ಷಕ್ಕೊಮ್ಮೆ ನಡೆಯುವ ಖಂಡಿಗೆ ಮೀನು ಹಿಡಿಯುವ ಜಾತ್ರೆಗೆ ಕಂಟಕ ಎದುರಾಗಿದೆ. ಕೆರೆಗೆ ಇಳಿದರೆ ಮಾರಕ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಸೃಷ್ಟಿಯಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ನಿಮ್ಮ ಆಡಳಿತದಲ್ಲಿ ಹೀಗಿರಲಿಲ್ವಾ ಅಂತಾ ಕೇಳ್ತಾರೆ. ಹೌದು ನಮ್ಮ ಕಾಲದಲ್ಲಿ ಕೆರೆಯ ನೀರಲ್ಲಿ ಬಟ್ಟೆ ತೊಳೆಯುತ್ತಿದ್ದರು. ಮೀನು ಹಿಡೀತಿದ್ದರು. ಈಗ ನೀರಿನ ಮೂಲಗಳಿಗೆ ಇಳಿಯುವ ಹಾಗೇ ಇಲ್ಲ. ಇದಕ್ಕೆ ಯಾರು ಹೊಣೆ?“ ಎಂದು ವಾಗ್ದಾಳಿ ನಡೆಸಿದರು.
”ಮಧ್ಯದ ಎಸ್ ಟಿಪಿ ಚಾಲನೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಬೀಗ ಜಡಿದು ಪ್ರತಿಭಟನೆ ಮಾಡುತ್ತೇವೆ. ಅಲ್ಲಿ 13 ಜನರಿಗೆ ನಿರ್ವಹಣೆಗೆ ಸಂಬಳ ನೀಡಲಾಗುತ್ತದೆ. ಆದರೆ ಯಾರೂ ಅಲ್ಲಿಲ್ಲ. ಕರೆಂಟ್ ಹೋದರೆ ಜನರೇಟರ್ ಇಲ್ಲ. ಒಂದು ಎಸ್ ಟಿಪಿಗೆ ವರ್ಷಕ್ಕೆ ಒಂದೂವರೆ ಕೋಟಿಯಂತೆ ಮೂರು ಎಸ್ ಟಿಪಿಗೆ ನಾಲ್ಕೂವರೆ ಕೋಟಿ ಹಣ ಪಡೆಯುತ್ತಾರೆ. ಇದೆಂತ ಸಾಧನೆ? ಇನ್ನಾದರೂ ಈ ಬಗ್ಗೆ ಕ್ರಮ ಜರುಗಿಸದೆ ಇದ್ದರೆ ಹೋರಾಟ ಮಾಡುತ್ತೇವೆ“ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಅನಿಲ್ ಕುಮಾರ್, ನವೀನ್ ಡಿಸೋಜ, ಅಶ್ರಫ್, ಲ್ಯಾನ್ಸ್ ಲಾಟ್ ಪಿಂಟೋ, ನವೀನ್ ಚಂದ್ರ ಆಳ್ವ, ಶಶಿಧರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

Tags :