For the best experience, open
https://m.samyuktakarnataka.in
on your mobile browser.

ಮಂಗಳೂರು-ಬೆಂಗಳೂರು ಮಧ್ಯೆ ಎರಡು ವಿಶೇಷ ರೈಲು

07:07 PM Jul 19, 2024 IST | Samyukta Karnataka
ಮಂಗಳೂರು ಬೆಂಗಳೂರು ಮಧ್ಯೆ ಎರಡು ವಿಶೇಷ ರೈಲು

ಮಂಗಳೂರು: ಗುಡ್ಡ ಕುಸಿತದಿಂದ ಮಂಗಳೂರು-ಬೆಂಗಳೂರು ನಡುವೆ ರಸ್ತೆ ಸಂಪರ್ಕ ಕಡಿತವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತುರ್ತಾಗಿ ಹೆಚ್ಚುವರಿ ರೈಲು ಸೇವೆ ಒದಗಿಸುವಂತೆ ಸಂಸದ ಕ್ಯಾ. ಬ್ರಿಜೇಶ ಚೌಟ ಮನವಿಗೆ ಸ್ಪಂದಿಸಿರುವ ರೈಲ್ವೆ ಅಧಿಕಾರಿಗಳು ಮಂಗಳೂರು-ಬೆಂಗಳೂರು ನಡುವೆ ಎರಡು ವಿಶೇಷ ರೈಲು ಓಡಿಸುವ ಆದೇಶ ಹೊರಡಿಸಿದ್ದಾರೆ.
ಮಂಗಳೂರು-ಬೆಂಗಳೂರು ನಡುವಿನ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು ರೈಲು ಸಂಖ್ಯೆ ೦೬೫೪೭ ಬೆಂಗಳೂರು ನಗರ ಜಂಕ್ಷನ್ನಿಂದ ಮಂಗಳೂರು ಜಂಕ್ಷನ್‌ಗೆ ೧೯ರಂದು ಹಾಗೂ ಮಂಗಳೂರು ಜಂಕ್ಷನ್‌ನಿಂದ ಯಶವಂತಪುರ ಜಂಕ್ಷನ್‌ಗೆ ರೈಲು ಸಂಖ್ಯೆ ೦೬೫೪೮ ಜು. ೨೦ರಂದು ತಲಾ ಒಂದು ಟ್ರಿಪ್ ನಂತೆ ಸಂಚರಿಸಲಿದೆ.
ರೈಲು ಸಂಖ್ಯೆ ೦೬೫೪೯ ಯಶವಂತಪುರ-ಮಂಗಳೂರು ಜಂಕ್ಷನ್‌ಗೆ ಹಾಗೂ ರೈಲು ಸಂಖ್ಯೆ ೦೬೫೫೦ ಮಂಗಳೂರು ಜಂಕ್ಷನ್ನಿಂದ ಯಶವಂತಪುರಕ್ಕೆ ಜು. ೨೧ ಮತ್ತು ೨೨ರಂದು ೨ ಟ್ರಿಪ್‌ಗಳಲ್ಲಿ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆಯ ಪ್ರಕಟನೆ ತಿಳಿಸಿದೆ.
ರೈಲು ಸಂಖ್ಯೆ ೦೬೫೪೭ ಬೆಂಗಳೂರು ನಗರ ಜಂಕ್ಷನ್ (ಎಸ್ಬಿಸಿ)ನಿಂದ ರಾತ್ರಿ ೧೧ ಗಂಟೆಗೆ ಹೊರಟು ಮರುದಿನ ಮಧ್ಯಾಹ್ನ ೧೧:೪೦ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ರೈಲು ಸಂಖ್ಯೆ ೦೬೫೪೮ ಮಂಗಳೂರು ಜಂಕ್ಷನ್ ನಿಂದ ಮಧ್ಯಾಹ್ನ ೧:೪೦ಕ್ಕೆ ಹೊರಟು ರಾತ್ರಿ ೧೧:೧೫ಕ್ಕೆ ಯಶವಂತಪುರ ತಲುಪಲಿದೆ.
ರೈಲು ಸಂಖ್ಯೆ ೦೬೫೪೯ ಯಶವಂತಪುರದಿಂದ ರಾತ್ರಿ ೧೨.೩೦ಕ್ಕೆ ಹೊರಟು ಮರುದಿನ ಮಧ್ಯಾಹ್ನ ೧೧:೪೦ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ರೈಲು ಸಂಖ್ಯೆ ೦೬೫೫೦ ಮಂಗಳೂರು ಜಂಕ್ಷನ್ ನಿಂದ ೧:೪೦ಕ್ಕೆಹೊರಟು ಯಶವಂತಪುರಕ್ಕೆ ರಾತ್ರಿ ೧೧:೧೫ಕ್ಕೆ ತಲುಪಲಿದೆ ಎಂದು ರೈಲ್ವೆ ಇಲಾಖೆ ಪ್ರಕಟನೆ ತಿಳಿಸಿದೆ.
ವ್ಯಾಪಕ ಮಳೆಯಿಂದಾಗಿ ಮಂಗಳೂರು ಮತ್ತು ಬೆಂಗಳೂರನ್ನು ಸಂಪರ್ಕಿಸುವ ಮುಖ್ಯ ಎರಡೂ ರಾಷ್ಟೀಯ ಹೆದ್ದಾರಿಗಳಲ್ಲಿ ಗುಡ್ಡ ಕುಸಿತದಿಂದ ವಾಹನ ಸಂಪರ್ಕ ಕಡಿತವಾಗಿದೆ. ಹಾಗಾಗಿ ಮಂಗಳೂರು ಬೆಂಗಳೂರು ನಡುವೆ ಹೆಚ್ಚುವರಿ ರೈಲು ಸೇವೆಯನ್ನು ತುರ್ತಾಗಿ ಆರಂಭಿಸುವಂತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಮತ್ತು ಮೈಸೂರು ಡಿಆರ್‌ಎಂಗೆ ಪತ್ರ ಬರೆದಿದ್ದರು.
ನಿನ್ನೆಯಿಂದಲೇ ಈ ಬಗ್ಗೆ ರೈಲ್ವೇ ಸಚಿವರು ಹಾಗೂ ಅಧಿಕಾರಿಗಳ ಜತೆ ಮಾತುಕತೆಯಲ್ಲಿ ತೊಡಗಿರುವ ಸಂಸದರು ಇಂದು ರೈಲ್ವೆ ಅಧಿಕಾರಿಗಳಿಗೆ ಪತ್ರ ಬರೆದ ಕೆಲವೇ ಗಂಟೆಗಳಲ್ಲಿ ರೈಲು ಅಧಿಕಾರಿಗಳು ಸ್ಪಂದಿಸಿ ವಿಶೇಷ ರೈಲು ಓಡಾಟಕ್ಕೆ ಆದೇಶ ನೀಡಿದ್ದಾರೆ.