ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ
ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ರಾಮೇಶ್ವರಂ ಕೆಫೆ ಮಾದರಿಯಲ್ಲಿ ಬಾಂಬ್ ಇಟ್ಟಿದ್ದಾಗಿ ಬೆದರಿಕೆ ಒಡ್ಡಲಾಗಿದೆ. ನ.೩೦ರಂದು ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಅಕ್ರಮ್ ವಾಯ್ಕರ್ ಎನ್ನುವ ಹೆಸರಲ್ಲಿದ್ದ ಇಮೇಲ್ ನಿಂದ ಬೆದರಿಕೆ ಸಂದೇಶ ಬಂದಿದೆ. ಈ ಬಗ್ಗೆ ಬಜ್ಪೆ ಠಾಣೆಗೆ ಸಿಐಎಸ್‌ಎಫ್ ಸಿಬಂದಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ತಮಿಳುನಾಡಿನಲ್ಲಿ ಬಂಧನಕ್ಕೀಡಾಗಿರುವ ಡ್ರಗ್ ಕಿಂಗ್ ಪಿನ್ ಎನ್ನಲಾದ ಜಾಫರ್ ಸಾದಿಕ್ ಮತ್ತು ಡಿಸಿಎಂ ಉದಯನಿಧಿ ಸ್ಟಾಲಿನ್ ಅವರ ಪತ್ನಿ, ಚಿತ್ರ ನಿರ್ಮಾಪಕಿ ಕೃತಿಗಾ ಉದಯನಿಧಿ ಅವರ ಮೇಲಿರುವ ಕೇಸನ್ನು ವಾಪಸ್ ಪಡೆಯಬೇಕು. ತಿರುಚ್ಚಿ ಸೆಂಟ್ರಲ್ ಜೈಲಿನಲ್ಲಿರುವ ಟಿಎನ್ ಎಲ್ ಎ ಉಗ್ರ ಸಂಘಟನೆಯ ಮುಖ್ಯಸ್ಥ ಎಸ್. ಮಾರನ್ ಅವರನ್ನು ಬಿಡುಗಡೆ ಮಾಡಬೇಕು ಎಂಬುದಾಗಿ ಬೇಡಿಕೆ ಮುಂದಿಡಲಾಗಿದೆ.
ರಾಮೇಶ್ವರ ಕೆಫೆ ಸ್ಫೋಟವನ್ನು ಪಾಕ್ ಐಎಸ್‌ಐ ನವರು ತಮಿಳುನಾಡು ಡಿಜಿಪಿಯ ಪುತ್ರಿ ದೌಡಿ ಜೀವಾಲ್ ಎಂಬವರನ್ನು ಬಳಸಿಕೊಂಡು ಮಾಡಿದ್ದಾರೆ. ಜಮೇಶಾ ಮುಬೀನ್ ಎಂಬಾತ ಇದಕ್ಕೆ ಸಹಕಾರ ನೀಡಿದ್ದಾನೆ ಎಂದು ಇಮೇಲ್ ಸಂದೇಶದಲ್ಲಿ ಬರೆದಿರುವುದಲ್ಲದೆ, ವಿ.ಬಾಲಕೃಷ್ಣನ್ ಐಪಿಎಸ್, ಎಡ್ವಕೇಟ್ ಶ್ವೇತಾ, ವರುಣ್ ಐಪಿಎಸ್ ಎಂಬ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಇದಲ್ಲದೆ, ರಾಮೇಶ್ವರ ಕೆಫೆ ಪ್ರಕರಣವನ್ನು ಐಎಸ್‌ಐನವರು ಮಾತ್ರ ಮಾಡಿದ್ದಾಗಿ ಬಿಂಬಿಸಲಾಗಿದೆ.. ಹೀಗೆ ಹಲವು ವಿಚಾರಗಳನ್ನು ಅರೆಬರೆ ಇಂಗ್ಲಿಷ್‌ನಲ್ಲಿರುವ ಬೆದರಿಕೆ ಸಂದೇಶದಲ್ಲಿ ಬರೆಯಲಾಗಿದೆ.
ಇದೇ ರೀತಿಯ ಬೆದರಿಕೆ ಸಂದೇಶ ಕಳೆದ ಅ.೨೫ರಂದು ತಿರುಪತಿಯ ಎರಡು ವಸತಿಗೃಹಗಳಿಗೆ ಬಂದಿತ್ತು. ಅದರಲ್ಲಿಯೂ ಜಾಫರ್ ಸಾದಿಕ್ ಮತ್ತು ಕೃತಿಕಾ ಉದಯನಿಧಿ ಹೆಸರು ಉಲ್ಲೇಖವಾಗಿತ್ತು. ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿರುವ ಬೆದರಿಕೆ ಸಂದೇಶದಲ್ಲಿ ತಮಿಳುನಾಡಿನ ವಿಚಾರ ಇರುವುದರಿಂದ ಈ ಕೃತ್ಯದಲ್ಲಿ ಅಲ್ಲಿನವರೇ ಇರುವ ಸಾಧ್ಯತೆಯಿದೆ.