For the best experience, open
https://m.samyuktakarnataka.in
on your mobile browser.

ಮಂಗಳೂರು ವಿವಿ ಘಟಕ ಕಾಲೇಜಿಗೆ ಆರ್ಥಿಕ ಸಮಸ್ಯೆ: ರಾಜ್ಯಪಾಲರಿಗೆ ಪತ್ರ

07:19 PM Jun 14, 2024 IST | Samyukta Karnataka
ಮಂಗಳೂರು ವಿವಿ ಘಟಕ ಕಾಲೇಜಿಗೆ ಆರ್ಥಿಕ ಸಮಸ್ಯೆ  ರಾಜ್ಯಪಾಲರಿಗೆ ಪತ್ರ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಗೊಳಪಡುವ ಐದು ಘಟಕ ಕಾಲೇಜುಗಳು ಕಾರ್ಯ ನಿರ್ವಹಿಸಲು ಕಳೆದ ನಾಲ್ಕು ವರ್ಷಗಳಿಂದ ಅನುಮತಿ ದೊರಕಿಲ್ಲ. ಜತೆಗೆ ಆರ್ಥಿಕ ಸಮಸ್ಯೆಯನ್ನೂ ಎದುರಿಸುತ್ತಿರುವುದರಿಂದ ಅವುಗಳ ನಿರ್ವಹಣೆ ಕಷ್ಟ ಸಾಧ್ಯವಾಗಿದೆ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವರು ಹಾಗೂ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ರಾಜ್ಯಪಾಲರಿಗೂ ಪತ್ರದ ಮೂಲಕ ತಿಳಿಸಲಾಗಿದೆ ಎಂದು ವಿವಿಯ ಉಪ ಕುಲಪತಿ ಡಾ.ಪಿ.ಎಲ್. ಧರ್ಮ ತಿಳಿಸಿದ್ದಾರೆ.
ನಗರದ ವಿ. ವಿ. ಕಾಲೇಜಿನಲ್ಲಿಂದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆರೇಳು ವರ್ಷಗಳಿಂದೀಚೆಗೆ ಬನ್ನಡ್ಕ ಹಾಗೂ ನೆಲ್ಯಾಡಿಯ ಕಾಲೇಜುಗಳು, ಮಂಗಳೂರು ವಿಶ್ವವಿದ್ಯಾನಿಲಯದ ಆವರಣದ ಘಟಕ ಕಾಲೇಜು, ಸಂಧ್ಯಾ ಕಾಲೇಜುಗಳು ಕಳೆದ ಏಳೆಂಟು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿವೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಅವುಗಳ ಸ್ಟಾಚ್ಯೂಟ್ಗೆ ಸರಕಾರದಿಂದ ಅನುಮತಿ ದೊರಕಿಲ್ಲ. ೨೦೧೪ರ ಎಪ್ರಿಲ್ ೧೫ರಂದು ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಗೂ ಅನುಮತಿಗಾಗಿ ಪತ್ರ ಬರೆಯಲಾಗಿದೆ ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯವು ತನ್ನ ಆಂತರಿಕ ಸಂಪತ್ತಿನ ಕ್ರೋಢೀಕರಣ ಶಕ್ತಿಯನ್ನು ಕಳೆದುಕೊಂಡಿದೆ. ಆಳ್ವಾಸ್, ಫಿಲೋಮಿನಾ, ವಿವೇಕಾನಂದ ಕಾಲೇಜುಗಳು ಸ್ವಾಯತ್ತ ಕಾಲೇಜುಗಳಾಗಿರುವುದರಿಂದ ಅವುಗಳಿಂದ ಬರುತ್ತಿದ್ದ ಶುಲ್ಕ ಸಿಗುತ್ತಿಲ್ಲ. ಕೊರೊನಾ ಬಳಿಕ ಸರಕಾರದಿಂದ ಅನುದಾನವೂ ಬರುತ್ತಿಲ್ಲ. ಇದರ ಜತೆಗೆ ಈ ಘಟಕ ಕಾಲೇಜುಗಳ ನಿರ್ವಹಣೆಯೂ ಕಷ್ಟವಾಗಿ, ಉಪನ್ಯಾಸಕರು, ಸಿಬ್ಬಂದಿಗೆ ಮೂರ್ನಾಲ್ಕು ತಿಂಗಳಿಗೊಮ್ಮೆ ವೇತನ ನೀಡುವ ಪರಿಸ್ಥಿತಿ ಎದುರಾಗಿದೆ. ವಿವಿಗೆ ಆದಾಯ ನೀಡುತ್ತಿದ್ದ ದೂರ ಶಿಕ್ಷಣ ಕೇಂದ್ರವನ್ನು ಸರಕಾರದ ಆದೇಶದ ಮೇರೆಗೆ ಮುಚ್ಚಲಾಗಿದೆ. ಮಂಗಳೂರು ವಿವಿಯ ಆಂತರಿಕ ಸಂಪನ್ಮೂಲ ಕಾಲೇಜುಗಳ ಶುಲ್ಕ, ವಿವಿಧ ಸರ್ಟಿಫಿಕೇಟ್‌ಗಳಿಂದ ಬರುವ ಮೊತ್ತಕ್ಕೆ ಸೀಮಿತಗೊಂಡಿದೆ. ಯುಜಿಸಿ ಪ್ರಾಜೆಕ್ಟ್‌ಗಳು, ಕೈಗಾರಿಕೆಗಳಿಂದ ದೊರೆಯುತ್ತಿದ್ದ ಆದಾಯವೂ ಕಡಿಮೆ ಆಗಿದೆ. ಈ ಎಲ್ಲದರ ಬಗ್ಗೆ ಸರಕಾರದ ಗಮನ ಸೆಳೆಯಾಗಿದೆ. ಈಗಾಗಲೇ ಮಂಗಳೂರು ವಿವಿ ಕ್ಯಾಂಪಸ್‌ನೊಳಗಿನ ಘಟಕ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ದಾಖಲಾತಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ವಿಧಾನಸಭಾ ಸ್ಪೀಕರ್ ಅವರ ಭರವಸೆ ಮೇರೆಗೆ ಆರಂಭಿಸಲಾಗಿದೆ ಎಂದರು.
ಘಟಕ ಕಾಲೇಜು ಮುಚ್ಚುವ ಬಗ್ಗೆ ಎಲ್ಲಿಯೂ ವಿವಿ ಮಾತೆತ್ತಿಲ್ಲ. ಆದರೆ ಸರಕಾರದಿಂದ ಅನುಮತಿಯೇ ಇಲ್ಲದೆ ಈ ಕಾಲೇಜುಗಳನ್ನು ನಡೆಸುವುದು ಅಸಾಧ್ಯ. ಈ ಹಿಂದೆ ಅನುಮತಿಯ ಭರವಸೆಯೊಂದಿಗೆ ಅದನ್ನು ನಡೆಸಲಾಗುತ್ತಿತ್ತಾದರೂ ಮುಂದೆ ನಡೆಸುವುದು ಸಾಧ್ಯವಿಲ್ಲ ಎನ್ನುವ ನಿಟ್ಟಿನಲ್ಲಿ ಈ ಬಾರಿ ದಾಖಲಾತಿ ಆರಂಭದ ಬಗ್ಗೆ ವಿವಿ ಪ್ರಸ್ತಾವನೆ ಹೊರಡಿಸಿತ್ತು ಎಂದು ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಟನೆ ನೀಡಿದರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಈ ಹಿಂದೆ ಕೇಳಿ ಬಂದಿರುವ ಹಲವು ಹಗರಣಗಳ ಕುರಿತಂತೆ ತನಿಖೆ ನಡೆಯುತ್ತಿದೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಸರಕಾರಿ ದಾಖಲೆಗಳನ್ನು ಪಡೆದು ಬೆಂಗಳೂರಿನ ಕೇಂದ್ರ ಮಟ್ಟದಲ್ಲಿ ತನಿಖೆ ನಡೆಯುತ್ತಿರುವುದರಿಂದ ಅದರ ಬಗ್ಗೆ ನಾವು ಪ್ರತಿಕ್ರಿಯಸಲಾಗದು. ಹಿಂದಿನ ಉಪ ಕುಲಪತಿಗಳ ಅವಧಿಯಲ್ಲಿ ಆಗಿರಬಹುದೆನ್ನದಾದ ಹಗರಣಗಳ ಬಗ್ಗೆ ತನಿಖೆ ಮಾಡುವ ಅಧಿಕಾರ ವಿವಿಗೆ ಇರುವುದಿಲ್ಲ. ಸಿಂಡಿಕೇಟ್ ಮೂಲಕ ಪತ್ರ ಬರೆಯುವ ಅವಕಾಶ ಮಾತ್ರ ಇದ್ದು ಅದನ್ನು ಮಾಡಲಾಗಿದೆ ಎಂದು ವಿವರಿಸಿದರು.