ಮಂಜೇಶ್ವರದಲ್ಲಿ ಷಷ್ಠಿ ಬ್ರಹ್ಮರಥೋತ್ಸವ – ರಥ ಬೀದಿಯಲ್ಲಿ ಭಕ್ತ ಸಾಗರ
ಮಂಗಳೂರು: ಕರ್ನಾಟಕದ ಗಡಿನಾಡ ಪ್ರದೇಶ ಕೇರಳದ ಕಾಸರಗೋಡಿನ ಪುಣ್ಯಕ್ಷೇತ್ರ ಹದಿನೆಂಟು ಪೇಟೆಯ ದೇವಳವೆಂಬ ಖ್ಯಾತಿಯ ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನದಲ್ಲಿ ಚಂಪಾಷಷ್ಠಿ ಉತ್ಸವ ಸಂಪನ್ನಗೊಂಡಿದೆ.
ದೇವಳದ ರಥಬೀದಿಯಲ್ಲಿ ಸಹಸ್ರಾರು ಭಗವತ್ ಭಕ್ತರ ಸಮ್ಮುಖದಲ್ಲಿ ರಥೋತ್ಸವ ಸಂಭ್ರಮ ನಡೆಯಿತು. ತುಳುನಾಡಿನಲ್ಲಿ ಹಿಂದಿನಿಂದಲೂ ನಾಗ ದೇವರ ಆರಾಧನೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.
ಕೋಟ್ಯಾಂತರ ಭಕ್ತರ ಆರಾಧ್ಯದೈವ ಭದ್ರ ನರಸಿಂಹ ಹಾಗೂ ಸುಬ್ರಹ್ಮಣ್ಯ ದೇವರು ಬ್ರಹ್ಮರಥದಲ್ಲಿ ರಥಾರೂಡನಾಗಿ ಭಕ್ತರಿಗೆ ದರ್ಶನ ನೀಡಿದ್ದು ಲಕ್ಷಾಂತರ ಭಕ್ತರು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.
ಮುಂಜಾನೆ ಶ್ರೀ ದೇವಳದಲ್ಲಿ ಪಂಚಾಮೃತ , ಕ್ಷೀರಾಭಿಷೇಕ, ಶತ ಕಲಶಾಭಿಷೇಕ ಗಳು ದೇವಳದಲ್ಲಿ ನೆರವೇರಿದವು . ಬಳಿಕ ಸಾಯಂಕಾಲ ಭದ್ರ ನರಸಿಂಹ ಹಾಗೂ ಸುಬ್ರಹ್ಮಣ್ಯ ದೇವರು ಬೆಳ್ಳಿ ಪಲ್ಲಕಿ ಯಲ್ಲಿ ಭುಜ ಸೇವೆಯ ಮೂಲಕ ರಥಾರೂಢವಾಗಿದ್ದು ವೈಭವ ಪೂರ್ಣವಾಗಿ ತೇರು ಉತ್ಸವ ನಡೆಯಿತು.
ಕಾಸರಗೋಡಿನ ಮಂಜೇಶ್ವರದ ಅನಂತೇಶ್ವರ ದೇವಾಲಯದಲ್ಲಿ ಸಾವಿರಾರು ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಚಂಪಾ ಷಷ್ಠಿ ಆಚರಿಸಿದರು. ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.ದೇವಸ್ಥಾನದ ಎದುರಿನ ರಥಬೀದಿಯಲ್ಲಿ ಅಸಂಖ್ಯಾತ ಭಕ್ತರಿಗೆ ದರ್ಶನ ನೀಡಿದ್ದಾನೆ. ಲಕ್ಷಾಂತರ ಮಂದಿ ಭಕ್ತರು ಸುಬ್ರಹ್ಮಣ್ಯನ ಐತಿಹಾಸಿಕ ವಾರ್ಷಿಕ ಉತ್ಸವಕ್ಕೆ ಸಾಕ್ಷಿಯಾಗಿದ್ದಾರೆ.
ಪುರಾಣ ಪ್ರಸಿದ್ಧ ಅನಂತೇಶ್ವರ ದೇವಾಲಯಕ್ಕೆ ಮಂಗಳೂರು, ಉಡುಪಿ ,ಕುಂದಾಪುರ , ಪುತ್ತೂರು , ಹಾಸನ, ಮಡಿಕೇರಿ, ಮುಂಬೈ , ಬೆಂಗಳೂರು , ಚೆನೈ ಮುಂತಾದ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.