ಮಂಡನೆ ಮಾತ್ರವಲ್ಲ ಓದಿನಲ್ಲೂ ದಾಖಲೆ
ಸಿಎಂ ಸಿದ್ದರಾಮಯ್ಯ ತಮ್ಮ ದಾಖಲೆಯ ೧೫ನೇ ಬಜೆಟ್ ವೇಳೆಯೇ ಬರೋಬ್ಬರಿ ೩ ಗಂಟೆ ೧೫ ನಿಮಿಷಗಳ ಕಾಲ ಬಜೆಟ್ ಮಂಡನೆ ಮಾಡುವ ಮೂಲಕ ರಾಜ್ಯದ ಇತಿಹಾಸದಲ್ಲಿಯೇ ಅತಿ ದೀರ್ಘ ಬಜೆಟ್ ಭಾಷಣ ಓದಿದ ದಾಖಲೆಗೆ ಪಾತ್ರರಾಗಿದ್ದಾರೆ. ಶುಕ್ರವಾರ ಬೆಳಗ್ಗೆ ೧೦.೧೫ಕ್ಕೆ ಬಜೆಟ್ ಓದಲು ಶುರು ಮಾಡಿದ ಸಿಎಂ ೧೮೦ ಪುಟಗಳನ್ನು ಮಧ್ಯಾಹ್ನ ೧.೩೦ಕ್ಕೆ ವಿರಾಮ ತೆಗೆದುಕೊಳ್ಳದೆ ಓದಿ ಅಂತ್ಯಗೊಳಿಸಿದರು. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ(೧೫) ಬಜೆಟ್ ಮಂಡಿಸಿದರು. ರಾಮಕೃಷ್ಣ ಹೆಗಡೆ ಅವರು ೧೨ ಬಾರಿ ಬಜೆಟ್ ಮಂಡಿಸಿದ್ದು ಎರಡನೇ ಸ್ಥಾನದಲ್ಲಿದ್ದಾರೆ.
೨೦೨೩ರ ವಿಧಾನಸಭಾ ಚುನಾವಣೆ ಬಳಿಕ ಜುಲೈ ೭ರಂದು ಬಜೆಟ್ ಮಂಡಿಸಿದ್ದ ವೇಳೆ ಸಿದ್ದರಾಮಯ್ಯ ಮೂರು ಗಂಟೆ ಕಾಲ ಆಯವ್ಯಯ ಪುಸ್ತಕವನ್ನು ಓದಿದ್ದರು. ಎರಡು ಬಾರಿಯೂ ಜೈ ಹಿಂದ್, ಜೈ ಕರ್ನಾಟಕ ಎಂದು ಸಿದ್ದರಾಮಯ್ಯ ತಮ್ಮ ಭಾಷಣವನ್ನು ಮುಗಿಸಿದರು. ಇದಕ್ಕೂ ಮುನ್ನ ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ೨:೩೮ ನಿಮಿಷಗಳ ಕಾಲ ಮುಂಗಡ ಪತ್ರವನ್ನು ಓದಿದ್ದರು. ಅದು ಕೂಡ ದಾಖಲೆಯಾಗಿತ್ತು.