For the best experience, open
https://m.samyuktakarnataka.in
on your mobile browser.

ಮಂಡಿ ನೋವು, ಮೂಳೆ ಸವೆತ ಜೀವನ ಶೈಲಿ ಸಮಸ್ಯೆ

11:40 PM Aug 25, 2024 IST | Samyukta Karnataka
ಮಂಡಿ ನೋವು  ಮೂಳೆ ಸವೆತ ಜೀವನ ಶೈಲಿ ಸಮಸ್ಯೆ

ಹುಬ್ಬಳ್ಳಿ: ಮೊಣಕಾಲು ಮಂಡಿ ನೋವು, ಬೆನ್ನುನೋವು ಮತ್ತು ಮೂಳೆ ಸವೆತ ಇವು ಆಧುನಿಕ ಕಾಲದ ಬಹುದೊಡ್ಡ ಸಮಸ್ಯೆಗಳಾಗಿದ್ದು, ಜೀವನ ಶೈಲಿಯನ್ನು ಹಾಳು ಮಾಡಿಕೊಂಡಿರುವುದೇ ಇವುಗಳಿಗೆ ಕಾರಣ ಎಂದು ಕಿಮ್ಸ್ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ ಭಾನುವಾರ ಇಲ್ಲಿ ಹೇಳಿದರು.
ಸಂಯುಕ್ತ ಕರ್ನಾಟಕ' ಆರೋಗ್ಯ ಹಬ್ಬದಲ್ಲಿಎಲುಬು ಕೀಲು ಆರೋಗ್ಯ' ಕುರಿತು ಉಪನ್ಯಾಸ ನೀಡಿದ ಅವರು, ಬದುಕುವ ವಿಧಾನವನ್ನು ಸರಿಪಡಿಸಿಕೊಳ್ಳದಿದ್ದರೆ ದೈಹಿಕ ಚಲನವಲನಗಳು ನಿಲ್ಲುತ್ತವೆ ಎಂದು ಎಚ್ಚರಿಸಿದರು.
ಮಿತಿ ಮೀರಿದ ದೇಹದ ತೂಕ ಮಂಡಿನೋವಿಗೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಬೊಜ್ಜು ಬಾರದಂತೆ ನೋಡಿಕೊಳ್ಳಬೇಕು. ದೈಹಿಕ ಚಟುವಟಿಕೆಗಳು, ವೇಗದ ನಡಿಗೆ ಮತ್ತು ವ್ಯಾಯಾಮಗಳಿಂದ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಒಳ್ಳೆಯ ಆಹಾರ ಸೇವನೆ ಹಾಗೂ ವ್ಯಾಯಾಮಗಳಿಂದ ಮೂಳೆಗಳ ಆರೋಗ್ಯ ಸುಸ್ಥಿಯಲ್ಲಿರುತ್ತದೆ. ಸೋಮಾರಿ ಜೀವನ ವಿಧಾನ, ಮೊಬೈಲ್‌ನಲ್ಲಿ ಮುಳುಗಿರುವುದು ಮತ್ತು ಕಡಿಮೆ ದೂರಕ್ಕೂ ವಾಹನಗಳನ್ನು ಅವಲಂಬಿಸುವುದು ಮಂಡಿನೋವಿನ ಪ್ರಕರಣಗಳು ಹೆಚ್ಚುವುದಕ್ಕೆ ಕಾರಣವಾಗಿದೆ. ಮೊದಲು ವಯಸ್ಸಾದ ನಂತರ ಕಾಣಿಸಿಕೊಳ್ಳುತ್ತಿದ್ದ ಮಂಡಿನೋವು ಈಗ ಯುವಕರಿಗೂ ಬರತೊಡಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ದೈಹಿಕ ತೂಕವು ಎತ್ತರಕ್ಕೆ ಅನುಗುಣವಾಗಿ ಇರಬೇಕು. ಸ್ವಲ್ಪ ಹೆಚ್ಚಿದ್ದರೆ ತೊಂದರೆಯಿಲ್ಲ. ಆದರೆ ನಿಗದಿತ ಮಿತಿಗಿಂತ ಶೇಕಡಾ ೨೦ ಅಥವಾ ಹೆಚ್ಚು ಇದ್ದರೆ ಅಪಾಯಕಾರಿ. ಮಂಡಿನೋವಿನಂತಹ ಸಮಸ್ಯೆಗೆ ಇದು ಖಂಡಿತ ದಾರಿ ಮಾಡಿಕೊಡುತ್ತದೆ ಎಂದು ಡಾ.ಕಮ್ಮಾರ ವಿವರಿಸಿದರು.
ಮೊಣಕಾಲ ಮೇಲೆ ಒತ್ತಡ ಬಿದ್ದು ಮೂಳೆಗೆ ಅಪಾಯ ಸಂಭವಿಸದಂತೆ ನೋಡಿಕೊಳ್ಳುವ ಉಪಕ್ರಮಗಳಲ್ಲಿ ಸರಿಯಾದ ಪಾದ ರಕ್ಷೆ ಧರಿಸುವುದು ಕೂಡ ಒಂದು. ಹಾಗೆಯೇ ಬೆನ್ನು ನೋವು ನಿರ್ವಹಣೆಗೆ ಸರಿಯಾದ ಭಂಗಿಯಲ್ಲಿ ಕೂರುವುದು ಮುಖ್ಯವಾಗಿದೆ ಎಂದರು.
ಆಧುನಿಕ ಸಮಾಜದ ಇನ್ನೊಂದು ಸಮಸ್ಯೆಯಾಗಿರುವ ಮೂಳೆ ಸವೆತ ಪ್ರಸ್ತಾಪಿಸಿದ ಡಾ.ಕಮ್ಮಾರ, ಈ ಪ್ರಕರಣಗಳು ಭಾರತದಲ್ಲಿ ಹೆಚ್ಚುತ್ತಿರುವುದಕ್ಕೆ ಕಾರಣ ವಿಟಮಿನ್ ಡಿ ಕೊರತೆ ಎಂದು ತಿಳಿಸಿದರು.

ಸರ್ಜರಿ ಅವಶ್ಯವೇ…?
ಮೊಣಕಾಲು ಮಂಡಿ ನೋವಿಗೆ ಶಸ್ತ್ರಚಿಕಿತ್ಸೆ ಅವಶ್ಯವೇ? ಡಾ.ಕಮ್ಮಾರ ಅವರಿಗೆ ಸಾರ್ವಜನಿಕರೊಬ್ಬರಿಂದ ಈ ಮುಖ್ಯ ಪ್ರಶ್ನೆ ಎದುರಾಯಿತು. ಹದಿನೈದು ವರ್ಷಗಳಿಂದ ಮಂಡಿ ನೋವಿದೆ. ಆಪರೇಷನ್ ಮಾಡಿಸಿಕೊಳ್ಳುವಂತೆ ಆಗಲೇ ವೈದ್ಯರು ಹೇಳಿದ್ದರು. ಆದರೂ ಮಾಡಿಸಿಕೊಂಡಿಲ್ಲ. ಈಗ ನನಗೆ ೭೧ ವರ್ಷ ವಯಸ್ಸು. ನಡೆದಾಡುತ್ತಿರುವೆ. ಹೀಗಾಗಿ ನನ್ನ ಕುತೂಹಲ' ಎಂದು ಇವರು ಹೇಳಿದರು. ಉತ್ತರಿಸಿದ ಡಾ.ಕಮ್ಮಾರ,ನಿಮಗೆ ನಿರ್ವಹಣೆ ಮಾಡಲು ಸಾಧ್ಯವಿದೆಯಾದರೆ ಆಪರೇಷನ್ ಅನಗತ್ಯ' ಎಂದರು. ಬೆನ್ನುನೋವಿಗೆ ಕೇವಲ ಜೀವನ ಶೈಲಿ ಮತ್ತು ಸರಿಯಾದ ಭಂಗಿಯಲ್ಲಿ ಕೂರದೇ ಇರುವುದಷ್ಟೇ ಕಾರಣವೇ? ಅಥವಾ ಗುಂಡಿ ಬಿದ್ದಿರುವ ರಸ್ತೆಗಳ ಕೊಡುಗೆಯೂ ಇದೆಯೇ ಎಂದು ಇನ್ನೋರ್ವರು ಕೇಳಿದರು. `ಹೌದು. ತಗ್ಗು- ಗುಂಡಿಗಳ ರಸ್ತೆಗಳಲ್ಲಿ ವಾಹನಗಳು ಕುಕ್ಕಿ ಕೂಡ ಬೆನ್ನು ನೋವು ಬರುತ್ತದೆ' ಎಂದರು.