For the best experience, open
https://m.samyuktakarnataka.in
on your mobile browser.

ಮಂತ್ರಾಲಯದ ಗುರುಸಾರ್ವಭೌಮ ವಿದ್ಯಾಪೀಠದ ಕುಲಪತಿಗೆ ಅತ್ಯುನ್ನತ ಗೌರವ

05:20 PM Jan 26, 2025 IST | Samyukta Karnataka
ಮಂತ್ರಾಲಯದ ಗುರುಸಾರ್ವಭೌಮ ವಿದ್ಯಾಪೀಠದ ಕುಲಪತಿಗೆ ಅತ್ಯುನ್ನತ ಗೌರವ

ಬಹುಶ್ರುತ ವಿದ್ವಾಂಸ ವಿ.ಆರ್. ಪಂಚಮುಖಿಗೆ 'ಪದ್ಮಶ್ರೀ' ಗರಿ

ಭೀಮಸೇನ ಕಲ್ಲೂರು

ರಾಯಚೂರು: ನಾಡಿನ ಖ್ಯಾತ ಅರ್ಥಶಾಸ್ತ್ರಜ್ಞರು ಹಾಗೂ ಸಂಸ್ಕೃತ ವಿದ್ವಾಂಸರಾದ ವಾಚಸ್ಪತಿ ವಿ.ಆರ್. ಪಂಚಮುಖಿ ಅವರಿಗೆ ಈ ಸಾಲಿನ ಪ್ರತಿಷ್ಠಿತ `ಪದ್ಮಶ್ರೀ' ಪ್ರಶಸ್ತಿ ಒಲಿದಿದೆ.

ಡಾ. ವಿ.ಆರ್. ಪಂಚಮುಖಿ (ವಾದಿರಾಜಾಚಾರ್ಯ ರಾಘವೇಂದ್ರಾಚಾರ್ಯ ಪಂಚಮುಖಿ) ಅವರು ಧಾರವಾಡ ಮೂಲದವರಾಗಿದ್ದು, ಪ್ರಸ್ತುತ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಆರು ದಶಕಗಳಿಂದಲೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅರ್ಥಶಾಸ್ತ್ರ, ಶಿಕ್ಷಣ ಮತ್ತು ಸಂಸ್ಕೃತ ಸಾಹಿತ್ಯ ಕ್ಷೇತ್ರದಲ್ಲಿ ನಿರಂತರ ಅಧ್ಯಯನ, ಸಂಶೋಧನಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಅಪೂರ್ವ ಸಾಧನೆಗೈದಿದ್ದಾರೆ. ಅರ್ಥಶಾಸ್ತ್ರ ಮತ್ತು ಸಂಸ್ಕೃತ ಸಾಹಿತ್ಯ ರಂಗದಲ್ಲಿನ ಅವರ ಸೇವೆ, ಸಾಧನೆ, ಕೊಡುಗೆಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಇದೀಗ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ `ಪದ್ಮಶ್ರೀ' ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇದು ಅವರ ಅಭಿಮಾನಿಗಳಲ್ಲಿ ಅತೀವ ಸಂತಸವನ್ನುಂಟು ಮಾಡಿದೆ.

ಪ್ರತಿಭಾವಂತ ವಿದ್ಯಾರ್ಥಿ: 88 ವರ್ಷದ ಡಾ. ವಿ.ಆರ್. ಪಂಚಮುಖಿ ಅವರು ವಿದ್ಯಾರತ್ನರೆಂದೇ ಖ್ಯಾತರಾಗಿದ್ದ ಧಾರವಾಡದ ರಾಘವೇಂದ್ರಾಚಾರ್ಯ ಪಂಚಮುಖಿ ಅವರ ಪುತ್ರರಾಗಿದ್ದು, 1956ರಲ್ಲಿ ಗಣಿತ ಮತ್ತು ಸಂಖ್ಯಾಶಾಸ್ತ್ರದಲ್ಲಿ ಅತ್ಯಧಿಕ ಅಂಕಗಳಿಸಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದರು. ನಂತರ ಸ್ನಾತಕೋತ್ತರ ಪದವಿಯಲ್ಲೂ ಮುಂಬೈ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದರಲ್ಲದೇ ಬಳಿಕ ಡೆಲ್ಲಿ ಸ್ಕೂಲ್ ಎಕನಾಮಿಕ್ಸ್ ಸಂಸ್ಥೆಯಲ್ಲಿ ಪಿಎಚ್.ಡಿ ಪದವಿಯಲ್ಲೂ ಚಿನ್ನದ ಪದಕ ಗಳಿಸಿದ್ದರು.
ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಕುಲಪತಿಯಾಗಿ ಹತ್ತು ವರ್ಷಗಳ ಕಾಲ (1998-2008) ಸೇವೆ ಸಲ್ಲಿಸಿದ್ದಾರಲ್ಲದೇ ತಮ್ಮ ಅವಧಿಯಲ್ಲಿ ವಿಜ್ಞಾನ-ಸಂಸ್ಕೃತ ವಸ್ತುಪ್ರದರ್ಶನದಂಥ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ತಿರುಪತಿ-ತಿರುಮಲ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದು, ಆಗ ತಿರುಪತಿಯಲ್ಲಿ ಶ್ರೀ ವೆಂಕಟೇಶ್ವರ ವೇದ ವಿಶ್ವವಿದ್ಯಾಲಯ ಸ್ಥಾಪನೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅರ್ಥಶಾಸ್ತ್ರದಲ್ಲಿ ಆಳವಾದ ಅಧ್ಯಯನ, ಸಂಶೋಧನೆ ಕೈಗೊಂಡು ನೂರಾರು ಪ್ರಬಂಧಗಳನ್ನು ಮಂಡಿಸುವುದರ ಜೊತೆಗೆ ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಮ್ಮೇಳನ, ಕಾರ್ಯಾಗಾರ, ವಿಚಾರ ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.

ಗುರುರಾಯರ ಅನುಗ್ರಹ: ಪ್ರಸ್ತುತ ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ನೆಲೆಗೊಂಡಿರುವ ಡಾ. ಪಂಚಮುಖಿ ಅವರು ಪ್ರಶಸ್ತಿಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ತಮ್ಮನ್ನು ಸಂಪರ್ಕಿಸಿದ ಸಂಯುಕ್ತ ಕರ್ನಾಟಕ'ದೊಂದಿಗೆ ಮಾತನಾಡಿ ಸಂತಸ ಹಂಚಿಕೊಂಡರು.ನನ್ನ ಆರಾಧ್ಯದೈವ ಶ್ರೀ ರಾಘವೇಂದ್ರಸ್ವಾಮಿಗಳ ಪರಮಾನುಗ್ರಹದಿಂದಾಗಿಯೇ ಆರ್ಥಿಕರಂಗ ಮತ್ತು ಸಂಸ್ಕೃತ ಕ್ಷೇತ್ರದಲ್ಲಿ ನನಗೆ ಕೆಲಸ ಮಾಡಲು, ಹಲವು ಕೃತಿಗಳನ್ನು ರಚಿಸಲು ಸಾಧ್ಯವಾಗಿದೆ, ಈಗ ಪ್ರಶಸ್ತಿ ಕೂಡ ಗುರುರಾಯರ ಅನುಗ್ರಹದಿಂದಲೇ ಸಿಕ್ಕಿದೆ' ಎಂದು ಅವರು ಹೇಳಿದರು.
ನಾನು ಯಾವತ್ತೂ ಪ್ರಶಸ್ತಿ, ಪುರಸ್ಕಾರಗಳಿಗೆ ಆಸೆಪಟ್ಟವನಲ್ಲ. ನನ್ನ ಕೆಲಸ-ಕಾರ್ಯ, ಸಾಹಿತ್ಯ ಕೃಷಿ, ಸಂಶೋಧನೆ, ಅಲ್ಪ ಸೇವೆ-ಸಾಧನೆಗಳನ್ನು ಗುರುತಿಸಿ ನಮ್ಮ ಜನರು, ವಿಶೇಷವಾಗಿ ಕೆಲ ನ್ಯಾಯಾಧೀಶರು, ಗಣ್ಯರು ಪ್ರೀತಿ, ಅಭಿಮಾನ ತೋರಿಸಿ ಪದ್ಮ ಪ್ರಶಸ್ತಿಗೆ ನನ್ನ ಹೆಸರು ಸೂಚಿಸಿ ನಾಮನಿರ್ದೇಶನ ಮಾಡಿದ್ದಾರೆ. ಗುರುರಾಯರ, ಅನುಗ್ರಹಕ್ಕೆ, ಜನರ ಅಭಿಮಾನಕ್ಕೆ ಋಣಿಯಾಗಿದ್ದೇನೆ ಎಂದು ಅವರು ವಿನೀತರಾಗಿ ಹೇಳಿದರು.

ಮಂತ್ರಾಲಯ ಶ್ರೀಗಳ ಹರ್ಷ: ಡಾ. ವಿ.ಆರ್. ಪಂಚಮುಖಿ ಅವರಿಗೆ ಪದ್ಮಶ್ರೀ' ಪ್ರಶಸ್ತಿ ಲಭಿಸಿರುವುದಕ್ಕೆ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಹರ್ಷ ವ್ಯಕ್ತಪಡಿಸಿದ್ದಾರೆ.ಡಾ. ಪಂಚಮುಖಿ ಅವರು ಎಲೆಮರೆಯ ಕಾಯಿಯಂತಿದ್ದು, ಸಂಸ್ಕೃತ ಮತ್ತು ಅರ್ಥಶಾಸ್ತ್ರ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆಗೈದಿದ್ದಾರೆ, ಅವರ ಕೊಡುಗೆಯನ್ನು ಕೇಂದ್ರ ಸರ್ಕಾರ ಪರಿಗಣಿಸಿ ಅತ್ಯುನ್ನತ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ' ಎಂದು ಶ್ರೀಗಳು ಹೇಳಿದ್ದಾರೆ.