ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ ಅಪರಾಧ
ನವದೆಹಲಿ: ಮಕ್ಕಳನ್ನು ಒಳಗೊಂಡಿರುವ ಅಶ್ಲೀಲ ಚಿತ್ರಗಳನ್ನು ಹಂಚುವ ಉದ್ದೇಶದಿಂದ ಅಥವಾ ವಾಣಿಜ್ಯ ಲಾಭದ ಉದ್ದೇಶದೊಂದಿಗೆ ಸಂಗ್ರಹಿಸುವುದು ಮತ್ತು ಡಿಜಿಟಲ್ ಸಾಧನಗಳಲ್ಲಿ ಅಂತಹ ಚಿತ್ರಗಳನ್ನು ವೀಕ್ಷಿಸುವುದು ಪೋಕ್ಸೋ ಕಾಯ್ದೆಯಡಿ ಅಪರಾಧ ಎಂದು ಸುಪ್ರೀಂ ಸೋಮವಾರ ಮಹತ್ವದ ತೀರ್ಪು ನೀಡಿದೆ.
ಈ ಕುರಿತು ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಅವರಿದ್ದ ಪೀಠ ಪೋಕ್ಸೊ ಕಾಯಿದೆಯ ಸೆಕ್ಷನ್ ೧೫ರ ಅಡಿಯಲ್ಲಿ ಅಪರಾಧ ಎಂದು ಪರಿಗಣಿ ಸಲು, ಉದ್ದೇಶದ ಅಗತ್ಯದ ಬಗ್ಗೆ ವಿವರಿಸಿದೆ.
ಇದೇ ವೇಳೆ ಮಕ್ಕಳ ಅಶ್ಲೀಲ ಚಿತ್ರ ಎಂಬ ಪದ ಬಳಸುವುದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ ನ್ಯಾಯಾಲಯ ಸುಗ್ರೀವಾಜ್ಞೆ ಮೂಲಕ ಸಂಸತ್ತು ಪೋಕ್ಸೊ ಕಾಯಿದೆಗೆ ತಿದ್ದುಪಡಿ ತಂದು, ಅದನ್ನು ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯದ ವಸ್ತು ಹೊಂದಿರುವ ಚಿತ್ರ ಎಂದು ಹೆಸರಿಸುವಂತೆ ಸಲಹೆ ನೀಡಿತು. ಅಲ್ಲದೆ ಮಕ್ಕಳ ಅಶ್ಲೀಲ ಚಿತ್ರ ಎಂಬ ಪದ ಬಳಸದಂತೆ ಅದು ಎಲ್ಲಾ ನ್ಯಾಯಾಲಯಗಳಿಗೂ ಸೂಚಿಸಿತು.
ಮಕ್ಕಳ ಅಶ್ಲೀಲ ಚಿತ್ರಗಳನ್ನು ಖಾಸಗಿಯಾಗಿ ವೀಕ್ಷಿಸುವುದು ಅಪರಾಧವಲ್ಲ ಎಂಬ ಮದ್ರಾಸ್ ಹೈಕೋರ್ಟ್ ತೀರ್ಪಿನ ವಿರುದ್ಧ ಜಸ್ಟ್ ರೈಟ್ ಫಾರ್ ಚಿಲ್ಡçನ್ ಅಲೈಯನ್ಸ್ ಎನ್ನುವ ಸರ್ಕಾರೇತರ ಸಂಸ್ಥೆ ಮೇಲ್ಮನವಿ ಸಲ್ಲಿಸಿತ್ತು. ವೈಯಕ್ತಿಕ ಎಲೆಕ್ಟ್ರಾನಿಕ್ ಸಾಧನದಲ್ಲಿ ಮಕ್ಕಳ ಅಶ್ಲೀಲತೆಯನ್ನು ಡೌನ್‌ಲೋಡ್ ಮಾಡು ವುದು ಅಥವಾ ವೀಕ್ಷಿಸುವುದು ಪೋಕ್ಸೊ ಕಾಯಿದೆ ಮತ್ತು ಐಟಿ ಕಾಯಿದೆಯಡಿ ಅಪರಾಧ ವಾಗುವುದಿಲ್ಲ ಎಂದು ನ್ಯಾ.ಎನ್.ಆನಂದ್ ವೆಂಕಟೇಶ್ ಅವರಿದ್ದ ಮದ್ರಾಸ್ ಹೈಕೋರ್ಟ್ ಪೀಠ ತಿಳಿಸಿತ್ತು. ತನ್ನ ಮೊಬೈಲ್ ಫೋನ್‌ನಲ್ಲಿ ಮಕ್ಕಳ ಎರಡು ಅಶ್ಲೀಲ ವೀಡಿಯೊಗಳನ್ನು ಡೌನ್‌ಲೋಡ್ ಮಾಡಿ ವೀಕ್ಷಿಸಿದ್ದಕ್ಕಾಗಿ ಪೋಕ್ಸೊ ಕಾಯಿದೆ ಮತ್ತು ಐಟಿ ಕಾಯಿದೆಯಡಿಯಲ್ಲಿ ಎಸ್ ಹರೀಶ್ ಎಂಬಾತನ ವಿರುದ್ಧದ ಪ್ರಕರಣ ರದ್ದುಗೊಳಿಸಿ ಹೈಕೋರ್ಟ್ ಈ ಆದೇಶ ನೀಡಿತ್ತು. ಈ ಆದೇಶ ಈಗ ರದ್ದಾಗಿದೆ.
ಮೇಲ್ಮನವಿ ಅರ್ಜಿ ವಿಚಾರಣೆ ನಡೆಸುವಾಗ ಹೈಕೋರ್ಟ್ನ ಅವಲೋಕನ ಪ್ರಮಾದದಿಂದ ಕೂಡಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಪೀಠ ಟೀಕಿಸಿತ್ತು.