ಮಕ್ಕಳ ಭವಿಷ್ಯಕ್ಕೆ ಹೊಸ ಹೊಳಪು ದೊರೆಯಲಿ
ಇಂದು ಮಕ್ಕಳೆಲ್ಲರಿಂದ ಚಾಚಾ ನೆಹರು ಎಂದೇ ಕರೆಸಿಕೊಳ್ಳುತ್ತಿದ್ದ ದೇಶದ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರು ಅವರ ಜನ್ಮದಿನ. ಭವ್ಯ ಭಾರತ ದೇಶ ಕಂಡ ಅಪರೂಪದ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರು ಮಕ್ಕಳ ಸಮೂಹಕ್ಕೆ ಅಕ್ಕರೆಯ, ಪ್ರೀತಿಯ ಚಾಚಾ ಆಗಿದ್ದರು.
ನವೆಂಬರ್ ೧೪ ಮಕ್ಕಳಿಗೆಂದೇ ಮೀಸಲಾದ ದಿನ. ಸದಾ ಚೆಂಡಿನಂತೆ ಪುಟಿಯುವ ಮಕ್ಕಳು ದೇಶದ ಭವಿಷ್ಯವನ್ನು ಪ್ರತಿನಿಧಿಸುವ ಅತ್ಯಮೂಲ್ಯವಾದ ಅಪೂರ್ವ ಸಂಪತ್ತು. ಎಲ್ಲರೂ ಹೇಳುವಂತೆ ಮಕ್ಕಳ ಮನಸ್ಸು ಹೂವಿನಂತೆ ಮಧುರ ಮತ್ತು ನಿಷ್ಕಲ್ಮಶವಾದದ್ದು. ಇದಕ್ಕೆ ಒಂದಿಷ್ಟೂ ಮುಕ್ಕಾಗದಂತೆ ಕಾಪಾಡಬೇಕಾದ ಜರೂರತ್ತಿದೆ. ಜಾಗತೀಕರಣ, ಖಾಸಗೀಕರಣ ಮತ್ತು ನಗರೀಕರಣದ ಈ ದಿನಮಾನದಲ್ಲಿ ಎಲ್ಲೆಡೆ "ಮಕ್ಕಳಸ್ನೇಹಿ" ವಾತಾವರಣ ರೂಪುಗೊಳ್ಳಲು ಈ ಸಡಗರ, ಸಂಭ್ರಮದ ದಿನಾಚರಣೆ ಬುನಾದಿಯಾಗಬೇಕು.
ಇಂದು ಮಕ್ಕಳೆಲ್ಲರಿಂದ ಚಾಚಾ ನೆಹರು ಎಂದೇ ಕರೆಸಿಕೊಳ್ಳುತ್ತಿದ್ದ ದೇಶದ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರು ಅವರ ಜನ್ಮದಿನ. ಭವ್ಯ ಭಾರತ ದೇಶ ಕಂಡ ಅಪರೂಪದ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರು ಮಕ್ಕಳ ಸಮೂಹಕ್ಕೆ ಅಕ್ಕರೆಯ, ಪ್ರೀತಿಯ ಚಾಚಾ ಆಗಿದ್ದರು. ಬಹು ಭಾಷಾ ಪಂಡಿತ, ಮಹಾಮೇಧಾವಿ ಮತ್ತು ಪ್ರಕರವಾದ ವ್ಯಕ್ತಿತ್ವವುಳ್ಳ ಜವಾಹರಲಾಲ್ ನೆಹರು ಅವರು ಕಾಶ್ಮೀರಿ ಪಂಡಿತ ಕುಟುಂಬದ ಪ್ರಸಿದ್ಧ ವಕೀಲರಾದ ಮೋತಿಲಾಲ್ ನೆಹರು ಮತ್ತು ಸ್ವರೂಪರಾಣಿ ದಂಪತಿಗಳ ಮಗನಾಗಿ ೧೪-೧೧-೧೮೮೯ ರಂದು ಅಲಹಾಬಾದನಲ್ಲಿ ಜನಿಸಿದರು. ದೇಶದ ಪ್ರಗತಿಗೆ ನಿರಂತರ ಶ್ರಮಿಸಿ ರಾಷ್ಟ್ರದ ಸರ್ವಾಂಗೀಣ ಬೆಳವಣಿಗೆಗೆ ಹೊಸ ಬುನಾದಿ ಹಾಕಿದ ಮಹಾ ನಾಯಕನನ್ನು ನಾವು ಅತ್ಯಂತ ಹೆಮ್ಮೆಯಿಂದ ನೆನೆಯಬೇಕು. ದೇಶದ ಮೊದಲ ಪ್ರಧಾನ ಮಂತ್ರಿಯಾಗಿ ನೆಹರು ಅವರು ಜಾರಿಗೆ ತಂದ ಹೊಸ ಯೋಜನೆಗಳ ಪಟ್ಟಿ ದೊಡ್ಡದಿದೆ. ಅವರು ದೇಶದ ಅಭಿವೃದ್ಧಿಗೆ ಸಲ್ಲಿಸಿದ ಸೇವೆ ಅಪಾರವಾದದ್ದು. ಅಂತಹ ಬಹುಮುಖಿ ಮತ್ತು ಬಹುಮುಖ್ಯ ವ್ಯಕ್ತಿತ್ವವುಳ್ಳ ಜನನಾಯಕನ ಹುಟ್ಟುಹಬ್ಬದ ದಿನವನ್ನು ದೇಶದ ತುಂಬಾ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.
ಇಂದಿನ ಮಕ್ಕಳು ಭಾವಿ ಭವಿಷ್ಯದ ನಾಗರಿಕರು. ಹೀಗೆಂದು ನಾವು ಬಹುಕಾಲದಿಂದ ಹೇಳುತ್ತಲೇ ಬಂದಿದ್ದೇವೆ. ಈಗಲೂ ನಾವು ಇದೇ ಮಾತು ಹೇಳುತ್ತಲೇ ಇದ್ದೇವೆ. ಹೀಗೆ ಹೇಳುತ್ತ ಮುದ್ದು ಮಕ್ಕಳ ಕಣ್ಣುಗಳಲ್ಲಿ ದೇಶದ ಕನಸು ಕಾಣುವವರು ನಾವುಗಳು. ಆದರೆ, ಇಂದು ಮಕ್ಕಳ ಕುರಿತು ಕನಿಕರವಾಗಲಿ, ಅನುಕಂಪವಾಗಲಿ ತೋರಿಸುವುದಕ್ಕೂ ಅವರು ಬದುಕುವ ವಾಸ್ತವ ಸ್ಥಿತಿಗೆ ಯಾವುದೇ ರೀತಿಯ ಸಾಮ್ಯತೆ ಇಲ್ಲದಂತಾಗಿದೆ. ನಿಜವಾಗಿಯೂ ಇವತ್ತಿನ ಬಾಲ ಕಾರ್ಮಿಕ ಮಕ್ಕಳ ಸ್ಥಿತಿ ನೋಡಿದಾಗ ದೇಶದ ಬಹುಪಾಲು ಮಕ್ಕಳ ಬದುಕು ಎತ್ತಕಡೆಗೆ ಸಾಗುತ್ತಿದೆ ಎಂಬುದು ತಿಳಿಯುತ್ತದೆ. ನಮ್ಮ ನಡುವೆ ಇರುವ ಅನೇಕ ಮಕ್ಕಳು ಅನಕ್ಷರತೆಯ ಅಂಧಕಾರದಲ್ಲಿ ಬಳಲುವುದರ ಜೊತೆಗೆ ಅನಾಥರಾಗಿ ಯಾವುದೇ ಆಸರೆ ಇಲ್ಲದೆ ಅಲೆಯುತ್ತಿದ್ದಾರೆ. ಇಂದು ಜಗತ್ತಿನಲ್ಲಿ ಬಹುಪಾಲು ಮಕ್ಕಳು ಬಾಲ ಕಾರ್ಮಿಕರಾಗಿದ್ದಾರೆ. ಇನ್ನೂ ನಮ್ಮ ಭಾರತ ದೇಶದಲ್ಲಿ ಬಾಲ ಕಾರ್ಮಿಕ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಎಳೆಯ ವಯಸ್ಸಿನಲ್ಲಿ ಆಡುತ್ತ, ಹಾಡುತ್ತ ನಲಿದಾಡಬೇಕಾದ ಮಕ್ಕಳು ದುಡಿಮೆಯಲ್ಲಿ ಸಿಲುಕಿ ಕಮರಿ ಹೋಗುತ್ತಿರುವುದು ತುಂಬಾ ನೋವಿನ ಸಂಗತಿ.
೧೯೫೦ ಸೆಪ್ಟೆಂಬರ್ ೩೦ರಂದು ವಿಶ್ವಸಂಸ್ಥೆಯಲ್ಲಿ ಪ್ರಪಂಚದ ಎಲ್ಲ ರಾಷ್ಟ್ರಗಳ ನಾಯಕರು ಹಾಗೂ ಉನ್ನತ ಅಧಿಕಾರಿಗಳು ಒಂದೆಡೆ ಸೇರಿಕೊಂಡು ಮಕ್ಕಳ ವಿಚಾರದಲ್ಲಿ ವಿಶೇಷ ಚರ್ಚೆ, ಚಿಂತನೆಗೈದು ಅವರ ಏಳ್ಗೆಗೆ ಹಲವಾರು ಹಕ್ಕುಗಳು ಮತ್ತು ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸಿದರು. ಮಕ್ಕಳ ಹಿತ ಕಾಪಾಡುವ ಸಲುವಾಗಿ, ಅವರ ಆರೋಗ್ಯ, ರಕ್ಷಣೆ, ಆಹಾರ ಮತ್ತು ಶಿಕ್ಷಣ… ಹೀಗೆ ಅವರ ಒಳಿತಿಗಾಗಿ ಮೊದಲಾದ ವಿಷಯಗಳ ಕುರಿತು ಕೆಲವು ನಿಯಮಗಳನ್ನು ತಕ್ಷಣವೇ ಜಾರಿಗೆ ತರಬೇಕೆಂದು ಒತ್ತಾಯಿಸಲಾಯಿತು. ಈ ಹಿನ್ನೆಲೆಯಲ್ಲಿ ಯುನಿಸೆಫ್ ಪ್ರಮುಖ ಪಾತ್ರವಹಿಸಿತು. ಆದರೆ, ಇವತ್ತಿಗೂ ನಮ್ಮಲ್ಲಿ ಬಾಲ ಕಾರ್ಮಿಕ ಪದ್ಧತಿಯಂತಹ ಅನಿಷ್ಟ ವ್ಯವಸ್ಥೆ ಹೆಮ್ಮರವಾಗಿ ಬೆಳೆಯುತ್ತಿರುವುದು ಮಕ್ಕಳ ಮುಂದಿನ ಭವಿಷ್ಯಕ್ಕೆ ಕಂಟಕವಾಗುತ್ತದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ತೆರೆದ ಕಣ್ಣುಗಳಿಂದ ನೋಡಿ ಸೂಕ್ತವಾದ ಕ್ರಮ ಕೈಗೊಳ್ಳಬೇಕು. ಮಕ್ಕಳ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸದೆ, ಅವರಿಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿ ಆ ಮಕ್ಕಳಿಗೆ ಹೊಸ ಬದುಕು ಕೊಡುವ ಕೆಲಸ ಆಗಬೇಕು. ಇದು ಕೇವಲ ಸರ್ಕಾರದ ಜವಾಬ್ದಾರಿ ಎಂದು ಕೈ ಕಟ್ಟಿಕೊಂಡು ಕೂಡದೆ ಇದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವೆಂದು ಅರಿತು ಮಕ್ಕಳ ಉಜ್ವಲ ಭವಿಷ್ಯಕ್ಕೆ ಎಲ್ಲರೂ ನಾಂದಿ ಹಾಡಬೇಕು. ಒಟ್ಟಿನಲ್ಲಿ ಮಕ್ಕಳು ಯಾವುದೇ ಅಪಾಯಕಾರಿ ಕೆಲಸ ಮಾಡುವುದು ನಿಷೇಧಿಸಿ ಈ ಅನಿಷ್ಟ ಪದ್ಧತಿಯನ್ನು ಸಮಾಜದಿಂದ ನಿರ್ಮೂಲನೆ ಮಾಡಬೇಕು. ಅಂದಾಗ ಮಾತ್ರ ನಾವೆಲ್ಲರೂ ಶಾಲಾ-ಕಾಲೇಜುಗಳಲ್ಲಿ, ಸರ್ಕಾರಿ ಇಲಾಖೆಗಳಲ್ಲಿ ಮತ್ತು ಅನೇಕ ಸಂಘ-ಸಂಸ್ಥೆಗಳಲ್ಲಿ ಮಕ್ಕಳೊಂದಿಗೆ ಆಚರಿಸುವ ಈ ಮಕ್ಕಳ ದಿನಾಚರಣೆಗೆ ಹೊಸ ಮೆರಗು, ಹೊಸ ಅರ್ಥ ಕಲ್ಪಿಸಿದಂತಾಗುತ್ತದೆ.
- ಸಿ.ಎಸ್. ಆನಂದ, ಪ್ರಾಧ್ಯಾಪಕರು, ಕಲಬುರಗಿ