ಮಗನಿಂದಲೇ ತಂದೆ-ತಾಯಿಯ ಕೊಲೆ
ಹುಬ್ಬಳ್ಳಿ: ಆಸ್ತಿ ವಿಚಾರಕ್ಕೆ ಸಂಬಂಧಿಸಿಧಿಸಿದಂತೆ ಮಗನೇ ತಂದೆ-ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಕುಸುಗಲ್ ಗ್ರಾಮದ ಅಶೋಕಪ್ಪ ಕೊಬ್ಬಣ್ಣವರ ಹಾಗೂ ಶಾರದಮ್ಮ ಕೊಬ್ಬಣ್ಣವರ ಮೃತ ದುರ್ದೈವಿಗಳು. ಗಂಗಾಧರಪ್ಪ ಕೊಬ್ಬಣ್ಣವರ ಕೊಲೆಗೈದು ಪರಾರಿಯಾದವ. ಕೊಲೆ ಆರೋಪಿ ಗಂಗಾಧರಪ್ಪ, ಮೃತ ಅಶೋಕಪ್ಪ ಕೊಬ್ಬಣ್ಣವರನ ಮೊದಲ ಹೆಂಡತಿಯ ಮಗ. ಮೊದಲ ಹೆಂಡತಿಯ ಕಾಲದ ಬಳಿಕ ಅಶೋಕಪ್ಪ, ಶಾರದಮ್ಮರನ್ನು ಮದುವೆಯಾಗಿದ್ದರು. ಅಲ್ಲಿಂದಲೇ ಆಸ್ತಿಗಾಗಿ ಆಗಾಗ ತಂದೆ ಮಗನ ನಡುವೆ ಗಲಾಟೆ ನಡೆಯುತ್ತಿತ್ತು. ಮೃತ ಅಶೋಕಪ್ಪ ಮತ್ತು ಶಾರದಮ್ಮ ದಂಪತಿ ಕುಸುಗಲ್ ಗ್ರಾಮದಲ್ಲಿ ನೆಲೆಸಿದ್ದರು. ಗಂಗಾಧರಪ್ಪ ಮಾತ್ರ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನಲ್ಲಿ ವಾಸವಾಗಿದ್ದ. ತಮಗಿದ್ದ ಎರಡು ಎಕರೆ ಜಮೀನಿನ ಸಲುವಾಗಿ ಆಗಾಗ ಗಲಾಟೆಗಳು ನಡೆಯುತ್ತಿದ್ದವು.
ಶುಕ್ರವಾರ ಕಂಠಪೂರ್ತಿ ಕುಡಿದು ಮನೆಯಲ್ಲಿ ಜಗಳ ತೆಗೆದಿದ್ದ ಗಂಗಾಧರಪ್ಪ, ಆಸ್ತಿಯನ್ನು ತನ್ನ ಹೆಸರಿಗೆ ನೋಂದು ಮಾಡಿಕೊಡುವಂತೆ ಪಟ್ಟು ಹಿಡಿದಿದ್ದ ಎನ್ನಲಾಗಿದೆ.
ಆಸ್ತಿ ಬರೆದುಕೊಡಲು ಅಶೋಕಪ್ಪ ನಿರಾಕರಿಸುತ್ತಿದ್ದಂತೆ ಕುಪಿತಗೊಂಡ ಗಂಗಾಧರಪ್ಪ ಏಕಾಏಕಿ ಮಾರಕಾಸ್ತ್ರದಿಂದ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಪತಿಯನ್ನು ಬಿಡಿಸಲು ಶಾರದಮ್ಮ ಮಧ್ಯ ಪ್ರವೇಶಿಸಿದ್ದರು. ಇದೇ ವೇಳೆ ಆಕ್ರೋಶಗೊಂಡ ಗಂಗಾಧರಪ್ಪ ಮಾರಕಾಸ್ತ್ರದಿಂದ ಇಬ್ಬರನ್ನೂ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾನೆ.
ಪ್ರಕರಣ ದಾಖಲಿಸಿಕೊಂಡು, ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿರುವ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು, ಪರಾರಿಯಾಗಿರುವ ಗಂಗಾಧರಪ್ಪನ ಬಂಧನಕ್ಕೆ ಜಾಲ
ಬೀಸಿದ್ದಾರೆ.