ಮಗನಿಗೆ ಪಾಸ್ ಮಾಡಲು ಶಿಕ್ಷಕನ ಒತ್ತಾಯ
ಯಾದಗಿರಿ(ಕೆಂಭಾವಿ): ಸರಕಾರಿ ಶಾಲೆಯ ಮುಖ್ಯಗುರು ತನ್ನ ಮಗನಿಗೆ ಪರೀಕ್ಷೆಯಲ್ಲಿ ನಕಲು ಮಾಡಲು ಸಹಕರಿಸುವಂತೆ ಕೊಠಡಿ ಮುಖ್ಯ ಅಧೀಕ್ಷಕನಿಗೆ ಕರೆ ಮಾಡಿ ಒತ್ತಾಯಿಸಿರುವ ಆಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಹುಣಸಗಿ ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಸಸ್ಸೆಲ್ಸಿ ಪರೀಕ್ಷೆ-3ರಲ್ಲಿ ತಾಲೂಕಿನ ವಜ್ಜಲ್ ಸರಕಾರಿ ಪ್ರೌಢ ಶಾಲೆಯ ಮುಖ್ಯಗುರು ಗುರುಬಸಪ್ಪ ಅಪ್ಪಗೋಳ ತಮ್ಮ ಮಗನಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಕಲಿಗೆ ಸಹಕರಿಸುವಂತೆ ಪರೀಕ್ಷಾ ಮುಖ್ಯ ಅಧೀಕ್ಷಕ ಶಿವರಾಜ ಬಿರಾದಾರ ಅವರಿಗೆ ಒತ್ತಾಯ ಮಾಡಿದ್ದಾರೆ ಎನ್ನಲಾದ ಸಂಭಾಷಣೆ ಆಡಿಯೋದಲ್ಲಿದೆ.
ತಾಲೂಕಿನ ವಜ್ಜಲ್ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಗುರುಬಸಪ್ಪ ಅಪ್ಪಗೋಳ ಮುಖ್ಯಗುರುಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಮಗ ಶಿವರಾಜ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 2 ಬಾರಿ ಫೇಲ್ ಆಗಿದ್ದಾನೆ. ಇದರಿಂದ ತನ್ನ ಮಗನನ್ನು ಹೇಗಾದರೂ ಮಾಡಿ ಪರೀಕ್ಷೆಯಲ್ಲಿ ಪಾಸ್ ಮಾಡಿಸಬೇಕೆಂದು ಶಿವರಾಜ ಬಿರಾದಾರ ಎನ್ನುವವರಿಗೆ ಕೇಳಿದ್ದಾನೆ. ಕರೆ ಮಾಡಿ ಏನಾದರು ಮಾಡಿ ನನ್ನ ಮಗನನ್ನು ಪಾಸ್ ಮಾಡೋಣ ನನ್ನ ಮಗನ ಬದಲಾಗಿ 10ನೇ ತರಗತಿಯ ಬೇರೆ ವಿದ್ಯಾರ್ಥಿಯನ್ನು ಕೂರಿಸೋಣ ನಿಮ್ಮ ದಯೆಯಿಂದ ನನ್ನ ಮಗ ಪಾಸಾಗಲಿ ಎಂದು ಶಿವರಾಜ್ ಬಿರಾದಾರನಲ್ಲಿ ಬೇಡಿಕೊಂಡಿದ್ದಾನೆ. ಮುಖ್ಯಗುರು ಗುರುಬಸಪ್ಪ ಪರೀಕ್ಷಾ ಅವ್ಯವಹಾರದ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಅಪರ ಆಯುಕ್ತರಿಗೆ ಶಿವರಾಜ ಬಿರಾದಾರ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸಿದ್ದಾರೆ.