ಮಗನೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ತಾಯಿ
ಶಹಾಪುರ(ಗ್ರಾ): ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೊದಲ ದಿನವಾದ ಸೋಮವಾರದಂದು ಶಹಾಪುರ ತಾಲೂಕಿನ ಸಗರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮಗನೊಂದಿಗೆ ತಾಯಿ ಪರೀಕ್ಷೆಗೆ ಹಾಜರಾಗಿದ್ದು ವಿಶೇಷವಾಗಿತ್ತು.
ಈ ಪರೀಕ್ಷಾ ಕೇಂದ್ರದಲ್ಲಿ ಒಟ್ಟು ೧೭ ಬ್ಲಾಕ್‌ಗಳಿದ್ದು ೩೮೭ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡವರ ಪೈಕಿ ೧೪ ವಿದ್ಯಾರ್ಥಿಗಳು ಗೈರಾಗಿದ್ದರು. ೩೩ ವರ್ಷದ ಗಂಗಮ್ಮ ಉತ್ಸಾಹದಿಂದ ಪರೀಕ್ಷೆ ಬರೆಯಲು ಆಗಮಿಸಿ ರಾಜ್ಯದಾದ್ಯಂತ ಗಮನಸೆಳೆದರು. ನನಗೆ ಓದಬೇಕೆಂಬ ಆಸೆ ತುಂಬಾ ಇತ್ತು. ಮನೆಯಲ್ಲಿನ ಬಡತನದ ಕಾರಣ ಚಿಕ್ಕ ವಯಸ್ಸಿನಲ್ಲೆ ಮದುವೆ ಮಾಡಿಕೊಟ್ಟಿದ್ದರಿಂದ ವಿದ್ಯಾಭ್ಯಾಸ ಅರ್ಧದಲ್ಲೇ ಮೊಟಕುಗೊಳಿಸಬೇಕಾಯಿತು.
ಈಗ ನನಗೆ ಓದುವ ಅವಕಾಶ ದೊರೆತಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕಷ್ಟಪಟ್ಟು ಓದಿ ೧೦ನೇ ತರಗತಿ ಉನ್ನತ ಶ್ರೇಣಿಯಲ್ಲಿ ಪಾಸಾಗಿ ಸರ್ಕಾರಿ ನೌಕರಿ ಹಿಡಿಯಬೇಕೆಂಬ ಆಸೆ ಚಿಗುರೊಡೆದಿದೆ. ನನ್ನೊಂದಿಗೆ ನನ್ನ ಮಗ ಮಲ್ಲಿಕಾರ್ಜುನ ಕೂಡಾ ಪರೀಕ್ಷೆ ಬರೆಯುತ್ತಿದ್ದಾನೆ ಎಂದರು.
ಮನೆಯಲ್ಲಿ ಕೌಟುಂಬಿಕ ಜವಾಬ್ದಾರಿಯೊಂದಿಗೆ ನನ್ನ ಮಗನೊಂದಿಗೆ ನಿಯಮಿತವಾಗಿ ಅಭ್ಯಾಸ ಮಾಡಿದ್ದೇನೆ. ನನಗಿಂತ ಹದಿನೈದು ವರ್ಷದ ಕಿರಿಯ ವಿದ್ಯಾರ್ಥಿಗಳ ಜೊತೆಗೆ ಇಂದು ಪರೀಕ್ಷೆ ಬರೆಯಲು ತುಂಬಾ ನನಗೆ ಖುಷಿ ನೀಡಿದೆ.
ನನ್ನಂತೆಯೇ ಅದೆಷ್ಟೋ ಜನ ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅವರೆಲ್ಲರನ್ನು ಪ್ರೇರೇಪಿಸಿ ಶಿಕ್ಷಣದತ್ತ ಮುಖ ಮಾಡುವದು ನನ್ನ ಮುಖ್ಯ ಉದ್ದೇಶವಾಗಿದೆ. ಕಲಿಕೆಗೆ ವಯಸ್ಸಿನ ಮಿತಿ ಇಲ್ಲವೆನ್ನುತ್ತಾರೆ ಗಂಗಮ್ಮ.