For the best experience, open
https://m.samyuktakarnataka.in
on your mobile browser.

'ಮಜ'ವಾದಿ ಸರ್ಕಾರ…

11:14 AM Nov 16, 2024 IST | Samyukta Karnataka
 ಮಜ ವಾದಿ ಸರ್ಕಾರ…

ರಾಜ್ಯದ ಜನತೆಯ ಮೇಲೆ ಒಟ್ಟು 1.05 ಲಕ್ಷ ಕೋಟಿ ರೂಪಾಯಿ ಸಾಲ ಇದೆ. ಪರಿಸ್ಥಿತಿ ಹೀಗಿರುವಾಗ ತಮ್ಮ ಕಚೇರಿ ನವೀಕರಣಕ್ಕೆ 3 ಕೋಟಿ ರೂಪಾಯಿ ವೆಚ್ಚ ಮಾಡುವುದು ಎಷ್ಟು ಸರಿ?

ಬೆಂಗಳೂರು: "ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ" ಎನ್ನುವಂತೆ ಬರೋಬ್ಬರಿ 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಸಿಎಂ ಸಿದ್ದರಾಮಯ್ಯನವರ ಕಚೇರಿ ನವೀಕರಣ ಮಾಡುತ್ತಿದೆ ಈ 'ಮಜ'ವಾದಿ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್‌ ‌ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಸಿಎಂ ಸಿದ್ದರಾಮಯ್ಯನವರೇ, ಸ್ವತಃ ನಿಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಖರ್ಗೆ ಅವರೇ ಒಪ್ಪಿಕೊಂಡಿರುವಂತೆ ರಸ್ತೆಗುಂಡಿಗಳಿಗೆ ಒಂದು ಬುಟ್ಟಿ ಮಣ್ಣು ಹಾಕಲೂ ತಮ್ಮ ಸರ್ಕಾರದ ಬಳಿ ದುಡ್ಡಿಲ್ಲ. ಡಿಸಿಎಂ
ಡಿ. ಕೆ. ಶಿವಕುಮಾರ ಅವರ ಪ್ರಕಾರ ಗ್ಯಾರೆಂಟಿಗಳಿಂದ ಕಳೆದ ವರ್ಷ ಪೂರ್ತಿ ಅಭಿವೃದ್ಧಿಗೆ ದುಡ್ಡಿರಲಿಲ್ಲ. ರಾಜ್ಯದ ಜನತೆಯ ಮೇಲೆ ಒಟ್ಟು 1.05 ಲಕ್ಷ ಕೋಟಿ ರೂಪಾಯಿ ಸಾಲ ಇದೆ. ಪರಿಸ್ಥಿತಿ ಹೀಗಿರುವಾಗ ತಮ್ಮ ಕಚೇರಿ ನವೀಕರಣಕ್ಕೆ 3 ಕೋಟಿ ರೂಪಾಯಿ ವೆಚ್ಚ ಮಾಡುವುದು ಎಷ್ಟು ಸರಿ? ಕಳೆದ ವರ್ಷವಷ್ಟೇ ತಮ್ಮ ಸರ್ಕಾರಿ ನಿವಾಸ ಕಾವೇರಿ ನವೀಕರಣಗೊಂಡಿದೆ. ಕಾವೇರಿ ನಿವಾಸಕ್ಕೆಂದು ಪೀಠೋಪಕರಣಗಳ ಖರೀದಿ ಮಾಡಲಾಗಿದೆ. ಇದಕ್ಕೆ ಮೂರು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಈಗ ತಮ್ಮ ಕಚೇರಿ ನವೀಕರಣಕ್ಕೆ ಮತ್ತೊಮ್ಮೆ ಮೂರು ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದೀರಲ್ಲ, ತಮ್ಮ ಆತ್ಮಸಾಕ್ಷಿ ಇದಕ್ಕೆ ಒಪ್ಪುತ್ತದೆಯೇ? ಇಂತಹ ದುಂದುವೆಚ್ಚ ಮಾಡುವ ಬದಲು, ಅಕಾಲಿಕ ಮಳೆಯಿಂದ ಬೆಳೆ ಹಾನಿಯಾಗಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಕೊಡಿ. ರೈತರಿಗೆ ಕೊಡುವ ಹಾಲಿನ ಖರೀದಿ ದರ ಹೆಚ್ಚಳ ಮಾಡಿ. ಆಂಬುಲೆನ್ಸ್ ಚಾಲಕರಿಗೆ ಮೂರು ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ಸಂಬಳ ಕೊಡಿ. ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿ ಮುಚ್ಚಿಸುವ ಕೆಲಸ ಮಾಡಿ. ನಾನು ಸಮಾಜವಾದಿ, ಬಡವರ ಪರ ಎಂದು ಹೇಳಿಕೊಂಡು ತಮ್ಮ ಬೆನ್ನು ತಾವೇ ತಟ್ಟಿಕೊಂಡರೆ ಸಾಲದು. ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಆ ಹಣವನ್ನ ಬಡವರಿಗಾಗಿ ಉಪಯೋಗಿಸಿ, ನುಡಿದಂತೆ ನಡೆಯಿರಿ ಎಂದಿದ್ದಾರೆ.

Tags :