ಮಣಿಕಂಠ ರಾಠೋಡ ಪೋಲಿಸ್ ವಶಕ್ಕೆ
ಕಲಬುರಗಿ: ಇಂದು ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿ ಕರೆದಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರನ್ನು ಕ್ಷಿಪ್ರ ಬೆಳವಣಿಗೆಯಲ್ಲಿ ಪೊಲೀಸರು ಕಲಬುರಗಿಯ ನಿವಾಸದಲ್ಲಿ ವಶಕ್ಕೆ ಪಡೆದು ಕರೆದೊಯ್ದ ಘಟನೆ ನಡೆದಿದೆ.
ನಗರದ ಬೀದರ್ ರಸ್ತೆಯಲ್ಲಿರುವ ರಾಠೋಡ್ ನಿವಾಸಕ್ಕೆ ತೆರಳಿದ ಪೊಲೀಸರ ತಂಡ, ಸುರಕ್ಷತೆಯ ದೃಷ್ಟಿಯಿಂದ ತಮ್ಮೊಂದಿಗೆ ಬರುವಂತೆ ಮಣಿಕಂಠ ಅವರನ್ನು ಕರೆದೊಯ್ದಿದ್ದಾರೆ.
ಈ ಮಧ್ಯೆ, ಪೊಲೀಸರು ತಮ್ಮನ್ನು ವಶಕ್ಕೆ ಪಡೆದ ಘಟನೆ ಖಂಡಿಸಿ ರಾಠೋಡ್ ಮಾಧ್ಯಮಗಳಿಗೆ ವಾಟ್ಸಾಪ್ ವಾಯ್ಸ್ ಸಂದೇಶ ಕಳಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹಗರಣಗಳನ್ನು ತಾವು ಬಯಲಿಗೆಳೆಯಬಹುದು ಎಂಬ ಭೀತಿಯಿಂದ ಹೀಗೆ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ. ಇದೊಂದು ಸಂವಿಧಾನ ವಿರೋಧಿ ನಡೆ ಎಂದಿದ್ದಾರೆ.
ಮತ್ತೊಂದೆಡೆ, ಪೊಲೀಸರು ಮಣಿಕಂಠ ಅವರನ್ನು ಕರೆದೊಯ್ಯುತ್ತಿದ್ದ ವೇಳೆ ಅರೆಸ್ಟ್ ವಾರೆಂಟ್ ಇಲ್ಲದೆ ಹೇಗೆ ಬಂಧಿಸುತ್ತೀರಿ? ಎಂದು ರಾಠೋಡ್ ಪ್ರತಿಭಟನಾತ್ಮಕ ದನಿಯಲ್ಲಿ ಪೊಲೀಸರೊಂದಿಗೆ ಮಾತನಾಡುತ್ತಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದೇವೇಳೆ, ಕಾರು ಅಪಘಾತ ಪ್ರಕರಣವನ್ನು ತಮ್ಮ ವಿರುದ್ಧದ ಹಲ್ಲೆ ಘಟನೆ ಎಂದು ಬಿಂಬಿಸಲು ಮಣಿಕಂಠ ಯತ್ನಿಸಿ ತನಿಖೆಯ ಹಾದಿ ತಪ್ಪಿಸಲು ಯತ್ನಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಬುಧವಾರ ಹೇಳಿಕೆ ನೀಡಿದ ಬೆನ್ನಲ್ಲೇ ಮಣಿಕಂಠ ರಾಠೋಡ್ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವುದು ತೀವ್ರ ಕುತೂಹಲ ಕೆರಳಿಸಿದೆ.