ಮಣಿಕಂಠ ರಾಠೋಡ ಮೇಲೆ ಹಲ್ಲೆ ಇಬ್ಬರಿಗೆ ತೀವ್ರ ಗಾಯ
ಶಹಾಬಾದ್: ಬಿಜೆಪಿಯ ಯುವ ಮುಖಂಡ ಹಾಗೂ ಚಿತ್ತಾಪುರ ಮತಕ್ಷೇತ್ರದ ಅಭ್ಯರ್ಥಿಯಾಗಿದ್ದ ಮಣಿಕಂಠ ರಾಠೋಡ ಅವರ ಕಾರಿಗೆ ಶಂಕರವಾಡಿ ಗ್ರಾಮದ ಕ್ರಾಸ್ ಬಳಿ ರಸ್ತೆಗೆ ಎರಡು ಕಾರು ಅಡ್ಡಗಟ್ಟಿ ಸುಮಾರು 8-10 ಜನರ ಅಪರಿಚಿತರ ಗುಂಪು ಕಲ್ಲು, ಬಿಯರ್ ಬಾಟಲಿಗಳಿಂದ ಕಾರಿನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಶನಿವಾರ ರಾತ್ರಿ 1.30ರ ಸುಮಾರಿಗೆ ಮಾಲಗತ್ತಿ ಗ್ರಾಮದ ಬಳಿ ಇರುವ ಎಂಆರ್ ಫಾರಂ ಹೌಸ್‌ನಿಂದ ಕಲಬುರಗಿಗೆ ಕಾರಿನಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಶಂಕರವಾಡಿ ಗ್ರಾಮದ ಕ್ರಾಸ್ ಬಳಿ ರಸ್ತೆಗೆ ಎರಡು ಕಾರು ಅಡ್ಡಗಟ್ಟಿ ಕಾರಿನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಹಲ್ಲೆಯಿಂದ ಮಣಿಕಂಠ ಅವರ ಕಾರಿನ ಗಾಜು ಒಡೆದು, ಮಣಿಕಂಠ ಹಾಗೂ ಅವರ ಜೊತೆ ಇದ್ದ ಶ್ರೀಕಾಂತ ಸುಲೇಗಾಂವ ಎಂಬುವವರ ತಲೆಗೆ ಗಾಯವಾಗಿದೆ. ಇಬ್ಬರ ತಲೆಯಲ್ಲಿ ಗಾಜಿನ ಚೂರು ಸೇರಿವೆ. ರಾತ್ರಿಯೇ ಕಲಬುರಗಿಯ ಮೆಡಿಕೇರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಶಹಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಐ ರಾಘವೇಂದ್ರ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಪ್ರತಿಭಟನೆ ಹತ್ತಿಕ್ಕಲು ಹಲ್ಲೆ ಶಂಕೆ:
ಬಿಜೆಪಿ ಪಕ್ಷದ ಯುವ ಮುಖಂಡ ಮಣಿಕಂಠ ರಾಠೋಡ ಮತ್ತು ಪಕ್ಷದ ಇನ್ನೋರ್ವ ಮುಖಂಡ ಶ್ರೀಕಾಂತ ಸುಲೆಗಾಂವ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಸೋಮವಾರ ಚಿತ್ತಾಪೂರ ತಾಲೂಕು ಬಿಜೆಪಿಯಿಂದ ವಾಡಿ ಪಟ್ಟಣದಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆ ಹತ್ತಿಕ್ಕುವ ಷಡ್ಯಂತ್ರ ಇರಬಹುದು ಎಂದು ವಾಡಿ ಬಿಜೆಪಿ ಅಧ್ಯಕ್ಷ ಈರಣ್ಣಾ ಯಾರಿ ಶಂಕೆ ವ್ಯಕ್ತಪಡಿಸಿದ್ದಾರೆ.
ಸೋಮವಾರ ಎಸಿಸಿ ಪರಿಸರ ನಿಮಯ ಉಲ್ಲಂಘನೆ ಬಗ್ಗೆ ಹಾಗೂ ವಾಡಿ ಪಟ್ಟಣದ 5 ಕೋ. ರೂ. ವೆಚ್ಚದಲ್ಲಿ ಅರ್ಧಕ್ಕೆ ಕಾಮಗಾರಿ ಕೈಗೊಂಡಿರುವ ಶ್ರೀನಿವಾಸ ಗುಡಿ ವೃತ್ತದಿಂದ ಬಳವಡಗಿ ಕ್ರಾಸ್ ಮುಖ್ಯ ರಸ್ತೆಯ ಅವ್ಯವಹಾರದ ಬಗ್ಗೆ ತನಿಖೆಗಾಗಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದೇವು.
ಈ ಪ್ರತಿಭಟನೆಯಲ್ಲಿ ಮಣಿಕಂಠ ರಾಠೋಡ ಭಾಗವಹಿಸಿದ್ದಲ್ಲಿ ಪ್ರತಿಭಟನೆ ಕಾವು ಹೆಚ್ಚುವ ಸಾಧ್ಯತೆ ಇರುವದರಿಂದ ಪ್ರತಿಭಟನೆ ಕಾವು ತಗ್ಗಿಸುವ ದುರುದ್ದೇಶ ಹಾಗೂ ಶನಿವಾರ ವಾಡಿ
ಎಸಿಸಿಯ ಹಜರ್ಡ್ ವೇಸ್ಟ್ ಅಪಾಯಕಾರಿ ಕೆಮಿಕಲ್ ಲಾರಿ ವಿರುದ್ಧ ವಾಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವುದರಿಂದ ಈ ಹಲ್ಲೆ ನಡೆದಿರಬಹುದು ಎಂದು ಯಾರಿ ಶಂಕೆ ವ್ತಕ್ತಪಡಿಸಿದ್ದು, ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.