ಮಣಿಪುರದ ಹಿಂಸಾಚಾರಕ್ಕೆ ಕಾರಣವೇನು?
ಮಣಿಪುರದ ಬಹುಸಂಖ್ಯಾತ ಮೈತಿ ಸಮುದಾಯ ಮತ್ತು ಮಣಿಪುರದ ಜನಸಂಖ್ಯೆಯ ೧೬% ಪಾಲು ಹೊಂದಿರುವ ಅಲ್ಪಸಂಖ್ಯಾತ ಕುಕಿ-ಜೊ ಬುಡಕಟ್ಟು ಸಮುದಾಯಗಳ ನಡುವೆ ತಲೆದೋರಿದ ಉದ್ವಿಗ್ನತೆಯ ಪರಿಣಾಮವಾಗಿ, ಮಣಿಪುರದಲ್ಲಿ ವ್ಯಾಪಕ ಹಿಂಸಾಚಾರ ತಲೆದೋರಿತು.
ಬಹುತೇಕ ಹಿಂದೂ ಧರ್ಮವನ್ನು ಅನುಸರಿಸುವ ಮೈತಿ ಸಮುದಾಯ ಪ್ರಮುಖವಾಗಿ ಮಣಿಪುರದ ರಾಜಧಾನಿ ಇಂಫಾಲ ಹಾಗೂ ಸುತ್ತಲಿನ ಸಮೃದ್ಧ ಕಣಿವೆಗಳಲ್ಲಿ ವಾಸಿಸು ತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ಬಹುತೇಕ ಕ್ರೈಸ್ತ ಮತವನ್ನು ಅನುಸರಿಸುವ ಕುಕಿ - ಜೊ ಸಮುದಾಯ ಮಣಿಪುರ ರಾಜ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ಚದುರಿದಂತಿರುವ ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ.
ಇವೆರಡೂ ಸಮುದಾಯಗಳು ಭೂಮಿ ಮತ್ತು ಉದ್ಯೋಗ ಗಳಿಗೆ ಸಂಬಂಧಿಸಿದಂತೆ ಬಹಳ ದೀರ್ಘ ಕಾಲದಿಂದಲೂ ಪರಸ್ಪರ ಚಕಮಕಿ ನಡೆಸುತ್ತಾ ಬಂದಿವೆ. ರಾಜಕೀಯ ಲಾಭಕ್ಕೋಸ್ಕರ ಹಲವಾರು ರಾಜಕೀಯ ನಾಯಕರು ಪರಿಸ್ಥಿತಿಯನ್ನು ಇನ್ನಷ್ಟು ಹಾಳುಗೆಡವುತ್ತಾ ಬಂದಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿವೆ.
ಮೇ ೨೦೨೩ರಲ್ಲಿ, ಮೈತಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನ ನೀಡುವ ಆಲೋಚನೆಗಳು ಬಂದಾಗ ಪರಿಸ್ಥಿತಿ ಉಲ್ಬಣಗೊಳ್ಳತೊಡಗಿತು. ಆದರೆ ಕುಕಿ ಸಮುದಾಯಕ್ಕೆ ಈಗಾಗಲೇ ಪರಿಶಿಷ್ಟ ವರ್ಗದ ಸ್ಥಾನಮಾನವಿದೆ. ಎಸ್‌ಟಿ ಸ್ಥಾನಮಾನ ಲಭಿಸಿದರೆ, ಮೈತಿ ಸಮುದಾಯಕ್ಕೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ, ಕಾಲೇಜು ಸೀಟುಗಳು ಸೇರಿದಂತೆ, ಹಲವಾರು ವಿಶೇಷ ಸವಲತ್ತುಗಳು ಲಭಿಸಲಿವೆ.
ಈ ನಿರ್ಧಾರದ ಪರಿಣಾಮವಾಗಿ ತನ್ನ ಸವಲತ್ತುಗಳು ಕುಂಠಿತಗೊಳ್ಳಬಹುದು ಎಂದು ಆತಂಕಗೊಂಡ ಕುಕಿ ಸಮು ದಾಯ ಇದರ ವಿರುದ್ಧ ಪ್ರತಿಭಟನೆ ನಡೆಸಲು ಆರಂಭಿ ಸಿತು. ಅದಾದ ಕೆಲ ಸಮಯದಲ್ಲೇ ಈ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದುಕೊಂಡವು. ಪ್ರತಿಭಟನಾಕಾರರು ವಾಹನಗಳು ಮತ್ತು ಕಟ್ಟಡಗಳಿಗೆ ಬೆಂಕಿ ಇಟ್ಟರು ಇನ್ನು ಬಂದೂಕುಗಳು ಮತ್ತು ಪೆಟ್ರೋಲ್ ಗಳನ್ನು ಹಿಡಿದ ಮೈತಿ ಗುಂಪುಗಳು ಬೆಟ್ಟಗಳ ಮೇಲಿನ ಕುಕಿ - ಜೊ ಸಮುದಾಯದ ಹಳ್ಳಿಗಳ ಮೇಲೆ ದಾಳಿ ನಡೆಸಿದವು.
ಹಿಂದೆಯೂ ಹಿಂಸಾಚಾರಗಳು ನಡೆದಿದ್ದವೇ?
ಬಾಂಗ್ಲಾದೇಶ, ಚೀನಾ ಮತ್ತು ಮಯನ್ಮಾರ್‌ಗಳ ನಡುವೆ ಇರುವ ಭಾರತದ ಏಳು ಈಶಾನ್ಯ ರಾಜ್ಯಗಳ ಪೈಕಿ ಮಣಿಪುರವೂ ಒಂದು. ಈ ಪ್ರದೇಶಕ್ಕೆ ಬಹಳ ಸುದೀರ್ಘವಾದ ಹಿಂಸಾಚಾರದ ಇತಿಹಾಸವಿದ್ದು, ಹಲವು ಗುಂಪುಗಳು ಭಾರತದಿಂದ ಪ್ರತ್ಯೇಕಗೊಳ್ಳುವ ಬೇಡಿಕೆ ಯನ್ನೂ ಇಟ್ಟಿವೆ. ಇಲ್ಲಿ ಹಲವಾರು ಜನಾಂಗೀಯ ಗುಂಪುಗಳು (ವಿಭಿನ್ನ ಭಾಷೆ, ಸಂಸ್ಕೃತಿ ಅಥವಾ ಪರಂಪರೆ ಹೊಂದಿರುವ ಗುಂಪುಗಳು) ಪರಸ್ಪರರೊಡನೆ ತಿಕ್ಕಾಟ ಹೊಂದಿದ್ದು, ಅವುಗಳು ಹಲವು ಬಾರಿ ಹಿಂಸಾಚಾರಕ್ಕೂ ತಿರುಗಿದ್ದವು. ಇವೆಲ್ಲ ಅಂಶಗಳು ಮಣಿಪುರವನ್ನು ಅತ್ಯಂತ ಸೂಕ್ಷ್ಮ ಮತ್ತು ಬಾಧಿತ ರಾಜ್ಯವನ್ನಾಗಿಸಿವೆ.
೧೯೭೦ರ ದಶಕದ ಕೊನೆಯ ಭಾಗದಲ್ಲಿ, ಮಣಿಪುರದ ಶಸ್ತ್ರಸಜ್ಜಿತ ಗುಂಪುಗಳು ಭಾರತ ಸರ್ಕಾರದ ವಿರುದ್ಧ ದಂಗೆ ಆರಂಭಿಸಿದವು. ಈ ಬಂಡಾಯ ಗುಂಪುಗಳು ನವ ದೆಹಲಿಯಲ್ಲಿರುವ ಕೇಂದ್ರ ಸರ್ಕಾರ ಈಶಾನ್ಯ ಪ್ರದೇಶದ ಅವಶ್ಯಕತೆಗಳು ಮತ್ತು ಅಭಿವೃದ್ಧಿಯನ್ನು ಕಡೆಗಣಿಸಿವೆ ಎಂದು ದೂರತೊಡಗಿದವು. ಅವುಗಳು ಸರ್ಕಾರಿ ಕಚೇರಿಗಳ ಮೇಲೆ, ಮೂಲಭೂತ ಸೌಕರ್ಯಗಳ ಮೇಲೆ ಪ್ರತಿದಿನವೂ ಎನ್ನುವಂತೆ ದಾಳಿಗಳನ್ನು ನಡೆಸಿ, ಆ ಮೂಲಕ ಭಾರತ ಸರ್ಕಾರದ ವಿರುದ್ಧ ತಾವು ಹೋರಾಡುತ್ತಿದ್ದೇವೆ ಎಂಬ ಸಂದೇಶ ರವಾನಿಸಿದವು.
ಮಣಿಪುರದಲ್ಲಿನ ಬಂಡಾಯ ಉಚ್ಚಾಯ ಸ್ಥಿತಿಯಲ್ಲಿದ್ದ ಸಮಯದಲ್ಲಿ, ಅಲ್ಲಿ ಅಂದಾಜು ೨೦ ಸಶಸ್ತ್ರ ಗುಂಪುಗಳು ಸಕ್ರಿಯವಾಗಿದ್ದವು. ಎರಡು ದಶಕಗಳ ಅವಧಿಯಲ್ಲಿ, ಅಂದರೆ ೨೦೧೦ರ ದಶಕದ ವೇಳೆಗೆ ೧೦,೦೦೦ ಜನರು ಹಿಂಸಾಚಾರಕ್ಕೆ ಬಲಿಯಾಗಿದ್ದರು. ೨೦೧೫ರ ಬಳಿಕ ಮಣಿಪುರ ಬಹುತೇಕ ಶಾಂತವಾಗಿತ್ತು. ಆ ವರ್ಷ ನಡೆದ ಕೊನೆಯ ತೀವ್ರ ದಾಳಿಯಲ್ಲಿ ಬಂಡುಕೋರರು ಮಿಲಿಟರಿ ಪಡೆಯ ಮೇಲೆ ದಾಳಿ ನಡೆಸಿ, ೨೦ ಯೋಧರ ಸಾವಿಗೆ ಕಾರಣವಾಗಿದ್ದರು. ಇತ್ತೀಚಿನ ಹಿಂಸಾಚಾರದ ಕಾರಣವಾಗಿ, ಕುಕಿ ಸಮು ದಾಯ ತಮಗೆ ಪ್ರತ್ಯೇಕ ರಾಜ್ಯಾಡಳಿತ ಬೇಕೆಂಬ ಧ್ವನಿ ಎತ್ತಿದ್ದಾರೆ. ಈ ಬೇಡಿಕೆಯನ್ನು ಮಣಿಪುರದ ೨೮ ಲಕ್ಷ ಜನಸಂಖ್ಯೆಯ ಅರ್ಧಕ್ಕೂ ಹೆಚ್ಚಿರುವ ಮೈತಿ ಸಮುದಾಯ ಸಂಪೂರ್ಣವಾಗಿ ನಿರಾಕರಿಸಿತು.
ತೀವ್ರಗೊಳಿಸಿದ ಇತರ ಕಾರಣಗಳೇನು?
ಮಣಿಪುರ ಮಯನ್ಮಾರ್ ಜೊತೆ ಬಹುತೇಕ ೪೦೦ ಕಿಲೋಮೀಟರ್ ಗಡಿ ಹಂಚಿಕೊಂಡಿದೆ. ಮಯನ್ಮಾರ್‌ನಲ್ಲಿ ೨೦೨೧ರ ಮಿಲಿಟರಿ ದಂಗೆಯ ಬಳಿಕ, ಸಾವಿರಾರು ನಿರಾಶ್ರಿ ತರು ಮಣಿಪುರಕ್ಕೆ ವಲಸೆ ಬಂದು, ರಾಜ್ಯದ ಸವಾಲುಗಳನ್ನು ಇನ್ನಷ್ಟು ಹೆಚ್ಚಿಸಿದರು.
ಕುಕಿ ಸಮುದಾಯ ಮಯನ್ಮಾರಿನ ಚಿನ್ ಸಮುದಾಯ ದೊಡನೆ ಜನಾಂಗೀಯ ಸಂಬಂಧ ಹೊಂದಿದ್ದು, ಮಯನ್ಮಾರಿಗರ ವಲಸೆ ಮೈತಿ ಸಮುದಾಯದಲ್ಲಿ ಕಳವಳ ಮೂಡಿಸಿತ್ತು. ನಿರಾಶ್ರಿತರ ಸಂಖ್ಯೆ ಹೆಚ್ಚಾದಂತೆ ತಮ್ಮದೇ ರಾಜ್ಯದಲ್ಲಿ ತಾವು ಅಲ್ಪಸಂಖ್ಯಾತರಾಗಬಹುದು ಎಂಬ ಭಯ ಅವರಲ್ಲಿ ಮೂಡಿತ್ತು.
ಫೆಬ್ರವರಿ ೨೦೨೩ರಲ್ಲಿ, ಬೆಟ್ಟಗಳ ಕಾಡು ಪ್ರದೇಶಗಳಲ್ಲಿರುವ ಜನರು ಅಕ್ರಮವಾಗಿ ನೆಲೆಸಿದ್ದಾರೆ ಎಂದು, ಅವರನ್ನು ಖಾಲಿ ಮಾಡುವ ಪ್ರಕ್ರಿಯೆ ಆರಂಭಿಸಿದ ಬಳಿಕ ಇನ್ನೊಂದು ಸಮಸ್ಯೆ ಎದುರಾಯಿತು. ಇದರಿಂದಾಗಿ ಬುಡಕಟ್ಟು ಜನರಲ್ಲಿ ತಮ್ಮನ್ನು ಮನೆಗಳಿಂದ ಹೊರಹಾಕುತ್ತಾರೆ ಎಂಬ ಆಕ್ರೋಶ ಮೂಡಿತು. ಈ ವಿಚಾರಗಳಲ್ಲಿ ಕೆಲವು ಗುಪ್ತವಾಗಿ, ಕೆಲವು ಬಹಿರಂಗವಾಗಿ ಜನರಲ್ಲಿ ಅಸಮಾಧಾನ ಹೊಗೆಯಾಡು ವಂತೆ ಮಾಡಿದ್ದವು. ಆದರೆ, ಸರ್ಕಾರ ಈ ಆತಂಕಗಳನ್ನು ನಿವಾರಿಸಲು ವಿಫಲವಾಗಿತ್ತು.
ದಂಗೆಗಳಿಗೆ ಪ್ರತಿಭಟನೆ ನಡೆಸಿದ ನಾಗಾಗಳು
ಮಣಿಪುರ ಬಹುತೇಕ ೩೦ ಬುಡಕಟ್ಟು ಸಮುದಾಯಗಳಿಗೆ ನೆಲೆಯಾಗಿದ್ದು, ಅವೆಲ್ಲವೂ ಪ್ರತ್ಯೇಕ ಜನಾಂಗೀಯ ಗುಂಪು ಗಳಿಗೆ ಸೇರಿವೆ. ಈ ಬುಡಕಟ್ಟುಗಳು ವೈವಿಧ್ಯಮಯವಾಗಿದ್ದು, ಜನಾಂಗದಲ್ಲಿ ಮಾತ್ರವಲ್ಲದೆ, ಧರ್ಮ, ಸಂಸ್ಕೃತಿಗಳಲ್ಲೂ ಭಿನ್ನವಾಗಿವೆ. ರಾಜ್ಯದೊಳಗೆ ತಮ್ಮದೇ ಪ್ರತ್ಯೇಕ ಗುರುತು ಹೊಂದಿವೆ.
ಮೈತಿಗಳು ಬಹುತೇಕ ಕಣಿವೆಗಳಲ್ಲಿ ಜೀವಿಸುತ್ತಿದ್ದು, ಮಣಿಪುರದ ೬೦% ಜನಸಂಖ್ಯೆ ಹೊಂದಿದ್ದಾರೆ. ಇನ್ನುಳಿದ ೪೦% ಜನಸಂಖ್ಯೆ ಉಳಿದ ಸಮುದಾಯಗಳಿವೆ. ಈ ೪೦%ದಲ್ಲಿ ಅರ್ಧ ಭಾಗ ಕುಕಿಗಳಿದ್ದು (ಚಿನ್ ಕುಕಿ ಮಿಜೋ), ಇನ್ನರ್ಧ ಭಾಗ ನಾಗಾ ಬುಡಕಟ್ಟುಗಳಿವೆ.
ನಾಗಾಗಳು ತಮ್ಮನ್ನು ತಾವು ಮಣಿಪುರದ ಗುಡ್ಡಗಾಡು ಪ್ರದೇಶದಲ್ಲಿ ನೆಲೆಸಿರುವ ಮೊದಲ ಸಮುದಾಯವೆಂದು ಪರಿಗಣಿಸಿದ್ದು, ಈ ಪ್ರದೇಶಗಳು ಮಣಿಪುರದ ಒಟ್ಟಾರೆ ಭೂ ಪ್ರದೇಶದ ೮೦% ವ್ಯಾಪಿಸಿವೆ.
ನಾಗಾಗಳು ಮತ್ತು ಕುಕಿಗಳ ನಡುವೆ ಸುದೀರ್ಘ ಉದ್ವಿಗ್ನತೆ ಗಳಿವೆ. ೧೯೯೦ರ ದಶಕದಲ್ಲಿ ನಡೆದ ಹಿಂಸಾಚಾರದಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡರು. ಇದಾದ ಬಳಿಕ, ನಾಗಾಗಳು ಕುಕಿ ಸಮುದಾಯದವರು ಹೊರ ಹೋಗಿ, ಕಣಿವೆಯಲ್ಲಿ ನೆಲೆಸುವಂತೆ ಮಾಡಿದರು.
ಒಂದು ವೇಳೆ ಸರ್ಕಾರ ಏನಾದರೂ ಮೈತಿ ಮತ್ತು ಕುಕಿಗಳ ನಡುವೆ ಸಂಧಾನ ಏರ್ಪಡಿಸಿ, ಕುಕಿಗಳು ಮತ್ತೆ ಗುಡ್ಡಗಳಿಗೆ ಮರಳುವಂತೆ ಮಾಡಿದರೆ ತಮಗೆ ಸಮಸ್ಯೆ ಉಂಟಾಗಬಹುದು ಎಂದು ನಾಗಾಗಳು ಭಾವಿಸಿದ್ದಾರೆ. ಅವರೊಡನೆ ಸಂಪನ್ಮೂಲಗಳನ್ನು ಹಂಚಿಕೊಳ್ಳುವಂತಾದರೆ, ಭವಿಷ್ಯದಲ್ಲಿ ಇನ್ನಷ್ಟು ಚಕಮಕಿಗಳು ತಲೆದೋರಬಹುದು ಎಂದು ನಾಗಾಗಳು ಆತಂಕ ಹೊಂದಿದ್ದಾರೆ.
ಅದರೊಡನೆ, ಮೈತಿಗಳ ರಾಜಕೀಯ ಪ್ರಭಾವ ಹೆಚ್ಚಾಗುವುದರ ಕುರಿತೂ ನಾಗಾಗಳು ಚಿಂತಿಸುತ್ತಿದ್ದಾರೆ. ಮೈತಿ ಮತ್ತು ನಾಗಾ ಸಮುದಾಯಗಳೆರಡೂ ನಾವೇ ಮಣಿಪುರದ ಮೂಲ ನಿವಾಸಿಗಳು ಎನ್ನುತ್ತಿವೆ. ಆದರೆ, ಕುಕಿಗಳು ಬಹಳ ತಡವಾಗಿ, ಅಂದರೆ ಕೇವಲ ೧೫೦ ವರ್ಷಗಳ ಹಿಂದಷ್ಟೇ ಆಗಿನ ಬರ್ಮಾದಿಂದ (ಮಯನ್ಮಾರ್) ವಲಸೆ ಬಂದಿದ್ದಾರೆ ಎನ್ನುವುದು ನಾಗಾಗಳ ನಂಬಿಕೆ.
೨೦೨೩ರಲ್ಲಿ, ಮಣಿಪುರ ವಿಧಾನಸಭೆ ೬೦ ಸದಸ್ಯ ರನ್ನು ಹೊಂದಿದ್ಸು, ಅವರಲ್ಲಿ ೪೦ ಶಾಸಕರು ಮೈತಿಗಳಾಗಿದ್ದರು. ಇನ್ನುಳಿದ ಸ್ಥಾನಗಳನ್ನು ನಾಗಾಗಳು ಮತ್ತು ಕುಕಿಗಳು ಹೊಂದಿದ್ದರು. ಇಷ್ಟು ಹೆಚ್ಚಿನ ಸ್ಥಾನಗಳನ್ನು ಹೊಂದಿರುವುದರಿಂದ, ಮೈತಿಗಳು ಹೆಚ್ಚಿನ ರಾಜಕೀಯ ಪ್ರಭಾವ ಹೊಂದಿ, ತಮ್ಮ ಹಿತಾಸಕ್ತಿಗೆ ಪೂರಕ ನಿರ್ಧಾರ ಕೈಗೊಳ್ಳಬಹುದು ಎಂದು ನಾಗಾಗಳು ನಂಬಿದ್ದಾರೆ. ಇದರಿಂದಾಗಿ ಅವರು ಭವಿಷ್ಯದ ಕುರಿತು ಆತಂಕಿತರಾಗಿದ್ದಾರೆ.
ಕುಕಿಗಳು ಸಮಾಜದ ಮುಖ್ಯ ವಾಹಿನಿಗೆ ಬರಲು ಮೈತಿಗಳು ಮುಖ್ಯ ಪಾತ್ರ ವಹಿಸಿದ್ದಾರೆ ಎಂಬುದು ನಾಗಾಗಳ ನಂಬಿಕೆ. ನಾಗಾಗಳನ್ನು ಮಟ್ಟಹಾಕುವ ಸಲುವಾಗಿ ಮೈತಿಗಳು ಕುಕಿಗಳನ್ನು ಬೆಂಬಲಿಸಿದ್ದಾರೆ ಎಂಬದು ಅವರ ಸಂದೇಹವಾಗಿದೆ. ಆದರೆ ಈಗ ಮೈತಿಗಳು ಕುಕಿಗಳನ್ನು ಎದುರಿಸಲು ತಮ್ಮ ನೆರವು ಕೇಳುತ್ತಿದ್ದಾರೆ ಎಂದು ನಾಗಾಗಳು ಭಾವಿಸಿದ್ದು, ಇದು ಮೈತಿಗಳ ಕಾರ್ಯ ತಂತ್ರದಲ್ಲಿನ ಬದಲಾವಣೆಯಾಗಿದೆ.
ಯಾಕೆ ಇನ್ನೂ ಶಾಂತಿ ಸ್ಥಾಪನೆಯಾಗಿಲ್ಲ?
ಮೈತಿ ಮತ್ತು ಕುಕಿ ಸಮುದಾಯಗಳೆರಡೂ ಸಶಸ್ತ್ರ ಗುಂಪುಗಳಾಗಿದ್ದು, ಬಹಳಷ್ಟು ಜನರು ಸ್ವಯಂಚಾಲಿತ ಆಯುಧಗಳನ್ನೂ ಹೊಂದಿದ್ದಾರೆ. ಈ ಆಯುಧಗಳನ್ನು ಒಂದೋ ರಾಜ್ಯ ಪೊಲೀಸರಿಂದ ಪಡೆಯಲಾಗಿದೆ. ಅಥವಾ ಮಯನ್ಮಾರ್‌ನಿಂದ ಕಳ್ಳಸಾಗಣೆ ನಡೆಸಲಾಗಿದೆ.
ಭಾರತೀಯ ಸೇನೆ ಮತ್ತು ಮಣಿಪುರದಲ್ಲಿರುವ ಕೇಂದ್ರ ಅರೆ ಮಿಲಿಟರಿ ಪಡೆಗಳು ಸ್ವಯಂ ನಿರ್ಧಾರ ಕೈಗೊಳ್ಳುವಂತಿಲ್ಲ. ಕಾನೂನಿನ ಪ್ರಕಾರ, ಅವೆರಡೂ ರಾಜ್ಯ ಪೊಲೀಸ್ ಮತ್ತು ಸ್ಥಳೀಯ ಆಡಳಿತದೊಡನೆ ಕಾರ್ಯ ನಿರ್ವಹಿಸಬೇಕು. ಆದರೆ, ತಜ್ಞರ ಪ್ರಕಾರ ರಾಜ್ಯ ಪೊಲೀಸರು ಮತ್ತು ಆಡಳಿತ ಜನಾಂಗೀಯವಾಗಿ ವಿಭಜನೆಗೊಂಡಿದ್ದು, ಇದು ಇನ್ನಷ್ಟು ಸವಾಲಿಗೆ ಕಾರಣವಾಗಿದೆ.
ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ಮೈತಿ ಸಮುದಾಯದವರಾಗಿದ್ದು, ಅವರು ತಮ್ಮ ವಿರುದ್ಧದ ಹಿಂಸಾಚಾರದಲ್ಲಿ ಪಾತ್ರ ವಹಿಸಿದ್ದಾರೆ ಎಂದು ಕುಕಿಗಳು ಆರೋಪಿಸಿದ್ದಾರೆ. ಆದರೆ ಬಿರೇನ್ ಸಿಂಗ್ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಇತ್ತೀಚಿನ ಹಿಂಸಾಚಾರದ ಕಾರಣಗಳು
ಕೆಲವು ತಿಂಗಳ ಶಾಂತಿಯ ಬಳಿಕ, ಮಣಿಪುರದಲ್ಲಿ ಮತ್ತೊಮ್ಮೆ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಮೈತಿ ಸಮು ದಾಯದ ಆರು ಜನರ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ದೊರೆತ ಬಳಿಕ ಹಿಂಸಾಚಾರಗಳು ಆರಂಭಗೊಂಡವು. ಜಿರಿಬಾಮ್‌ನ ನಿರಾಶ್ರಿತ ತಾಣದಲ್ಲಿದ್ದ ಈ ಆರು ಜನರು ಕಳೆದ ವಾರ ಸಶಸ್ತ್ರ ಗುಂಪುಗಳು ಮತ್ತು ಭದ್ರತಾ ಪಡೆಗಳ ನಡುವಿನ ಚಕಮಕಿಯ ಬಳಿಕ ಕಣ್ಮರೆಯಾಗಿದ್ದರು. ಓರ್ವ ಮಹಿಳೆ ಮತ್ತು ಇಬ್ಬರು ಮಕ್ಕಳ ದೇಹ ಶುಕ್ರವಾರ ಪತ್ತೆಯಾಗಿತ್ತು. ಬಳಿಕ ನವೆಂಬರ್ ೧೬, ಶನಿವಾರದಂದು ಇನ್ನೂ ಮೂರು ದೇಹಗಳು ನದಿಯಲ್ಲಿ ಲಭಿಸಿದವು.
ಆರು ಜನರ ಸಾವಿನ ಬಳಿಕ, ಹಿಂಸಾಚಾರಗಳು ಆರಂಭಗೊಂಡವು. ಅದರೊಡನೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಈ ಘಟನೆಯ ಕುರಿತಂತೆ ಎಚ್ಚರಿಕೆ ನೀಡಲಾಗಿದೆ.
ಕೋಆರ್ಡಿನೇಟಿಂಗ್ ಕಮಿಟಿ ಆನ್ ಮಣಿಪುರ್ ಇಂಟಗ್ರಿಟಿ (ಸಿಒಸಿಒಎಂಐ) ನೇತೃತ್ವದ ನಾಗರಿಕ ಗುಂಪುಗಳ ವಕ್ತಾರ ಖುರೈಜಮ್ ಅತೌಬಾ ಅವರು ಎಲ್ಲ ಶಾಸಕರು ಮತ್ತು ನಾಯಕರು ಜೊತೆಯಾಗಿ ಬಂದು ಶೀಘ್ರವಾಗಿ ಬಿಕ್ಕಟ್ಟು ಪರಿಹರಿಸಬೇಕೆಂದು ಆಗ್ರಹಿಸಿದ್ದಾರೆ. ಒಂದು ವೇಳೆ ಏನೂ ಕ್ರಮ ಕೈಗೊಳ್ಳದೆ ಹೋದರೆ, ಸರ್ಕಾರ ಜನರ ಆಕ್ರೋಶಕ್ಕೆ ತುತ್ತಾಗಬೇಕಾದೀತು ಎಂದು ಅವರು ಎಚ್ಚರಿಸಿದ್ದಾರೆ.