For the best experience, open
https://m.samyuktakarnataka.in
on your mobile browser.

ಮತದಾನ: ವೇತನಸಹಿತ ರಜೆ

10:39 PM Apr 08, 2024 IST | Samyukta Karnataka
ಮತದಾನ  ವೇತನಸಹಿತ ರಜೆ

ಬೆಂಗಳೂರು: ಲೋಕಸಭಾ ಚುನಾವಣೆ ಹಾಗೂ ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತದಾನದ ದಿನದಂದು ಎಲ್ಲ ಸರ್ಕಾರಿ ನೌಕರರು, ಅನುದಾನ ಹಾಗೂ ಅನುದಾನರಹಿತ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನೌಕರರಿಗೆ ವೇತನಸಹಿತ ರಜೆಯನ್ನು ಸರ್ಕಾರ ಘೋಷಿಸಿದೆ.
ಮೊದಲ ಹಂತದ ಏ. ೨೬ರಂದು ೧೪ ಲೋಕಸಭಾ ಕ್ಷೇತ್ರಗಳು, ಮೇ ೭ರಂದು ೧೪ ಲೋಕಸಭಾ ಕ್ಷೇತ್ರ ಹಾಗೂ ಸುರಪುರ ವಿಧಾನ ಸಭಾ ಕ್ಷೇತ್ರಕ್ಕೆ ಮತದಾನ ನಡೆಯುತ್ತಿದ್ದು ಮತದಾನದಲ್ಲಿ ಪಾಲ್ಗೊಳ್ಳಲು ರಜೆ ಘೋಷಿಸಲಾಗಿದೆ ಎಂದು ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ತಿಳಿಸಿದೆ.
ಲೋಕಸಭಾ ಕ್ಷೇತ್ರಗಳ ಅರ್ಹ ಮತದಾರರಾಗಿರುವ ಎಲ್ಲಾ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಮತ್ತು ಇನ್ನಿತರ ಸಂಸ್ಥೆಗಳಲ್ಲಿ ಕಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ ವೇತನಸಹಿತ ರಜೆ ನೀಡಲು ಆದೇಶಿಸಿದೆ.
ಮೊದಲ ಹಂತ ಮತ್ತು ಎರಡನೇ ಹಂತದಲ್ಲಿ ತಲಾ ೧೪ ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ.