ಮತಬ್ಯಾಂಕ್ ಆಧಾರಿತ ಯೋಜನೆ ಜಾರಿಗೊಳಿಸಲು ಬೊಕ್ಕಸ ಬರಿದು…
ನಿಗಮಗಳಿಗೇ ಅನುದಾನ ಬಿಡುಗಡೆ ಮಾಡದೆ, ಇನ್ಯಾವ ಬಗೆಯ ಅಭಿವೃದ್ಧಿ ಮಾಡುತ್ತಿದೆ
ಬೆಂಗಳೂರು: ನಿಗಮಗಳಿಗೆ ಹಂಚಿಕೆಯಾಗಿರುವ ಅನುದಾನದ ಪೈಕಿ ಬಹುತೇಕ ಹಣ ಬಿಡುಗಡೆಯಾಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಅಧಿಕಾರದಲ್ಲಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮತಬ್ಯಾಂಕ್ ಆಧಾರಿತ ಯೋಜನೆಗಳನ್ನು ಜಾರಿಗೊಳಿಸಲು ತನ್ನ ಬೊಕ್ಕಸ ಬರಿದು ಮಾಡಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮೂಲೆಗೆ ಸರಿಸಿ, ಚುನಾವಣೆ ಎದುರಿಸಲು ಅಕ್ರಮ ಮಾರ್ಗದಲ್ಲಿ ಹಣ ದುರುಪಯೋಗ ಪಡಿಸಿಕೊಂಡಿರುವ ಪ್ರಕರಣವೂ ವಾಲ್ಮೀಕಿ ನಿಗಮದ ಮೂಲಕ ಬೆಳಕಿಗೆ ಬಂದಿತ್ತು. ನಿಗಮದ ಖಾತೆಯಿಂದ 187 ಕೋಟಿ ರೂಗಳ ಬಹುದೊಡ್ಡ ಹಗರಣ ಈ ಸರ್ಕಾರದ ಭ್ರಷ್ಟ ಕರಾಳತೆ ಬಯಲು ಮಾಡಿತ್ತು.
ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಒಕ್ಕಲಿಗರ ಅಭಿವೃದ್ಧಿ ನಿಗಮ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ, ಈಡಿಗ ಅಭಿವೃದ್ಧಿ ನಿಗಮ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಗಳಿಗೆ ಒಂದೇ ಒಂದು ಬಿಡುಗಾಸು ಅನುದಾನವನ್ನೂ ಬಿಡುಗಡೆ ಮಾಡಿಲ್ಲ. ಇನ್ನುಳಿದ ಹಿಂದುಳಿದ ವರ್ಗಗಳ ಹಾಗೂ ಶೋಷಿತ ಸಮುದಾಯಗಳ ಅಭಿವೃದ್ಧಿ ನಿಗಮಗಳಲ್ಲಿ ಹಂಚಿಕೆಯಾಗಿರುವ ಅನುದಾನದ ಪೈಕಿ ಬಹುತೇಕ ಹಣ ಬಿಡುಗಡೆಯಾಗಿಲ್ಲ.
ಹಿಂದುಳಿದ ವರ್ಗದ ನಾಯಕ ಎಂದು ಅಹಿಂದ ವರ್ಗವನ್ನು ಪ್ರತಿನಿಧಿಸುವವರೆಂದು ಸ್ವಯಂ ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದ ಆಡಳಿತದಲ್ಲಿ ದಲಿತರು, ಹಿಂದುಳಿದವರು, ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣಕ್ಕಾಗಿ, ಈ ಸಮುದಾಯಗಳ ಜನರ ಆರ್ಥಿಕ ಚೈತನ್ಯ ನೀಡಿ, ಅವರ ಆರ್ಥಿಕ ಔದ್ಯೋಗಿಕ ಅವಕಾಶವನ್ನು ಸೃಷ್ಟಿಸುವುದಕ್ಕಾಗಿ ಇರುವ ನಿಗಮಗಳಿಗೇ ಅನುದಾನ ಬಿಡುಗಡೆ ಮಾಡದ ಕಾಂಗ್ರೆಸ್ ಸರ್ಕಾರ ಇನ್ಯಾವ ಬಗೆಯ ಅಭಿವೃದ್ಧಿ ಮಾಡುತ್ತಿದೆ ಎಂದು ಜನರೇ ಹಿಡಿ ಶಾಪ ಹಾಕುತ್ತಿದ್ದಾರೆ ಎಂದಿದ್ದಾರೆ.