ಮತ್ತೆ ಮುಷ್ಕರಕ್ಕೆ ಮುಂದಾದ ೧೦೮ ಅಂಬುಲೆನ್ಸ್ ಸಿಬ್ಬಂದಿ
ಬೆಂಗಳೂರು: ಕಳೆದ ಮೂರು ತಿಂಗಳುಗಳಿಂದ ಸಂಬಳವನ್ನೇ ನೀಡಿಲ್ಲ ಎಂದು ೧೦೮ ಅಂಬುಲೆನ್ಸ್ ನೌಕರರು ಆಕ್ರೋಶಗೊಂಡಿದ್ದು ವಾರಾಂತ್ಯದೊಳಗೆ ಸಂಬಳ ನೀಡದೇ ಹೋದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇಎಂಆರ್‌ಐ ಗ್ರೀನ್ ಹೆಲ್ತ್ ಸಂಸ್ಥೆ ಕಳೆದ ಮೂರು ತಿಂಗಳಿನಿಂದ ವೇತನ ನೀಡಿಲ್ಲ ಎಂದು ೧೦೮ ಆಂಬುಲೆನ್ಸ್ ಸಿಬ್ಬಂದಿ ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ. ಶನಿವಾರದೊಳಗೆ ವೇತನ ನೀಡದಿದ್ದರೆ ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ. ಸಂಬಳ ಬಿಡುಗಡೆ ಮಾಡದಿದ್ದರೆ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಸುವರ್ಣ ಕರ್ನಾಟಕ ಆರೋಗ್ಯ ಕವಚ(೧೦೮) ನೌಕರರ ಸಂಘ, ಅಖಿಲ ಕರ್ನಾಟಕ ೧೦೮ ಆಂಬ್ಯುಲೆನ್ಸ್ ನೌಕರರ ಹಿತರಕ್ಷಣಾ ಸಂಘ, ಕರ್ನಾಟಕ ರಾಜ್ಯ ಆರೋಗ್ಯ ಕವಚ(೧೦೮) ಅಂಬುಲೆನ್ಸ್ ನೌಕರರರ ಸಂಘ ಎಚ್ಚರಿಕೆ ನೀಡಿವೆ. ಆರೋಗ್ಯ ಕವಚ ಯೋಜನೆಯಲ್ಲಿ ಎರಡು ವರ್ಷಗಳಿಂದ ವೇತನದಲ್ಲಿ ಅನೇಕ ಸಮಸ್ಯೆಗಳಿವೆ. ಸರ್ಕಾರ, ಸಂಸ್ಥೆ ಮತ್ತು ಸಂಘಟನೆಗಳು ಸಭೆ ನಡೆಸಿದರೂ ಸಮಸ್ಯೆ ಬಗೆಹರಿದಿಲ್ಲ. ಸಂಘಟನೆಯ ವತಿಯಿಂದ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ನ್ಯಾಯಾಲಯ ಸೆಪ್ಟೆಂಬರ್ ೧೨ರಂದು ಮಧ್ಯಂತರ ಆದೇಶ ನೀಡಿತ್ತು. ನ್ಯಾಯಾಲಯ ಆದೇಶ ನೀಡಿದರೂ ಆರೋಗ್ಯ ಇಲಾಖೆ ಅಂಬುಲೆನ್ಸ್ ಸಿಬ್ಬಂದಿಯ ಸಂಬಳದ ಬಗ್ಗೆ ನಿರ್ಲಕ್ಷ್ಯ ತೋರಿದೆ.