For the best experience, open
https://m.samyuktakarnataka.in
on your mobile browser.

ಮತ್ತೆ ರೈಲ್ವೆ ದುರಂತ

02:00 AM Jun 19, 2024 IST | Samyukta Karnataka
ಮತ್ತೆ ರೈಲ್ವೆ ದುರಂತ

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ನ್ಯೂ ಜಲಪೈಗುರಿ ಎಂಬಲ್ಲಿ ಸಂಭವಿಸಿರುವ ಎರಡು ರೈಲುಗಳ ನಡುವಣ ಮುಖಾಮುಖಿ ಘರ್ಷಣೆಯ ಪರಿಣಾಮವಾಗಿ ಒಂಭತ್ತು ಮಂದಿ ಮೃತಪಟ್ಟು ಸುಮಾರು ಅರವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಧಾರುಣ ಪ್ರಕರಣದ ಹಿಂದಿರುವುದು ರೈಲ್ವೆ ಇಲಾಖೆಯ ದಿವ್ಯ ನಿರ್ಲಕ್ಷ್ಯದ ಧೋರಣೆ. ಈ ಭೀಕರ ದುರಂತ ಜರುಗಲು ಮುಖ್ಯ ಕಾರಣ ದೋಷಪೂರಿತ ಸಿಗ್ನಲ್ ವ್ಯವಸ್ಥೆ. ಪ್ರತಿ ಬಾರಿ ದುರಂತ ಜರುಗಿದಾಗಲೂ ಪ್ರಯಾಣಿಕರ ಸುರಕ್ಷಿತ ಸಂಚಾರಕ್ಕೆ ಆದ್ಯ ಗಮನ ಕೊಡುವ ಭರವಸೆ ನೀಡುವ ರೈಲ್ವೆ ಮಂತ್ರಿಗಳು ಈಗ ಅದೇ ರೀತಿಯ ದೋಷದಿಂದ ದುರಂತ ಸಂಭವಿಸಿರುವಾಗ ಏನನ್ನು ಹೇಳುತ್ತಾರೆ ಎಂಬುದು ದೇಶಕ್ಕೆ ಗೊತ್ತಿರುವ ವಿಚಾರ. ಸರ್ಕಾರದ ಪರವಾಗಿ ಮಂತ್ರಿಗಳು ಇಂತಹ ಧಾರುಣ ಘಟನೆಯ ಬಗ್ಗೆ ವಿವರಣೆ ಕೊಡುವಾಗ ತಾರಮ್ಮಯ್ಯ' ಸ್ವರೂಪದ ಭರವಸೆಗಳನ್ನು ನೀಡಲೇಬಾರದು. ಏಕೆಂದರೆ, ಇದು ಪ್ರಯಾಣಿಕರ ಜೀವನ್ಮರಣದ ಪ್ರಶ್ನೆ. ಮಂತ್ರಿಗಳಾಗಿದ್ದವರು ಯಾವ ಪಕ್ಷದವರೇ ಆಗಿರಲಿ ಅಥವಾ ಯಾವ ಸರ್ಕಾರದವರೇ ಆಗಿರಲಿ ಅವರ ಉತ್ತರಗಳು ಗಿಣಿ ಪಾಠದಂತೆ ಜನರಿಗೆ ಒಪ್ಪಿಸುವುದನ್ನು ಬಿಟ್ಟರೆ ಇಂತಹ ದುರಂತಗಳು ಸಂಭವಿಸದಂತೆ ಕ್ರಮ ಕೈಗೊಳ್ಳುವಲ್ಲಿ ನಿರಾಸಕ್ತಿ ತೋರುವುದು ನಿಜಕ್ಕೂ ಜನದ್ರೋಹಿ ಕೃತ್ಯ. ಒಡಿಸ್ಸಾದಲ್ಲಿ ಸಂಭವಿಸಿದ ಭೀಕರ ಅಪಘಾತಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಜರುಗಿಸಿದೆ. ಅಧಿಕಾರಿಗಳನ್ನು ಎತ್ತಂಗಡಿ ಮಾಡುವುದೂ ಸೇರಿದಂತೆ ಒಟ್ಟಾರೆ ಪರಿಸ್ಥಿತಿಯ ಸುಧಾರಣೆಗೆ ಏನೆಲ್ಲಾ ಸಾಧ್ಯವೋ ಅದೆಲ್ಲವನ್ನೂ ಮಾಡಿದೆ. ಆದರೂ ಕೂಡಾ ಇದೇ ರೀತಿಯ ದೋಷಗಳು ನುಸಳಲು ಮಾನವ ಸಹಜ ಬೇಜವಾಬ್ದಾರಿ ಧೋರಣೆಯೇ ಕಾರಣ ಎಂಬ ಮಾತನ್ನು ನಿರಾಕರಿಸುವುದು ಕಷ್ಟ. ರೈಲ್ವೆ ಇಲಾಖೆ ಆಧುನೀಕರಣಗೊಳ್ಳುವ ಮೊದಲು ಸಿಗ್ನಲ್ ದೋಷದಿಂದಾಗಿ ದುರಂತಗಳು ಸಂಭವಿಸುವುದು ಅಪರೂಪವಾಗಿತ್ತು. ಈಗ ಆಧುನಿಕ ತಂತ್ರಜ್ಞಾನದ ಕಾಲ. ಮನುಷ್ಯನ ಕೈಗುಣಕ್ಕಿಂತ ತಂತ್ರಜ್ಞಾನದ ಕೈಗುಣವೇ ಈಗ ಮೇಲು. ಹೀಗಿರುವಾಗ ಸಿಗ್ನಲ್ ದೋಷ ಸಂಭವಿಸಲು ಹೇಗೆ ಸಾಧ್ಯ ಎಂಬುದು ದೊಡ್ಡ ಒಗಟು. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳ ಆಧಾರದ ಮೇಲೆ ಹೇಳುವುದಾದರೆ ಸ್ಟೇಷನ್ ಮಾಸ್ಟರ್ ಗೂಡ್ಸ್ ಹಾಗೂ ಕಾಂಚನಜುಂಗ ಪ್ರಯಾಣಿಕರ ರೈಲಿಗೆ ಹಸಿರು ನಿಶಾನೆ ನೀಡಿದ್ದು ಯಾವ ಆಧಾರದ ಮೇರೆಗೆ ಎಂಬುದು ಒಗಟೇ. ಕೆಲವರು ಭಾವಿಸುವಂತೆ ಇದೇ ದುರಂತದ ಮೂಲ.ಕವಚ' ಹೆಸರಿನ ಸಿಗ್ನಲಿಂಗ್ ವ್ಯವಸ್ಥೆ ದೇಶದ ಬಹುಭಾಗದಲ್ಲಿ ಜಾರಿಯಲ್ಲಿದೆ. ಇಂತಹ ಸುಧಾರಿತ ವ್ಯವಸ್ಥೆಯ ಮೂಲಕ ರೈಲುಗಳ ಸಂಚಾರವನ್ನು ನಿಯಮಿತವಾಗಿ ನಿಯಂತ್ರಿಸುವುದು ಸುಲಭ. ದುರಂತಗಳಿಗೆ ಇದರಲ್ಲಿ ಅವಕಾಶವೇ ಇಲ್ಲ. ಆದರೆ, ಈ ಕವಚ ಯೋಜನೆ ಇನ್ನೂ ಪರಿಪೂರ್ಣವಾಗಿ ಜಾರಿಗೆ ಬಂದಿಲ್ಲ. ದೆಹಲಿ ಮತ್ತು ಗುವಾಹತಿ ನಡುವಣ ರೈಲು ಮಾರ್ಗ ಕವಚ ಯೋಜನೆ ವ್ಯಾಪ್ತಿಗೆ ಬಂದಿಲ್ಲ. ಹೀಗಾಗಿ ಸಾಂಪ್ರದಾಯಿಕ ಸಿಗ್ನಲಿಂಗ್ ವ್ಯವಸ್ಥೆಯ ಮೂಲಕವೇ ರೈಲುಗಳು ಸಂಚರಿಸುತ್ತಿವೆ. ಹೀಗಿರುವಾಗ ಅತಿವೇಗದಿಂದ ಓಡುವ ರೈಲುಗಳ ನಿಯಂತ್ರಣ ಕಷ್ಟಸಾಧ್ಯ. ಇದರ ಜೊತೆಗೆ ಮಿತಿಮೀರಿದ ವೇಗದಲ್ಲಿ ರೈಲನ್ನು ಓಡಿಸುವ ಚಾಲಕರ ವರ್ತನೆಯೂ ದುರಂತಕ್ಕೆ ಕಾರಣವಾಗಿರಬಹುದು. ಪ್ರಕಟಿತ ವರದಿಗಳ ಆಧಾರದ ಮೇರೆಗೆ ಹೇಳುವುದಾದರೆ ದುರಂತದಲ್ಲಿ ಭಾಗಿಯಾಗಿರುವ ಗೂಡ್ಸ್ ರೈಲು ವೇಗದಲ್ಲಿ ಚಲಿಸುತ್ತಿತ್ತು ಎಂಬ ವರದಿಗಳಿವೆ. ಎರಡು ವೇಗದ ರೈಲುಗಳ ನಡುವೆ ಡಿಕ್ಕಿ ಸಂಭವಿಸಿದಾಗ ಸಹಜವಾಗಿಯೇ ಸಾವು ನೋವಿನ ಪ್ರಮಾಣ ಹೆಚ್ಚುವ ಸಾಧ್ಯತೆ ಇದ್ದೇ ಇರುತ್ತದೆ. ಈಗ ನ್ಯೂ ಜಲಪೈಗುರಿ ರೈಲ್ವೆ ದುರಂತದಲ್ಲಿ ಸಂಭವಿಸಿರುವ ಸಾವು ನೋವಿನ ಮೂಲ ಇದೇ ಎಂಬ ತರ್ಕವನ್ನು ನಿರಾಕರಿಸುವುದು ಕಷ್ಟವೇ.
ದುರಂತದ ನಂತರ ಸಂತ್ರಸ್ತರ ರಕ್ಷಣಾ ಕಾರ್ಯ ಚುರುಕಿನಿಂದ ಸಾಗುತ್ತದೆ ಎಂಬುದೇನೋ ನಿಜ. ರಕ್ಷಣಾ ಕಾರ್ಯ ಎಷ್ಟೇ ಪರಿಣಾಮಕಾರಿಯಾಗಿದ್ದರೂ ಕೂಡಾ ಮಾನಸಿಕವಾಗಿ ಕಂಗೆಟ್ಟಿರುವ ಪ್ರಯಾಣಿಕರ ಮನಸ್ಥೈರ್ಯವನ್ನು ಮರುಸ್ಥಾಪಿಸುವುದು ದೊಡ್ಡ ಸವಾಲು. ಇಂತಹ ಸಂದರ್ಭದಲ್ಲಿ ವೈದ್ಯರ ಚಿಕಿತ್ಸೆಯ ಜೊತೆಗೆ ಮನೋವೈದ್ಯರ ಸಮಾಲೋಚನಾ ಮಾದರಿಯ ಚಿಕಿತ್ಸೆ ಸೌಲಭ್ಯ ಒದಗಿಸಿದರೆ ಬದುಕಿನಲ್ಲಿ ಆಸೆ ಉಳಿಸಿಕೊಳ್ಳುವ ದಾರಿ ಮುಕ್ತವಾಗಿರುತ್ತದೆ. ಹಲವಾರು ಸಂದರ್ಭಗಳಲ್ಲಿ ಬದುಕುಳಿದವರು ಶಾಪಗ್ರಸ್ತ ಗಂಧರ್ವರಂತೆ ಬಾಳನ್ನು ನೂಕುತ್ತಿರುವುದು ಸರ್ಕಾರದ ಕಣ್ತೆರೆಸಬೇಕು. ಇದಲ್ಲದೆ ಸತ್ತವರು ಹಾಗೂ ಗಾಯಗೊಂಡವರ ಕುಟುಂಬಕ್ಕೆ ಪರಿಹಾರ ಘೋಷಿಸುವಾಗ ಖಚಿತ ಮಾರ್ಗಸೂಚಿಯನ್ನು ಅನುಸರಿಸುವುದು ಸೂಕ್ತ. ಒಂದೊಂದು ದುರಂತಕ್ಕೆ ಒಂದೊಂದು ರೀತಿಯ ಪರಿಹಾರ ಎಂಬ ನೀತಿ ತಾರತಮ್ಯದ ಧೋರಣೆಯ ಪ್ರತೀಕ.