For the best experience, open
https://m.samyuktakarnataka.in
on your mobile browser.

ಮತ ಭಿಕ್ಷೆಗೆ ಬಂದವರನ್ನು ನೇರವಾಗಿ ಪ್ರಶ್ನಿಸಿ

01:00 AM Mar 18, 2024 IST | Samyukta Karnataka
ಮತ ಭಿಕ್ಷೆಗೆ ಬಂದವರನ್ನು ನೇರವಾಗಿ ಪ್ರಶ್ನಿಸಿ

ಲೋಕಸಭಾ ಚುನಾವಣೆ ಮುಹೂರ್ತ ನಿಗದಿಯಾಗಿದೆ. ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಚುನಾವಣೆಯಲ್ಲಿ ಗೆಲ್ಲುವ-ಸೋಲುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಯಾರ ಕಾಲೆಳೆದರೆ ಯಾರು ಗೆಲ್ಲುತ್ತಾರೆ, ಯಾರನ್ನು ಸೋಲಿಸಬೇಕು ಎಂಬಿತ್ಯಾದಿ ತಂತ್ರ-ಪ್ರತಿತಂತ್ರಗಳನ್ನು ಹೆಣೆಯುತ್ತಿದ್ದಾರೆ. ಮತದಾರರಿಗೆ ಈಗಾಗಲೇ ಸಾಕಷ್ಟು ಆಮಿಷಗಳನ್ನು ಒಡ್ಡಿ ಗ್ಯಾರಂಟಿಗಳ ಮೂಲಕ ಆಡಳಿತ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಲೋಕಸಭಾ ಚುನಾವಣೆಗೆ ಮತ್ತಷ್ಟು, ಇನ್ನಷ್ಟು ಗ್ಯಾರಂಟಿಗಳ ಘೋಷಣೆ, ಆಸೆ-ಆಮಿಷಗಳನ್ನು ಒಡ್ಡುವ ಮೂಲಕ ಮತದಾರರನ್ನು ತಮ್ಮತ್ತ ಸೆಳೆಯಲು ಪ್ರಯತ್ನ ನಡೆಸಿದೆ. ಅದೇ ಹಾದಿಯಲ್ಲಿ ಬಿಜೆಪಿ ಕೂಡ ತಮ್ಮ ಮತಬುಟ್ಟಿ ಭರ್ತಿ ಮಾಡಿಕೊಳ್ಳಲು ಆಮಿಷ ಒಡ್ಡಲು ಸಿದ್ಧತೆ ನಡೆಸಿದೆ. ಇವನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿರುವ ಮತದಾರಪ್ರಭು ಕೂಡ ಸೂಕ್ತ ನಿರ್ಧಾರಕ್ಕೆ ತಯಾರಾಗುತ್ತಿದ್ದಾನೆ. ಆದರೆ ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ ಯೋಗ್ಯ ಅಭ್ಯರ್ಥಿಗೆ ಮತ ನೀಡುವ ಯೋಗ್ಯ ನಿರ್ಧಾರವನ್ನು ಮತದಾರ ಕೈಗೊಳ್ಳಬೇಕಿದೆ.
ಮಧ್ಯ ಕರ್ನಾಟಕದ ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಏಪ್ರಿಲ್ ೨೬ರಂದು ಮತದಾನ ನಿಗದಿಯಾಗಿದ್ದರೆ, ಮೇ ೭ರಂದು ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ಮುಹೂರ್ತ ಫಿಕ್ಸ್ ಆಗಿದೆ. ಪ್ರಚಾರದ ಭರಾಟೆ ಇನ್ನೇನು ಶುರುವಾಗಲಿದೆ. ಆದರೆ ಬಿಸಿಲಿನ ಧಗೆ ರಾಜಕಾರಣಿಗಳನ್ನು ಇನ್ನಿಲ್ಲದಂತೆ ಹೈರಾಣ ಮಾಡುವುದು ನಿಶ್ಚಿತ. ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರಾಜ್ಯಾದ್ಯಂತ ಬರ’ಸಿಡಿಲು ಬಡಿದಿದೆ. ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನೀರಿಲ್ಲ, ಯಾರೂ ಬರಬೇಡಿ ಎಂದು ಅವರವರ ನೆಂಟರಿಸ್ಟರಿಗೆ, ಬಂಧುಗಳಿಗೆ ದೂರವಾಣಿ ಕರೆಗಳು ಬರುತ್ತಿವೆ. ಅಪಾರ್ಟ್ಮೆಂಟ್‌ಗಳಲ್ಲಿರುವ ಅನೇಕ ಕುಟುಂಬಗಳು ನೀರಿರುವ ಕಡೆ ಸ್ಥಳಾಂತರ ಆಗುತ್ತಿದ್ದಾವೆ. ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲೂ ಕೂಡ ನೀರಿಗಾಗಿ ಹಾಹಾಕಾರ ಆರಂಭವಾಗಿದೆ. ಬಹುತೇಕ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಖಾಸಗಿ ಕೊಳವೆಬಾವಿಗಳನ್ನು ಸ್ವಾಧೀನಪಡಿಸಿಕೊಂಡು ನೀರು ವಿತರಣೆ ಮಾಡಲಾಗುತ್ತಿದೆ. ನದಿ, ಹಳ್ಳ, ಕೆರೆ-ಕಟ್ಟೆಗಳು ಒಣಗಿದ್ದು ರೈತರು ಅಡಿಕೆ, ತೆಂಗು, ಬಾಳೆ ಮತ್ತಿತರ ತೋಟಗಾರಿಕೆ ಬೆಳೆ ಉಳಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ. ಸಾವಿರ ಅಡಿ ಬೋರ್ ಕೊರೆದರೂ ನೀರು ಬೀಳುತ್ತಿಲ್ಲ. ಟ್ಯಾಂಕರ್ ಮೂಲಕ ನೀರು ಪೂರೈಸುವ ಮೂಲಕ ತೋಟಗಳಿಗೆ ಅರೆ-ಬರೆ ನೀರುಣಿಸುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ತೋಟಗಳು ಒಣಗುತ್ತಿವೆ, ಕಾಳುಮೆಣಸು ಬಳ್ಳಿ ಬಾಡುತ್ತಿವೆ. ಭದ್ರಾ ಅಚ್ಚುಕಟ್ಟು ಪ್ರದೇಶ ಮತ್ತು ಕೊಳವೆಬಾವಿ ಆಶ್ರಿತದಲ್ಲಿ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಬೆಳೆದ ಅಡಿಕೆ ತೋಟಗಳಿಗೆ ನೀರುಣಿಸಲಾಗದೆ ತೋಟಗಳು ಬಾಡುತ್ತಿವೆ. ದಾವಣಗೆರೆ ಜಿಲ್ಲೆಯ ಸೂಳೆಕೆರೆಯಲ್ಲಿ ನೀರಿಲ್ಲದ ಕಾರಣ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಬೇಸಿಗೆ ಹಂಗಾಮಿಗೆ ಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಿದರೂ ನೀರು ಕೊನೆ ಭಾಗದ ಜಮೀನುಗಳಿಗೆ ಹರಿಯಲೇ ಇಲ್ಲ. ಹೀಗಾಗಿ ಭತ್ತದ ಸಸಿಮಡಿ ಮಾಡಿಕೊಂಡು ನಾಟಿಗಾಗಿ ಕಾಯುತ್ತಿದ್ದ ರೈತರು ನಷ್ಟ ಅನುಭವಿಸಬೇಕಾಯಿತು. ಆದರೆ ಈ ಯಾವ ಸಮಸ್ಯೆಗಳನ್ನೂ ಸದ್ಯ ಜನಪ್ರತಿನಿಧಿಗಳು ಮತ್ತು ಸರ್ಕಾರಗಳು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ಏಕೆಂದರೆ ಈಗ ಚುನಾವಣೆ ಸಮಯ, ಅವರಿಗೆಲ್ಲ ಈ ಸಮಸ್ಯೆಗಳ ಕಡೆಗೆ ಗಮನ ಹರಿಸಲು ಟೈಂ ಇಲ್ಲ. ಚುನಾವಣೆ ಗೆಲ್ಲುವ ತಂತ್ರಗಾರಿಕೆಯಲ್ಲೇ ಪ್ರತಿಯೊಬ್ಬರೂ ಬಿಜಿಯಾಗಿದ್ದಾರೆ. ಆದರೆ ಇದುವರೆಗೂ ಎಸಿ ರೂಮಿನಲ್ಲಿದ್ದು, ಆಕಾಶದಲ್ಲೇ ಓಡಾಡುತ್ತ ಇದ್ದವರು ಈಗ ಕೆಳಗೆ ಇಳಿಯಲೇಬೇಕಾಗಿದೆ. ಹದಗೆಟ್ಟ ರಸ್ತೆಗಳಲ್ಲಿ ಮತ ಭಿಕ್ಷೆಗೆ ಬರಲೇಬೇಕು, ಇದೇ ಸೂಕ್ತ ಸಮಯ ಅವರನ್ನು ಪ್ರಶ್ನಿಸಲು, ಈ ಅವಕಾಶವನ್ನು ಮತದಾರ ಪ್ರಭು ಕಳೆದುಕೊಳ್ಳಬಾರದು. ಧೈರ್ಯವಾಗಿ ಬಹಿರಂಗವಾಗಿಯೇ ಪ್ರಶ್ನಿಸಿ ಉತ್ತರ ಪಡೆದುಕೊಳ್ಳಬೇಕು.ಹದ’ಗೆಟ್ಟಿರುವ ಚುನಾವಣಾ ಕಣ
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ತಮ್ಮ ಪುತ್ರನಿಗೆ ಹಾವೇರಿ ಕ್ಷೇತ್ರದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕೆರಳಿರುವ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪನವರ ಬಂಡಾಯದ ನಿರ್ಧಾರದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ಎದುರಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಚುನಾವಣಾ ಕಣಕ್ಕಿಳಿಯುವ ಘೋಷಣೆ ಮಾಡಿದ್ದು, ಬಿಜೆಪಿ ಪಾಳಯದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿ.ಟಿ.ರವಿ ಅವರಿಗೆ ಟಿಕೆಟ್ ನೀಡಲಿಲ್ಲ ಎಂದು ಬಂಡಾಯದ ಬಾವುಟ ಹಾರಿಸದಿದ್ದರೂ ಎಲ್ಲೆಡೆ ಅಸಮಾಧಾನದ ಹೊಗೆಯಾಡುತ್ತಿದೆ. ಶೋಭಾ ಕರಂದ್ಲಾಜೆ ಬಗ್ಗೆ ಅಸಮಾಧಾನಗೊಂಡು ಗೋಬ್ಯಾಕ್ ಶೋಭಾ’ ಅಭಿಯಾನ ನಡೆಸಿ ಕ್ಷೇತ್ರದಿಂದ ದೂರವಿಡಲು ಯಶಸ್ವಿಯಾದರೂ ಸಿ.ಟಿ. ರವಿಗೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದ ಜಿ.ಎಂ.ಸಿದ್ಧೇಶ್ವರ್ ಅವರು ಆರೋಗ್ಯದ ಹಿತದೃಷ್ಟಿಯಿಂದ ಸ್ಪರ್ಧಿಸುತ್ತಿಲ್ಲ. ಬದಲಾಗಿ ಬಿಜೆಪಿ ವರಿಷ್ಠರು ಅವರ ಪತ್ನಿ ಗಾಯತ್ರಿ ಸಿದ್ಧೇಶ್ವರ್ ಅವರಿಗೆ ಟಿಕೆಟ್ ನೀಡಿದ್ದಾರೆ. ಆದರೆ ಪತ್ನಿಗೆ ಟಿಕೆಟ್ ಕೊಡಿಸಿರುವ ಸಿದ್ಧೇಶ್ವರ ವಿರುದ್ಧ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಮಾಜಿ ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಟಿ.ಗುರುಸಿದ್ಧನಗೌಡ, ಬಸವರಾಜ್ ನಾಯ್ಕ, ಮಾಡಾಳು ವಿರೂಪಾಕ್ಷಪ್ಪ ಸೇರಿದಂತೆ ನೂರಾರು ಮುಖಂಡರು ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರಲ್ಲದೆ, ಮೋದಿ ಶಿವಮೊಗ್ಗ ಭೇಟಿಯ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದೂ ಹೇಳಿದ್ದಾರೆ. ಇನ್ನು ಚಿತ್ರದುರ್ಗದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಟಿಕೆಟ್ ಘೋಷಣೆ ಮಾಡಿಲ್ಲ. ದಾವಣಗೆರೆ, ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರೆಂಬುದು ಗೊತ್ತಿಲ್ಲ. ಇಲ್ಲಿ ಟಿಕೆಟ್ ಘೋಷಣೆ ಮಾಡಿದ ನಂತರಹಗೆ-ಹೊಗೆ’ ಶುರುವಾಗುವುದರಲ್ಲಿ ಅನುಮಾನವಿಲ್ಲ. ತಮಗೇ ಟಿಕೆಟ್ ಸಿಗುತ್ತದೆ ಎಂಬ ಗ್ಯಾರಂಟಿ ಮೇಲೆ ಹದ’ ಮಾಡಿಕೊಂಡಿದ್ದ ಚುನಾವಣೆ ಕಣವನ್ನುಹದ’ಗೆಡಿಸಿರುವ ಮುಖಂಡರ ವಿರುದ್ಧ ಆಕ್ರೋಶ ವ್ಯಾಪಕವಾಗಿದೆ.
ಬರಪರಿಸ್ಥಿತಿಗೆ ನೀವೇ ಕಾರಣ
ಬರಗಾಲ, ಕುಡಿಯುವ ನೀರಿನ ಹಾಹಾಕಾರ, ಬೆಳೆನಷ್ಟ, ರೈತರ ಆತ್ಮಹತ್ಯೆ ಮತ್ತಿತರ ಸಮಸ್ಯೆಗಳಿಗೆ ಸರ್ಕಾರಗಳ ಜೊತೆಗೆ ನಾವು ಸೇರಿದಂತೆ ಚುನಾಯಿಸಿದಂತಹ ಜನಪ್ರತಿನಿಧಿಗಳೂ ಕಾರಣ. ಅವೈಜ್ಞಾನಿಕ ಯೋಜನೆಗಳು, ಸ್ವಹಿತಾಸಕ್ತಿಯಿಂದ ಕೂಡಿದ ನಿರ್ಧಾರಗಳು, ದುರಾಸೆಯಿಂದಾಗಿ ಅರಣ್ಯ ಪ್ರದೇಶ ಕ್ಷೀಣವಾಗಿದೆ. ಅತಿ ಹೆಚ್ಚು ಮಳೆ ಸುರಿಯುತ್ತಿದ್ದ ಮಲೆನಾಡು ಬೆಂಗಾಡಾಗಿದೆ. ಸರ್ಕಾರದ ಭೂಮಿ, ಅರಣ್ಯ ಪ್ರದೇಶ ಸ್ವಾರ್ಥಕ್ಕಾಗಿ ಬಳಕೆಯಾಗುತ್ತಿವೆ. ಕೆರೆ-ಕಟ್ಟೆಗಳನ್ನು ಅತಿಕ್ರಮಣ ಮಾಡಿಕೊಳ್ಳಲಾಗಿದೆ. ಅತಿಕ್ರಮಣಗೊಂಡಿರುವ ಅರಣ್ಯ, ಕಂದಾಯ ಭೂಮಿ, ಕೆರೆ-ಕಟ್ಟೆಗಳನ್ನು ಸರ್ಕಾರ ಮರುಸ್ವಾಧೀನ ಮಾಡಿಕೊಳ್ಳಲು ತಾಕೀತು ಮಾಡಬೇಕು.
ಈಗ ಮತದಾರ ಪ್ರಭುಗೆ ಸಮಯ ಬಂದಿದೆ. ಮತಭಿಕ್ಷೆಗೆ ನಿಮ್ಮ ಬಳಿ ಬಂದಾಗ ಮುಲಾಜಿಲ್ಲದೆ ಧೈರ್ಯವಾಗಿ ಪ್ರಶ್ನಿಸಿ. ಶಿವಮೊಗ್ಗದಲ್ಲಿ ಮೈಸೂರು ಕಾಗದ ಕಾರ್ಖಾನೆ, ಸಕ್ಕರೆ ಕಾರ್ಖಾನೆ ಪುನರಾರಂಭ ಮಾಡುತ್ತೇವೆ ಎಂದಿದ್ದಿರಿ. ಏಕೆ ಮಾಡಲಿಲ್ಲ? ವಿಐಎಸ್‌ಎಲ್ ಪುನಶ್ಚೇತನವೂ ನನೆಗುದಿಗೆ ಬಿದ್ದಿದೆ. ತುಂಗಾ ಮೇಲ್ದಂಡೆ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ ಏಕೆ? ಭದ್ರಾ ಮೇಲ್ದಂಡೆ ಯೋಜನೆಯಡಿ ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ೧೭.೫ ಟಿಎಂಸಿ ನೀರು ಮೇಲೆತ್ತುವ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲವೇಕೆ? ಈ ಯೋಜನೆಯನ್ನು ರಾಜಕಾರಣಿಗಳು ಪಕ್ಷಾತೀತವಾಗಿ ಒಂದಾಗಿ ಪೂರ್ಣಗೊಳಿಸದೆ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದೀರಲ್ಲ ಏಕೆ? ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಂಡಿದ್ದರೆ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳ ನೂರಾರು ಕೆರೆಗಳು ಭರ್ತಿಯಾಗಿ ಅಂತರ್ಜಲ ಹೆಚ್ಚಾಗಿ ಈಗ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿರಲಿಲ್ಲ. ಆದ್ದರಿಂದ ಈಗಿನ ಬರ ಪರಿಸ್ಥಿತಿಗೆ ನೀವೇ ಕಾರಣ ಎಂದು ರಾಜಕಾರಣಿಗಳನ್ನು ತೀವ್ರವಾಗಿ ಪ್ರಶ್ನಿಸಬೇಕಾಗಿದೆ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕಲು ಜನಪ್ರತಿನಿಧಿಗಳೇ ಕಾರಣವಲ್ಲವೆ? ಖಾತ್ರಿ ಯೋಜನೆ ಹೆಸರಿನಲ್ಲಿ ಕೆರೆಗಳ ಹೂಳು ಎತ್ತುತ್ತೀರಿ, ಆದರೆ ಅದು ನಿಮ್ಮ ಪುಸ್ತಕದಲ್ಲಿ ಮಾತ್ರ ಇರುತ್ತದೆ. ಮಳೆಗಾಲದಲ್ಲಿ ವೃಥಾ ಹರಿದು ಸಮುದ್ರ ಸೇರುವ ತುಂಗಭದ್ರಾ ನದಿ ನೀರನ್ನು ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ನೂರಾರು ಕೆರೆಗಳಿಗೆ ಹರಿಸುವ ಯೋಜನೆ ರೂಪಿಸುವಲ್ಲಿ ನೀವು ವಿಫಲರಾಗಿದ್ದೀರಿ, ಕನಿಷ್ಠ ಪಕ್ಷ ಕುಡಿಯುವ ನೀರು ಪೂರೈಸುವ ಕೆರೆಗಳನ್ನಾದರೂ ಭರ್ತಿ ಮಾಡಲು ಗಂಭೀರ ಚಿಂತನೆ ನಡೆಸಲಿಲ್ಲ. ಅಷ್ಟೇ ಅಲ್ಲ ರಾಜ್ಯದ ಹೃದಯ ಭಾಗವಾಗಿರುವ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗೆ ಹೇಳಿಕೊಳ್ಳುವಂತಹ ಒಂದೇ ಒಂದು ಕೈಗಾರಿಕೆಯನ್ನಾದರೂ ತಂದಿದ್ದೀರಾ? ರೈತರೇ ದೇಶದ ಬೆನ್ನೆಲುಬು ಎನ್ನುವ ನೀವು ರೈತರು ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಡಿಸುವಲ್ಲಿ ಶಾಸನಸಭೆಗಳಲ್ಲಿ ಎಷ್ಟರಮಟ್ಟಿಗೆ ಪ್ರಯತ್ನ ಮಾಡಿದ್ದೀರಿ? ಬೆಳೆನಷ್ಟ, ಸಾಲಬಾಧೆ ತಾಳಲಾರದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಸ್ವಾಮಿನಾಥನ್ ವರದಿ ಜಾರಿಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿಲ್ಲವಲ್ಲ? ಇಂತಹ ಸಾರ್ವತ್ರಿಕ ಸಮಸ್ಯೆಗಳಿಗೂ ಸ್ಪಂದಿಸದ ನಿಮಗೆ ಏಕೆ ಓಟು ಹಾಕಬೇಕು? ಈಗ ನೀವು ನೀಡುವ ಭರವಸೆಗಳನ್ನು ಈಡೇರಿಸುತ್ತೀರಿ ಎಂಬ ಗ್ಯಾರಂಟಿಯಾದರೂ ಏನು? ಎಂಬ ಪ್ರಶ್ನೆಗಳನ್ನು ಇಟ್ಟು ಮತಭಿಕ್ಷೆಗೆ ಬಂದವರಿಂದ ಉತ್ತರ ಪಡೆಯಬೇಕು. ಸಂವಿಧಾನ ನೀಡಿರುವ ಪ್ರಶ್ನಿಸುವ ಹಕ್ಕನ್ನು ಯಾವ ಮುಲಾಜಿಲ್ಲದೆ ಚಲಾಯಿಸುವ ಸಮಯ ಮತದಾರರಿಗೆ ಬಂದಿದ್ದು, ಈ ಅವಕಾಶವನ್ನು ವ್ಯರ್ಥ ಮಾಡಿಕೊಳ್ಳಬಾರದು. ಕೇಳುವ ಪ್ರಶ್ನೆಗಳಿಗೆ ಉತ್ತರ ಪಡೆಯುವ ಜೊತೆಗೆ ಚುನಾವಣೆಯಲ್ಲಿ ಆಯ್ಕೆ ಆದರೆ ಐದು ವರ್ಷಗಳ ಕಾಲ ಏನೇನು ಮಾಡುತ್ತೀರಿ ಎಂಬುದಕ್ಕೆ `ಕಾಲಮಿತಿ’ಯೊಂದಿಗೆ ಉತ್ತರ ಪಡೆದುಕೊಳ್ಳಬೇಕಿದೆ. ಅವರ ಉತ್ತರದ ಆಧಾರದ ಮೇಲೆ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿದೆ.