For the best experience, open
https://m.samyuktakarnataka.in
on your mobile browser.

ಮದುವೆ ಮಾಡೋದಿದ್ರೆ ಹುಷಾರ್ ಸ್ವಾಮಿ…!

09:42 AM Mar 18, 2024 IST | Samyukta Karnataka
ಮದುವೆ ಮಾಡೋದಿದ್ರೆ ಹುಷಾರ್ ಸ್ವಾಮಿ…

ರವೀಶ ಪವಾರ
ಧಾರವಾಡ: ಅಣ್ಣಾ ಲೋಕಸಭಾ ಚುನಾವಣೆ ಬಂದಾವ್… ಮನ್ಯಾಗ ಮದವಿ ಅದು ಮಾಡಾಕತಿದ್ರ ಯಾರೂ ಎಂಪಿಗೋಳ್ನ ಕರಸಬ್ಯಾಡ… ಕರಸೀದ್ರೂ ಆಯಾರ ಇಸಕೊಳ್ಳೋದು, ಭಾಷಣಾ ಮಾಡ್ಸೋದು ಮಾಡಬ್ಯಾಡ….
ಈ ರೀತಿಯ ಮಾತುಗಳು ಸದ್ಯ ಜಿಲ್ಲೆಯಾದ್ಯಂತ ಕೇಳಿಬರುತ್ತಿದ್ದು, ಮದುವೆ, ಮುಂಜವಿ ಮಾಡಿಸುವವರು ಕೊಂಚ ಹುಷಾರಾಗಿ ಹೆಜ್ಜೆ ಇಡಬೇಕಾದ ಪರಿಸ್ಥಿತಿ ಬಂದಿದೆ.
ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಮದುವೆ ಮುಹೂರ್ತಗಳು ಇರುವುದು ಎಲ್ಲರಿಗೂ ಗೊತ್ತು. ಆದರೆ, ಅದಕ್ಕೆ ತಕ್ಕಂತೆ ಕೆಲವು ಮದುವೆ ಸೇರಿದಂತೆ ಇನ್ನಿತರೆ ಸಮಾರಂಭಗಳಲ್ಲಿ ರಾಜಕಾರಣಿಗಳನ್ನು ಕರೆಯಿಸುವುದೂ ಪ್ರತಿಷ್ಠೆಯ ವಿಷಯವಾಗಿರುತ್ತದೆ. ಆದರೆ, ಈ ಬಾರಿಯ ಬ್ರೇಕ್ ಹಾಕಲಾಗಿದೆ.
ಹದ್ದಿನ ಕಣ್ಣು…
ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದು, ಎಲ್ಲೆಡೆ ಚುನಾವಣಾ ಆಯೋಗ ಹದ್ದಿನ ಕಣ್ಣು ಇರಿಸಿದೆ. ಅದಕ್ಕಾಗಿಯೇ ವೀಕ್ಷಕರನ್ನು ನೇಮಕ ಮಾಡಿದ್ದು, ಮದುವೆ, ಮುಂಜವಿ ಸಮಾರಂಭಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಕ್ರಮ ವಹಿಸಲಾಗುತ್ತಿದೆ.
ಕಾರ್ಯಕ್ರಮಗಳಿಗೆ ರಾಜಕಾರಣಿಗಳನ್ನು ಆಹ್ವಾನಿಸಬಹುದು. ಅವರೂ ಪಾಲ್ಗೊಳ್ಳಬಹುದು. ಆದರೆ, ವೇದಿಕೆ ಮೇಲೆ ರಾಜಕೀಯ ಭಾಷಣ ಅಥವಾ ಉಡುಗೊರೆ ನೀಡುವುದಾಗಲಿ ಇದ್ಯಾವುದನ್ನೂ ಮಾಡುವಂತಿಲ್ಲ. ಒಂದು ವೇಳೆ ಹಾಗೆ ಏನಾದರೂ ಗಮನಕ್ಕೆ ಬಂದರೆ ಅವರ ಮೇಲೆ ಚುನಾವಣಾ ಆಯೋಗದ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಇದಲ್ಲದೇ ಜಾತ್ರೆಗಳಲ್ಲಿಯೂ ರಾಜಕೀಯ ವ್ಯಕ್ತಿಗಳು ಪಾಲ್ಗೊಂಡರೂ ಯಾವುದೇ ರೀತಿಯ ರಾಜಕೀಯ ಭಾಷಣ, ಆಶ್ವಾಸನೆ ಸೇರಿದಂತೆ ಇನ್ನಿತರ ಯಾವುದೇ ಭರವಸೆಗಳನ್ನು ನೀಡುವಂತಿಲ್ಲ. ಹೀಗಾಗಿ, ಮದುವೆಗೆ ಆಹ್ವಾನಿಸುವವರು ಹಾಗೂ ಮದುವೆಗೆ ಹೋಗುವ ರಾಜಕಾರಣಿಗಳು ನಾಜೂಕಿನಿಂದ ನಡೆದುಕೊಳ್ಳಬೇಕಿದೆ.

ಕಲ್ಯಾಣ ಮಂಟಪಗಳು ಅಲರ್ಟ್
ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆಯೇ ಕಲ್ಯಾಣ ಮಂಟಪಗಳ ಆಡಳಿತವು ಅಲರ್ಟ್ ಆಗಿವೆ. ಕಲ್ಯಾಣ ಮಂಟಪ ಬುಕ್ಕಿಂಗ್ ಮಾಡಿದವರಿಗೆ ಹಾಗೂ ಹೊಸದಾಗಿ ಬುಕ್ಕಿಂಗ್ ಮಾಡಲು ಬರುವವರಿಗೆ ಚುನಾವಣಾಧಿಕಾರಿ ಕಚೇರಿ ಸೂಚನೆಗಳನ್ನು ನೀಡಲು ಮುಂದಾಗಿವೆ. ಚುನಾವಣಾಧಿಕಾರಿಗಳೂ ಸಹ ಸಭೆಯಲ್ಲಿ ಈ ಕುರಿತು ಹದ್ದಿನ ಕಣ್ಣಿಡಲು ಸೂಚಿಸಿದ್ದಾರೆ.