ಮದ್ಯದಂಗಡಿ ಪರವಾನಿಗೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ನಾಲ್ವರು ಅಧಿಕಾರಿಗಳು ಲೋಕಾ ಬಲೆಗೆ
ದಾವಣಗೆರೆ: ಮದ್ಯದಂಗಡಿಗೆ ಪರವಾನಿಗೆ ನೀಡಲು ೩ ಲಕ್ಷ ರೂ., ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಬಕಾರಿ ಇಲಾಖೆ ಉಪ ಆಯುಕ್ತೆ ಸೇರಿದಂತೆ ನಾಲ್ವರು ಶನಿವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಅಬಕಾರಿ ಇಲಾಖೆ ದಾವಣಗೆರೆ ಡಿಸಿ ಆರ್.ಎಸ್.ಸ್ವಪ್ನ, ಪ್ರಥಮ ದರ್ಜೆ ಸಹಾಯಕ ಹೆಚ್.ಎಂ.ಅಶೋಕ, ಹರಿಹರ ವಲಯ ಕಚೇರಿಯ ಅಬಕಾರಿ ನಿರೀಕ್ಷಕರಾದ ಶೀಲಾ, ಶೈಲಶ್ರೀ ಲೋಕಾಯುಕ್ತ ಗಾಳಕ್ಕೆ ಸಿಕ್ಕಿಬಿದ್ದಿದ್ದಾರೆ.
ದಾವಣಗೆರೆ-ಹರಿಹರ ರಸ್ತೆಯಲ್ಲಿರುವ ಅಮರಾವತಿ ರೈಲ್ವೆ ಗೇಟ್ ಸಮೀಪದ ಡಿ.ಜಿ.ಆರ್. ಅಮ್ಯೂಸ್ಮೆಂಟ್ ಪಾರ್ಕ್ ಕಟ್ಟಡದಲ್ಲಿ ಸಿ.ಎಲ್-೭ ಲೈಸನ್ಸ್ ಪಡೆಯಲು ಡಿ.ಜಿ.ರಘುನಾಥ ಎಂಬುವರು ಅಬಕಾರಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಲೈಸೆನ್ಸ್ ಮಾಡಿ ಕೊಡಲು ಅಬಕಾರಿ ಡಿಸಿ ಸ್ವಪ್ನ, ಎಫ್ಡಿಎ ಅಶೋಕ, ಹರಿಹರ ಕಚೇರಿಯ ಶೀಲಾ, ಶೈಲಶ್ರೀ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ರಘುನಾಥ್ ಲೋಕಾಯುಕ್ತದ ಮೊರೆ ಹೋಗಿದ್ದರು.
ಎಫ್ಡಿಎ ಹೆಚ್.ಎಂ.ಅಶೋಕ ಶನಿವಾರ ತಮ್ಮ ಕಚೇರಿಯಲ್ಲಿ ರಘುನಾಥ್ ಕಡೆಯಿಂದ ೩ ಲಕ್ಷ ರೂ. ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸಧ್ಯ ಡಿಸಿ ಸ್ವಪ್ನ, ಅಶೋಕ, ಶೀಲಾ, ಶೈಲಶ್ರೀ ಅವರುಗಳನ್ನು ದಸ್ತಗಿರಿ ಮಾಡಿದ್ದು, ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪೂರೆ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಪ್ರಭು ಬಸೂರ್, ಮಧುಸೂಧನ್, ಹೆಚ್.ಎಸ್.ರಾಷ್ಟçಪತಿ, ಮಂಜುನಾಥ ಪಂಡಿತ್ ನೇತೃತ್ವದ ತಂಡ ಟ್ರಾö್ಯಪ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.