ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮಧ್ಯದಲ್ಲಿ ಕೈ ಬಿಟ್ಟ ಮುಖ್ಯಮಂತ್ರಿ

02:00 AM Feb 19, 2024 IST | Samyukta Karnataka

ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ ೧೫ನೇ ರಾಜ್ಯ ಬಜೆಟ್ ಮಂಡಿಸಿದ ಖುಷಿಯಲ್ಲಿದ್ದಾರೆ. ಆದರೆ ಜನತೆ ಈ ಬಜೆಟ್‌ನಲ್ಲೂ ತಮಗೆ ನ್ಯಾಯ ಸಿಗಲಿಲ್ಲ, ನಿರೀಕ್ಷೆಯ ಯಾವೊಂದೂ ಬೇಡಿಕೆ ಈಡೇರಲಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ. ಕಳೆದ ೧೦ ವರ್ಷಗಳಿಂದ ರಾಜ್ಯ ಸರ್ಕಾರಗಳಿಂದ ಹೇಳಿಕೊಳ್ಳುವಂತಹ ಯಾವುದೇ ಯೋಜನೆ, ಕಾರ್ಯಕ್ರಮ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಿಗೆ ಬರಲಿಲ್ಲ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಂದಾಗಿ ಶಿವಮೊಗ್ಗ ಜಿಲ್ಲೆಗೆ ಒಂದಿಷ್ಟು ಹೊಸ ಹೊಸ ಯೋಜನೆಗಳು ಬಂದಿರುವುದನ್ನು ಬಿಟ್ಟರೆ ಮಲತಾಯಿ ಧೋರಣೆ ಈ ಬಜೆಟ್‌ನಲ್ಲೂ ಮುಂದುವರಿದಿದೆ.
ರಾಜ್ಯದ ಕೇಂದ್ರಬಿಂದು ದಾವಣಗೆರೆಯಲ್ಲಿ ಸಿದ್ಧರಾಮೋತ್ಸವದ ಮೂಲಕ ಮತ್ತೆ ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಭದ್ರಪಡಿಸಿಕೊಂಡ ಸಿದ್ದರಾಮಯ್ಯ ತನಗೆ ಸ್ಥಾನಮಾನ ನೀಡಿದ ಊರನ್ನೇ ಮರೆತುಬಿಟ್ಟಿರುವುದು ವಿಷಾದದ ಸಂಗತಿ. ಹತ್ತಿದ ಏಣಿಯನ್ನೇ ಒದೆಯುವಂತೆ ಮುಖ್ಯಮಂತ್ರಿ ಆದ ಬಳಿಕ ಸಿದ್ದರಾಮಯ್ಯ ದಾವಣಗೆರೆಗೆ ಭರಪೂರ ಅನುಕೂಲ ಮಾಡಿಕೊಡುತ್ತಾರೆಂದು ಜನತೆ ಇಟ್ಟುಕೊಂಡಿದ್ದ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ಬಿಜೆಪಿಯ ಭದ್ರಕೋಟೆ ಆಗಿದ್ದ ಮಧ್ಯ ಕರ್ನಾಟಕವನ್ನು ಕಳೆದ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ತೆಕ್ಕೆಗೆ ಹಾಕಿದ್ದಾರೆ. ಹೀಗಾಗಿ ಈ ಬಾರಿಯ ಬಜೆಟ್‌ನಲ್ಲಿ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಜನತೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರಾದರೂ ಅದು ಸಂಪೂರ್ಣ ಹುಸಿಯಾಗಿದೆ. ಯಾವುದೇ ಸರ್ಕಾರ ಬಂದರೂ ನಮಗೆ ಅನ್ಯಾಯ ತಪ್ಪಿದ್ದಲ್ಲ ಎಂಬುದು ಈಗ ಸಾಬೀತಾಗಿದೆ. ಬೆಣ್ಣೆನಗರಿ ಜನರಂತೂ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದಾರೆ.
ದಾವಣಗೆರೆಯಲ್ಲಿ ಖಾಸಗಿ ವಲಯದ ಎರಡು ಮೆಡಿಕಲ್ ಕಾಲೇಜು ಇದ್ದರೂ, ಪ್ರತಿಭಾವಂತ ಬಡ ಹಿಂದುಳಿದ ವರ್ಗಗಳ ಹಾಗೂ ರೈತರು ಮಕ್ಕಳು ವೈದ್ಯರಾಗಬೇಕೆಂಬ ಕನಸು ನನಸಾಗಬೇಕಾದರೆ ಸರ್ಕಾರಿ ಮೆಡಿಕಲ್ ಕಾಲೇಜು ಅಗತ್ಯ. ಅಲ್ಲದೆ ಪ್ರತಿಯೊಂದು ಜಿಲ್ಲೆಗೊಂದರಂತೆ ವೈದ್ಯಕೀಯ ಕಾಲೇಜು ಸ್ಥಾಪಿಸುವುದು ಸರ್ಕಾರದ ಉದ್ದೇಶವೂ ಆಗಿದೆ. ಅದರಂತೆ ಈಗಾಗಲೇ ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭವಾಗಿವೆ. ಉಳಿದಿರುವುದು ದಾವಣಗೆರೆ ಜಿಲ್ಲೆಯಲ್ಲಿ ಮಾತ್ರ. ಕರ್ನಾಟಕದ ಹೃದಯ ಭಾಗ ಹಾಗೂ ದಾವಣಗೆರೆ ಜಿಲ್ಲೆಯ ಜನರ ಬಹು ವರ್ಷಗಳ ಬೇಡಿಕೆಯಾಗಿರುವ
ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಘೋಷಣೆ ಈ ವರ್ಷವಾದರೂ ಆಗುತ್ತದೆಂಬ ನಿರೀಕ್ಷೆ ಸುಳ್ಳಾಯಿತು. ಕೈಗಾರಿಕೆಗಳ ಬೆಳವಣಿಗೆಗೆ ವಿಮಾನ ನಿಲ್ದಾಣ ತೀರ ಅಗತ್ಯ ಇದೆ. ವಿಮಾನ ನಿಲ್ದಾಣಕ್ಕೆ ಅಗತ್ಯ ಇರುವ ಸರ್ಕಾರದ ಜಮೀನು ಕೂಡ ಲಭ್ಯ ಇದೆ. ಆದರೆ ಸರ್ಕಾರ ಮಾತ್ರ ವಿಮಾನ ನಿಲ್ದಾಣ ಸ್ಥಾಪನೆಗೆ ಮೀನ-ಮೇಷ ಎಣಿಸುತ್ತಿದೆ.
ದಾವಣಗೆರೆ-ಚಿತ್ರದುರ್ಗ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ. ಐಟಿ-ಬಿಟಿ ಪಾರ್ಕ್ ನಿರ್ಮಾಣ, ಕೈಗಾರಿಕಾ ಕಾರಿಡಾರ್, ಕೃಷಿ ಉತ್ಪನ್ನಗಳಿಗೆ ಶೀತಲೀಕರಣ ಘಟಕ, ಮೆಕ್ಕೆಜೋಳ ಸಂಸ್ಕರಣಾ ಘಟಕ, ಪ್ರವಾಸಿ ತಾಣಗಳ ಅಭಿವೃದ್ಧಿ, ಕೃಷಿ ಮತ್ತು ತೋಟಗಾರಿಕೆ ಕಾಲೇಜು ಸ್ಥಾಪನೆ, ಭದ್ರಾ ಕಾಲುವೆಗಳ ಆಧುನೀಕರಣ, ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವುದು ಸೇರಿದಂತೆ ಅನೇಕ ಬೇಡಿಕೆಗಳು ಈ ಬಾರಿ ಈಡೇರುತ್ತವೆ ಎಂಬ ಆಶಯ ಜನರಲ್ಲಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ಆಶಯಗಳನ್ನು ತಮ್ಮ ಬಜೆಟ್‌ನಲ್ಲಿ ಸಂಪೂರ್ಣವಾಗಿ ಕಡೆಗೆಣಿಸಿದ್ದಾರೆ.
೨೦೧೭-೧೮ರ ಬಜೆಟ್‌ನಲ್ಲಿ ದಾವಣಗೆರೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸಿ ೨೫ ಕೋಟಿ ರೂ. ತೆಗೆದಿರಿಸಿದ್ದರೂ ಈವರೆಗೂ ಅನುಷ್ಠಾನಗೊಂಡಿಲ್ಲ. ೨೦೨೧-೨೨ರಲ್ಲಿ ದಾವಣಗೆರೆಗೆ ೫೦ ಹಾಸಿಗೆಗಳ ಜಯದೇವ ಹೃದ್ರೋಗ ಉಪಕೇಂದ್ರ ಸ್ಥಾಪಿಸುವುದಾಗಿ ೨೦ ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ ಅದೂ ಕೂಡ ನನೆಗುದಿಗೆ ಬಿದ್ದಿದೆ. ಕನಿಷ್ಠ ಪಕ್ಷ ದಾವಣಗೆರೆಗೆ ಒಂದು ಎಂಆರ್‌ಐ ಸ್ಕಾö್ಯನಿಂಗ್ ಸೌಲಭ್ಯವಾದರೂ ದೊರೆತೀತೆಂಬ ನಿರೀಕ್ಷೆಯೂ ಸುಳ್ಳಾಗಿದೆ.
ಭದ್ರಾ ಮೇಲ್ದಂಡೆಗೆ ನೀಕೊಡೆ-ನಾಬಿಡೆ
ಇನ್ನು ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಭೂ ಸ್ವಾಧೀನ ಪೂರ್ಣಗೊಳಿಸುವ ಜೊತೆಗೆ ಕಾಮಗಾರಿ ವೇಗ ಹೆಚ್ಚಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿತ್ತು. ಭದ್ರಾ ಮೇಲ್ದಂಡೆ ಯೋಜನೆಗೆ ೫೩೦೦ ಕೋಟಿ ರೂ. ಬಿಡುಗಡೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಹೇಳಿದ್ದಾರೆಯೇ ಹೊರತು ಸರ್ಕಾರದ ಕೊಡುಗೆಯನ್ನು ಹೇಳಿಲ್ಲ.
ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ' ಎಂದು ಘೋಷಿಸಿ ಕಳೆದ ಬಜೆಟ್‌ನಲ್ಲಿ ೫೩೦೦ ಕೋಟಿ ರೂ. ತೆಗೆದಿರಿಸಿತ್ತು, ಅದನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯ ಮಾಡುವ ಮಾತನ್ನಾಡಿದ್ದಾರೆ. ಆದರೆ ಈ ಯೋಜನೆಯ ಭೂಸ್ವಾಧೀನ ಕಾರ್ಯಕ್ಕೆ ಅಗತ್ಯ ಇರುವ ಹಣವನ್ನಾದರೂ ಬಜೆಟ್‌ನಲ್ಲಿ ಇಡಬಹುದಾಗಿತ್ತು, ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ವೇಗ ನೀಡುವುದಕ್ಕೆ ಒತ್ತು ನೀಡಬಹುದಿತ್ತು, ಅಂತಹ ಯಾವುದೇ ಸಂಗತಿಯನ್ನು ಪ್ರಸ್ತಾಪ ಮಾಡದೆ ಬಿಸಿಲ ನಾಡಿನ ಜನರಿಗೆ ಅನ್ಯಾಯ ಮಾಡಿದ್ದಾರೆಂಬುದು ರೈತ ಮುಖಂಡರ ಆರೋಪ. ಅದೇ ರೀತಿ ದಾವಣಗೆರ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗದ ಭೂಸ್ವಾಧೀನಕ್ಕೆ ಹಣ ನೀಡಬೇಕಿತ್ತು. ಕುಂಟುತ್ತ ಸಾಗಿರುವ ಈ ಯೋಜನೆ ಶೀಘ್ರ ಅನುಷ್ಠಾನಗೊಳ್ಳಬೇಕಾದರೆ, ಮೊದಲು ರಾಜ್ಯ ಸರ್ಕಾರ ಅಗತ್ಯವಿರುವ ಭೂಸ್ವಾಧೀನ ಮಾಡಿಕೊಂಡು, ಭೂಮಾಲೀಕರಿಗೆ ಪರಿಹಾರ ನೀಡಿ ಭೂಮಿಯನ್ನು ರೈಲ್ವೆ ಇಲಾಖೆಗೆ ಒಪ್ಪಿಸಬೇಕು. ಆದರೆ ಇನ್ನೂ ಭೂಸ್ವಾಧೀನವೇ ಪೂರ್ಣಗೊಂಡಿಲ್ಲವಾದರೆ ಕಾಮಗಾರಿ ಆರಂಭವಾಗುವ ಮಾತೆಲ್ಲಿದೆ. ನೇರ ರೈಲು ಮಾರ್ಗ ಅನುಷ್ಠಾನಕ್ಕೆ ಯಾವುದೇ ಹಣ ನೀಡದಿರುವುದು ಮಧ್ಯ ಕರ್ನಾಟಕಕ್ಕೆ ಅನ್ಯಾಯ ಮಾಡಿದಂತಾಗಿದೆ. ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂಬ ಹಲವು ವರ್ಷಗಳ ಬೇಡಿಕೆಗೂ ಕವಡೆ ಕಾಸಿನ ಕಿಮ್ಮತ್ತು ಸಿಕ್ಕಿಲ್ಲ. ಆದರೆ ಗಣಿಬಾಧಿತ ಹೊಸದುರ್ಗ, ಚಿತ್ರದುರ್ಗ, ಹೊಳಲ್ಕೆರೆ ತಾಲ್ಲೂಕಿನಲ್ಲಿ ಮೀನುಗಾರಿಕೆ ಕೈಗೊಳ್ಳಲು ೬ ಕೋಟಿ ಮೀಸಲಿಟ್ಟಿದ್ದಾರೆ. ಚಿತ್ರದುರ್ಗದಲ್ಲಿ ಸಾರ್ವಜನಿಕ ಪ್ರಯೋಗಾಲಯ ಸ್ಥಾಪನೆ. ೫೦೦ ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನ ವಸತಿ ನಿಲಯ, ಸಿಬ್ಬಂದಿ ವರ್ಗದ ವಸತಿ ನಿಲಯಗಳ ಕಟ್ಟಡ ನಿರ್ಮಾಣ ಮಾಡುವುದನ್ನು ಬಿಟ್ಟರೆ ಬೇರೆ ಯಾವುದೇ ಗುರುತರವಾದ ಯೋಜನೆ ಜಾರಿಗೊಳಿಸಿಲ್ಲ ಹಾಗೂ ಅನುದಾನವನ್ನೂ ನೀಡಿಲ್ಲ. ಎಂಪಿಎಂ ಕಾರ್ಖಾನೆ ಪುನರಾರಂಭದ ಮಾತಿಲ್ಲ ಮಂಡ್ಯದ ಮೈಷುಗರ್ ಕಂಪನಿಯ ಆವರಣದಲ್ಲಿ ಮತ್ತೊಂದು ಸಕ್ಕರೆ ಕಾರ್ಖಾನೆ ಆರಂಭಿಸುವುದಾಗಿ ್ಲ ಪ್ರಕಟಿಸಿದ್ದಾರೆ. ಆದರೆ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದ ಶಿವಮೊಗ್ಗ ಜಿಲ್ಲೆಯ ಆರ್ಥಿಕತೆಯ ತಳಹದಿಯಾಗಿರುವ ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆ ಹಾಗೂ ಸಕ್ಕರೆ ಘಟಕ ಪುನರಾರಂಭದ ಬಗ್ಗೆ ಯಾವುದೇ ಪ್ರಸ್ತಾವನೆ ಮಾಡಿಲ್ಲ. ಚುನಾವಣೆ ಸಂದರ್ಭದಲ್ಲಿ ಎಂಪಿಎಂ ಕಾರ್ಖಾನೆ ಪುನರಾರಂಭಿಸುವುದಾಗಿ ಕಾಂಗ್ರೆಸ್ ಪಕ್ಷ ಭರವಸೆ ನೀಡಿದ್ದನ್ನು ಚುನಾವಣೆ ಗೆದ್ದಾದ ಮೇಲೆ ಬಹುಶಃ ಸ್ಥಳೀಯ ಶಾಸಕರೂ ಮರೆತಿರಬಹುದು. ನೂತನ ಸಕ್ಕರೆ ಕಾರ್ಖಾನೆ ಆರಂಭಿಸಲು ಸರ್ಕಾರದ ಬಳಿ ಹಣ ಇರುವಾಗ ಈಗಾಗಲೇ ಇರುವ ಸಕ್ಕರೆ ಘಟಕವನ್ನು ಮತ್ತು ಕಾಗದ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಹಣ ಇಲ್ಲವೇ ಎಂಬುದು ಭದ್ರಾವತಿ ಜನರ ಪ್ರಶ್ನೆಯಾಗಿದೆ. ಶಿವಮೊಗ್ಗ ಜಿಲ್ಲೆಗೆ ಆಹಾರ ಪಾರ್ಕ್, ಐಪಿಹೆಚ್‌ಎಲ್ ಪ್ರಯೋಗಾಲಯ, ಶಿವಮೊಗ್ಗ-ಬೊಮ್ಮನಕಟ್ಟೆ ರಸ್ತೆಯ ರೈಲ್ವೆ ಮೇಲುಸೇತುವೆ, ತಾರಾಲಯ/ವಿಜ್ಞಾನ ಕೇಂದ್ರ ಸ್ಥಾಪನೆ, ಹೈ-ಸೆಕ್ಯೂರಿಟಿ ಕಾರಾಗೃಹ ನಿರ್ಮಾಣದ ಘೋಷಣೆ ಮಾಡಲಾಗಿದೆ. ಆದರೆ ಜನತೆಯ ಬಹು ನಿರೀಕ್ಷಿತ ಹಾಗೂ ದಶಕಗಳಿಂದ ರಾಜ್ಯ ಸರ್ಕಾರದ ಹಂತದಲ್ಲಿ ನನೆಗುದಿಗೆ ಬಿದ್ದಿರುವ ಹಲವು ಯೋಜನೆಗಳಿಗೆ ಒತ್ತು ನೀಡಲಾಗಿಲ್ಲ. ಶಿವಮೊಗ್ಗದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ, ಶಿವಮೊಗ್ಗ ಮತ್ತು ಭದ್ರಾವತಿ ನಗರಗಳನ್ನು ಒಳಗೊಂಡ ಪೊಲೀಸ್ ಕಮಿಷನರೇಟ್ ಸ್ಥಾಪನೆ, ಜಿಲ್ಲಾಡಳಿತ ಭವನ, ಆಯುಷ್ ವಿವಿ ಕಾರ್ಯಾರಂಭಕ್ಕೆ ಕ್ರಮ, ಶಿವಮೊಗ್ಗ ಕೇಂದ್ರವಾಗಿಟ್ಟುಕೊಂಡು ಪ್ರತ್ಯೇಕ ವಿದ್ಯುತ್ ವಲಯ ಸ್ಥಾಪನೆ, ಭದ್ರಾ ಜಲಾಶಯದ ಬಳಿ ಕೆಆರ್‌ಎಸ್ ಮಾದರಿ ಉದ್ಯಾನವನ ನಿರ್ಮಾಣ ಕುರಿತು ಯಾವುದೇ ಪ್ರಸ್ತಾಪ ಇಲ್ಲ. ಕಾಫಿ ನಾಡ ಜನರ ಮೂಗಿಗೆ ತುಪ್ಪ ಚಿಕ್ಕಮಗಳೂರು ಜಿಲ್ಲೆಗೆ ಸ್ಪೈರ್ಕ್ ನಿರ್ಮಾಣ ಬಿಟ್ಟರೆ ಬೇರೇನೂ ಸಿಕ್ಕಿಲ್ಲ. ಒಂದು ರೀತಿ ಕಾಫಿ ನಾಡಿನ ಜನರ ಮೂಗಿಗೆ ತುಪ್ಪ ಸವರುವ ಪ್ರಯತ್ನವನ್ನು ಮಾಡಿದ್ದಾರೆ. ಬಿಜೆಪಿ ಭದ್ರಕೋಟೆಯಾಗಿದ್ದ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳನ್ನೂ ಕಾಂಗ್ರೆಸ್ ತನ್ನ ತೆಕ್ಕೆಗೆ ಪಡೆದರೂ ಜನರ ಆಶಯಗಳಿಗೆ ಸ್ಪಂದಿಸದಿರುವುದು ದುರಂತವೇ ಸರಿ. ಬಹು ವರ್ಷಗಳ ಬೇಡಿಕೆಯಾಗಿರುವ ಚಿಕ್ಕಮಗಳೂರು ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ, ಕಡೂರು-ಬೀರೂರು, ತರೀಕರೆ ವ್ಯಾಪ್ತಿಯಲ್ಲಿ ಜವಳಿ ಪಾರ್ಕ್ ನಿರ್ಮಾಣ ಮತ್ತು ಕೈಗಾರಿಕೆಗಳ ಸ್ಥಾಪನೆ, ಪ್ರವಾಸಿ ತಾಣಗಳ ಅಭಿವೃದ್ಧಿ ಸೇರಿದಂತೆ ಯಾವೊಂದು ಬೇಡಿಕೆಯನ್ನೂ ಪರಿಗಣಿಸಿಲ್ಲ.ಕಾಯಕವೇ ಕೈಲಾಸ' ಎಂಬುದು ಬಸವಣ್ಣನವರ ಸಿದ್ಧಾಂತ. ಬಸವಣ್ಣನವರ ಆಶಯದಂತೆ ಸರ್ಕಾರ ನಡೆಯುತ್ತದೆ ಎಂದು ಹೇಳುವ ಸಿದ್ದರಾಮಯ್ಯನವರು ಜನರಿಗೆ ಕೆಲಸ ನೀಡುವ ಯೋಜನೆ ರೂಪಿಸಬೇಕು, ಆಗ ಅವರ ಆದಾಯ ಹೆಚ್ಚಾಗಿ ಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಉತ್ಪಾದನೆ, ಉತ್ಪಾದಕತೆ ಹೆಚ್ಚಾಗುವ ಮೂಲಕ ರಾಜ್ಯದ ಅಭಿವೃದ್ಧಿ ಗತಿ ಹೆಚ್ಚಾಗುತ್ತದೆ, ಜನರ ತಲಾ ಆದಾಯ ಆ ಮೂಲಕ ರಾಜ್ಯದ ಒಟ್ಟು ಆದಾಯವೂ ಹೆಚ್ಚಾಗುತ್ತದೆ. ಭದ್ರಾವತಿ ಎಂ.ಪಿ.ಎಂ ಕಾರ್ಖಾನೆ ಪುನರಾರಂಭಿಸಿಲು, ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಗೊಳಿಸಲು, ದಾವಣಗೆರೆ-ತುಮಕೂರು ನೇರ ರೈಲು ಮಾರ್ಗ ನಿರ್ಮಿಸಲು, ದಾವಣಗೆರೆ-ಚಿತ್ರದುರ್ಗ ಜಿಲ್ಲೆಯಲ್ಲಿ ಕೈಗಾರಿಕಾ ಕಾರಿಡಾರ್, ಐಟಿ-ಬಿಟಿ ಪಾರ್ಕ್ ನಿರ್ಮಿಸಲು ಗ್ಯಾರಂಟಿ ಯೋಜನೆಯ ಹಣ ಬಳಸಿ ಆಗ ಆ ಪ್ರದೇಶದ ಅಭಿವೃದ್ಧಿ ತನ್ನಿಂದ ತಾನೇ ಆಗುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳು ಗಂಭೀರ ಚಿಂತನೆ ಮಾಡಬೇಕಿದೆ.

Next Article