For the best experience, open
https://m.samyuktakarnataka.in
on your mobile browser.

ಮನಸ್ಸೆಂಬುದು ಒಂದು ಅಯಸ್ಕಾಂತ

03:00 AM Aug 27, 2024 IST | Samyukta Karnataka
ಮನಸ್ಸೆಂಬುದು ಒಂದು ಅಯಸ್ಕಾಂತ

ಖ್ಯಾತನಾಮರ ಆತ್ಮಚರಿತ್ರೆಗಳನ್ನು ಓದಿದರೆ ವ್ಯಕ್ತಿತ್ವದ' ನಾಲ್ಕು ಗುಣವೈಶಿಷ್ಟ್ಯಗಳುಳ್ಳ ಒಂದು ನಮೂನೆ, ಮಾದರಿ ಕಂಡುಬರುತ್ತದೆ. ಅರ್ಥಾತ್ ಈ ನಾಲ್ಕು ಗುಣವೈಶಿಷ್ಟ್ಯಗಳು ಮನುಷ್ಯ ಜಗತ್ತನ್ನು ಗ್ರಹಿಸಲು, ಪ್ರತಿಕ್ರಿಯಿಸಲು ಉಪಯೋಗಿಸುವ ಮನೋಇಂದ್ರಿಯಗಳು! ಪ್ರತಿವ್ಯಕ್ತಿಯಲ್ಲಿ ಒಂದಷ್ಟು ಅಂತರ್ಮುಖಿತ್ವ; ಒಂದಷ್ಟು ಬಹಿರ್ಮುಖಿತ್ವ ಇರುತ್ತದೆ. ಪ್ರಮಾಣದಲ್ಲಿ ವ್ಯತ್ಯಾಸವಷ್ಟೆ. ಮನೋರೋಗವನ್ನು ಗುಣಪಡಿಸುವ ವೈದ್ಯನಿಗೆ ಒಂದಷ್ಟು ಮನೋರೋಗ ಇರುತ್ತದಲ್ಲ?! ಕತ್ತಲೆಯಲ್ಲೂ ಸಂಕೋಚದಿಂದಿರುವ; ಅತ್ಯಾಪ್ತ ಸ್ನೇಹಿತರಲ್ಲಿ ಸುಳ್ಳುಹೇಳುವ; ದೇವರೆದುರೂ ಸಂಪೂರ್ಣ ತೆರೆದುಕೊಳ್ಳದಿರುವ ಮನುಷ್ಯನಲ್ಲಿ ಪ್ರಾಮಾಣಿಕತೆ ನಿರೀಕ್ಷಿಸಬಹುದೇ? ಎಂಥಾ ಚೆನ್ನಾಗಿ ಬ್ರಶ್ ಮಾಡಿದವನ ಬಾಯಲ್ಲೂ ವೈರಾಣುಗಳು ಇರುತ್ತವಲ್ಲ; ಹಾಗೆಯೇ ಎಂಥಾ ಆರೋಗ್ಯಕರ ಮನುಷ್ಯನಲ್ಲೂ ಒಂಚೂರು ಮನೋರೋಗವಿರುತ್ತದೆ! ಅವನು ವೈದ್ಯನಾಗಿದ್ದರೆ ರೋಗಿಯ ಮೇಲೂ ಅದರ ಪರಿಣಾಮವಾಗುತ್ತದೆ! ಮನಸ್ಸಿನಲ್ಲಿ ಹೊರಮನಸ್ಸು ಮತ್ತು ಒಳಮನಸ್ಸು ಎಂಬ ಎರಡು ವಿಧ. ಒಳಮನಸ್ಸಿನಲ್ಲಿ ಹಿಂದಿನ ಜನ್ಮಗಳ ನೆನಪು ಮತ್ತು ಪ್ರತಿನಿತ್ಯದ ಮುಖ್ಯ ಘಟನೆಗಳು ಅಡಕವಾಗಿರುತ್ತವೆ. ಇದು ಸುಮಾರು ಶೇ.೯೦ರಷ್ಟು ಜಾಗವನ್ನು ಆವರಿಸಿಕೊಂಡಿದೆ. ಈ ಮನಸ್ಸು ನೋವು, ದುಃಖ ಮತ್ತು ಭಾವನಾತ್ಮಕ ವಿಷಯಗಳಿಗೆ ಕಾರಣವಾಗಿದೆ. ಒಳಮನಸ್ಸನ್ನು ಸಮರ್ಪಕವಾಗಿ ಬಳಸಿ ಕೊಂಡಾಗ ಮನುಷ್ಯರು ಮಹಾನ್ ವ್ಯಕ್ತಿಗಳಾಗಿ ಬೆಳೆದು ನಿಲ್ಲಲು ಸಾಧ್ಯವಾಗುತ್ತದೆ. ಸಂಮೋಹನ ವಿದ್ಯೆಯಿಂದ ಈ ಒಳಮನಸ್ಸನ್ನು ಬಿಚ್ಚಿಟ್ಟು ಮಾನವನಲ್ಲಿರುವ ಖಿನ್ನತೆ, ದ್ವೇಷ ಮತ್ತು ಕೆಟ್ಟ ವಿಚಾರಗಳನ್ನು ಹೊರತೆಗೆದು ಆತನನ್ನು ಉನ್ನತ ವ್ಯಕ್ತಿಯನ್ನಾಗಿ ಮಾಡಲು ಸಾಧ್ಯವಾಗುತ್ತದೆ. ಒಳಮನಸ್ಸನ್ನು ಅರ್ಥಮಾಡಿಕೊಂಡಾಗ ಅನೇಕ ಬದಲಾವಣೆ ಕಾಣಬಹುದು. ಒಳಮನಸ್ಸನ್ನು ಅತಿಯಾಗಿ ಪ್ರೀತಿಸಬೇಕು. ಜತೆಗೆ ದಿನದಲ್ಲಿ ಒಂದಿಷ್ಟು ಸಮಯ ನೀಡಿ ಒಳಮನಸ್ಸಿನ ಜತೆ ಸಂವಾದ ನಡೆಸಿದಾಗ ಬದುಕಿನಲ್ಲಿ ಸಾಕಷ್ಟು ಸುಧಾರಣೆಗಳನ್ನು ಕಾಣಬಹುದು. ೨೧ ದಿನಗಳ ಕಾಲ ನಿರಂತರವಾಗಿ ಅಭ್ಯಾಸ ಮಾಡಿದಾಗ ಖಂಡಿತವಾಗಿಯೂ ಸುಧಾರಣೆ ಮತ್ತು ಯಶಸ್ಸು ಕಾಣಬಹುದು. ನಾವು ಸೇವಿಸುವ ಆಹಾರವು ಮೂರು ಪಾಲಾಗುತ್ತದೆ. ಒಂದು ಭಾಗವು ದೇಹಕ್ಕೆ ಬೇಡವಾಗಿ ಮಲವಾಗಿ ಹೊರಬಂದುಬಿಡುತ್ತದೆ. ಇನ್ನೊಂದು ಭಾಗವು ಸೂಕ್ಷ್ಮವಾಗಿ ರಕ್ತವಾಗಿ ದೇಹದ ಭಾಗಗಳನ್ನು ಕಟ್ಟುತ್ತದೆ. ಅದಕ್ಕಿಂತ ಸೂಕ್ಷ್ಮವಾದ ಭಾಗವು ಮನಸ್ಸನ್ನು ಸೇರಿ ಕೊಳ್ಳುತ್ತದೆ. ಹೀಗಾಗಿಯೇಮನಸ್ಸು ಶುದ್ಧವಾಗಿರಬೇಕು' ಎಂದುಕೊಂಡವನು ಆಹಾರಶುದ್ಧಿಯ ಕಡೆ ಸಂಪೂರ್ಣ ಲಕ್ಷ್ಯಕೊಡಬೇಕು.
ಮನೋವಿಜ್ಞಾನ ವಿಷಯದ ಬಗ್ಗೆ ಅನೇಕ ಸಂಶೋಧನಾಕಾರರು “ಸ್ವಯಂಚಾಲಿತ ಚಿಂತನೆ”ಯೆಂದು ಕರೆಯಲ್ಪಡುವ ನಮ್ಮ ಮನಸ್ಸಿನ ಅನೇಕ ಕಾರ್ಯಚಟುವಟಿಕೆಗಳ ನಿದರ್ಶನಗಳನ್ನು ಪ್ರಸ್ತುತಪಡಿಸಿದ್ದಾರೆ. ಕೆಲವು ಸಮಸ್ಯೆಗಳು ಮತ್ತು ಪ್ರಶ್ನೆಗಳನ್ನು ಪರಿಹರಿಸಲು ನಾವು ಬಹಳ ಶ್ರದ್ಧೆಯಿಂದ ಪ್ರಯತ್ನಿಸುತ್ತೇವೆ. ಆದರೆ ಆ ಸಮಯದಲ್ಲಿ ನಮಗೆ ಯಾವುದೇ ಪರಿಹಾರಗಳು ಗೋಚರವಾಗಿರುವುದಿಲ್ಲ. ಇಂತಹ ಹಲವಾರು ಸಂದರ್ಭಗಳಲ್ಲಿ ವಿಷಯಕ್ಕೆ ಸಂಪೂರ್ಣ ಹೊರತಾದ ಬೇರೆಯದ್ದನ್ನೇ ದೀರ್ಘಾವಧಿಯಲ್ಲಿ ಯೋಚಿಸುತ್ತಿರುವಾಗ ಆ ಹಿಂದೆ ಪ್ರಯತ್ನಿಸಿದ್ದ ಅನೇಕ ವಿಚಾರಗಳಿಗೆ ನಮ್ಮ ಯಾವುದೇ ಸಹಜವಾದ ಪ್ರಜ್ಞಾಪೂರ್ವಕ ಪ್ರಯತ್ನವಿಲ್ಲದೆಯೇ ಇದ್ದಕ್ಕಿದ್ದಂತೆಯೇ ಪರಿಹಾರಗಳು, ಸ್ಪಷ್ಟ ಚಿಂತನೆಗಳು ಮೂಡಿಬಂದಿದ್ದಿವೆ. ಬಹುತೇಕರು ಹೆಸರು, ದಿನಾಂಕ, ಪದ, ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಲು ಯಶಸ್ವಿಯಾಗಿರುವುದಿಲ್ಲ ಮತ್ತು ಅವುಗಳನ್ನು ದೀರ್ಘಕಾಲ ಸ್ಮರಣೆಯಲ್ಲಿರಿಸಿಕೊಳ್ಳಲು ಅಸಮರ್ಥರಾಗುವುದೂ ಇದೆ. ಹೀಗೆ ಸಂಪೂರ್ಣವಾಗಿ ನಮ್ಮ ಸ್ಮರಣೆಯಿಂದ ಅಳಿಸಿಹೋಗಿದೆ ಎಂದು ಭಾವಿಸಿದ ಎಷ್ಟೋ ವಿಚಾರ, ಹೆಸರು, ಪದಗಳು ಯಾವುದೋ ಒಂದು ಅನಿರೀಕ್ಷಿತ ಸಂದರ್ಭದಲ್ಲಿ ಇದ್ದಕ್ಕಿದ್ದಂತೆಯೇ ಸ್ಮರಣೆಗೆ ಬರುವುದಿದೆ. ಅಂದರೆ; ನಮ್ಮ ಜಾಗೃತಪ್ರಜ್ಞೆಯಿಂದ ಮರೆತಿದ್ದ ಇಂತಹ ಹಲವು ವಿಚಾರಗಳು ನಾವು ನಿರೀಕ್ಷೆ ಮಾಡದಿರುವ ಸಂದರ್ಭಗಳಲ್ಲಿ ಸುಪ್ತಪ್ರಜ್ಞೆಯಿಂದ ಇದ್ದಕ್ಕಿದ್ದಂತೆಯೇ ಸ್ಮರಣೆಗೆ ಬರುತ್ತದೆಯಲ್ಲ, ಅದು ಹೇಗೆ? ನಾವು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಿದ ವಿಷಯಗಳನ್ನು ಮರೆತಿದ್ದರೂ ಸುಪ್ತಪ್ರಜ್ಞೆಯಲ್ಲಿ ಆ ಪ್ರಯತ್ನಗಳು ದಾಖಲಾಗಿರುತ್ತವೆ ಮತ್ತು ಸುಪ್ತಪ್ರಜ್ಞೆಯು ಆ ಪ್ರಯತ್ನವನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿರುತ್ತದೆ. ಈ ಪ್ರಕ್ರಿಯೆಯೇ “ಸ್ವಯಂಚಾಲಿತ ಚಿಂತನೆ.”
ನಾವು ಹೊಸ ಹೊಸ ವಿಚಾರಗಳಿಗೆ ಸಂಬಂಧಿಸಿದಂತೆ ಅಧ್ಯಯನ, ವಿಮರ್ಶೆ, ವಿಚಾರ ವಿನಿಮಯವೇ ಮುಂತಾದ ಚಟುವಟಿಕೆಗಳನ್ನು ನಮ್ಮ ಜಾಗೃತ ಮನಃಸ್ಥಿತಿಯಲ್ಲಿ ಮಾಡಿದಾಗ ಸುಪ್ತಮನಸ್ಸು ಈ ಸಂಬಂಧವಾಗಿ ತಾರ್ಕಿಕ ಅಂತ್ಯ ಕಂಡುಕೊಳ್ಳುವವರೆಗೆ ತನ್ನ ಚಿಂತನೆಯನ್ನು ನಿರಂತರವಾಗಿರಿಸಿಕೊಳ್ಳುತ್ತದೆ. ನಾವು ಹೊಸದಾಗಿ ಚಿಂತನೆ ಆರಂಭಿಸಿದ ಅವಧಿಯಿಂದ ಆರಂಭಿಸಿ ವಿಫಲ ಪ್ರಯತ್ನಗಳ ಬಳಿಕ ಉದ್ದೇಶಪೂರ್ವಕವಾಗಿ ಮರೆತ ಅವಧಿ (ವಾರ, ಮಾಸ, ವರ್ಷಗಳು……) ಸೇರಿದಂತೆ ಸುಪ್ತಮನಸ್ಸಿನ ಈ ಸ್ವಯಂಚಾಲಿತ ಚಿಂತನೆ'ಯು ಎಷ್ಟೋ ಬಾರಿ ನಮ್ಮ ದೃಷ್ಟಿಕೋನವನ್ನು, ನಿರ್ಧಾರವನ್ನು, ಅಭಿಪ್ರಾಯವನ್ನು, ವ್ಯಾಖ್ಯಾನವನ್ನು ಬದಲಿಸುವುದಿದೆ. ಇದನ್ನು “ಸುಪ್ತಪ್ರಜ್ಞೆಯ ಮಾನಸಿಕ ಜೀರ್ಣಕ್ರಿಯೆ ಮತ್ತು ಸಮೀಕರಣ” ಎಂಬುದಾಗಿ ಗುರುತಿಸಲಾಗುತ್ತದೆ. ಇದು ಒಂದು ರೀತಿಯಲ್ಲಿ ಭೌತಿಕದೇಹದ ಪೋಷಣೆಯಲ್ಲಿನ ಜೀರ್ಣಕ್ರಿಯೆ ಮತ್ತು ಮರುಸಂಯೋಜನೆಯ ಕಾರ್ಯವನ್ನು ಹೋಲುತ್ತದೆ. ನಮ್ಮ ನಡವಳಿಕೆಯು ನಮ್ಮ ಸಾಮಾಜಿಕ ಮತ್ತು ಬೌದ್ಧಿಕಶ್ರೇಣಿಯನ್ನು ಗೌರವಿಸುವ ಅಪ್ರಜ್ಞಾಪೂರ್ವಕವಾದ ಊಹೆಗಳಿಂದ ಪ್ರಭಾವಿತವಾಗಿರುತ್ತವೆ. ಕೌಟುಂಬಿಕ ಪರಿಸರದಲ್ಲಿರುವುದಕ್ಕಿಂತ ಭಿನ್ನವಾಗಿ ಬಾಹ್ಯಪರಿಸರದಲ್ಲಿ ನಮಗರಿವಿಲ್ಲದೆಯೇ ವಿಭಿನ್ನವಾದ ಊಹೆಗಳನ್ನು ಸೃಜಿಸುತ್ತೇವೆ. ಬೌದ್ಧಿಕವಾಗಿ ಉನ್ನತಿಗೇರಿದಂತೆ ನಮ್ಮ ಇಡೀ ನಡವಳಿಕೆಯು ಸೂಕ್ಷ್ಮವಾಗಿ ಮತ್ತು ನಮ್ಮ ಜಾಗೃತಪ್ರಜ್ಞೆಗೆ ಬಾರದೆಯೇ ಏರಿದ ಉನ್ನತಿಗನುಗುಣವಾಗಿ ಬದಲಾಗುತ್ತದೆ. ಇಂತಹ ಬದಲಾವಣೆಗಳು ವಿಶೇಷತಃ ಉಡುಪು-ತೊಡುಪುಗಳಲ್ಲಿ, ಆಹಾರಕ್ರಮಗಳಲ್ಲಿ, ಜೀವನಶೈಲಿಗಳಲ್ಲಿ ವಿಭಿನ್ನ ಪರಿಸರಗಳಿಗೆ ಅನುಗುಣವಾಗಿ ಬದಲಾಗುತ್ತಲೇ ಇರುತ್ತವೆ. ವ್ಯಕ್ತವಾಗದ ಚಿಂತನೆಯ ಮಹಾ ಉಗ್ರಾಣದಿಂದ ತನಗೆ ಬೇಕಾದುದನ್ನು ತನ್ನತ್ತ ಆಕರ್ಷಿಸುವ ಮೂಲಕ ಮನುಷ್ಯ ತನ್ನ ಮನಸ್ಸನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅದ್ಭುತವಾದ ಸಾಧ್ಯತೆಗಳನ್ನು ಹೊಂದಿದ್ದಾನೆ. ಆಲೋಚನೆಗಳು ಅಭಿವ್ಯಕ್ತಿಗಾಗಿ ಹಸಿವಿನಿಂದ ಕೂಡಿರುತ್ತವೆ ಮತ್ತು ವ್ಯಕ್ತಪಡಿಸಲು ಸಾಕಷ್ಟು ಸಾಮರ್ಥ್ಯವನ್ನು ಹೊಂದಿರುವವನ ಮನಸ್ಸಿನಲ್ಲಿ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತವೆ. ಬಹಳಷ್ಟು ಮಂದಿ ಇಂತಹ ಮಹಾನ್ ಆಲೋಚನೆಗಳನ್ನು ಹಂಚಿಕೊಳ್ಳಲೇ ಇಚ್ಛಿಸುವುದಿಲ್ಲ. ಆದರೆ ಇದಾವುದೂ ವ್ಯರ್ಥವಾಗುವುದಿಲ್ಲ ಏಕೆಂದರೆ; ಒಬ್ಬನು ಬಳಸದ್ದನ್ನು ಇನ್ನೊಬ್ಬನು ಹೀರಿಕೊಳ್ಳುವ ಪ್ರಯತ್ನ ಪರಿಸರದಲ್ಲಿ ನಿರಂತರ ನಡೆದೇ ಇರುತ್ತದೆ. ಮನಸ್ಸೆಂಬುದು ಪ್ರಜ್ಞಾಪೂರ್ವಕ ಅಥವಾ ಸುಪ್ತಾವಸ್ಥೆಯ ಬೇಡಿಕೆಗಳು ಮತ್ತು ಆಸೆಗಳಿಗೆ ಅನುಗುಣವಾಗಿ ಆಲೋಚನೆಗಳನ್ನು ಸೆಳೆಯುವ ಒಂದು ಅಯಸ್ಕಾಂತವಾಗಿದೆ. ಸರಿಯಾದ ಮನೋಭಾವನೆಯನ್ನು ಬೆಳೆಸಿಕೊಳ್ಳುವ ಮೂಲಕ ಪ್ರಪಂಚದ ಚಿಂತನೆಯ ಅತ್ಯುತ್ತಮ ಉತ್ಪನ್ನವನ್ನು ತನ್ನದಾಗಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಇದಕ್ಕೆ ಮುಂದಾಲೋಚನೆಯ ಬಲವೂ ಬೇಕು. ಮುಂದಾಲೋಚನೆ ಎಂಬುದುನಾವು ಏನು ಮಾಡ ಬೇಕೆಂದು ಯೋಚಿಸುವುದಕ್ಕಿಂತ ಹೆಚ್ಚಾಗಿ ನಾವೇನು ಒಂದು ಕಾರ್ಯವನ್ನು ಮಾಡಬೇಕೆಂದು ಇಚ್ಛಿಸುತ್ತೇವೆಯೋ ಅದನ್ನು ಆರಂಭಿಸುವ ಮೊದಲೇ ಪೂರ್ಣಗೊಳಿಸುವಂತೆ ನಮ್ಮ ಮನಸ್ಸಿಗೆ ಸ್ವಯಂ-ಆದೇಶಿಸುವುದು'. ಮುಂದಾಲೋಚನೆ ಎಂಬುದು ಸಮಯದ ಪರಿಗಣನೆಯಲ್ಲಿ ಸಂಕ್ಷಿಪ್ತವೆಂದು ಭಾಸವಾಗಬಹುದು; ಆದರೆ ಪರಿಣಾಮದಲ್ಲಿ ಶಕ್ತಿಯುತ ವಾಗಿರುತ್ತದೆ. ಈ ರೀತಿಯ ನಡವಳಿಕೆಯನ್ನು ನಾವು ಬೆಳೆಸಿಕೊಳ್ಳುವ ಮೂಲಕ ಒಂದು ವಿಷಯವನ್ನು ನೋಡಿದಾಕ್ಷಣದಲ್ಲಿಯೇ ಗ್ರಹಿಸುವ ಮತ್ತು ತ್ವರಿತವಾಗಿ ಕಾರ್ಯರೂಪಕ್ಕಿಳಿಸುವ ಮೂಲಕ ಅಪೇಕ್ಷಣೀಯ ಮತ್ತು ನಿರೀಕ್ಷಿತ ಫಲಿತಾಂಶವನ್ನು ಪಡೆಯಲು ಸಾಧ್ಯವಿದೆ. ಈ ಶಕ್ತಿಯನ್ನು ಜನ್ಮಜಾತ ಉಡುಗೊರೆಯೆಂಬುದಾಗಿ ಸಾರ್ವತ್ರಿಕವಾಗಿ ನಂಬಲಾಗಿದೆ. ಆದರೆ ಇದನ್ನು ಸರಿ ಯಾದ ಮನೋಸಂಕಲ್ಪ ಮತ್ತು ಅಭ್ಯಾಸದಿಂದ ಮೈಗೂಡಿಸಿ ಕೊಳ್ಳಬಹುದು. ಮುಂದಾಲೋಚನಾ ಸಾಮರ್ಥ್ಯವನ್ನು ಮೈಗೂಡಿಸಿಕೊಂಡವನು ಸ್ವಇಚ್ಛೆ ಮತ್ತು ಸಂಕಲ್ಪಶಕ್ತಿಗೆ ಅನುಗುಣವಾಗಿ ತನ್ನ ಭವಿಷ್ಯದ ಕಾರ್ಯಗಳನ್ನು ಪೂರ್ಣಗೊಳಿಸಿಕೊಳ್ಳುತ್ತಾನೆ. ಅದರಲ್ಲೂ ವಿಶೇಷತಃ ತುರ್ತುಪರಿಸ್ಥಿತಿಗಳಲ್ಲಿ ಮತ್ತು ಗೊಂದಲಮಯ ಸ್ಥಿತಿಗಳಲ್ಲಿ ಇದರ ಪೂರ್ಣ ಲಾಭವನ್ನು ಪಡೆಯುತ್ತಾನೆ. ದಿನವಿಡೀ ಶಾಂತತೆಯ ಮನಸ್ಸನ್ನು ಹೊಂದಲು ಸಾಧ್ಯವಾದವನಿಗೆ ತನ್ನ ಇಚ್ಛಾಶಕ್ತಿಯನ್ನು ನಂಬಲು ಮತ್ತು ಒಂದು ನಿರ್ದಿಷ್ಟ ಮುಂದಾಲೋಚನೆಯ ಮನಃಸ್ಥಿತಿಯನ್ನು ಹೊಂದಿ ರಲು ಸಾಧ್ಯವಾಗುತ್ತದೆ. ಆತ್ಮವಿಶ್ವಾಸ ಅಗತ್ಯವಿರುವ ಸಂದರ್ಭ ಗಳಲ್ಲೆಲ್ಲಾ ಮುಂದಾಲೋಚನಾ ಸಾಮರ್ಥ್ಯ ವ್ಯಾಪಕವಾಗಿ ಬಳಕೆಯಾಗುತ್ತದೆ.