ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮನಿ ಗೇಮ್-ಮೈಂಡ್ ಗೇಮ್ ನಡುವಿನ ಆಟ-ಬೊಂಬಾಟ!

08:52 PM Nov 23, 2024 IST | Samyukta Karnataka

ಸಿನಿಮಾ: ಜೀಬ್ರಾ
ನಿರ್ದೇಶನ: ಈಶ್ವರ್ ಕಾರ್ತಿಕ್
ನಿರ್ಮಾಣ: ಬಾಲ ಸುಂದರಮ್, ಎಸ್.ಎನ್.ರೆಡ್ಡಿ ಹಾಗೂ ದಿನೇಶ್ ಸುಂದರಮ್
ತಾರಾಗಣ: ಡಾಲಿ ಧನಂಜಯ್, ಸತ್ಯದೇವ್, ಸತ್ಯರಾಜ್, ಸುನಿಲ್, ಅಮೃತಾ ಅಯ್ಯಂಗಾರ್, ಜೆನ್ನಿಫರ್ ಹಾಗೂ ಪ್ರಿಯಾ ಭವಾನಿ ಶಂಕರ್ ಇತರರು.
ರೇಟಿಂಗ್ಸ್: ೩.೫
-ಗಣೇಶ್ ರಾಣೆಬೆನ್ನೂರು

ಜೀವನದಲ್ಲಿ ಮನೆ ಮಾಡಬೇಕು, ಸಾಕಷ್ಟು ದುಡ್ಡು ಮಾಡಬೇಕು, ಮದುವೆಯಾಗಿ ಒಂದೊಳ್ಳೆ ಲೈಫ್ ಲೀಡ್ ಮಾಡಬೇಕೆಂಬ ಕನಸಿರುತ್ತದೆ. ಆದರೆ ವಾಸ್ತವ ಸಂಗತಿಯೇ ಬೇರೆಯಾಗಿರುತ್ತದೆ..! ಜೀಬ್ರಾ ಚಿತ್ರದಲ್ಲಿ ಪ್ರಮುಖವಾಗಿ ಎರಡು ಅಂಶಗಳ ಮೇಲೆ ಗಮನ ಹರಿಸಲಾಗಿದೆ. ಒಂದು ದುಡ್ಡು… ಮತ್ತೊಂದು ಪ್ರತಿಷ್ಠೆ. ಇವುಗಳನ್ನು ಮೈಂಡ್ ಗೇಮ್ ಮೂಲಕ ಆಟವಾಡುವುದೇ `ಜೀಬ್ರಾ’ ಕಥಾಸಾರ.
ಇಲ್ಲಿ ನಾಯಕ, ಖಳನಾಯಕ ಅಂತೆಲ್ಲ ವಿಂಗಡಿಸದೇ ಕಥೆ ಮತ್ತು ಪಾತ್ರಗಳ ನಡುವೆಯೇ ಪೈಪೋಟಿಗೆ ಇಳಿಸಿದ್ದಾರೆ ನಿರ್ದೇಶಕ ಈಶ್ವರ್ ಕಾರ್ತಿಕ್. ಬ್ಯಾಂಕ್‌ಗಳ ವಹಿವಾಟು, ಗ್ರಾಹಕರ ಹಣ ಯಾವ ಮಾರ್ಗದಲ್ಲಿ ಪೋಲಾಗುತ್ತಿದೆ, ಒಟ್ಟಾರೆ ಆರ್ಥಿಕ ವ್ಯವಸ್ಥೆಯ ಪರಿಣಾಮ, ಬ್ಯಾಂಕ್ ನೌಕರರ ಒಳಗುಟ್ಟು… ಹೀಗೆ ಸಾಕಷ್ಟು ವಿಷಯಗಳನ್ನು ಒಟ್ಟಿಗೆ ಪೇರಿಸಿದ್ದಾರೆ. ಹೀಗಾಗಿ ಇಲ್ಲಿ ಥ್ರಿಲ್, ಆ್ಯಕ್ಷನ್, ಸಸ್ಪೆನ್ಸ್ ಎಲಿಮೆಂಟ್ಸ್ ಸಾಕಷ್ಟಿವೆ.
ಒಂದು ಪಾತ್ರವನ್ನು ಕಪ್ಪು ಕುದುರೆಗೆ, ಮತ್ತೊಂದನ್ನು ಬಿಳಿ ಕುದುರೆಗೆ ಸಮೀಕರಿಸಿರುವ ರೀತಿ ಗಮನ ಸೆಳೆಯುತ್ತದೆ. ಎರಡರ ಓಘ, ದೃಷ್ಟಿ, ನಿಖರತೆ ಎಲ್ಲವೂ ಸ್ಪಷ್ಟ. ಆದರೆ ದಾರಿಯಲ್ಲಿ ಅಡ್ಡಾದಿಡ್ಡಿ ಚಲಿಸಲು ಆಗದಂತೆ ಕೆಲವೊಂದು ನಿಬಂಧನೆಗಳು ಎದುರಾಗುತ್ತವೆ. ಅದನ್ನೆಲ್ಲ ಮೀರಿ ಯಾರು ತಮ್ಮ ಗುರಿ ಮುಟ್ಟುತ್ತಾರೆ ಎಂಬುದೇ ಗಮನಾರ್ಹ ಸಂಗತಿ.
ಡಾಲಿ ಧನಂಜಯ್ ಕೆಲವೊಮ್ಮೆ ಅಬ್ಬರಿಸಿದರೆ, ಮತ್ತೊಮ್ಮೆ ಶಾಂತವಾಗಿ ಕಣ್ಣಲ್ಲೇ ಕೊಲ್ಲುತ್ತಾರೆ. ಎದುರಿದ್ದವರನ್ನು ಮಾತಿನಲ್ಲೇ ತಣ್ಣಗಾಗಿಸುತ್ತಾರೆ. ಸ್ಕ್ರೀನ್ ಸ್ಪೇಸ್ ಸಹ ಆರಂಭದಿಂದ ಅಂತ್ಯದವರೆಗೂ ಇರುವುದು ವಿಶೇಷ. ಇನ್ನು ಸತ್ಯದೇವ್ ನಟನೆ ಗಮನ ಸೆಳೆಯುತ್ತದೆ. ಅಸಹಾಯಕತೆ, ಕೋಪ, ದುಗುಡ ಎಲ್ಲವನ್ನೂ ಕಣ್ಣಲ್ಲೇ ವ್ಯಕ್ತಪಡಿಸುವುದರಲ್ಲಿ ಗೆದ್ದಿದ್ದಾರೆ. ಸತ್ಯರಾಜ್, ಸುನಿಲ್, ಅಮೃತಾ ಅಯ್ಯಂಗಾರ್, ಜೆನ್ನಿಫರ್ ಹಾಗೂ ಪ್ರಿಯಾ ಭವಾನಿ ಶಂಕರ್ ಮುಂತಾದವರ ನಟನೆ ಪಾತ್ರಕ್ಕೆ ಪೂರಕವಾಗಿದೆ. ರವಿ ಬಸ್ರೂರು ಸಂಗೀತದಲ್ಲಿ ಒಂದಷ್ಟು ಹೊಸತನವಿದೆ.
ಕನ್ನಡ ಅವತರಣಿಕೆಯ ಜೀಬ್ರಾ ಸಿನಿಮಾದ ಡಬ್ಬಿಂಗ್ ಕಾರ್ಯ ಶ್ಲಾಘಿಸುವಂತಿದೆ. ಪ್ರತಿಯೊಂದು ಪಾತ್ರಕ್ಕೂ ಯಾವುದೇ ಏರುಪೇರಾಗದಂತೆ ನಿಗಾ ವಹಿಸಿರುವ ಕುಸುರಿ ಕೆಲಸ ಗಮನ ಸೆಳೆಯುತ್ತದೆ. ಸತ್ಯದೇವ್‌ಗೆ ಪೂರ್ಣಚಂದ್ರ ಮೈಸೂರು ಧ್ವನಿ ನೀಟಾಗಿ ಹೊಂದಿಕೊಂಡಿದೆ. ಧನಂಜಯ್ ಪಾತ್ರಕ್ಕೆ ಅವರೇ ಡಬ್ ಮಾಡಿದ್ದಾರೆ. ಉಳಿದ ಪಾತ್ರಗಳಿಗೂ ಡಬ್ಬಿಂಗ್ ಕಾರ್ಯ ಸೊಗಸಾಗಿದೆ.

Next Article