For the best experience, open
https://m.samyuktakarnataka.in
on your mobile browser.

ಮನುಷ್ಯನ ಜೀವನ-ಭಾವನೆಗಳ ಸಮುದ್ರ

01:00 AM Feb 06, 2024 IST | Samyukta Karnataka
ಮನುಷ್ಯನ ಜೀವನ ಭಾವನೆಗಳ ಸಮುದ್ರ

ಬೆರಳುಗಳ ನಡುವೆ ಸರಿದುಹೋಗುವ ಮರಳಿನ ಕಣಗಳಂತೆ ಕಾಲವು ಕಳೆದುಹೋಗುತ್ತದೆ; ಮತ್ತೆಂದೂ ಹಿಂದಿರುಗುವುದಿಲ್ಲ. ಮನುಷ್ಯ ಎಂದರೆ ಭಾವನೆಗಳಿಂದ ರೂಪಿತನಾಗುವವನು; ಮನುಷ್ಯನ ಜೀವನವೆಂದರೆ ಭಾವನೆಗಳ ಸಮುದ್ರ. ಹೀಗಾಗಿಯೇ ಜೀವನವು ದೊಡ್ಡ ಕನಸುಗಾರರನ್ನೂ, ಮಹತ್ವಾಕಾಂಕ್ಷೆಯ ಕ್ರಾಂತಿಕಾರಿಗಳನ್ನೂ ಸದಾ ಪರೀಕ್ಷೆಗೆ ಒಡ್ಡುತ್ತಿರುತ್ತದೆ. ಅದೊಂದು ಥರದ ಕಳೆಕೀಳುವ ವಿಧಾನ. ಇಂಥಾ ಪರೀಕ್ಷೆಗೆ ಒಡ್ಡಿಕೊಂಡ ವ್ಯಕ್ತಿಯ ನಾಯಕತ್ವ ಮೊದಲು ಆತನ ಅಂತರಂಗದಲ್ಲಿ ಆರಂಭವಾಗುತ್ತದೆ; ಕ್ರಮೇಣ ಸಮುದಾಯದ ಪ್ರಜ್ಞೆಗೆ ವ್ಯಾಪಿಸುತ್ತದೆ. ಬೆಲೆ ಮರೆತುಹೋದ ನಂತರವೂ ವಸ್ತುವಿನ ಗುಣಮಟ್ಟ ಜ್ಞಾಪಕದಲ್ಲಿರುವಂತೆಯೇ ನಾಯಕನೆನಿಸಿಕೊಂಡಿದ್ದ ವ್ಯಕ್ತಿ ಲೋಕದ ಕಣ್ಣಿಂದ ಶಾಶ್ವತವಾಗಿ ಕಣ್ಮರೆಯಾದರೂ ನಾಯಕತ್ವದ ಗುಣಮಟ್ಟವನ್ನು ಬಿಟ್ಟುಹೋಗಿರುತ್ತಾನೆ. ಅಂತಹ ಕೋಟ್ಯಂತರ ನಾಯಕತ್ವಗಳನ್ನು ಹೊಂದಿದ್ದ ಹೆಮ್ಮೆ ನಮ್ಮ ದೇಶ ಭಾರತದ್ದು.
ನಮ್ಮ ದೇಶ'ರಾಷ್ಟ್ರ' ಕಲ್ಪನೆಯೇ ಬಹಳ ಪ್ರಾಚೀನ ಮತ್ತು ಅನಾದಿ. ಇದಕ್ಕೆ ನಮ್ಮ ಪೂರ್ವಾಚಾರ್ಯರುಗಳ ಗ್ರಂಥಗಳ ಆಧಾರವೂ ಇದೆ. ಹಿಮಾಲಯದಿಂದ ಕನ್ಯಾಕುಮಾರಿವರೆಗೆ ವ್ಯಾಪಕವಾಗಿ, ಸೋಮನಾಥದಿಂದ ಗಂಗಾಸಾಗರದವರೆಗೆ ವಿಸ್ತಾರವಾಗಿ ಹರಡಿದೆ. ಸಾಂಸಕೃತಿಕ ಏಕತೆಯನ್ನು ಈ ಭಾಗದ ಪ್ರತಿಯೊಬ್ಬ ವ್ಯಕ್ತಿಯಲ್ಲಿ, ಪ್ರತಿಯೊಂದು ಗ್ರಾಮದಲ್ಲಿ ನಾವು ಕಾಣುತ್ತೇವೆ. ಅನಂತಕಾಲದ ಜೊತೆಗೆ ನಮ್ಮ ಏಕರೂಪತೆಯನ್ನು ಪ್ರಾಚೀನ ಭಾರತೀಯರು ಮಾಡಿಟ್ಟಿದ್ದಾರೆ. "ಪೃಥಿವೈ ಸಮುದ್ರಪರ್ಯಂತಾಂ ಏಕರಾಟ್” (ಸಮುದ್ರಪರ್ಯಂತ ಪಸರಿಸಿದ ಪೃಥ್ವಿಯು ಒಂದೇ ರಾಷ್ಟç) ಎಂದು ಹೇಳುತ್ತೇವೆ. ಈ ಕಲ್ಪನೆ ವೇದ, ಸ್ಮೃತಿ, ಪುರಾಣ, ಮಹಾಕಾವ್ಯಗಳಲ್ಲೂ ಬಂದಿವೆ. ನಮ್ಮೆಲ್ಲ ಪ್ರಾಚೀನ, ಪೌರಾಣಿಕ ಕಥೆಗಳು ಸ್ಥಳ-ಕಾಲಗಳ ಜತೆ ಹೆಣೆದುಕೊಂಡಿವೆ. ನಮ್ಮ ಪಂಚಾಂಗ-ಹಬ್ಬಗಳು ಎಲ್ಲವೂ ಸಾಂಸ್ಕೃತಿಕ ಏಕರಾಷ್ಟ್ರೀಯತ್ವವನ್ನೇ ಪ್ರಚುರಪಡಿಸುತ್ತಿವೆ. ನಮ್ಮ ಯಾತ್ರೆಯ ನಾಲ್ಕೂ ಧಾಮಗಳು ಭಾರತದ ನಾಲ್ಕು ದಿಕ್ಕುಗಳಲ್ಲಿವೆ. ಭಾರತೀಯರೆಲ್ಲರ ಪೋಷಣೆಯನ್ನು ರಾಮಾಯಣ, ಮಹಾಭಾರತ, ಭಾಗವತ, ಗೀತೆಗಳು ಮಾಡಿವೆ. ಭಗವತ್ಪಾದ ಶಂಕರಾಚಾರ್ಯರು ದೇಶದ ನಾಲ್ಕೂ ಮೂಲೆಗಳಲ್ಲಿ ಪೀಠಗಳನ್ನು ನಿರ್ಮಿಸಿದ ಔಚಿತ್ಯತೆಯನ್ನು ಅರಿಯಬೇಕು. ಈ ಎಲ್ಲವುಗಳ ಕಾರಣದಿಂದಲೇ ಜಗತ್ತಿನಲ್ಲಿ ಅನೇಕ ಸಂಸ್ಕೃತಿಗಳು ಕಣ್ಮರೆಯಾದರೂ ನಮ್ಮ ಸಂಸ್ಕೃತಿ ಇನ್ನೂ ಸದೈವ ಜೀವಂತವಿದೆ. ಆದ್ದರಿಂದಲೇ ಧರ್ಮಗ್ಲಾನಿ' ಶಬ್ದವಿದೆಯೇ ಹೊರತುಧರ್ಮನಾಶ' ಎಂಬ ಶಬ್ದವಿಲ್ಲ. ಶ್ರೀಕೃಷ್ಣನೂ ಗೀತೆಯಲ್ಲಿ ಇದನ್ನೇ ಹೇಳಿದ್ದ. ತಾಯಿ-ಮಕ್ಕಳ ಸಂಬಂಧದಂತೆ ಆ ಭೂಮಿ ಮತ್ತು ಸಮಾಜದ ಸಂಬಂಧ ಮಹತ್ವದ್ದಾಗಿದ್ದು, ಇಂತಹ ಸಮಾಜ ಮತ್ತು ಭೂಮಿಗೆ ದೇಶ' ಎನ್ನುವರು. ಆ ಭೂಮಿಯ ಬಗ್ಗೆ ಪೂಜ್ಯ ಮಾತೃಭಾವ ಇದ್ದವರದ್ದೇ ಆ ದೇಶವಾಗುತ್ತದೆ. ಒಂದೇ ರೀತಿ ಅನುಸರಿಸಿ, ಒಂದೇ ಭಾಷೆ ಮಾತನಾಡಿ, ಒಂದೇ ಶಾಸನದ ಅಧೀನದಲ್ಲಿರುವ ಸಮಾನ ಜನಸಮುದಾಯ ಹೊಂದಿದನೇಷನ್' ಪಾಶ್ಚಾತ್ಯ ಪರಿಕಲ್ಪನೆಯದ್ದು.
ಯುರೋಪ್ ಸಮಸ್ತ ಭೂಮಂಡಲದಲ್ಲಿ ಶಾಂತಿಯನ್ನು ಹರಡುವ ಪ್ರತಿಜ್ಞೆಗೈದಿತ್ತು. ಅದೇ ಯುರೋಪ್ ಸಂಪೂರ್ಣ ಜಗತ್ತಿನಲ್ಲಿ ಏಕೆ ಅಶಾಂತಿಯನ್ನು ಹರಡಿಸಿತು? ಇದೂ ಸೇರಿದಂತೆ ಇಂದು ಜಗತ್ತಿನಲ್ಲಿ ಸಂಭವಿಸುತ್ತಿರುವ ವಿದ್ಯಮಾನಗಳ ಮೂಲ ಕಾರಣ; ಮನುಷ್ಯನ ಸುಖ.' ಶ್ರೀರಾಮಚಂದ್ರನನ್ನು ಶತ್ರುವೆಂದು ತಿಳಿದಿದ್ದ ರಾಕ್ಷಸ ಮಾರೀಚ-"ಕೈಯಲ್ಲಿ ಶಸ್ತ್ರಸಜ್ಜಿತ ಬಿಲ್ಲನ್ನು ಹಿಡಿದು ನನ್ನ ಹಿಂದೆ ಓಡಿಬರುತ್ತಿರುವ ರಘುರಾಮನನ್ನು ಮತ್ತೆಮತ್ತೆ ನೋಡುತ್ತಿರುವ ನನ್ನಷ್ಟು ಧನ್ಯ ಮತ್ಯಾರೂ ಇಲ್ಲ” ಎಂದಿದ್ದ! ಧ್ಯೇಯವಿದ್ದಂತೆ ಮನುಷ್ಯ. ಧ್ಯೇಯದ ಗುಣಮಟ್ಟಕ್ಕೆ ಅನುಗುಣವಾಗಿಯೇ ಮನುಷ್ಯನ ವ್ಯಕ್ತಿತ್ವ, ಗುಣಮಟ್ಟ, ಪ್ರವೃತ್ತಿ. "ಭಾರತದ ಮೇಲೆ ದಾಳಿಯ ಯತ್ನಗಳು ನಡೆದಾಗ ಇಲ್ಲಿನ ಮೂಲನಿವಾಸಿಗಳು ಅದನ್ನು ಯಶಸ್ವಿಯಾಗಿ ಹೊಡೆದು ಹಿಮ್ಮೆಟ್ಟಿಸಿದ ಉದಾಹರಣೆಗಳೂ ಇತಿಹಾಸದುದ್ದಕ್ಕೂ ಬರುತ್ತವಲ್ಲ; ಅದನ್ನು ಹೇಳುವುದು, ಪರೀಕ್ಷಿಸುವುದು ಬೇಡವೇ? ಯಾವನಾದರೊಬ್ಬ ವಿದ್ವಾಂಸ ಅಂಥ ಹಿಮ್ಮೆಟ್ಟಿಸಿದ ದಾಳಿಗಳನ್ನು ಒಂದು ಪಟ್ಟಿಮಾಡುವುದೊಳಿತು. ಅದರಿಂದ ಆತ ಸತ್ಯಕ್ಕೂ, ಇತಿಹಾಸಕ್ಕೂ ಕೂಡಿಯೇ ಒಳ್ಳೆಯದು ಮಾಡಿದಂತಾಗುತ್ತದೆ. ಭಾರತದ ಜನ ದಾಳಿಗಳಿಗೆ ಶರಣಾದದ್ದಕ್ಕಿಂತ ಎಷ್ಟೋ ಹೆಚ್ಚಾಗಿ ದಾಳಿಗಳನ್ನು ಹಿಮ್ಮೆಟ್ಟಿಸಿದ್ದಾರೆ ಎಂಬುದು ಸ್ಪಷ್ಟವಾಗಿರುವ ಅಂಶ. ಗೆದ್ದ ದಂಡಯಾತ್ರೆಗಳಿರಲಿ, ಹಿಮ್ಮೆಟ್ಟಿದ ದಂಡಯಾತ್ರೆಗಳಿರಲಿ ಅವುಗಳಿಗೆ ಕಾರಣವನ್ನು ಹವಾಗುಣದಲ್ಲೋ ಪ್ರತಿಪಕ್ಷಗಳ ಜನರ ಬಣ್ಣ-ಗಾತ್ರಗಳಲ್ಲೋ ಹುಡುಕತೊಡಗದೆ ಬೇರೆ ಹುಡುಕಬೇಕು. ಇಂಥ ಅಪದ್ಧ ಇತಿಹಾಸವನ್ನು ಓದುವ ಭಾರತೀಯ ಮಕ್ಕಳು ತಮ್ಮ ರಾಷ್ಟ್ರೀಯ ಆತ್ಮವಿಶ್ವಾಸವನ್ನೇ ಕಳೆದುಕೊಳ್ಳುತ್ತಾರೆ. ಇತಿಹಾಸದ ಇಂಥ ಅನೃತಗಳು ಮತ್ತೆ ಮತ್ತೆ ಪುನಶ್ಚರಣೆಯಾಗಿ ಭವಿಷ್ಯದಲ್ಲಿ ಭಾಗಶಃ ಸತ್ಯಗಳಾಗಿಯೇ ಉಳಿದುಬಿಡುತ್ತವೆ. ಇದು ಸಾಮ್ರಾಜ್ಯಶಾಹಿ ದೃಷ್ಟಿಯಲ್ಲಿ ವಿಕೃತಗೊಂಡ ಭಾರತೀಯ ಇತಿಹಾಸ ಎನ್ನಬಹುದಷ್ಟೇ." ಇದು ರಾಮನೋಹರ ಲೋಹಿಯಾರ ಮನದಾಳದ ಮಾತುಗಳು. "ಮರಗಳನ್ನು ಎಣಿಸುವ ಭರದಲ್ಲಿ ಕಾಡಿನ ಚೆಲುವನ್ನು ಕಾಣದೇ ಇರಬೇಡ" ಎನ್ನುತ್ತದೆ ಒಂದು ಸೂಕ್ತಿ. ಕೈಗಾರೀಕರಣ, ವಿಜ್ಞಾನ-ತಂತ್ರಜ್ಞಾನಗಳ ಆವಿಷ್ಕಾರದ ಫಲರೂಪವಾದ ಆಕರ್ಷಣೆ, ಪಾಶ್ಚಾತ್ಯಪ್ರೇರಿತ ಆಧುನಿಕ ಜೀವನಶೈಲಿಯ ಗಾಢವಾದ ಪ್ರಭಾವಕ್ಕೆ ಒಳಗಾಗಿರುವ ಇಂದಿನ ಪೀಳಿಗೆ ತನ್ನ ಪೂರ್ವಿಕರ ಸಂಸ್ಕಾರ-ಸಂಸ್ಕೃತಿಗಳನ್ನು ಮರೆತ ಪರಿಣಾಮ ಜೀವನದ ನಿಜಾರ್ಥವನ್ನು ಮನಗಾಣುವಲ್ಲಿ ವಿಫಲವಾಗುತ್ತಿದೆ. ಆಕರ್ಷಣೆಗಳೆಂಬ ಮರಗಳ ಬೆನ್ನೇರಿ ಹೋದಂತೆ ಭ್ರಮನಿರಸನಕ್ಕೆ ಒಳಗಾಗಿ ಜೀವನವೆಂಬ ಕಾಡಿನ ಚೆಲುವನ್ನು ಮರೆಯುತ್ತಿದೆ. ಕೌಟುಂಬಿಕ ಮೌಲ್ಯಗಳನ್ನು ಮರೆಯುತ್ತಿದೆ. ನಿರಂತರವಾದ ಗೊಂದಲಗಳು ಚೈತನ್ಯವನ್ನು ಸೋರಿಹೋಗುವಂತೆ ಮಾಡುತ್ತಿವೆ. "ನಾವು ನೂರು ಬಿಲಿಯ ಬ್ರಹ್ಮಾಂಡಗಳ ಪೈಕಿ ಒಂದರಲ್ಲಿರುವ ಸರ‍್ಯನೆಂಬ ಸಾಮಾನ್ಯ ನಕ್ಷತ್ರದ ವ್ಯೂಹಕ್ಕೆ ಸೇರಿರುವ ಒಂದು ಸಣ್ಣ ಗ್ರಹದಲ್ಲಿದ್ದೇವೆ" ಎಂಬ ಸ್ಟೀಫನ್ ಹಾಕಿಂಗ್‌ನ ಮಾತುಗಳನ್ನು ಸದಾ ಸ್ಮರಿಸಿಕೊಳ್ಳುತ್ತಾ ಬಂದರೆ ನಮ್ಮ ವಾಸ್ತವ ಅಸ್ತಿತ್ವದ ಪರಿಕಲ್ಪನೆ ಸ್ಪಷ್ಟವಾಗುತ್ತದೆ. ತಮ್ಮ ಜೀವನದ ಮೇಲೆ ನಿಯಂತ್ರಣ, ಕಾರ್ಯೋದ್ದೇಶಗಳ ಸಂಘಟನೆ, ಸೂಕ್ತವಾದ ಸಿದ್ಧತೆ ಹಾಗೂ ಕ್ರಿಯೆ ಇಲ್ಲದಿರುವುದೇ ಆತಂಕಕ್ಕೆ ಕಾರಣವಾಗುತ್ತಿರುವುದನ್ನು ಗಮನಿಸುತ್ತಿಲ್ಲ. ಜೀವನವು ಸ್ವಾರಸ್ಯಕರವಾಗಿರುವುದೇ ವೈವಿಧ್ಯದಿಂದ ತಾನೇ? ಯೋಚನೆಯೇ ಕ್ರಿಯೆಗೆ ಮೂಲಕಾರಣ. ನಂಬಿಕೆಗಳೇ ಕಾಲಕ್ರಮೇಣ ಸತ್ಯವಾಗುವ ಭವಿಷ್ಯವಾಣಿಗಳು. ಜೀವನದಲ್ಲಿ ವಾಸ್ತವನಂಬಿಕೆಗಳನ್ನು ರೂಢಿಸಿಕೊಳ್ಳಬೇಕಾದುದು ಇಂದಿನ ಅಗತ್ಯವೆಂಬ ಸಾಮಾನ್ಯಜ್ಞಾನ ಸಾಮಾನ್ಯವಾಗಿ ದೊರೆಯುವುದಿಲ್ಲ.ಜೀವನ' ಮತ್ತು ಆಕರ್ಷಣೆ' ಎಂಬ ಎರಡು ಮೊಲಗಳನ್ನು ಬೆನ್ನಟ್ಟುವವನು ಒಂದನ್ನೂ ಹಿಡಿಯಲು ವಿಫಲನಾಗುತ್ತಾನೆ. ಇದು ಆದ್ಯತೆಯ ಅರಿವಿನ ಕೊರತೆ. ಆದ್ಯತೆಯ ಅರಿವು ಸರಿಯಾದ ಆಯ್ಕೆಗಳಿಗೆ ಪ್ರೇರಣೆಯಾಗುತ್ತದೆ ಎಂಬುದನ್ನು ಮನಗಾಣಬೇಕು. ವ್ಯವಹಾರ ಕ್ಷೇತ್ರದಲ್ಲಿರುವವರು ವಿನ್ಯಾಸಕರನ್ನು ತಿಳಿದಿರಬೇಕಾಗಿಲ್ಲ; ಸ್ವಯಂ ವಿನ್ಯಾಸಕರಾಗಬೇಕು. ಆಗಮಾತ್ರವೇ ಅದು ನಮ್ಮೊಳಗೆ ಅಡಗಿರುವ ಕಲಾವಿದನ ಜತೆ ಸಂಪರ್ಕವನ್ನೇರ್ಪಡಿಸುತ್ತದೆ. ಪ್ರಪಂಚದಲ್ಲಿ ಎಲ್ಲ ಹೊಸ ಸಂಶೋಧಕರೂ ಪ್ರಾರಂಭದಲ್ಲಿ ನಗೆಗೀಡಾದವರೇ! ಭೂಮಿ ಗೋಲಾಕಾರವಾಗಿದೆ ಎಂದು ಕೊಲಂಬಸ್ ಹೇಳಿದಾಗ; ರೈಟ್ ಸಹೋದರರು ಮನುಷ್ಯ ಆಕಾಶದಲ್ಲಿ ಹಾರಬಲ್ಲ ಎಂದಾಗ; ರಿಮ್ ಕಂಪೆನಿಬ್ಲಾಕ್‌ಬೆರಿ'ಯನ್ನು ಆರಂಭಿಸಿದಾಗ; ಎವಿಯನ್ ಕಂಪೆನಿ ಕುಡಿಯುವ ನೀರಿನ ಬಾಟಲುಗಳ ಕಂಪೆನಿಯನ್ನು ಆರಂಭಿಸಿದಾಗ ಎಲ್ಲಾದರೂ ಜನ ಹಣಕೊಟ್ಟು ಕೊಳ್ಳುವರೇ ಎಂದು ಜನ ನಕ್ಕಿದ್ದರು! ಅಳತೆಗೊಳಗಾದುದು ಸುಧಾರಿಸುತ್ತದೆ.
ಗುರಿ ನಿರ್ಧಾರವೆಂದರೆ ಸಾಮಾನ್ಯದರ್ಜೆಯ ವ್ಯಕ್ತಿಯಾಗಲು ನಿರಾಕರಿಸುವ ನಿರ್ಧಾರ. ಅದು ಮುಂದಿನ ಇಡೀ ಜೀವನದ ಧೀರ ಪ್ರಯತ್ನ. ಪ್ರತಿಯೊಬ್ಬರೂ ತಾನಿರುವ ಸ್ಥಿತಿಯಲ್ಲೇ ಸಂತೃಪ್ತರಾಗಿ ಉಳಿದರೆ ಪ್ರಪಂಚದಲ್ಲಿ ಹೀರೋಗಳೇ ಇರುವುದಿಲ್ಲ. ಅಂತಿಮವಾಗಿ ಕೋಟ್ಯಾಧೀಶನೂ, ರಸ್ತೆಯ ಕಸಗುಡಿಸುವ ಜಾಡಮಾಲಿಯೂ ಮಣ್ಣಾಗುವುದು ಇದ್ದೇ ಇದೆ; ನಾವೆಲ್ಲಾ ಧೂಳಾಗಿಬಿಡುತ್ತೇವೆ. ಆದ್ದರಿಂದ ಅಲ್ಲಿಯವರೆಗೆ ಒಂದಿಷ್ಟು ಸಂತೋಷವಾಗಿರೋಣ. "ನಾವು ಜಗತ್ತನ್ನು ಕೇವಲ ಬುದ್ಧಿಯಿಂದ ಅರ್ಥಮಾಡಿಕೊಂಡಂತೆ ನಟಿಸಬಾರದು; ಯಾಕೆಂದರೆ, ನಾವದನ್ನು ಭಾವನೆಯಿಂದ ಗ್ರಹಿಸುತ್ತೇವೆ. ಆದ್ದರಿಂದ ಬುದ್ಧಿಮತ್ತೆಯ ತೀರ್ಪು ವಾಸ್ತವದಲ್ಲಿ ಅರ್ಧಸತ್ಯ ಮಾತ್ರ” ಕಾರ್ಲ್ ಜಂಗ್‌ನ ಮಾತು ಇಲ್ಲಿ ಬಹಳ ಪ್ರಸ್ತುತವೆನಿಸುತ್ತಿಲ್ಲವೇ?