ಮನು ಭಾಕರ್ಗೆ ತವರಿನಲ್ಲಿ ಅದ್ಧೂರಿ ಸ್ವಾಗತ
ನವದೆಹಲಿ: : ಪ್ಯಾರಿಸ್ ಒಲಿಂಪಿಕ್ಸ್ 2 ಐತಿಹಾಸಿಕ ಕಂಚಿನ ಪದಕ ಗೆದ್ದ ಶೂಟರ್ ಮನು ಭಾಕರ್ ಇಂದು ತವರಿಗೆ ಆಗಮಿಸಿದ್ದಾರೆ.
ನಗರದ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಹೂವಿನ ಹಾರ ಮತ್ತು ಸಿಹಿ ತಿನ್ನಿಸುವ ಮೂಲಕ ಭರ್ಜರಿ ವೆಲ್ಕಮ್ ಮಾಡಲಾಯಿತು. ಹೂಮಳೆ ಗೈದು ಭವ್ಯವಾದ ಸ್ವಾಗತ ನೀಡಿದರು. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ,
22 ವರ್ಷದ ಮನು ಭಾಕರ್ ಇದಕ್ಕೂ ಮುನ್ನ ಮಹಿಳೆಯರ ವೈಯಕ್ತಿಕ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮತ್ತು ಸರಬ್ಜೋತ್ ಸಿಂಗ್ ಜತೆಗೂಡಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಪರ್ಧೆಯಲ್ಲೂ ಕಂಚಿನ ಪದಕ ಜಯಿಸುವ ಮೂಲಕ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲೇ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಕ್ರೀಡಾಪಟು ಎನ್ನುವ ಐತಿಹಾಸಿಕ ದಾಖಲೆ ನಿರ್ಮಿಸಿದ್ದರು. 25 ಮೀ. ಪಿಸ್ತೂಲ್ ಶೂಟಿಂಗ್ ಫೈನಲ್ ಪಂದ್ಯದಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಹ್ಯಾಟ್ರಿಕ್ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದರು. ಪ್ಯಾರಿಸ್ ಒಲಿಂಪಿಕ್ಸ್ ಸಮಾರೋಪ ಸಮಾರಂಭದಲ್ಲಿ ಮನು ಭಾಕರ್ ಅವರನ್ನು ಭಾರತದ ಧ್ವಜಧಾರಿಯಾಗಿ ಹೆಸರಿಸಲಾಗಿದೆ. ಆಗಸ್ಟ್ 11 ರಂದು ನಡೆಯಲಿರುವ ಸಮಾರಂಭದಲ್ಲಿ ಭಾಗಿಯಾಗಲು ಫ್ರಾನ್ಸ್‌ಗೆ ಮರಳಲಿದ್ದಾರೆ.