ಮನೆ ಮನೆಗಳಲ್ಲಿ ಕನ್ನಡ ಬಾವುಟ ಕಾರ್ಯಕ್ರಮಕ್ಕೆ ಚಾಲನೆ
ಎಲ್ಲಾ ಮನೆಗಳ ಮೇಲೆ ಕನ್ನಡ ಬಾವುಟ ಹಾರಾಡಲಿ: ಸಚಿವ ಚಲುವರಾಯಸ್ವಾಮಿ
ಮಂಡ್ಯ: ಜಿಲ್ಲೆಯ ಎಲ್ಲಾ ಮನೆ ಮನೆಗಳ ಮೇಲೂ ಕನ್ನಡ ಬಾವುಟ ಹಾರಿಸುವ ಮೂಲಕ ಜಿಲ್ಲೆಯ ಜನತೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸ್ವಾಗತಿಸುವುದರ ಜೊತೆಗೆ ಸಮ್ಮೇಳನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಚಲುವರಾಯಸ್ವಾಮಿ ಅವರು ಕರೆಕೊಟ್ಟರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಾಹಿತ್ಯ ಸಮ್ಮೇಳನದ ನಗರ ಅಲಂಕಾರ ಸಮಿತಿ ವತಿಯಿಂದ ಸ್ವರ್ಣಸಂದ್ರದಲ್ಲಿ ಆಯೋಜಿಸಿದ್ದ ಮನೆ ಮನೆಗಳಲ್ಲಿ ಕನ್ನಡ ಬಾವುಟ ಕಾರ್ಯಕ್ರಮಕ್ಕೆ ಬಾವುಟ ಹಾರಿಸುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದರು.
ಮನೆಮನೆಗಳ ಮೇಲೆ ಕನ್ನಡ ಬಾವುಟ ಕಟ್ಟುವ ಕಾರ್ಯಕ್ರಮ ಕೇವಲ ಮಂಡ್ಯ ನಗರಕ್ಕೆ ಸೀಮಿತವಾಗದೇ ಜಿಲ್ಲೆಯ ಎಲ್ಲರ ಮನೆಮನೆಗಳ ಮೇಲೂ ಕನ್ನಡ ಬಾವುಟ ಹಾರಾಡಬೇಕು. ತಾಲೂಕು ಕೇಂದ್ರ, ಗ್ರಾಮ ಪಂಚಾಯತಿ ಕಚೇರಿಗಳ ಮೇಲೂ ಕನ್ನಡ ಬಾವುಟ ಹಾರಿಸಿ ಕನ್ನಡದ ಹಬ್ಬವನ್ನು ಮನೆಯ ಹಬ್ಬದ ರೀತಿಯಲ್ಲಿ ಆಚರಿಸಬೇಕು ಎಂದು ಹೇಳಿದರು.
ಸಾಹಿತ್ಯ ಸಮ್ಮೇಳನದ ಅಂಗವಾಗಿ ಡಿ.15 ರಂದು ಕನ್ನಡಕ್ಕಾಗಿ ಓಟ ಎಂಬ ಘೋಷವಾಕ್ಯದಡಿ ಹಮ್ಮಿಕೊಂಡಿರುವ ಮ್ಯಾರಥಾನ್ ನಲ್ಲಿ ನಗರದ ಪ್ರತಿ ಮನೆಯಿಂದ ಕನಿಷ್ಠ ಒಬ್ಬ ಸದಸ್ಯರಾದರೂ ಪಾಲ್ಗೊಳ್ಳಬೇಕು ಎಂದರು.
ಶಾಸಕ ರವಿಕುಮಾರ್ ಮಾತನಾಡಿ, ಮೂವತ್ತು ವರ್ಷಗಳ ಬಳಿಕ ಮಂಡ್ಯದಲ್ಲಿ ನೆರವೇರುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿ ಪ್ರಜೆ ಭಾಗವಹಿಸಬೇಕು. ಇನ್ನೊಂದು ವಾರದಲ್ಲಿ ನಗರದ ಎಲ್ಲಾ ಮನೆಗಳ ಮೇಲೆ ಕನ್ನಡ ಬಾವುಟ ಹಾರಾಡಲಿದೆ ಎಂದು ಹೇಳಿದರು.
ಕಸಾಪ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ ಮಾತನಾಡಿ, ಎಲ್ಲರ ಮನೆ ಮೇಲೆ ಕನ್ನಡ ಬಾವುಟ ಹಾರಿದಾಗ ಮನೆಮನದಲ್ಲಿ ಕನ್ನಡ ಕಂಪು ಮೂಡಲಿದೆ. ಬಾವುಟ ಹಾರಟ ನಮ್ಮ ಏಕತೆ, ಐಕ್ಯತೆ ಅಸ್ಮಿತೆಯ ಸಂಕೇತ. ಇದು ಕನ್ನಡದ ಹಿರಿಮೆ. ಕನ್ನಡದ ಅಭಿಮಾನದ ಕುರುಹು ಎಂದರು.
ಕಾರ್ಯಕ್ರಮದಲ್ಲಿ ಶಾಸಕರುಗಳಾದ ರಮೇಶ್ ಬಾಬು ಬಂಡೀಸಿದ್ದೇಗೌಡರು, ದಿನೇಶ್ ಗೂಳಿಗೌಡರು,ಕಸಾಪ ಅಧ್ಯಕ್ಷರಾದ ನಾಡೋಜ ಮಹೇಶ್ ಜೋಶಿ, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ವರಿಷ್ಆಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಓ ಶೇಖ್ ತನ್ವೀರ್ ಆಸೀಫ್, ನಗರಸಭಾ ಅಧ್ಯಕ್ಷರಾದ ಪ್ರಕಾಶ್, ಮುಢಾ ಅಧ್ಯಕ್ಷರಾದ ನಹೀಮ್, ಕಸಾಪ ಜಿಲ್ಲಾ ಸಂಚಾಲಕರಾದ ಮೀರಾ ಶಿವಲಿಂಗಯ್ಯ ಸೇರಿದಂತೆ ನಗರಸಭಾ ಸದಸ್ಯರು, ಕನ್ನಡಪರ ಸಂಘಟನೆಗಳ ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.