ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮನೋ ಶಸ್ತ್ರಚಿಕಿತ್ಸೆಯೆಂಬ ಮಿಥ್ಯೆ

04:00 AM Nov 27, 2024 IST | Samyukta Karnataka

ಮನೋವಿಜ್ಞಾನದ ಪದವಿ ತರಗತಿಯ ವಿದ್ಯಾರ್ಥಿನಿಯೊಬ್ಬಳು ಬಂದು ಮಾತನಾಡಲು ಕುಳಿತಿದ್ದಳು. ಅವಳಿಗಿರುವ ಅನುಮಾನವೊಂದನ್ನು ಪರಿಹರಿಸಿಕೊಳ್ಳಲು ಬಂದಿದ್ದಳು. ಆಪ್ತ-ಸಮಾಲೋಚನೆಗೆ ಬರುವ ವಿದ್ಯಾರ್ಥಿಗಳಿಗೆ ಮೊದಲೇ ಹೇಳಿಬಿಡುವ ವಿಷಯವೇನಂದರೆ ನಾವು ಅವರು ಹೇಳಿಕೊಳ್ಳುವ ಯಾವ ವಿಷಯವನ್ನೂ ಸರಿ ತಪ್ಪು ಎನ್ನುವ ನಿರ್ಣಯಕಾರಕ ಅಂಶಗಳಿಂದ ಅವರನ್ನಾಗಲಿ ಅಥವಾ ಅವರು ಹೇಳಿರುವ ವಿಚಾರಗಳನ್ನಾಗಲಿ ಅಳೆಯುವುದಿಲ್ಲ ಎನ್ನುವುದು. ಇದು ಅವರಿಗೆ ಒಂದು ರೀತಿಯ ಸುರಕ್ಷಿತ ಭಾವನೆಯನ್ನು ಕೊಡುತ್ತದೆ. ಹಾಗೆ ಸುರಕ್ಷಿತ ಭಾವನೆಯಿಂದ ಹೇಳುವ ಮಾತುಗಳು ಅವರ ನಿಷ್ಕಲ್ಮಶ ಮನಸ್ಸಿನಿಂದ, ನೈಜತೆಯಿಂದ ಕೂಡಿದ ವಿಚಾರಗಳಾಗಿರುತ್ತವೆ.
ಹಾಗೆ ಕುಳಿತುಕೊಂಡ ವಿದ್ಯಾರ್ಥಿನಿಯು ತಾನು ಇತ್ತೀಚಿಗೆ ಭಾಗವಹಿಸಿದ್ದ ಕಾರ್ಯಾಗಾರವೊಂದರಲ್ಲಿ ಬೇರೆ ಬೇರೆ ರೀತಿಯ ಹೀಲಿಂಗ್ ಬಗ್ಗೆ ಹೇಳುವಾಗ ಮನೋ ಶಸ್ತ್ರಚಿಕಿತ್ಸೆಯ ಬಗ್ಗೆಯೂ ಹೇಳಿದರಂತೆ. ಈ ಚಿಕಿತ್ಸೆಯಲ್ಲಿ ಯಾವ ಪರಿಕರಗಳೂ ಇಲ್ಲದೆ, ಒಬ್ಬ ವ್ಯಕ್ತಿಯಲ್ಲಿರುವ ಕ್ಯಾನ್ಸರ್ ಗಡ್ಡೆಗಳನ್ನು ತೆಗೆಯಬಹುದು ಎಂದಿದ್ದರಂತೆ. ಇದು ಸಾಧ್ಯವಾಗುತ್ತಾ ಎನ್ನುವುದು ಅವಳ ಅನುಮಾನ.
ನಿನ್ನ ವೈಯಕ್ತಿಕ ಅಭಿಪ್ರಾಯವೇನು ಎಂದು ಕೇಳಿದೆ. ಅದಕ್ಕವಳು ಬಹುಶಃ ಸಾಧ್ಯವಾಗುವುದಿಲ್ಲ, ಆದರೂ… ಎಂದು ರಾಗ ಎಳೆದಳು. ನಿನಗೆ ಬಂದಿರುವ ಅನುಮಾನದಲ್ಲಿ ಯಾವ ಸಮಸ್ಯೆಯೂ ಇಲ್ಲ, ಇದರಲ್ಲಿ ನಂಬಿಕೆಗಿಂತಲೂ ತರ್ಕದ ಸಮಸ್ಯೆ ಇದೆ, ಸಮಸ್ಯೆಗಿಂತಲೂ ಅತಾರ್ಕಿಕ ಕಲ್ಪನೆಯಿದೆ ಎನ್ನುವುದು ನನ್ನ ಭಾವನೆ.
ಸರ್, ನನಗೆ ನಂಬಿಕೆ ಮತ್ತು ತರ್ಕದ ಮಧ್ಯದ ಭೇದ-ಏಕತೆಗಳ ವ್ಯತ್ಯಾಸ ಸ್ಪಷ್ಟವಾಗಿಲ್ಲ'' ಎಂದಳು. ನೋಡಮ್ಮ, ದೇವರಿದ್ದಾನೆ ಎನ್ನುವುದು ನಂಬಿಕೆ. ನಾವು ಮಾಡುವ, ಮಾಡುತ್ತಿರುವ ಕೆಲಸವೆಲ್ಲವೂ ಯಶಸ್ವಿಯಾಗಬೇಕು, ನಾವು ದೇವರನ್ನು ನಂಬಿದ್ದೇವೆ, ಅವನು ನಮ್ಮ ಕೈ ಬಿಡುವುದಿಲ್ಲ ಅಂತ ಅಂದುಕೊಳ್ಳುತ್ತೇವಲ್ಲ, ಅದು ನಂಬಿಕೆಯಲ್ಲ, ಮೂರ್ಖತನ, ಅದು ಅತಾರ್ಕಿಕ. ಹಾಗೆಯೇ ತಮ್ಮ ಬಳಿ ಅತೀಂದ್ರಿಯ ಶಕ್ತಿಯಿರುವವರು ತಾವು ಆ ಶಕ್ತಿಯನ್ನು ಉಪಯೋಗಿಸಿಕೊಂಡು ಭೌತಿಕ ಸಮಸ್ಯೆಗಳನ್ನು ಪರಿಹರಿಸುತ್ತೇವೆ, ಬೇರೆಯವರನ್ನು ಆಕರ್ಷಿಸಿ ಅವರ ಮನಸ್ಸನ್ನು ಬದಲಾಯಿಸುತ್ತೇವೆ ಎನ್ನುವುದೆಲ್ಲ ಅತಾರ್ಕಿಕ ನಂಬಿಕೆಗಳು ಮತ್ತು ಇನ್ನೊಬ್ಬರನ್ನು ಮೋಸ ಮಾಡುವ ತಂತ್ರಗಳು. ಆದರೆ ರೇಕಿ ಶಕ್ತಿಯು ನಮ್ಮ ಅನುಭವಕ್ಕೆ ಬರುತ್ತದೆ ಮತ್ತು ನಮಗೆಲ್ಲರಿಗೂ ಮನಸ್ಸು ಪ್ರಶಾಂತವಾಗಿದ್ದಿದು ನಿಜವಾದುದು, ಅದರಲ್ಲಿ ಸಂಶಯವಿಲ್ಲವಲ್ಲ?'' ಎಂದಳು.
ನಿಮ್ಮ ಈಗಿನ ಪ್ರಶ್ನೆಯೂ ತರ್ಕದಲ್ಲೇ ಇದೆ. ನೋಡಮ್ಮ, ನಿಮ್ಮ ತರಬೇತುದಾರರು ರೇಕೀ ಎಂಬುದು ಒಂದು ವಿಶ್ವದಲ್ಲಿ ಇರಬಹುದಾದ ಚೇತನ ಶಕ್ತಿ ಎಂದರು. ಅದನ್ನು ನೀವು ಒಪ್ಪಿಕೊಂಡಿರಿ, ಅದನ್ನು ಪರೀಕ್ಷೆಗೆ ಒಳಪಡಿಸಲಾಗುವುದಿಲ್ಲ, ಏಕೆಂದರೆ ಅದು ಭೌತ ವಿಜ್ಞಾನದ ನಿಯಮಕ್ಕೆ ಒಳಪಟ್ಟಿಲ್ಲ, ಅದನ್ನು ಮುಖ್ಯವಾಹಿನಿಯ ವಿಜ್ಞಾನಿಗಳು ಒಪ್ಪುವುದಿಲ್ಲ, ಈಗ ನಿಮಗೆ ಅವರು ಹೇಳಿದ ಶಕ್ತಿಯ ಮುಂದುವರೆದ ಭಾಗವಾಗಿ ನಿಮಗೆ ಮನೋ ಶಸ್ತ್ರಚಿಕಿತ್ಸೆಯೆಂಬ, ಪರೀಕ್ಷೆಗೊಳಪಡಿಸಲಾಗದ ಕಲ್ಪನೆಯನ್ನು ಹೇಳುತ್ತಾರೆ. ಇದೂ ಮೊದಲು ಹೇಳಿದ ಕಲ್ಪನೆಯಾದ ರೇಕೀಶಕ್ತಿಯ ಹಾಗೆಯೇ ಎನ್ನುತ್ತಾರೆ. ಅದನ್ನು ಒಪ್ಪಿಕೊಳ್ಳಲು ಕಷ್ಟವಾದರೂ ನಿಮಗೆ ನಿರಾಕರಿಸಲಾಗುವುದಿಲ್ಲ. ಇದು ಒಂದು ಸಂಕೀರ್ಣವಾದ ಬೌದ್ಧಿಕ ಪಕ್ಷಪಾತದ ಪ್ರಕ್ರಿಯೆ. ಆದರೆ ಕೇವಲ ಪಕ್ಷಪಾತವಿರಬಹುದು ಎಂದ ಮಾತ್ರಕ್ಕೆ ಆ ಕಲ್ಪನೆಯನ್ನು ಸುಳ್ಳು ಎನ್ನಲಾಗದು. ಅದನ್ನು ಪುನಃ ತರ್ಕದ ಜಾಡಿನಲ್ಲಿಯೇ ನೋಡಬೇಕಾಗುತ್ತದೆ.
ಈ ವಿಶಾಲ ವಿಶ್ವದಲ್ಲಿ ನಮ್ಮ ಗ್ರಹಿಕೆಗೆ ಬಾರದ ಎಷ್ಟೋ ಸಂಗತಿಗಳಿವೆ. ನಾವು ಕೇವಲ ಮೂರು ಆಯಾಮಗಳಲ್ಲಿ ಗ್ರಹಿಸುತ್ತೇವೆ. ನಾಲ್ಕನೆಯ ಆಯಾಮವಾದ ಕಾಲವನ್ನು ಅಂದಾಜಿಸಲು ಕಲಿತಿದ್ದೇವೆ. ಇದಕ್ಕೂ ಹೊರತಾದ ಉನ್ನತ ಆಯಾಮಗಳಿರಬಹುದು, ಆ ಆಯಾಮಗಳ ಸಾಮರ್ಥ್ಯವೇನಿರಬಹುದು, ಶಕ್ತಿಯ ಸಂಚಯವೆಷ್ಟು ಎಂದು ನಮಗೆ ಊಹಿಸಲಿಕ್ಕೂ ಆಗುವುದಿಲ್ಲ, ಭೌತಿಕ ದೇಹವನ್ನು ಮುಟ್ಟದೆಯೇ ಆ ದೇಹದಲ್ಲಾಗುವ ಕೆಲವು ಕ್ರಿಯೆಗಳನ್ನು ಅಳೆಯಲು ಕಲಿತಿದ್ದೇವೆ ಅಷ್ಟೇ. ಇನ್ನು, ಇದಕ್ಕೂ ಮಿಗಿಲಾದ ಭೌತಿಕ ದೇಹವನ್ನು ಕತ್ತರಿಸುವ, ಒಳಗಿನ ಅವಯವಗಳನ್ನು ಹೊರತೆಗೆದು ಉಳಿದ ಅವಯವಗಳನ್ನು ಮೊದಲಿನ ಹಾಗೆಯೇ ಸಂಪರ್ಕಿಸಿ, ಅವುಗಳನ್ನು ಕಾರ್ಯತಂತ್ರಗೊಳಿಸುವುದು ತುಂಬಾ ಸಂಕೀರ್ಣವಾದ ಕಾರ್ಯ. ಅದಕ್ಕೆ ಬೇಕಾದ ಸಾಮರ್ಥ್ಯ, ಶಕ್ತಿಯನ್ನು ಒಬ್ಬ ವ್ಯಕ್ತಿ ನೇರವಾಗಿ ಪಡೆದುಕೊಂಡಿದ್ದಾನೆ, ಹಾಗೂ ಉಳಿದ ಆಯಾಮಗಳಲ್ಲಿ ಅವನು ನಮ್ಮಂತೆಯೇ ಇದ್ದಾನೆ ಎನ್ನುವುದನ್ನು ನಂಬುವುದು ಕಷ್ಟ. ಸರಳವಾಗಿ ಹೇಳುವುದಾದರೆ, ದೇಹದ ಗಡ್ಡೆ ತೆಗೆಯಲು ಬರುವ ವ್ಯಕ್ತಿಯು ಹತ್ತು ಅಡಿ ದೂರದಲ್ಲಿರುವ ಒಂದು ಹಲಸಿನ ಹಣ್ಣನ್ನು ಮುಟ್ಟದೆಯೇ ಬಿಡಿಸುವ ಸಾಮರ್ಥ್ಯ ಹೊಂದಿರಬೇಕು, ಏಕೆಂದರೆ ಅದು ನಮ್ಮ ಭೌತಿಕ ಜಗತ್ತಿನ ನಿಯಮಗಳನ್ನು ಮೀರಿದ ಹಂತದಲ್ಲಿ, ಆ ಹಂತದ ಆಯಾಮದಲ್ಲಿ ನಡೆಯಬಹುದಾದ ಪ್ರಕ್ರಿಯೆಯಾಗಿರುತ್ತದೆ. ಆ ಅತೀಂದ್ರಿಯ ಸಾಮರ್ಥ್ಯವಿರುವ ವ್ಯಕ್ತಿಗೆ ನೀವೇ ಕೊಟ್ಟಿರುವ ಹಲಸಿನ ಹಣ್ಣಿನ ಸಮಸ್ಯೆಯನ್ನು ಪರಿಹರಿಸಲು ಹೇಳಿ, ಅದರ ನಂತರ ಅವನು ವ್ಯಕ್ತಿಯ ಚರ್ಮದ ಮೇಲಿರುವ ಗಾಯವನ್ನು ತಕ್ಷಣದಲ್ಲಿ ಸರಿಪಡಿಸಲು ಅಥವಾ ಒಬ್ಬ ವ್ಯಕ್ತಿಯ ಮುಖದ ಮೇಲಿರುವ ಮೊಡವೆಗಳನ್ನು ಕ್ಷಣಾರ್ಧದಲ್ಲಿ ಗುಣಪಡಿಸಲು ಹೇಳಿ. ಇದೆಲ್ಲ ಮಾಡಲು ಶಕ್ತನಾದರೆ ಆಮೇಲೆ ಅವನು ಕ್ಯಾನ್ಸರ್ ಗಡ್ಡೆಯನ್ನು ತೆಗೆಯಬಹುದು ಎಂದೆ. ಆ ಮನೋವಿಜ್ಞಾನದ ಹುಡುಗಿ ಹೌದು ಎಂದು ತಲೆಯಲ್ಲಾಡಿಸಿದಳು. ಈಗ ಜ್ಞಾಪಕಕ್ಕೆ ಬಂತು. ಅದು ಡಾ. ರಾಜಕುಮಾರ್ ಅವರು ಅಪಹರಣವಾಗಿದ್ದ ಸಮಯ. ನನಗೆ ಪರಿಚಯವಿದ್ದ ರೇಕೀ ತಜ್ಞರೊಬ್ಬರು ನನಗೆ ಹೇಳಿದ್ದರು. ರೇಕೀ ಶಕ್ತಿಯಿಂದ ರಾಜಕುಮಾರ್ ಅವರನ್ನು ಮರಳಿ ಕರೆಸಬಹುದು, ನೀವೂ ಸಹ ಬರುತ್ತೀರಾ ಎಂದು. ಅವರಿಗೆ ಏನೂ ಹೇಳದೆ ಸುಮ್ಮನಿದ್ದೆ. ನಾನು ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲಿ ಇದ್ದ ಬೆಕ್ಕು ಕಳೆದು ಹೋಗಿತ್ತು. ತುಂಬಾ ಮುದ್ದಾಗಿ ಇದ್ದ ಬೆಕ್ಕು ಅದು. ಬೆಕ್ಕು ಮರಳಿ ಬರಲಿ ಎಂಬ ಆಶಯವಿದ್ದರೂ ಅದು ಬರುತ್ತದೆ ಎಂಬ ನಂಬಿಕೆಯಿರಲಿಲ್ಲ, ಬೆಕ್ಕನ್ನು ಮರಳಿ ಬರುವಂತೆ ಮಾಡುವ ಯಾವ ಶಕ್ತಿಯೂ ನನ್ನಲ್ಲಿ ಇದೆ ಎಂದು ನಾನು ನಂಬಿರಲಿಲ್ಲ. ಆದರೆ ರಾಜಕುಮಾರ್ ಅವರು ಮರಳಿ ಬರಲು ಸರ್ಕಾರ ತನ್ನ ಎಲ್ಲ ಪ್ರಯತ್ನವನ್ನೂ ಮಾಡುತ್ತದೆಯೆಂಬ ನಂಬಿಕೆಯಿತ್ತು. ಸರ್ಕಾರ ಕೊನೆಗೆ ಪ್ರಯತ್ನ ಮಾಡಿತ್ತು ಮತ್ತು ಆ ಪ್ರಯತ್ನದ ಫಲವಾಗಿ ರಾಜ್ ಕುಮಾರ್ ಅವರು ಮರಳಿ ಬಂದರು. ಡಾ. ರಾಜ್‌ಕುಮಾರ್ ಮರಳಿ ಬರಲಿ ಎನ್ನುವ ಕೋಟ್ಯಂತರ ಕನ್ನಡಿಗರ ಪ್ರಾರ್ಥನೆ ಇತ್ತು, ಕೇವಲ ಪ್ರಾರ್ಥನೆಯಿಂದ ಪರಿಹಾರ ಸಿಗಲಿಲ್ಲ, ಅಲ್ಲಿ ಆಗಿದ್ದಿದು ಮನುಷ್ಯ ಪ್ರಯತ್ನದ ಸಾಮರ್ಥ್ಯ, ಅದು ಆಗಬಹುದಾದ ತಾರ್ಕಿಕ ಪರಿಹಾರ.

Next Article