For the best experience, open
https://m.samyuktakarnataka.in
on your mobile browser.

ಮರಕುಂಬಿ: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

04:30 AM Oct 25, 2024 IST | Samyukta Karnataka
ಮರಕುಂಬಿ  ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಅನಿಲ ಬಾಚನಹಳ್ಳಿ
ಕೊಪ್ಪಳ: ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ೨೦೧೪ರ ಆಗಸ್ಟ್ ೨೮ರಂದು ನಡೆದ ಜಾತಿ ನಿಂದನೆ, ಹಲ್ಲೆ, ದೌರ್ಜನ್ಯ ಮತ್ತು ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದ ೧೦೧ ಆರೋಪಿಗಳ ಮೇಲಿನ ಅಪರಾಧ ಸಾಬೀತಾಗಿದ್ದು, ಅಪರಾಧಿಗಳು ನ್ಯಾಯಾಲಯದ ಆವರಣಕ್ಕೆ ಬರುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಶಿಕ್ಷೆ ಘೋಷಣೆ ಮಾಡುವ ಹಿನ್ನೆಲೆ ನಗರದ ಜಿಲ್ಲಾ ಕಾರಾಗೃಹದಿಂದ ಗುರುವಾರ ಮಧ್ಯಾಹ್ನದ ನಂತರ ಎರಡು ಪೊಲೀಸ್ ಬಸ್ ಮತ್ತು ಒಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‌ನಲ್ಲಿ ಅಪರಾಧಿಗಳನ್ನು ಕರೆತರಲಾಯಿತು.
ಬೆಂಗಾವಲು ಪಡೆಯೊಂದಿಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಅಪರಾಧಿಗಳನ್ನು ಕರೆತಂದರು. ನಗರದ ಜಿಲ್ಲಾ ನ್ಯಾಯಾಲಯದ ಆವರಣಕ್ಕೆ ಗುರುವಾರ ಅಪರಾಧಿಗಳು ಆಗಮಿಸುತ್ತಿದ್ದಂತೆ ಮರಕುಂಬಿ ಗ್ರಾಮದಿಂದ ಬಂದಿದ್ದ ಅಪರಾಧಿಗಳ ಕುಟುಂಬಸ್ಥರು ಕಣ್ಣೀರು ಹಾಕಿದರು.
ಮೂರು ದಿನದ ನಂತರ ಮಕ್ಕಳು, ಗಂಡಂದಿರು, ತಂದೆಯರನ್ನು ನೋಡಿದ ಅಪರಾಧಿಗಳು ಭಾವುಕರಾದರು. ದೂರದಿಂದಲೇ ಕುಟುಂಬಸ್ಥರು ಅಪರಾಧಿಗಳಿಗೆ ಕೈಮಾಡಿ, ಅಳಲು ಆರಂಭಿಸಿದರು. ಅಪರಾಧಿಗಳ ಕಣ್ಣಲ್ಲೂ ನೀರು ಜಾರಿದವು. ಅಲ್ಲದೇ ಕೆಲವು ಅಪರಾಧಿಗಳು ಕೈಯಿಂದ ಮುಖ ಮುಚ್ಚಿಕೊಂಡರು. ಮಕ್ಕಳು, ಪತ್ನಿ ಹಾಗೂ ಕುಟುಂಬದವರು ತಮ್ಮವರನ್ನು ನೋಡಲು ಬಂದು, ಮಧ್ಯಾಹ್ನ ೩ರಿಂದ ೫.೩೦ರ ವರೆಗೂ ನ್ಯಾಯಾಲಯದ ಆವರಣದಲ್ಲಿಯೇ ಕಾಯುತ್ತಾ, ಕುಳಿತಿದ್ದರು.
ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ಸವರ್ಣೀಯರ ಮೇಲೆ ಗಂಗಾವತಿಯ ಶಿವೆ ಚಿತ್ರಮಂದಿರದಲ್ಲಿ ೨೦೧೪ರ ಆಗಸ್ಟ್‌ ೨೮ರಂದು ಗಲಾಟೆ ಹಲ್ಲೆ ನಡೆದ ನಂತರ ಘಟಿಸಿದ ಬೆಳವಣಿಗೆಗಳಲ್ಲಿ ಜಾತಿ ನಿಂದನೆ ಮತ್ತು ಬೆದರಿಕೆಗೆ ಸಂಬಂಧಿಸಿದಂತೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹತ್ತು ವರ್ಷ ವಿಚಾರಣೆ ನಡೆಯಿತು. ವಾದ ಮತ್ತು ಪ್ರತಿವಾದ ಆಲಿಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ೨೦೨೪ರಂದು ಅ. ೨೧ರಂದು ನಡೆದ ವಿಚಾರಣೆಯಲ್ಲಿ ೧೦೧ ಜನರು ಅಪರಾಧಿಗಳೆಂದು ಘೋಷಿಸಿತ್ತು.
೫೦ಕ್ಕೂ ಪೊಲೀಸರ ನಿಯೋಜನೆ: ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಗುರುವಾರ ಮುಂಜಾಗ್ರತಾ ಕ್ರಮವಾಗಿ ಕೊಪ್ಪಳ ಡಿವೈಎಸ್ಪಿ ಮುತ್ತಣ್ಣ ಸರವಗೋಳ ನೇತೃತ್ವದಲ್ಲಿ ಇಬ್ಬರು ಡಿವೈಎಸ್ಪಿ, ನಾಲ್ಕು ಇನ್ಸ್‌ಪೆಕ್ಟರ್, ೫ ಪಿಎಸ್‌ಐ ಸೇರಿ ೫೦ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಲಾಗಿತ್ತು. ಡಿಯರ್ ಡಿವೈಎಸ್ಪಿ ನಿಂಗಪ್ಪ, ನಗರ ಪೊಲೀಸ್ ಠಾಣೆಯ ಜಯಪ್ರಕಾಶ ಇದ್ದರು.