For the best experience, open
https://m.samyuktakarnataka.in
on your mobile browser.

ಮರಕುಂಬಿ ಪ್ರಕರಣದ ಅಪರಾಧಿ ರಾಮಣ್ಣ ಮೃತ

11:26 AM Oct 25, 2024 IST | Samyukta Karnataka
ಮರಕುಂಬಿ ಪ್ರಕರಣದ ಅಪರಾಧಿ ರಾಮಣ್ಣ ಮೃತ

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಮರಕುಂಬಿ ಗ್ರಾಮದ ಸವರ್ಣಿಯರು ಮತ್ತು ದಲಿತರ ನಡುವಿನ ಗಲಭೆಯಲ್ಲಿ ಶಿಕ್ಷೆ ಘೋಷಣೆಯಾಗಿದ್ದ ಅಪರಾಧಿಯೊಬ್ಬರು ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

೧೦೧ ಜನ ಆರೋಪಿಗಳಾಗಿದ್ದರು. ಈ ಪೈಕಿ ಪರಿಶಿಷ್ಟ ಜಾತಿಗೆ ಸೇರಿದ ರಾಮಣ್ಣ ಭೋವಿ(೩೦) ಕೂಡಾ ಒಬ್ಬರಾಗಿದ್ದರು. ಅ. ೨೧ಕ್ಕೆ ರಾಮಣ್ಣ ಸೇರಿ ೧೦೧ ಆರೋಪಿಗಳು ಅಪರಾಧಿಗಳೆಂದು ಸಾಬೀತಾಗಿತ್ತು. ಗುರುವಾರ ೧೦೧ ಅಪರಾಧಿಗಳಿಗೂ ಶಿಕ್ಷೆ ವಿಧಿಸಿತು. ಪರಿಶಿಷ್ಟ ಜಾತಿಗೆ ಸೇರಿದ ರಾಮಣ್ಣ ಭೋವಿ ಸೇರಿ ಮೂವರಿಗೆ ಜಾತಿ ನಿಂದನೆ ಕಾಯ್ದೆ ಅನ್ವಯಿಸುವುದಿಲ್ಲ. ಹಾಗಾಗಿ ೫ ವರ್ಷ ಜೈಲು ಮತ್ತು ೫ ಸಾವಿರ ರೂ. ದಂಡವನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಘೋಷಣೆ ‌ಮಾಡಿದರು.

ಅಸ್ವತ್ಥಗೊಂಡಿದ್ದ ರಾಮಣ್ಣ ಭೋವಿಯವನ್ನು ಗುರುವಾರ ರಾತ್ರಿಯೇ ನಗರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ನೇರವಾಗಿ ನಗರದ ಸರ್ಕಾರಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ, ದಾಖಲಿಸಲಾಯಿತು. ವೈದ್ಯರು ಬೆಳಿಗ್ಗೆಯವರೆಗೂ ಚಿಕಿತ್ಸೆ ನೀಡುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ರಾಮಣ್ಣ ಕೊನೆಯುಸಿರೆಳೆದಿದ್ದಾರೆ.

ಮುಗಿಲು ಮುಟ್ಟಿದ ಮೃತ ಅಪರಾಧಿ ಪತ್ನಿ ಕಾವ್ಯ ಆಕ್ರಂದನ: ನಗರದ ಸರ್ಕಾರಿ ಜಿಲ್ಲಾಸ್ಪತ್ರೆಯ ಹಿಂಭಾಗದಲ್ಲಿನ ವಿಧಿವಿಜ್ಞಾನ ಪ್ರಯೋಗಾಲಯದ ಮುಂದೆ ಶುಕ್ರವಾರ ಮರಕುಂಬಿ ಪ್ರಕರಣದ ಅಪರಾಧಿ ಮೃತ ರಾಮಣ್ಣ ಭೋವಿ ಪತ್ನಿ ಕಾವ್ಯಾ ಆಕ್ರಂದನ ಮುಗಿಲು ಮುಟ್ಟಿತ್ತು.
ಪತ್ನಿ ಕಾವ್ಯಾ, ೧೨ ವರ್ಷದ ಓರ್ವ ಪುತ್ರನನ್ನು ಅಗಲಿದ್ದಾರೆ.

Tags :