ಮಲಗು ಕಂದ ಲಾಲಿ ಹಾಡು ಮೆಚ್ವಿದ ಮೋದಿ
ಕರ್ನಾಟಕ ಜಾನಪದ ಶೈಲಿಯ "ಲಾಲಿ ಹಾಡು" ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಡುವ ಮಾಸಿಕ ಕಾರ್ಯಕ್ರಮ ಮನ್ ಕೀ ಬಾತ್ನಲ್ಲಿಂದು ಪ್ರತಿಧ್ವನಿಸಿತು. ಚಾಮರಾಜನಗರದ ಬಿ.ಎಂ.ಮಂಜುನಾಥ್ ಬರೆದ ಸುಂದರ ಗೀತೆ, ಲಾಲಿ ಬರಹ ಸ್ಪರ್ಧೆಯಲ್ಲಿ ಮೊದಲ ಪ್ರಶಸ್ತಿ ಬಾಚಿಕೊಂಡಿದೆ. "ಮಲಗು ಕಂದ" ಹಾಡನ್ನು ಮನ್ ಕೀ ಬಾತ್ನಲ್ಲಿ ಪ್ರಸಾರ ಕೂಡ ಮಾಡಲಾಯಿತು. ತಾಯಿ ಮತ್ತು ಅಜ್ಜಿಯ ಪ್ರೇರಣೆಯಿಂದ ಪದಗಳಲ್ಲಿ ಮೂಡಿಬಂದ ಭಾವ ತುಂಬಿದ್ದ 35 ಸೆಕೆಂಡುಗಳ ಲಾಲಿ ಹಾಡು ಹೃದಯಸ್ಪರ್ಶಿಯಾಗಿತ್ತು. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾತಿನಲ್ಲಿ ಪ್ರಸ್ತಾಪಿಸಿದರು. ವೃತ್ತಿಯಲ್ಲಿ ವಿಮಾ ಸಲಹೆಗಾರರಾಗಿರುವ, 59 ವರ್ಷದ ಎಂ.ಬಿ.ಮಂಜುನಾಥ್ ಅವರು ಕೊಳ್ಳೆಗಾಲ ತಾಲ್ಲೂಕಿನ ಬಾಳಗುಣಸೆಯವರು. ಕವಿ, ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ. ಎಲೆಮರೆಯಂತಿರುವ ಸಾಹಿತಿಗಳನ್ನು ಗುರುತಿಸುವುದಕ್ಕಾಗಿ ಕೊಳ್ಳೇಗಾಲದಲ್ಲಿ ಸಮಾನಮನಸ್ಕರು ಸೇರಿ ಸಾಹಿತ್ಯ ಮಿತ್ರ ಕೂಟ ಎಂಬ ಸಂಖ್ಯೆಯನ್ನು ಕಟ್ಟಿಕೊಂಡಿದ್ದು, ಅದರಲ್ಲಿ ಮಂಜುನಾಥ್ ಖಜಾಂಚಿಯಾಗಿದ್ದಾರೆ. 'ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಸ್ಪರ್ಧೆ ಆಯೋಜಿಸಿತ್ತು. ನಾನು ಬರೆದಿದ್ದ 'ಮಲಗು ಕಂದ' ಹಾಡನ್ನು ನಾಲ್ಕು ತಿಂಗಳ ಹಿಂದೆ ಆನ್ ಲೈನ್ ಮೂಲಕ ಅಪ್ ಲೋಡ್ ಮಾಡಿದ್ದೆ.ಅದಕ್ಕೆ ಬಹುಮಾನ ಬಂದಿರುವುದು ತುಂಬಾ ಖುಷಿ ನೀಡಿದೆ' ಎಂದು ಅವರು ಹೇಳಿದ್ದಾರೆ.