ಮಲೆನಾಡು ಉಗ್ರರ ತಾಣಕ್ಕೆ ಮೃದು ಧೋರಣೆ ಕಾರಣ
ಕರಾವಳಿ ಜಿಲ್ಲೆಗಳೊಂದಿಗೆ ಅಂಟಿಕೊಂಡಿರುವ ಮಲೆನಾಡು ನಕ್ಸಲ್‌ರ ಹಾವಳಿಯಿಂದ ನಲುಗಿಹೋಗಿತ್ತು. ನಕ್ಸಲರ ಹಾವಳಿ ಕಡಿಮೆಯಾದಂತೆ, ಇತ್ತೀಚಿನ ದಿನಗಳಲ್ಲಿ ಶಂಕಿತ ಉಗ್ರರ ಉಪಟಳ ಹೆಚ್ಚಾಗುತ್ತಿದೆ. ಒಂದು ರೀತಿಯಲ್ಲಿ ಮಲೆನಾಡು ಉಗ್ರರ ಅಡಗು ತಾಣದಂತೆ ಪರಿವರ್ತನೆಯಾಗುತ್ತಿದೆ. ಒಂದಲ್ಲ ಎರಡಲ್ಲ ಹಲವು ಬಾರಿ ಶಂಕಿತ ಉಗ್ರರ ಚಟುವಟಿಕೆಗಳು ಮಲೆನಾಡಿನಲ್ಲೇ ನಡೆಯುತ್ತಿರುವುದು ಸಾಬೀತಾಗಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಒಂದೂವರೆ ದಶಕದ ಹಿಂದೆ ನಕ್ಸಲರ ಹಾವಳಿಯಿಂದ ತತ್ತರಿಸಿದ್ದವು. ಈಗ ನಕ್ಸಲರ ಕಾಟ ಇಲ್ಲದಿದ್ದರೂ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಮಲೆನಾಡನ್ನು ಪ್ರಯೋಗಶಾಲೆಯಾಗಿ ಬಳಸಿಕೊಳ್ಳುತ್ತಿರುವುದು ಹಲವು ಬಾರಿ ಸಾಬೀತಾಗಿದೆ. ಐಸಿಸ್‌ನೊಂದಿಗೆ ಕೈಜೋಡಿಸಿ ದೇಶದೆಲ್ಲೆಡೆ ವಿಧ್ವಂಸಕ ಕೃತ್ಯ ನಡೆಸಲು ರೂಪುರೇಷೆ ತಯಾರಿಸಲು ಮಲೆನಾಡಿನ ನದಿ ತಟಗಳು, ಬೆಟ್ಟ-ಗುಡ್ಡ ಕಾಡಿನ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿರುವುದು ಆತಂಕ ತರುವಂತಹದ್ದು. ಇಂತಹ ಕೃತ್ಯಗಳಿಗೆ ಸ್ಥಳೀಯರನ್ನೇ ಬಳಸಿಕೊಂಡು ಅವರಿಗೆ ತರಬೇತಿ ನೀಡುವ ಮೂಲಕ ಸಮಾಜಘಾತುಕ ಶಕ್ತಿಗಳನ್ನು ಬೆಳೆಸಲಾಗುತ್ತಿದೆ ಎಂಬುದು ಇತ್ತೀಚಿನ ಘಟನೆಗಳಿಂದ ಸಾಬೀತಾಗುತ್ತದೆ.
ಬೆಂಗಳೂರಿನ ವೈಟ್‌ಫೀಲ್ಡ್ ಸಮೀಪದ ದಿ ರಾಮೇಶ್ವರಂ ಕೆಫೆ’ಯಲ್ಲಿ ಬಾಂಬ್ ಸ್ಫೋಟಿಸಿ ತಲೆಮರೆಸಿಕೊಂಡಿದ್ದ ಇಬ್ಬರು ಪ್ರಮುಖ ಆರೋಪಿಗಳು ಮಲೆನಾಡಿನ ನಂಟು ಹೊಂದಿರುವುದು ಈಗ ಇಡೀ ದೇಶದ ಗಮನ ಸೆಳೆದಿದೆ. ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕೋಲ್ಕತ್ತಾದ ಖಾಸಗಿ ಹೋಟೆಲ್‌ನಲ್ಲಿ ಈ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಉಗ್ರರ ಚಟುವಟಿಕೆಗಳು ಜೀವಂತವಾಗಿದ್ದು, ಉಗ್ರರ ಪ್ರಯೋಗಶಾಲೆಯಾಗಿ ಮಲೆನಾಡು ಪರಿವರ್ತನೆಯಾಗುತ್ತಿದೆ ಎಂಬ ಚರ್ಚೆಗಳು ದೇಶಾದ್ಯಂತ ನಡೆಯುತ್ತಿದೆ. ತೀರ್ಥಹಳ್ಳಿಯ ಮುಸಾವೀರ್ ಹುಸೇನ್ ಶಾಜೀಬ್ (೩೧) ಮತ್ತು ಅಬ್ದುಲ್ ಮಥೀನ್ ತಾಹ (೩೧) ಬಂಧಿತ ಆರೋಪಿಗಳಿಬ್ಬರೂ ಮಲೆನಾಡಿನವರು ಎಂಬುದು ಆತಂಕದ ವಿಷಯ. ಮುಸಾವೀರ್ ಹುಸೇನ್ ಮಾರ್ಚ್ ೧ರಂದು ರಾಮೇಶ್ವರಂ ಕೆಫೆಯಲ್ಲಿ ರವೆ ಇಡ್ಲಿ ತಿಂದು ಅಲ್ಲಿಯೇ ಕಚ್ಚಾ ಬಾಂಬ್ ಇರಿಸಿ ತಲೆಮರೆಸಿಕೊಂಡಿದ್ದ. ಸುಮಾರು ೪೩ ದಿನಗಳವರೆಗೆ ಎನ್‌ಐಎ ಮತ್ತು ಕರ್ನಾಟಕದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಆಸಾಮಿಯನ್ನು ಕೋಲ್ಕತಾದಲ್ಲಿ ಬಂಧಿಸುವಲ್ಲಿ ಎನ್‌ಐಎ ತಂಡ ಯಶಸ್ವಿಯಾಗಿದೆ. ತೀರ್ಥಹಳ್ಳಿಯವನೇ ಆದ ಇನ್ನೊಬ್ಬ ಪ್ರಮುಖ ಆರೋಪಿ ಅಬ್ದುಲ್ ಮಥೀನ್ ಬಾಂಬ್ ತಯಾರಿಕೆ ಮತ್ತು ಸ್ಫೋಟಿಸಲು ಯೋಜನೆ ರೂಪಿಸಿ, ಪೊಲೀಸರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಸಂಚು ರೂಪಿಸುವಲ್ಲಿ ನಿಷ್ಣಾತನಾಗಿದ್ದಾನೆ. ಇವನೇ ಬಾಂಬ್ ಸ್ಫೋಟ ಪ್ರಕರಣದ ರೂವಾರಿ ಕೂಡ ಆಗಿದ್ದಾನೆ. ಈ ವ್ಯಕ್ತಿ ಮಲೆನಾಡಿನ ಪ್ರಜ್ಞಾವಂತ ಜನರ ಮಧ್ಯದಲ್ಲಿಯೇ ಇದ್ದನೆಂಬ ಸಂಗತಿ ಜನರನ್ನು ಬೆಚ್ಚಿಬೀಳಿಸಿದೆ. ರಾಜ್ಯ ಸರ್ಕಾರದ ಅಸಡ್ಡೆ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಿಗೂ ಇಂತಹ ವಿಧ್ವಂಸಕ ಕೃತ್ಯಗಳ ರೂಪುರೇಷೆ ತಯಾರಿಸುವಲ್ಲಿ ನಂಟಿದೆ ಎಂಬುದನ್ನು ಈ ಹಿಂದೆ ಹಲವು ಪ್ರಕರಣಗಳು ಸಾಬೀತು ಮಾಡಿದ್ದರೂ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಕಳೆದ ಎಂಟು ವರ್ಷಗಳ ಹಿಂದೆ ಸೆರೆ ಸಿಕ್ಕಿದ್ದ ಉಗ್ರ ಯಾಸೀನ್ ಭಟ್ಕಳ್ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನೇ ತನ್ನ ಕಾರಾಸ್ತಾನ ಮಾಡಿಕೊಂಡಿದ್ದ. ಶಿಕಾರಿಪುರ ಮತ್ತು ಎನ್.ಆರ್.ಪುರ ತಾಲೂಕಿನ ಹಕ್ಲುಮನೆಯನ್ನು ತನ್ನ ಅಡುಗುತಾಣವನ್ನಾಗಿ ಮಾಡಿಕೊಂಡಿದ್ದ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ೨೦೦೮ರಲ್ಲಿ ಬೆಂಗಳೂರಿನಲ್ಲಿ ಸರಣಿ ಸ್ಫೋಟ ನಡೆಸಿ ಇದೇ ಸ್ಥಳಗಳಲ್ಲಿ ಅಡಗಿಕೊಂಡಿದ್ದ, ಇನ್ನೇನು ಬಂಧಿಸಬೇಕು ಎಂಬಷ್ಟರಲ್ಲಿ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಶಂಕಿತ ಉಗ್ರರಿಬ್ಬರು ಶಿವಮೊಗ್ಗದ ತುಂಗಾನದಿ ತೀರದಲ್ಲಿ ಸ್ಫೋಟಕಗಳನ್ನು ಪರೀಕ್ಷೆಗೆ ಒಳಪಡಿಸಿದ್ದನ್ನು ಪೊಲೀಸರು ಬಯಲಿಗೆಳೆದಿದ್ದರೂ, ಇಂತಹ ಚಟುವಟಿಕೆಗಳಿಗೆ ಇತಿಶ್ರೀ ಹಾಡಲಿಲ್ಲ. ಮಲೆನಾಡಿನ ಸೂಕ್ಷ್ಮ ಪ್ರದೇಶದ ಜೊತೆಗೆ ತುಂಗಾ ನದಿ ತೀರ ಇಂತಹ ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆ. ತುಂಗ ಮತ್ತು ಭದ್ರಾ ನದಿ ಸಂಗಮವಾಗುವ ಕೂಡಲಿ ಬಳಿಯ ನದಿ ತೀರಗಳಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ ಎಂಬುದು ಸ್ಥಳೀಯರು ಹಲವು ಬಾರಿ ದೂರಿದ್ದರೂ, ಸಾಕ್ಷಿ ಸಮೇತ ಅರೋಪಿಗಳ ಕೃತ್ಯ ಬಯಲಾಗಿದ್ದರೂ ಸರ್ಕಾರ ನಿರ್ಲಕ್ಷ್ಯ ತೋರಿದ್ದು, ಶಂಕಿತ ಉಗ್ರರ ಬೆಳವಣಿಗೆಗೆ ಅನುಕೂಲವಾಯಿತು. ಇಮಾಮ್‌ಬಾಡ ಸಮೀಪದ ತುಂಗಾ ನದಿ ತೀರದಲ್ಲೇ ಈ ಹಿಂದೆ ಶಂಕಿತ ಉಗ್ರರ ಬಂಧನವಾಗಿತ್ತು. ರಾಷ್ಟ್ರಧ್ವಜ ಸುಟ್ಟ ಕುರುಹು ಕೂಡ ಸಿಕ್ಕಿತ್ತು. ತುಂಗ ಮತ್ತು ಭದ್ರಾ ನದಿ ಸಂಗಮವಾಗುವ ಪವಿತ್ರ ಕೂಡಲಿ ಬಳಿ ನದಿ ತೀರದಲ್ಲಿ ಪಾಳು ಬಿದ್ದಿರುವ ದೇವಸ್ಥಾನದ ಸುತ್ತಮುತ್ತ ಪ್ರತಿನಿತ್ಯ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ನದಿಯಲ್ಲಿ ಮೀನು ಹಿಡಿಯುವ ನೆಪದಲ್ಲಿ ಯುವಕರು ಸೇರಿಕೊಂಡು ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಾರೆ ಎಂಬುದು ಗೊತ್ತಿದ್ದರೂ ಸರ್ಕಾರವಾಗಲಿ, ಗೃಹ ಇಲಾಖೆಯಾಗಲಿ ಗಂಭೀರವಾಗಿ ಪರಿಗಣಿಸದಿರುವುದು ಇಂತಹ ಆರೋಪಿಗಳು ತಮ್ಮ ಸಾಮ್ರಾಜ್ಯ ಬೆಳೆಸಿಕೊಳ್ಳಲು ಅನುಕೂಲವಾಗಿದೆ. ಇತ್ತೀಚೆಗೆ ವಿಧಾನಸೌಧದಲ್ಲೇ
ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ದೇಶದ್ರೋಹಿಗಳ ಕೃತ್ಯವನ್ನು ವ್ಯಾಪಕವಾಗಿ ಖಂಡಿಸುವುದಕ್ಕೂ ಕೆಲವರು ಮೀನ-ಮೇಷ ಮಾಡಿದ್ದು ಜಗಜ್ಜಾಹೀರಾಯಿತು. ಈ ಪ್ರಕರಣವನ್ನು ಸರ್ಕಾರ ಲಘುವಾಗಿ ಪರಿಗಣಿಸಿತಲ್ಲದೆ, ಶಕ್ತಿಸೌಧದಲ್ಲೇ ನಡೆದ ಇಂತಹ ಗಂಭೀರ ಕೃತ್ಯವನ್ನು ಜನಮಾನಸದಿಂದ ಹಿಂದೆ ಸರಿಯುವಂತೆಯೂ ಜಾಣ ಮೌನಕ್ಕೆ ಶರಣಾಯಿತು.
ಅಪರಿಚಿತ ವ್ಯಕ್ತಿಗಳ ವಿಚಾರಣೆ ಮಾಡಿ
ಕರ್ನಾಟಕದ ಕೇಂದ್ರಬಿಂದು ದಾವಣಗೆರೆ ಸೇರಿದಂತೆ ಎಲ್ಲ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲೂ ಹುಸೇನ್ ಶಾಜೀಬ್, ಅಬ್ದುಲ್ ಮಥೀನ್ ತಾಹನಂತಹ ವ್ಯಕ್ತಿಗಳು ಸಿಗಬಹುದು, ಅವರು ನಮ್ಮ ನಿಮ್ಮ ನಡುವೆಯೇ ಇರಬಹುದು. ಇತ್ತೀಚೆಗೆ ದಾವಣಗೆರೆ ನಗರದಲ್ಲಿಯೂ ಶಂಕಿತ ಉಗ್ರ ಎಂದು ಹೇಳಲಾದ ಫಯಾಜ್ ವುಲ್ಲಾ ಎಂಬ ೩೨ ವರ್ಷದ ವ್ಯಕ್ತಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿ ಕರೆದುಕೊಂಡು ಹೋಗಿದ್ದರು. ಈತ ನಮ್ಮ ನಡುವೆಯೇ ಸಾಮಾನ್ಯರಂತೆ ಜೀವನ ನಡೆಸುತ್ತಿದ್ದ. ಆದರೆ ಆತನ ವಿರುದ್ಧ ಹಲವು ಅಕ್ರಮ ಶಸ್ತ್ರಾಸ್ತ್ರ ಮಾರಾಟದ ಪ್ರಕರಣಗಳು ದಾಖಲಾಗಿವೆ ಎಂಬ ವಿಷಯ ಮಧ್ಯ ಕರ್ನಾಟದ ಜಿಲ್ಲೆಗಳು ಶಂಕಿತ ಉಗ್ರರಿಗೆ ನೆಲೆಯಾಗುತ್ತಿದೆಯೇನೋ ಎಂಬ ಅನುಮಾನ ಜನರಲ್ಲಿ ಹುಟ್ಟುಹಾಕಿದೆ. ದಾವಣಗೆರೆ ಮತ್ತು ಚಿತ್ರದುರ್ಗದ ಕೆಲವು ಪ್ರದೇಶಗಳು ಇಂತಹ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿದವರಿಗೆ ಸೇಫ್ ಆಗಿದ್ದು, ಇದಕ್ಕಾಗಿ ದೊಡ್ಡವರ ರಕ್ಷಣೆಯೂ ಸಿಗುತ್ತದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಹರಿಹರ ತಾಲೂಕಿನ ಬೆಳ್ಳೂಡಿ ಹೊರವಲಯದಲ್ಲಿರುವ ಪ್ರಾರ್ಥನಾ ಮಂದಿರಕ್ಕೆ ಆಗಾಗ ಅಪರಿಚಿತ ವ್ಯಕ್ತಿಗಳು ಬಂದು ಹೋಗುತ್ತಾರೆಂದು ಸ್ಥಳೀಯರು ದೂರುತ್ತಾರೆ. ಇಂತಹ ವ್ಯಕ್ತಿಗಳನ್ನು ಪೊಲೀಸರು ಮತ್ತು ಗುಪ್ತಚರ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿದಲ್ಲಿ ಆರಂಭಿಕ ಹಂತದಲ್ಲೇ ವಿದ್ವಂಸಕ ಕೃತ್ಯಗಳನ್ನು ನಿಯಂತ್ರಿಸಬಹುದಾಗಿದೆ.
ನಕಲಿ ಆಧಾರ್ ಕಾರ್ಡ್
ಚಿಕ್ಕಮಗಳೂರು, ಕೊಡುಗು ಜಿಲ್ಲೆಗಳ ಕಾಫಿ ತೋಟಗಳಲ್ಲಿ ಕಾರ್ಮಿಕರೆಂದು ವಲಸೆ ಬರುವ ಉತ್ತರ ಭಾರತ, ಬಾಂಗ್ಲಾ, ಪಾಕಿಸ್ತಾನದ ಕಾರ್ಮಿಕರು ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಕೆಲಸಕ್ಕೆ ಸೇರುತ್ತಾರೆ. ಇಂಥವರು ಅನೇಕ ಅಕ್ರಮ, ಅನೈತಿಕ, ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗುತ್ತಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಅನೇಕ ಪ್ರಕರಣಗಳು ಈ ಕುರಿತಂತೆ ದಾಖಲಾಗಿವೆ. ಕೈಗಾರಿಕೆ, ಕಾಫಿ ತೋಟಗಳಲ್ಲದೆ ಇತ್ತೀಚೆಗೆ ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರದಲ್ಲೂ ಕಾರ್ಮಿಕರ ವೇಷದಲ್ಲಿ ವಲಸಿಗರು ಸೇರಿಕೊಂಡಿದ್ದಾರೆ. ಕುಟುಂಬ ಸಮೇತರಾಗಿ ಕೆಲಸಕ್ಕೆ ಸೇರಿಕೊಳ್ಳುವ ಇವರು ಕ್ರಮೇಣ ಮಾಲಿಕರ ವಿಶ್ವಾಸ ಗಳಿಸಿಕೊಂಡು, ಅವರ ಮೂಲಕ ಆಧಾರ್ ಕಾರ್ಡ್ ಪಡೆದು ಸರ್ಕಾರದ `ಅನ್ನಭಾಗ್ಯ’ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಪಡೆಯಲು ಮುಂದಾಗುತ್ತಾರೆ.
ಬೇರೆ ರಾಜ್ಯಗಳು ಮತ್ತು ಇತರ ದೇಶಗಳಿಂದ ಬರುವ ಅಕ್ರಮ ವಲಸಿಗರನ್ನು ಸರ್ಕಾರ ಗುರುತಿಸುವಂತಾಗಬೇಕು. ಇಂತಹ ಕಾರ್ಮಿಕರ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಡಬೇಕು. ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ದಟ್ಟಕಾಡಿನ ಸೂಕ್ಷ್ಮ ಪ್ರದೇಶಗಳು, ನದಿಗಳ ತೀರಗಳಲ್ಲಿ, ಜಲಾಶಯ ಮತ್ತು ಹಿನ್ನೀರಿನ ಪ್ರದೇಶಗಳಲ್ಲಿ ಕ್ರಿಮಿನಲ್ ಕೃತ್ಯಗಳು ಆಗಿಂದಾಗ ವರದಿಯಾಗುತ್ತಲೇ ಇರುತ್ತವೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ನಿರಂತರವಾಗಿ ಪಹರೆ ನಡೆಸುವಂತಾಗಬೇಕು. ಸಮಾಜಘಾತುಕ ಕೃತ್ಯಗಳನ್ನು ಹತ್ತಿಕ್ಕಲು ಪೊಲೀಸರಿಗೆ ಸರ್ಕಾರ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು.
ಉಚಿತ ಕೊಡುಗೆಗಳೂ ಕಾರಣ
ಇತ್ತೀಚೆಗೆ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರಬೇಕೆಂಬ ಒಂದೇ ಒಂದು ಉದ್ದೇಶದಿಂದ ಮತದಾರರನ್ನು ಸೆಳೆಯಲು ಅನೇಕ ಉಚಿತ ಕೊಡುಗೆಗಳನ್ನು ನೀಡುವ ಭರವಸೆ ನೀಡುತ್ತಿವೆ. ಅಧಿಕಾರಕ್ಕೆ ಬಂದ ಮೇಲೆ ಅವುಗಳ ಅನುಷ್ಠಾನ ಮಾಡಲೇಬೇಕಾಗುತ್ತದೆ. ಈ ಸೌಲಭ್ಯಗಳನ್ನು ಆಧಾರ್ ಕಾರ್ಡ್, ಪಡಿತರ ಚೀಟಿ ಕಡ್ಡಾಯಗೊಳಿಸುವುದರಿಂದ ಹೊರರಾಜ್ಯಗಳಿಂದ ಬರುವ ಕಾರ್ಮಿಕರು ಕೂಡ ಇಂತಹ ಉಚಿತ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ವಾಮ ಮಾರ್ಗದ ಮೂಲಕ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಗಿಟ್ಟಿಸಿಕೊಳ್ಳುತ್ತಾರೆ. ಕ್ರಮೇಣ ತಮ್ಮ ಅಕ್ರಮ ಚಟುವಟಿಕೆಗಳನ್ನು ನೆರವೇರಿಸಿಕೊಳ್ಳಲು ರಾಜಾರೋಷವಾಗಿ ಓಡಾಡುತ್ತಾರೆ.
ಸಮಾಜಘಾತುಕ ಚಟುವಟಿಕೆಗಳು, ದೇಶ ವಿರೋಧಿ ಕೃತ್ಯಗಳು ಎಲ್ಲಿಯೇ ನಡೆಯಲಿ ಅಂತಹ ಘಟನೆಗಳನ್ನು ವ್ಯಾಪಕವಾಗಿ ಖಂಡಿಸುವ ಮತ್ತು ಮಟ್ಟ ಹಾಕುವ ಧೈರ್ಯವನ್ನು ಎಲ್ಲ ರಾಜಕೀಯ ಪಕ್ಷಗಳ ನೇತಾರರು ಪಕ್ಷಾತೀತವಾಗಿ ತೆಗೆದುಕೊಳ್ಳಬೇಕು. ಕೃತ್ಯದಲ್ಲಿ ತೊಡಗಿದವರ ಹೆಡೆಮುರಿ ಕಟ್ಟಲು ತನಿಖಾ ಸಂಸ್ಥೆಗಳಿಗೆ ಮತ್ತು ಗೃಹ ಇಲಾಖೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ಆಡಳಿತದಲ್ಲಿರುವವರೇ ಇಂಥವರ ರಕ್ಷಣೆಗೆ ನಿಂತರೆ ದೇಶದ ತುಂಬೆಲ್ಲ ಸಮಾಜಘಾತುಕರ ಸಂಖ್ಯೆ ಹೆಚ್ಚಾಗುತ್ತದೆ. ಸಮಸ್ಯೆ ಬೃಹದಾಕಾರವಾಗಿ ಬೆಳೆದ ನಂತರ ನಿಯಂತ್ರಣ ಕಷ್ಟಸಾಧ್ಯವಾಗುತ್ತದೆ ಎಂಬುದನ್ನು ರಾಜಕೀಯ ನಾಯಕರು ಅರಿತುಕೊಳ್ಳಬೇಕು. ಸಮಾಜಘಾತುಕರು ಶಕ್ತಿಗಳು ಎಲ್ಲಿದ್ದಾರೆ, ಹೇಗಿದ್ದಾರೆ, ಏನು ಮಾಡುತ್ತಿದ್ದಾರೆಂಬುದು ಸಾಮಾನ್ಯವಾಗಿ ಆಯಾ ಸ್ಥಳೀಯ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳಿಗೆ ತಿಳಿದಿರುತ್ತದೆ. ಅಂತಹ ವ್ಯಕ್ತಿಗಳು ಮತ್ತು ಏರಿಯಾದ ಮೇಲೆ ನಿಗಾ ಇಟ್ಟರೆ ಅಂಥವರು ಬೆಳೆಯಲು ಅಸಾಧ್ಯ. ಪೊಲೀಸ್ ಇಲಾಖೆ ಜೊತೆಗೆ ಸಾರ್ವಜನಿಕರು ಕೂಡ ಎಚ್ಚರಿಕೆಯಿಂದ ಇರಬೇಕು, ಸಮಾಜ ವಿರೋಧಿ ಚಟುವಟಿಕೆಗಳು ನಡೆಯುತ್ತಿರುವ ಸೂಕ್ಷ್ಮತೆ ತಿಳಿದು ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ನಮ್ಮೂರು ಸಮಾಜು ಘಾತುಕ ಶಕ್ತಿಗಳ ಅಡುಗುತಾಣಗಳಾಗುವುದನ್ನು ತಪ್ಪಿಸಬಹುದು.