ಮಲ್ಲಾಪುರದಲ್ಲಿ ಉರುಸು: ಹೊನಲು ಬೆಳಕಿನ ಕಬಡ್ಡಿ
ಎಂ.ಮಲ್ಲಾಪುರ(ಗೋಕಾಕ) : ಇಲ್ಲಿನ ಮಾಜಿ ಹಾಗೂ ಹಾಲಿ ಸೈನಿಕರ ಸಂಘ ಹಾಗೂ ಮಹಾತ್ಮಾ ಗಾಂಧಿ ಕಬಡ್ಡಿ ತಂಡದ ಸಂಯುಕ್ತ ಆಶ್ರಯದಲ್ಲಿ ಗ್ರಾಮದ ಪೀರಾನಪೀರ ಮದಾರಸಾಹೇಬರ ಉರುಸ್ನ ಅಂಗವಾಗಿ ಏರ್ಪಡಿಸಿದ್ದ ಹೊನಲು ಬೆಳಕಿನ 55 ಕೆಜಿ ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ಹುಕ್ಕೇರಿ ತಾಲೂಕು ಬಸ್ಸಾಪುರ ಗ್ರಾಮದ ಮಹಾಲಕ್ಷ್ಮಿ ಕಬಡ್ಡಿ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಅಂತಿಮ ಹಂತದವರೆಗೂ ತೀವ್ರ ಜಿದ್ದಾಜಿದ್ದಿನ ಹೋರಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಧಾರವಾಡ ಜಿಲ್ಲೆ ಅಳ್ನಾವರದ ನ್ಯೂ ಬಾಯ್ಸ್ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆಯಿತು. ಪಾಮಲದಿನ್ನಿ ಕ್ರಾಸ್ ತಂಡ ಮೂರನೇ ಸ್ಥಾನ ಹಾಗೂ ಮಲ್ಲಾಪುರದ ಮಹಾತ್ಮಾ ಗಾಂಧಿ ತಂಡ ನಾಲ್ಕನೇ ಬಹುಮಾನ ಪಡೆಯಿತು.
ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ರಾಜ್ಯ ಹಾಗೂ ಹೊರರಾಜ್ಯದ ೩೦ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿದ್ದವು. ಮಹಾರಾಷ್ಟç ಕೊಲ್ಲಾಪುರದ ಬೀರದೇವ ತಂಡ ಹಾಗೂ ಗದಗ ಜಿಲ್ಲೆಯ ತಂಡಗಳು ಕಡೆಯವರೆಗೂ ಉತ್ತಮ ಪ್ರದರ್ಶನ ನೀಡಿದವು.
ರಮೇಶ ಬೊಂಬ್ರಿ ಉತ್ತಮ ದಾಳಿಗಾರ, ಸಿದ್ದು ಪಾಮಲದಿನ್ನಿ ಉತ್ತಮ ಹಿಡಿತಗಾರ, ಬಸ್ಸಾಪುರದ ಆಶಿಪ್ ಸರ್ವೋತ್ತಮ ಆಟಗಾರ ಪ್ರಶಸ್ತಿ ಪಡೆದುಕೊಂಡರು. ವಿಜೇತರಿಗೆ ನಗದು ಬಹುಮಾನ, ಆಕರ್ಷಕ ಟ್ರೋಫಿ ವಿತರಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಬಸವರಾಜ ದಾಸರ, ನಿವೃತ್ತ ಮುಖ್ಯಾಧ್ಯಾಪಕ ಗಿರೆಪ್ಪ ಬೋಂಬ್ರಿ, ಚಂದ್ರಪ್ಪ ಗಸ್ತಿ, ರಾಜು ಹುಕ್ಕೇರಿ, ಟೂರ್ನಿ ಆಯೋಜಕರಾದ ಅಪ್ಪಣ್ಣ ಪೋಡಿ, ಚಂದ್ರು ಬೋಂಬ್ರಿ, ಮುಸಲ್ಮಾರಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಮುಖ್ಯಾಧ್ಯಾಪಕ ಕಾಡಗೌಡ ಮಣಗುತ್ತಿ, ಅಡಿವೆಪ್ಪ ಮಾಸ್ತಿ, ಪತ್ರಕರ್ತ ವಸಂತಗೌಡ ಪಾಟೀಲ, ಭೀಮಸಿ ಬೋಂಬ್ರಿ ಮೊದಲಾದವರು ಉಪಸ್ಥಿತರಿದ್ದರು. ಮೊದಲ ದಿನ ತವಗದ ಬಾಳಯ್ಯಸ್ವಾಮಿ ಮಠದ ಸಿದ್ದಲಿಂಗ ಸ್ವಾಮಿಗಳು ಟೂರ್ನಿಗೆ ಚಾಲನೆ ನೀಡಿದರು.