For the best experience, open
https://m.samyuktakarnataka.in
on your mobile browser.

ಮಳೆಗೆ ಬಿಹಾರ, ಪ. ಬಂಗಾಳ ತತ್ತರ

10:04 PM Sep 29, 2024 IST | Samyukta Karnataka
ಮಳೆಗೆ ಬಿಹಾರ  ಪ  ಬಂಗಾಳ ತತ್ತರ

ನವದೆಹಲಿ: ಬಿಹಾರ, ಪಶ್ಚಿಮಬಂಗಾಳ ಸೇರಿದಂತೆ ಉತ್ತರ ಭಾರತದ ಹಲವೆಡೆ ಹಾಗೂ ನೆರೆಯ ನೇಪಾಳದಲ್ಲಿ ಭಾರಿ ಮಳೆ ಹಾಗೂ ಪ್ರವಾಹದಿಂದ ಜನರು ತತ್ತರಿಸಿದ್ದಾರೆ. ನೇಪಾಳದಲ್ಲಿ ಈ ಪ್ರಾಕೃತಿಕ ವಿಕೋಪಕ್ಕೆ ಬಲಿಯಾದವರ ಸಂಖ್ಯೆ ೧೪೮ಕ್ಕೇರಿದೆ.
ಬಿಹಾರದಲ್ಲಿ ಧಾರಾಕಾರ ಮಳೆಯ ನಂತರ ಕೋಸಿ ನದಿಯ ಬೀರ್‌ಪುರ ಬ್ಯಾರೇಜ್‌ನಿಂದ ಗಮನಾರ್ಹ ಪ್ರಮಾಣದ ನೀರು ಹೊರಬಿಟ್ಟಿರುವುದರಿಂದ ರಾಜ್ಯದ ಉತ್ತರ ಹಾಗೂ ಮಧ್ಯಭಾಗದಲ್ಲಿ ಪ್ರವಾಹ ಉಂಟಾಗಿದೆ. ಹಲವು ಜಿಲ್ಲೆಗಳಲ್ಲಿ ರೈಲು ಹಳಿಗಳಿಗೆ ನೀರು ನುಗ್ಗಿರುವುದರಿಂದ ರೈಲುಗಳ ಸಂಚಾರಕ್ಕೆ ತೊಡಕಾಗಿದೆ. ಕೋಸಿ ನದಿಯ ಪ್ರವಾಹದಿಂದಾಗಿ ಅಪಾರ ಸಂಖ್ಯೆಯ ಜನರು ತೊಂದರೆಗೆ ಸಿಲುಕಿದ್ದಾರೆ. ಕೋಸಿ ಬ್ಯಾರೇಜ್ ಬಳಿ ಮುನ್ನೆಚ್ಚರಿಕಾ ಕ್ರಮವಾಗಿ ಹಲವಾರು ರಸ್ತೆಗಳನ್ನು ಮುಚ್ಚಲಾಗಿದೆ. ನೇಪಾಳ ಸರ್ಕಾರ ಗಂಡಕಿ ನದಿಯ ಬ್ಯಾರೇಜ್‌ನಿಂದ ೫.೪೦ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವುದರಿಂದ ನದಿಗಳ ನೀರಿನ ಮಟ್ಟ ಹೆಚ್ಚಿದೆ. ಅರಾರಿಯಾ, ಸುಪೌಲ್, ಕತಿಹಾರ್ ಸೇರಿದಂತೆ ಅನೇಕ ಜಿಲ್ಲೆಗಳ ತಗ್ಗುಪ್ರದೇಶಗಳಲ್ಲಿ ನೀರು ತುಂಬಿಕೊಂಡಿರುವುದರಿಂದ ಸಾವಿರಾರು ಜನರನ್ನು ಪರಿಹಾರ ಶಿಬಿರಗಳಿಗೆ ಕಳುಹಿಸಲಾಗಿದೆ. ೧೩ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಗಂಗಾ ನದಿ ದಂಡೆಯಲ್ಲಿರುವ ೧೩ ಲಕ್ಷ ಜನರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ
ಡಾರ್ಜಿಲಿಂಗ್ ಬೆಟ್ಟದಲ್ಲಿ ಭೂಕುಸಿತ
ಪಶ್ಚಿಮಬಂಗಾಳದಲ್ಲಿ ಉತ್ತರ ಭಾಗವು ಪ್ರವಾಹದಿಂದ ತತ್ತರಿಸಿದೆ. ಕೂಚ್ ಬಿಹಾರ್, ಜಲಪೈಗುರಿ, ಅಲಿಪುರ್ದೂರ್ ನಂತಹ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಕೋಸಿ ನದಿಯ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ಬಿಹಾರ, ಮಾಲ್ಡಾ ಹಾಗೂ ಬಂಗಾಳದ ದಕ್ಷಿಣ ದಿನಾಜ್‌ಪುರ ಜಿಲ್ಲೆಗಳ ಜನರು ತೊಂದರೆಗೀಡಾಗಲಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೊಂಡಿದ್ದಾರೆ. ಡಾರ್ಜಿಲಿಂಗ್ ಬೆಟ್ಟದಲ್ಲಿ ಭೂಕುಸಿತದಿಂದ ಹಾನಿಗೊಳಗಾಗಿವೆ. ಸೇನೆಯ ಸಹಾಯದಿಂದ ರಸ್ತೆ ಸಂಪರ್ಕವನ್ನು ಮರುಸ್ಥಾಪಿಸಲು ಪ್ರಯತ್ನಗಳು ಮುಂದುವರಿದಿವೆ.
ದಾಖಲೆ ಮಳೆ: ಕಠ್ಮಂಡು ಜನರಿಗೆ ಸಂಕಷ್ಟ
ನೆರೆಯ ನೇಪಾಳದಲ್ಲಿ ಶನಿವಾರ ದಾಖಲೆ ೩೨೩ ಮಿಲಿಮೀಟರ್ ಮಳೆ ಸುರಿದ ನಂತರ ೧೪೮ ಜನರು ಬಲಿಯಾಗಿದ್ದು ೫೯ ಜನರು ಕಾಣೆಯಾಗಿದ್ದಾರೆ. ೧೦೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ೪೦ ಲಕ್ಷ ಜನರಿರುವ ಕಠ್ಮಂಡು ಕಣಿವೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಬಾಗಮತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕಠ್ಮಂಡುವಿಗೆ ತೆರಳುವ ಹಾದಿಯಲ್ಲಿ ಭೂಕುಸಿತಕ್ಕೆ ಸಿಲುಕಿದ ಎರಡು ಬಸ್ಸುಗಳ ಮೇಲೆ ಬಿದ್ದ ಮಣ್ಣನ್ನು ತೆಗೆದು ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ಸಾಗಿದೆ. ಕಠ್ಮಂಡುವಿನಲ್ಲಿ ೨೨೬ ಮನೆಗಳು ಪ್ರವಾಹದ ನೀರಿನಲ್ಲಿ ಮುಳುಗಡೆಯಾಗಿವೆ.