ಮಳೆಗೆ ಮೇಲ್ಸೇತುವೆ ಸ್ಲ್ಯಾಬ್ ತುಂಡು ಕುಸಿತ
ಪಣಜಿ: ಭಾರೀ ಮಳೆಗೆ ಅಗಶಿಯಿಂದ ಜುವಾರಿ ಹೊಸ ಸೇತುವೆಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆಯ ಜಂಟಿ ಸ್ಲ್ಯಾಬ್‌ನ ತುಂಡುಗಳು ಕುಸಿದಿವೆ. ಈ ಘಟನೆಯಿಂದ ಸ್ಥಳೀಯರಲ್ಲಿ ಭಯ ಆವರಿಸಿದೆ.
ಶನಿವಾರ ರಾತ್ರಿ ರಾಜ್ಯದ ವಿವಿಧೆಡೆ ಬಿರುಗಾಳಿ ಸಹಿತ ಮಳೆಯಾಗಿದೆ. ಇದರಿಂದಾಗಿ ಅಗಸಿಯಿಂದ ಹೊಸ ಜುವಾರಿ ಸೇತುವೆಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆಯ ಜಂಟಿ ಸ್ಲ್ಯಾಬ್‌ನ ತುಂಡುಗಳು ಕುಸಿದಿವೆ. ರಸ್ತೆಯಲ್ಲಿ ವಾಹನ ಸಂಚಾರದ ವೇಳೆ ಸ್ಲ್ಯಾಬ್‌ಗಳು ಈ ರೀತಿ ಬಿದ್ದು ಅನಾಹುತ ಸಂಭವಿಸುವ ಆತಂಕ ಮನೆ ಮಾಡಿದೆ. ಈ ಸ್ಲ್ಯಾಬ್ ಥರ್ಮೋಸೆಲ್ ಪ್ಯಾಕಿಂಗ್ ಹೊಂದಿದೆ. ಸ್ಲ್ಯಾಬ್‌ಗಳು ಸಡಿಲಗೊಂಡು ಕುಸಿಯುತ್ತಿವೆ ಎಂದು ಲೋಕೋಪಯೋಗಿ ಇಲಾಖೆ(ಪಿಡಬ್ಲ್ಯುಡಿ) ಎಂಜಿನಿಯರ್‌ಗಳಿಗೆ ನಾವು ಪದೇ ಪದೇ ತಿಳಿಸುತ್ತಿದ್ದೇವೆ. ಆದರೆ ಅವರು ನಿರ್ಲಕ್ಷಿಸುತ್ತಿದ್ದಾರೆ ಎಂದು ಸ್ಥಳೀಯ ಸುಕಾರಿನ್ ಗೊನ್ಸಾಲ್ವಿಸ್ ದೂರಿದ್ದಾರೆ.
ಮೇಲ್ಸೇತುವೆ ನಿರ್ಮಿಸುವಾಗ ಈ ಸೇತುವೆಯ ಕಾಮಗಾರಿ ಸರಿಯಾಗಿ ನಡೆದಿಲ್ಲ. ಸೇತುವೆಯಿಂದ ಮಳೆ ನೀರು ಸ್ಥಳೀಯರ ಮನೆಗಳ ಮೇಲೆ ಬೀಳದಂತೆ ಪೈಪ್‌ಗಳನ್ನು ಹಾಕಲಾಗಿದೆ. ಆದರೆ ಈ ಪೈಪ್‌ಗಳು ಕೆಲವೆಡೆ ಸೋರುತ್ತಿವೆ. ಇದರಿಂದ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಗಳು ಕೂಡಲೇ ಈ ಬಗ್ಗೆ ಗಂಭೀರ ಗಮನ ಹರಿಸಿ ಪೈಪ್ ಬದಲಾಯಿಸಿ ಬೇಕು. ಜಂಟಿ ಸ್ಲ್ಯಾಬ್ ಕುಸಿಯದಂತೆ ಕ್ರಮಕೈಗೊಳ್ಳಬೇಕು ಎಂದು ಗೊನ್ಸಾಲ್ವಿಸ್ ಒತ್ತಾಯಿಸಿದ್ದಾರೆ.