For the best experience, open
https://m.samyuktakarnataka.in
on your mobile browser.

ಮಳೆಯಿಂದ ಬೆಳೆ ಹಾನಿಗೆ ರೈತರಿಗೆ ಸೂಕ್ತ ಪರಿಹಾರ ನೀಡಲು ಆಗ್ರಹ

01:15 PM Oct 17, 2024 IST | Samyukta Karnataka
ಮಳೆಯಿಂದ ಬೆಳೆ ಹಾನಿಗೆ ರೈತರಿಗೆ ಸೂಕ್ತ ಪರಿಹಾರ ನೀಡಲು ಆಗ್ರಹ

ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ. ಮನೆಗಳಿಗೆ ನೀರು ನುಗ್ಗಿದೆ. ಒಂದು ಮಗು ನೀರಿನಲ್ಲಿ ಕೊಚ್ಚಿ ಹೋಗಿ ಸಾವಿಗೀಡಾಗಿದೆ. ಎಲ್ಲ ತಾಲೂಕುಗಳಲ್ಲಿ ಬೆಳೆ ನಾಶವಾಗಿದೆ. ರಾಜ್ಯ ಸರ್ಕಾರ ಕೂಡಲೇ ಬೆಳೆ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಈ ಕುರಿತು ಸರಣಿ ಎಕ್ಸ್ ಮಾಡಿರುವ ಅವರು, ನಿರಂತರ ಮಳೆಯಿಂದಾಗಿ ಮನೆಗಳು ಬಿದ್ದಿದ್ದು, ಮನೆ ಕಳೆದುಕೊಂಡವರಿಗೆ ಕೂಡಲೆ ಪರಿಹಾರದ ಹಣ ಬಿಡುಗಡೆ ಮಾಡಬೇಕು. ಹಾಗೂ ಮನೆ ಕಳೆದುಕೊಂಡವರಿಗೆ ಸಾಂತ್ವನ ಕೇಂದ್ರ ತೆರೆದು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಹಲವು ಗ್ರಾಮಗಳ ಸಂಪರ್ಕ ರಸ್ತೆ ಕಳೆದು ಹೋಗಿದೆ ಕೂಡಲೆ ಸಂಪರ್ಕ ಕಲ್ಪಿಸುವ ಕೆಲಸವನ್ನು ಆರ್ ಡಿಪಿಆರ್ ಮತ್ತು ಪಿಡಬ್ಲ್ಯುಡಿ ಇಲಾಖೆಗೆ ಸೂಚನೆ ನೀಡಬೆಕು. ನಾನು ಈಗಾಗಲೇ ಹಾವೇರಿ ಜಿಲ್ಲಾಧಿಕಾರಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಅವರು ಕೂಡಲೇ ಕ್ರಮ ಕೈಗೊಳ್ಳುವ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ.
ಬರಗಾಲ ಸಂದರ್ಭದಲ್ಲಿ ರಾಜ್ಯ ಸರ್ಕಾರ ರೈತರಿಗೆ ಯಾವುದೇ ಪರಿಹಾರ ನೀಡಿಲ್ಲ. ಈಗಲೂ ಅದೇ ರೀತಿ ಮಾಡದೇ ಕೂಡಲೇ ರೈತರಿಗೆ ಬೆಳೆ ನಷ್ಟ ಪರಿಹಾರ ಒದಗಿಸಬೇಕು. ರೈತರ ಹಿತ ಕಾಯಲು ರಾಜ್ಯ ಸರ್ಕಾರ ಕೇಂದ್ರದತ್ತ ನೋಡದೇ ಮೊದಲು ಪರಿಹಾರ ನೀಡಬೇಕು. ನಂತರ ಕೇಂದ್ರ ಸರ್ಕಾರದಿಂದ ಪರಿಹಾರ ಪಡೆಯಲು ಅವಕಾಶ ಇದೆ ಎಂದು ಹೇಳಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳು ಕೂಡಲೇ ಹಾವೇರಿ ಜಿಲ್ಲೆಯ ಪ್ರವಾಹ ಪರಿಸ್ಥಿತಿ ಬಗ್ಗೆ ಗಮನ ಹರಿಸಿ ಜಿಲ್ಲಾಧಿಕಾರಿ ಬಳಿ ಇರುವ ರಾಷ್ಟ್ರೀಯ ವಿಪತ್ತು ನಿರ್ವಹಣ ನಿಧಿಯಿಂದ ಕೂಡಲೇ ಹಣ ಬಿಡುಗಡೆಗೆ ಆದೇಶ ಮಾಡಬೇಕು. ಮತ್ತು ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಬಾಲಕ ನಿವೇದನ್ ಸಾವಿಗೆ ಕೂಡಲೆ ಅವರ ಕುಟುಂಬ ವರ್ಗಕ್ಕೆ ಪರಿಹಾರ ನೀಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಬೇಕು. ಈಗಾಲೇ ಮುಂಗಾರು ಕಳೆದುಕೊಂಡ ರೈತರಿಗೆ ಸಮಯ ವ್ಯರ್ಥ ಮಾಡದೇ ಪರಿಹಾರ ಕೈಗೊಳ್ಳಲು ಆಗ್ರಹ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

Tags :