ಮಳೆ ಅವಾಂತರ: ಮನೆಗೋಡೆ ಕುಸಿದು ಮಹಿಳೆ ಸಾವು
ಯಾದಿಗಿರಿ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಅಲ್ಲಲ್ಲಿ ಮನೆಗಳು ಭಾಗಶಃ ಹಾನಿಯಾಗಿದ್ದು, ಶಹಾಪುರ ತಾಲೂಕಿನ ಹುರಸಗುಂಡಿಗಿ ಹಳೆ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಓರ್ವ ಮಹಿಳೆ ಸಾವನಪ್ಪಿರುವ ಘಟನೆ ನಡೆದಿದೆ.
ಕಳೆದ ಶನಿವಾರ ಸಂಜೆಯಿಂದ ಭಾನುವಾರ ರಾತ್ರಿಯ ವರೆಗೆ ನಿರಂತರ ಸುರಿದ ಮಳೆಗೆ ಹಳೆಯ ಮನೆಗಳು ತೇವಾಂಶದಿಂದಾಗಿ ಕುಸಿಯುತ್ತಿವೆ. ಜಿಲ್ಲೆಯಲ್ಲಿ ಭಾನುವಾರದ ಸಂಜೆಯ ವರೆಗಿನ ವರದಿ ಪ್ರಕಾರ ಜಿಲ್ಲೆಯಲ್ಲಿ ೧೦-೧೫ ಮನೆಗಳು ಭಾಗಶಃ ಹಾನಿಯಾಗಿವೆ. ಹುರಸಗುಂಡಗಿ ಹಳೆ ಗ್ರಾಮದಲ್ಲಿ ಮನೆಯ ಕಟ್ಟೆಯ ಮೇಲೆ ಕುಳಿತಿದ್ದ ಶಕಿನಾಬಿ ಗಂಡ ಮಹೆಬೂಬ ಪಿಂಜಾರ(೭೦) ಈಕೆಯ ಮೇಲೆ ಮನೆಯ ಗೋಡೆ ಕಸಿದು ಬಿದ್ದಿದ್ದು ತೀವ್ರ ಗಾಯಗೊಂಡಿದ್ದಳು ಎನ್ನಲಾಗಿದೆ. ತಕ್ಷಣ ಈಕೆಯನ್ನು ಯಾದಗಿರಿಯ ಜಿಲ್ಲಾಸ್ಪತ್ರೆಗೆ ಕರೆ ತರಲಾಗಿತ್ತು. ಇಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮಹಿಳೆ ಸಾವನಪ್ಪಿದ್ದಾಳೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.
ನಿರಂತರ ಮಳೆಗೆ ಹಳ್ಳಕೊಳ್ಳಗಳು ಭರ್ತಿಯಾಗಿವೆ. ಪಗಲಾಪುರ ಮತ್ತು ಕೊಯಿಲೂರ ಸೇತುವೆಗಳ ಮೇಲೆ ನೀರು ಹರಿಯುತ್ತಿದೆ. ಹೊಲಗದ್ದೆಗಳಲ್ಲಿನ ಬೆಳೆ ಜಲಾವೃತವಾಗಿದ್ದು ರೈತರನ್ನು ಚಿಂತೆಗೀಡು ಮಾಡಿದೆ. ಹೊಸಳ್ಳಿ ರಸ್ತೆಯಿಂದ ರೈಲ್ವೆ ನಿಲ್ದಾಣದ ಡಂಪಿಂಗ್ ಯಾರ್ಡಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನೀರು ಸಂಗ್ರಹವಾಗಿ ನಿಂತು ಕೆಲ ಹೊತ್ತು ಸ್ಥಗಿತವಾಗಿತ್ತು.
ತೆಲಂಗಾಣ ಗಡಿಯ ತೋರಣತಿಪ್ಪ ಗ್ರಾಮದ ಬಳಿಯ ಮುಖ್ಯ ರಸ್ತೆಯಲ್ಲಿ ದೊಡ್ಡ ಗಾತ್ರದ ಮರಗಳು ನೆಲಕ್ಕೆ ಉರುಳಿ ಬಿದ್ದಿವೆ.