ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮಳೆ-ಮೇಘಸ್ಫೋಟ: ತಕ್ಷಣ ನೆರವಿಗೆ ಬರಬೇಕಿದೆ ಸರ್ಕಾರ

02:26 AM Oct 19, 2024 IST | Samyukta Karnataka

ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಕಳೆದ ಒಂದು ವಾರದ ನಿರಂತರ ಮಳೆ ಮತ್ತು ಮೇಘಸ್ಫೋಟದಿಂದಾಗಿ ಜನಜೀವನ ಹೇಳತೀರದಷ್ಟು ಅಸ್ತವ್ಯಸ್ತಗೊಂಡಿದೆ. ಮಿತಿಮೀರಿ ಸುರಿದಿದ್ದ ಮುಂಗಾರಿನಿಂದ ಚೇತರಿಸಿಕೊಳ್ಳುವ ಮುನ್ನವೇ ನಾಡಿಗೆ ಚಂಡಮಾರುತದ ಮಳೆಯ ಹೊಡೆತ ಬಿದ್ದಿದೆ. ಮೊದಲೇ ಸಾಕಷ್ಟು ಹಾಳಾಗಿದ್ದ ಬೆಳೆಗೆ ಈ ಅನಗತ್ಯ ವರುಣಾರ್ಭಟವೂ ಸೇರಿ, ಹಿಂಗಾರು ಬಿತ್ತನೆಯಾಗಿರುವ ಮತ್ತು ಇದಕ್ಕಾಗಿ ಸಿದ್ಧತೆಯಲ್ಲಿರುವ ಪ್ರದೇಶ ಬಹುಪಾಲು ಹಸಿ ಬರ'ಕ್ಕೆ ತುತ್ತಾಗಿದೆ. ಕಿತ್ತೂರು ಪ್ರಾಂತ್ಯದಲ್ಲಿ ಪ್ರಸಕ್ತ ವರ್ಷ ಮುಂಗಾರು ಮಳೆ ಅಗತ್ಯಕ್ಕಿಂತ ಹೆಚ್ಚೇ ಎನಿಸುವಷ್ಟು ಸುರಿದು, ನೀರು ಮತ್ತು ಅಂತರ್ಜಲ ಬರವನ್ನು ನೀಗಿಸಿತ್ತಾದರೂ, ಅನೇಕ ಕಡೆಗಳಲ್ಲಿ ಬೆಳೆ ಹಾನಿಗೆ ಕಾರಣವಾಗಿತ್ತು. ಕೆಲ ಬಯಲು ಪ್ರದೇಶಗಳಲ್ಲಿ ಮಾತ್ರ ಉತ್ತಮ ಬೆಳೆ ಬಂದಿತ್ತು. ಹೆಸರು ಬೆಳೆ ಕಟಾವು ಮಾತ್ರ ಮುಗಿದಿದ್ದು, ಶೇಂಗಾ ಬಿಡಿಸುವ ಪ್ರಕ್ರಿಯೆ ಅರ್ಧದಷ್ಟು ಮಾತ್ರ ಪೂರ್ಣಗೊಂಡಿತ್ತು. ಇನ್ನೂ ತೆಗೆಯಬೇಕಾಗಿರುವ ಶೇಂಗಾ ಬಳ್ಳಿಗಳು ಈಗ ನೀರಿನಲ್ಲಿ ಮುಳುಗಿ ಕೊಳೆಯುತ್ತಿವೆ. ಹಾಗೆಯೇ ಅನೇಕ ರೈತರು ಕಟಾವು ಮಾಡಿ ತಮ್ಮ ಹೊಲಗಳಲ್ಲಿಯೇ ರಾಶಿ ಮಾಡಿದ್ದ ಶೇಂಗಾ ದಾಸ್ತಾನು ಕೊಚ್ಚಿ ಹೋಗಿದೆ. ಇಷ್ಟಾದರೂ ಸರ್ಕಾರದಿಂದ ಯಾವುದೇ ಸ್ಪಂದನೆ ಕಾಣದಂತಾಗಿದೆ. ಮುಂಗಾರು ಮಳೆ ಹಾನಿಗೂ ಸರಿಯಾದ ಪರಿಹಾರ ಬರುವ ಮುನ್ನವೇ ಚಂಡಮಾರುತ ಮಳೆಯ ಹಾವಳಿ ಅನುಭವಿಸಿದ ರೈತರ ನೆರವಿಗೆ ಇದುವರೆಗೆ ಸಕಾರಾತ್ಮಕ ಮಾತುಗಳು ಆಡಳಿತ ವಲಯದಿಂದ ಬಂದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರುಗಳಾಗಲೀ, ಉಸ್ತುವಾರಿ ಕಾರ್ಯದರ್ಶಿಗಳಾಗಲೀ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ನಗರ-ಪಟ್ಟಣ ಪ್ರದೇಶಗಳ ಮೂಲ ಸೌಕರ್ಯಗಳು ಸಂಪೂರ್ಣ ಹಾಳಾಗಿ, ಮನೆಗಳನ್ನು ಕಳೆದುಕೊಂಡು, ನಾಗರಿಕರು ಪರಿತಾಪ ಪಡುತ್ತಿರುವುದಕ್ಕೆ ಕನಿಷ್ಠ ಸಹಾನುಭೂತಿಯೂ ವ್ಯಕ್ತವಾಗಿಲ್ಲ. ಪ್ರಕೃತಿಯ ಮುನಿಸು ತಡೆಯಲಾಗದು ಎಂಬುದೊಂದೇ ಸರ್ಕಾರದ ಸಮರ್ಥನೆಯಾಗಬಾರದು. ಇನ್ನಾದರೂ ತಡಮಾಡದೇ ಮಳೆ ಹಾನಿ ಪೀಡಿತ ರೈತರು ಮತ್ತು ಮೂಲಭೂತ ಸೌಕರ್ಯಗಳಿಗೆ ಧಕ್ಕೆಯಾದ ಎಲ್ಲ ಪ್ರದೇಶಗಳ ನೆರವಿಗೆ ಧಾವಿಸಬೇಕು. ಕೂಡಲೇ ಪರಿಹಾರ ಕ್ರಮಗಳನ್ನು ಆರಂಭಿಸಬೇಕು. ಸಂಬಂಧಿಸಿದ ಜಿಲ್ಲಾಡಳಿತಗಳಿಂದ ಮಾಹಿತಿ ಪಡೆದು ಸಮರೋಪಾದಿಯಲ್ಲಿ ಕಾರ್ಯಾಚರಣೆಗೆ ಇಳಿಯಬೇಕು. ಉತ್ತರ ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಬೆಳೆಯುವ ಮೆಕ್ಕೆಜೋಳದ ಕಟಾವು ಇನ್ನಷ್ಟೇ ಆಗಬೇಕಾಗಿತ್ತು. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಮೆಕ್ಕೆ ಜೋಳವನ್ನು ಚಂಡಮಾರುತದ ಮಳೆ ಆಹುತಿ ಪಡೆದಿದೆ. ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಗಳೆರಡರಲ್ಲೂ ಒಂದಾದ ಮೇಲೊಂದರಂತೆ ವಾಯುಭಾರ ಕುಸಿತ ಸಂಭವಿಸಿದ್ದು ಬಹುಶಃ ಈಚಿನ ದಶಕಗಳಲ್ಲಿ ಇದೇ ಮೊದಲು. ಹೀಗಾಗಿ ಜೋಳ ಬೆಳೆದು ನಿಂತಿದ್ದ ಹೊಲಗಳನ್ನೆಲ್ಲ ಕೆರೆಯನ್ನಾಗಿಸಿ, ಬೆಳೆ ಕೈಗೆಟುಕದೇ ಹೋಗಿದೆ. ಕಾರ್ನ್'ಗೆ ವೈದ್ಯಕೀಯ ಮಹತ್ವ ಬಂದು, ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು ಎಂಬುದಾಗಿ ಪರಿಗಣಿತವಾದ ನಂತರ ಗೋವಿನ ಜೋಳ ಉತ್ತರ ಕರ್ನಾಟಕದ ಪ್ರಧಾನ ವಾಣಿಜ್ಯ ಬೆಳೆಯಾಗಿತ್ತು. ಬೇರೆ ಬೆಳೆಗಳನ್ನು ಬೆಳೆಯುತ್ತಿದ್ದ ಸಾವಿರಾರು ರೈತರು ಕೂಡ ಗೋವಿನ ಜೋಳ ಕೃಷಿಗೆ ಇಳಿದಿದ್ದರು. ಈಗ ಮಿತಿಮೀರಿದ ಮುಂಗಾರಿನಿಂದ ಆದ ನಷ್ಟ ಹಾಗೂ ವಾಯುಭಾರ ಕುಸಿತದ ಪರಿಣಾಮ ಸುರಿದ ಮಳೆಯ ಪ್ರಕೋಪ ಎರಡೂ ಸೇರಿಕೊಂಡು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಬಿತ್ತನೆಯಾಗಿ ಸಸಿಯ ಹಂತದಲ್ಲಿರುವ ಹಿಂಗಾರು ಹತ್ತಿ, ಮೆಣಸಿನ ಕಾಯಿ ಮತ್ತು ಕಡಲೆ ನೆಲಕಚ್ಚಿವೆ. ಹೀಗಾಗಿ ಮುಂಗಾರು ಮತ್ತು ಹಿಂಗಾರು ಎರಡೂ ಬೆಳೆಗಳು ಉತ್ತರ ಕರ್ನಾಟಕದ ರೈತನಿಗೆ ಕೈಕೊಟ್ಟಂತಾಗಿದೆ.
ಪ್ರಾಂತ್ಯದ ಮಲೆ ಮತ್ತು ಕಡಲ ಸೀಮೆಯ ಉತ್ತರ ಕನ್ನಡ ಜಿಲ್ಲೆಯ ತೋಟಗಾರಿಕೆ ಬೆಳೆ ಕೂಡ ಮಳೆಯಿಂದಾಗಿ ಕೈಗೆಟುಕದೇ ಹೋಗಿದೆ. ಇಲ್ಲಿನ ಪ್ರಧಾನ ವಾಣಿಜ್ಯ ಬೆಳೆಯಾಗಿರುವ ಅಡಕೆಗೆ ಕೊಳೆರೋಗ, ಹಳದಿ ಎಲೆ ರೋಗ ಹಾಗೂ ಎಲೆಚುಕ್ಕಿ ರೋಗಳು ಆವರಿಸಿದ್ದು ರಾಜ್ಯ ಆರ್ಥಿಕತೆಯ ಮುಖ್ಯ ಕೊಂಡಿಯೊಂದು ಪ್ರಕೃತಿ ಹೊಡೆತದಿಂದ ಕತ್ತರಿಸಿದೆ. ಗಾಯದ ಮೇಲೆ ಬರೆ ಎಳೆದಂತೆ ವಿದೇಶಿ ಅಡಕೆ ಆಮದಿಗೆ ಕೇಂದ್ರ ಸರ್ಕಾರ ನಿರ್ಧರಿಸಿರುವುದು ಬೆಳೆಗಾರರನ್ನು ಇನ್ನಷ್ಟು ತೊಂದರೆಗೆ ಸಿಲುಕಿಸಿದೆ. ಉತ್ತರ ಕರ್ನಾಟಕದ ಕೇಂದ್ರ ಸ್ಥಾನ ಹಾಗೂ ರಾಜ್ಯದ ಎರಡನೇ ಮಹಾನಗರ ಎನಿಸಿಕೊಳ್ಳುವ ಹುಬ್ಬಳ್ಳಿ-ಧಾರವಾಡವೊಂದರಲ್ಲೇ, ಪ್ರಾಥಮಿಕ ಅಂದಾಜಿನ ಪ್ರಕಾರ ೬೦೦ ಕಿಮೀಗೂ ಹೆಚ್ಚು ರಸ್ತೆ ಹಾಳಾಗಿದೆ. ದೇಶದ ಪ್ರಮುಖ ಹೆದ್ದಾರಿಗಳು ಸೇರುವ ಏಕೈಕ ದೊಡ್ಡ ಸರ್ಕಲ್ ಆಗಿರುವ ಹುಬ್ಬಳ್ಳಿ ಹೃದಯವಾದ ಕಿತ್ತೂರು ಚನ್ನಮ್ಮ ಸರ್ಕಲ್‌ನಲ್ಲಿಯೇ ರಸ್ತೆಯ ಅವ್ಯವಸ್ಥೆ ಹೇಳತೀರದು. ಸಿಮೆಂಟ್ ರಸ್ತೆ ಜಾಲ ಕೂಡ ಹಲವೆಡೆ ಹಾಳಾಗಿದೆ. ಇದುವರೆಗೆ ಮಳೆ ಅಭಾವದಿಂದ ಬಳಲುತ್ತಿದ್ದ ಉತ್ತರ ಕರ್ನಾಟಕದ ಜನ ಅತಿವೃಷ್ಟಿಯಿಂದ ಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ನಮ್ಮ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಉತ್ತರ ಕರ್ನಾಟಕದ ಜನ ಬಯಸುತ್ತಿದ್ದಾರೆ. ಜನಪ್ರತಿನಿಧಿಗಳು ಜನರ ಕಣ್ಣೀರು ಒರೆಸುವ ಕೆಲಸವನ್ನು ಈಗಲಾದರೂ ಕೈಗೊಳ್ಳುವುದು ಸೂಕ್ತ.

Next Article