For the best experience, open
https://m.samyuktakarnataka.in
on your mobile browser.

ಮಸೀದಿ ಎದುರು ಅಡುಗೆಗೆ ಆಕ್ಷೇಪ, ಉದ್ವಿಗ್ನ

11:37 PM Apr 07, 2024 IST | Samyukta Karnataka
ಮಸೀದಿ ಎದುರು ಅಡುಗೆಗೆ ಆಕ್ಷೇಪ  ಉದ್ವಿಗ್ನ

ಸಾಗರ: ಇಲ್ಲಿನ ಇತಿಹಾಸ ಪ್ರಸಿದ್ಧ ಮಹಾಗಣಪತಿ ದೇವಸ್ಥಾನದ ಪಕ್ಕ ಇರುವ ಮಸೀದಿಯ ಮುಂದುಗಡೆ ಶನಿವಾರ ರಾತ್ರಿ ಅಡುಗೆ ಮಾಡುತ್ತಿದ್ದಾರೆ. ಇದರಿಂದ ಪಕ್ಕದಲ್ಲಿಯೇ ಇರುವ ದೇವಸ್ಥಾನಕ್ಕೆ ಅಪವಿತ್ರವಾಗುತ್ತದೆ ಎಂದು ಹಿಂದೂ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೆಲವು ಕಾಲ ಗಣಪತಿ ದೇವಸ್ಥಾನ ಸಮೀಪ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಸಕಾಲಕ್ಕೆ ಸರಿಯಾಗಿ ಆಗಮಿಸಿದ್ದರಿಂದ ಉದ್ವಿಗ್ನ ಸ್ಥಿತಿ ಶಾಂತವಾಯಿತು.
ಘಟನೆಯ ಹಿನ್ನೆಲೆ: ಗಣಪತಿ ದೇವಸ್ಥಾನ ಪಕ್ಕದಲ್ಲಿಯೇ ಮಸೀದಿ ಇದ್ದು, ಈಗ ರಂಜಾನ್ ತಿಂಗಳ ಉಪವಾಸ ಆಚರಣೆಯನ್ನು ಮುಸ್ಲಿಂ ಸಮು ದಾಯದವರು ನಡೆಸುತ್ತಿದ್ದರು. ಶನಿವಾರ ರಾತ್ರಿ ಮುಸ್ಲಿಂ ಸಂಪ್ರದಾಯ ದಂತೆ ಜಾಗರಣೆ ಹಾಗೂ ಭೋಜನ ವ್ಯವಸ್ಥೆಯನ್ನು ಮಸೀದಿಯವರು ಮಾಡಿದ್ದರು. ಆದರೆ ಮಸೀದಿಯ ಹೊರಗೆ ಶಾಮಿಯಾನ ಹಾಕಿ ಅಡುಗೆ ತಯಾರಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಇದರಿಂದ ಹಿಂದೂ ಕಾರ್ಯಕರ್ತರು ಆಕ್ಷೇಪಣೆ ಮಾಡಿ ಗಣಪತಿ ದೇವಸ್ಥಾನ ಪಕ್ಕದಲ್ಲಿಯೇ ಇದೆ. ಅಲ್ಲದೆ ಸದ್ಯದಲ್ಲಿಯೇ ದೇವಸ್ಥಾನದ ರಥೋತ್ಸವ ಇದೆ. ಇಂತಹ ಸಂದರ್ಭದಲ್ಲಿ ಮಾಂಸ ಬೇಯಿಸುವುದು ಇತ್ಯಾದಿ ಮಾಡುವುದರಿಂದ ದೇವಸ್ಥಾನದ ಪವಿತ್ರತೆ ಹಾಳಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ ಚುನಾವಣೆಯ ನೀತಿ ಸಂಹಿತೆ ಇರುವ ಸಂದರ್ಭದಲ್ಲಿ ಅಡುಗೆ ಮಾಡಿ ಊಟ ಹಾಕಲು ಯಾರು ಅನುಮತಿ ನೀಡಿದ್ದಾರೆ? ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು. ವಿಷಯ ತಿಳಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್ ಅವರು ಕೂಡಲೆ ಸ್ಥಳಕ್ಕೆ ಆಗಮಿಸಿ ಹಿಂದೂ ಕಾರ್ಯಕರ್ತರು, ಮುಖಂಡರು ಹಾಗೂ ಮುಸ್ಲಿಂ ಮುಖಂಡರನ್ನು ಸೇರಿಸಿ ಸಂಧಾನ ನಡೆ ಸಿದರು. ಅಲ್ಲದೆ ಮಸೀದಿಯ ಮುಂದೆ ಶಾಮಿಯಾನ ಹಾಕಿ ಅಡುಗೆ ಮಾಡುವುದನ್ನು ನಿಲ್ಲಿಸಿ ಶಾಮಿಯಾನ ತೆರವುಗೊಳಿಸಿ ಬಿಗಿಯಾದ ಪೊಲೀಸ್ ಬದೋಬಸ್ತ್ ಹಾಕಿಸಿ ಉದ್ವಿಗ್ನ ಸ್ಥಿತಿ ತಿಳಿಗೊಳಿಸಿದರು. ಈ ಘಟನೆ ಶನಿವಾರ ತಡರಾತ್ರಿಯವರೆಗೆ ನಡೆಯಿತು. ಈಗ ಮಸೀದಿಯ ಹತ್ತಿರ ಹಾಗೂ ದೇವಸ್ಥಾನದ ಸಮೀಪ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.