For the best experience, open
https://m.samyuktakarnataka.in
on your mobile browser.

ಮಹದಾಯಿಗೆ ತಾರತಮ್ಯ ರಾಜ್ಯದ ನಿರ್ಧಾರ ಸಮರ್ಥನೀಯ

02:01 AM Sep 07, 2024 IST | Samyukta Karnataka
ಮಹದಾಯಿಗೆ ತಾರತಮ್ಯ ರಾಜ್ಯದ ನಿರ್ಧಾರ ಸಮರ್ಥನೀಯ

ಮತ್ತೊಮ್ಮೆ ಮಹದಾಯಿ ನೀರಿಗಾಗಿ ಕೇಂದ್ರ ಸರ್ಕಾರದ ಬಳಿ ಸರ್ವಪಕ್ಷ ನಿಯೋಗ ಹೋಗುವ ಮಾತು ಕೇಳಿ ಬಂದಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಸರ್ವಪಕ್ಷ ಸಭೆ ನಡೆಸಿ, ಕೇಂದ್ರಕ್ಕೆ ನಿಯೋಗ ಕೊಂಡೊಯ್ಯಲು ಸರ್ಕಾರ ನಿರ್ಧರಿಸಿರುವುದು ಸರಿಯಾದ ನಿಲುವು. ಸಿದ್ದರಾಮಯ್ಯ ೧.೦ ಸರ್ಕಾರದ ವೇಳೆಯೂ ವಿಷಯವಾಗಿ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ತೆರಳಿತ್ತು. ರಾಜ್ಯ ನಿಯೋಗಕ್ಕೆ ಪ್ರಧಾನಿಯಿಂದ ನಿರಾಸೆಯ ಉಡುಗೊರೆ ದೊರಕಿತ್ತು.
ಈಗ ಖುದ್ದು ಸರ್ಕಾರವೇ ಸರ್ವಪಕ್ಷ ನಿಯೋಗದ ಮಾತನಾಡಿದೆ. ರಾಜ್ಯದ ಅತ್ಯಗತ್ಯ ನೀರಾವರಿ ವಿಷಯವಾಗಿರುವ ಮಹದಾಯಿ ಕುರಿತ ನಿರ್ಲಕ್ಷ್ಯವೇ ರಾಜ್ಯ ಸರ್ಕಾರ ಮತ್ತೆ ನಿಯೋಗ ಕೊಂಡೊಯ್ಯುವ ತೀರ್ಮಾನ ಮಾಡಿರುವುದಕ್ಕೆ ಕಾರಣ.
ಅರಣ್ಯ ನಾಶ, ವನ್ಯಜೀವಿ ಸಂರಕ್ಷಣೆ ಮತ್ತು ಗೋವಾ ರಾಜ್ಯ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿರುವ ತಕರಾರುಗಳನ್ನು ಮುಂದಿಟ್ಟುಕೊಂಡು ಮಹದಾಯಿ ಯೋಜನೆಗೆ ತಡೆ ಒಡ್ಡಿರುವ ಗೋವಾ ಹಾಗೂ ಕೇಂದ್ರ ಸರ್ಕಾರ ತಮ್ನಾರ್-ಗೋವಾ ೪೦೦ ಕೆ.ವಿ. ವಿದ್ಯುತ್ ಮಾರ್ಗ ಯೋಜನೆಗೆ ಸಮ್ಮತಿಸಿದೆ. ಮಂಗಳವಾರ ನಡೆದ ತನ್ನ ೭೯ನೇ ಸಭೆಯಲ್ಲಿ ಈ ಮಾರ್ಗಕ್ಕೆ ಒಪ್ಪಿಗೆ ನೀಡಿರುವ ವನ್ಯಜೀವಿ ಮಂಡಳಿಯು, ಇದೇ ಸಭೆಯ ಮುಂದೆ ಬಂದಿದ್ದ ಮಹದಾಯಿ ಅರ್ಜಿಯನ್ನು ಪರಿಸರ, ವನ್ಯಜೀವಿ ಸಂರಕ್ಷಣೆ' ಕಾರಣವೊಡ್ಡಿ ಮತ್ತೆ ಮುಂದೂಡಿದೆ. ಧಾರವಾಡ ನರೇಂದ್ರ ಮೂಲಕ ಗೋವಾಕ್ಕೆ ಹೋಗಲಿರುವ ಛತ್ತೀಸಗಡ್ ರಾಜ್ಯದ ತಮ್ನಾರ್ ಹೈಟೆನ್ಷನ್ ವಿದ್ಯುತ್ ಮಾರ್ಗ ರಾಜ್ಯದ ೪೩೫ ಎಕರೆ ಅರಣ್ಯವನ್ನು ನುಂಗಲಿದೆ. ಇದರಲ್ಲಿ ಕಾಳಿ ಹುಲಿ ಸಂರಕ್ಷಿತ ಅರಣ್ಯ, ದಾಂಡೇಲಿ ಆನೆ ಕಾರಿಡಾರ್‌ನಂಥವೂ ಸೇರಿವೆ. ಒಂದು ಲಕ್ಷ ಮರಗಳ ಹನನವಾಗಲಿದೆ. ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ಗೋವಾ ನಮೂದಿಸಿರುವ ಆ ರಾಜ್ಯದ ಹುಲಿ ಸಂರಕ್ಷಿತ ಅರಣ್ಯದ ಮೂಲಕವೂ ಮಾರ್ಗ ಹೋಗಲಿದೆ. ತಮ್ನಾರ್- ಗೋವಾ ಹೈಟೆನ್ಷನ್ ಮಾರ್ಗ ರಾಷ್ಟ್ರೀಯ ಯೋಜನೆ ಎಂಬ ಕಾರಣಕ್ಕೆ ಒಪ್ಪಿಗೆ ನೀಡಲಾಗಿದೆಯೇ? ಮಹದಾಯಿ ಇದೇ ಪ್ರದೇಶದಲ್ಲಿ ಅನುಷ್ಠಾನಗೊಳ್ಳಬೇಕಿದೆ. ಇದು ರಾಜ್ಯದ ವಿಷಯ ಎಂದು ಕಡೆಗಣಿಸಲಾಗಿದೆಯೇ? ಅಲ್ಲದೇ ಮಹದಾಯಿ ವಿಷಯವಾಗಿ ಮೊದಲ ಸಲ ಬಂದಿದ್ದ ರಾಜ್ಯ ನಿಯೋಗಕ್ಕೆ ಗೋವಾ ರಾಜ್ಯವನ್ನು ಒಪ್ಪಿಸಿಕೊಂಡು ಬನ್ನಿ ಎಂದು ಹೇಳಿ ಕಳಿಸಿದ್ದ ಪ್ರಧಾನಿ ಮೋದಿಯವರೇ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಗೋವಾ ವಿದ್ಯುತ್ ಮಾರ್ಗಕ್ಕೆ ಸಹಕಾರ ನೀಡುವಂತೆ ಕೋರಿರುವುದು ಹಾಗೂ ಮಹದಾಯಿ ವಿಷಯವಾಗಿ ಮೌನ ತಾಳಿರುವುದು ವಿಚಿತ್ರವೆನಿಸುತ್ತಿದೆ. ಛತ್ತೀಸಗಡದಿಂದ ಗೋವಾಕ್ಕೆ ಹೋಗುವ ವಿದ್ಯುತ್ ಮಾರ್ಗಕ್ಕೆ ಅರಣ್ಯ ಮತ್ತು ವನ್ಯಜೀವಿಗಳಿಗೆ ಆಪತ್ತು ಬರುವುದಿಲ್ಲವೇ? ಕರ್ನಾಟಕದ ೩.೫ ಟಿಎಂಸಿಎಫ್‌ಟಿ ಕುಡಿಯುವ ನೀರು ಕೊಡಲು ಕಾಯ್ದೆಗಳ ಅಡ್ಡಿಯೇಕೆ ಬರುತ್ತಿದೆ? ಗೋವಾದಲ್ಲಿರುವ ಎನ್‌ಡಿಎ ಸರ್ಕಾರಕ್ಕೆ ಹೇಳಿ ಸುಪ್ರೀಂ ಕೋರ್ಟಿನಲ್ಲಿರುವ ಅರ್ಜಿಯನ್ನು ಪ್ರಧಾನಿ ಹಿಂದೆಗೆಸುತ್ತಿಲ್ಲ ಏಕೆ? ಈ ಪ್ರಶ್ನೆಗಳು ಪ್ರಧಾನಿ ಪತ್ರ ಮತ್ತು ವನ್ಯಜೀವಿ ಮಂಡಳಿ ನಡೆಯಿಂದ ಮೂಡುವಂತಾಗಿವೆ. ಮಹದಾಯಿ ರಾಜ್ಯದ ರಾಜಕೀಯ ಪಕ್ಷಗಳ ಮಟ್ಟಿಗೆ ಕಳೆದ ಇಪ್ಪತ್ತೈದು ವರ್ಷಗಳಿಂದ ಚುನಾವಣಾ ವಿಷಯ ಹಾಗೂ ರಾಜಕೀಯ ಹುಟ್ಟು- ಮರು ಹುಟ್ಟುಗಳಿಗೆ ಕಾರಣವಾಗುತ್ತಿರುವ ವಿವಾದ. ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿಕಮಲ' ಪ್ರಾಬಲ್ಯ ಹೆಚ್ಚಿಸಲು, ಅಧಿಕಾರಕ್ಕೆ ಬಂದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಮಹದಾಯಿ ಹರಿಸುವುದಾಗಿ ರಕ್ತದಲ್ಲಿ ಬರೆದುಕೊಡುವ ಮಾತನ್ನು ಬಿಜೆಪಿ ರಾಜ್ಯ ವರಿಷ್ಠ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆಡಿದ್ದರು. ಅಷ್ಟೇ ಅಲ್ಲ. ಹುಬ್ಬಳ್ಳಿಯ ಸಾರ್ವಜನಿಕ ಸಭೆಯಲ್ಲಿ ಅಂದಿನ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಪತ್ರವನ್ನು ತೋರಿಸಿ, ಮಹದಾಯಿಗೆ ಗೋವಾ ಅಡ್ಡಿ ಇಲ್ಲ ಎಂದು ಸಾರಿ ವಿವಾದ ಬಗೆಹರಿದೇ ಹೋಯಿತು ಎಂಬ ಭಾವನೆ ಮೂಡಿಸಿದ್ದರು. ೨೦೨೨ರ ಚಳಿಗಾಲದ ಅಧಿವೇಶನದಲ್ಲಿ ನಿಕಟಪೂರ್ವ ಸಿಎಂ ಬಸವರಾಜ ಬೊಮ್ಮಾಯಿ, `ಕೇಂದ್ರ ಸರ್ಕಾರದ ಜಲಶಕ್ತಿ ಆಯೋಗದಿಂದ ಮಹದಾಯಿ ಯೋಜನಾ ವರದಿ'ಗೆ ಸಮ್ಮತಿ ದೊರಕಿರುವ ಘೋಷಣೆ ಮಾಡಿದ್ದರು. ಅಂದಿನ ಪ್ರತಿಪಕ್ಷ ಕಾಂಗ್ರೆಸ್ ಈ ಮಾತಿನ ಸತ್ಯಾಸತ್ಯತೆಯನ್ನು ಅನುಮಾನದಿಂದ ನೋಡಿ, ಸದನದಲ್ಲಿ ಸಿಎಂ ಘೋಷಣೆ ಬಹಿಷ್ಕರಿಸಿತ್ತಷ್ಟೇ ಅಲ್ಲ. ಹುಬ್ಬಳ್ಳಿಯಲ್ಲಿ ಸರ್ಕಾರ ಸುಳ್ಳು ಹೇಳಿದೆ ಎಂದು ಬೃಹತ್ ಪ್ರತಿಭಟನೆಯನ್ನು ಮಾಡಿತ್ತು. ಕೇಂದ್ರದ ಗೃಹ ಸಚಿವ ಅಮಿತ್ ಶಾ, ಮಹದಾಯಿ ನೀರನ್ನು ಲೋಕಸಭಾ ಚುನಾವಣೆ ನಂತರ ನಾವೇ ಹರಿಸುತ್ತೇವೆ ಎಂದು ಘೋಷಿಸಿದ್ದರು. ೨೦೨೪ರ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವನ್ಯಜೀವಿ ಮಂಡಳಿಯ ಅಡೆತಡೆ ನಿವಾರಿಸಿ ಯೋಜನೆ ಜಾರಿಗೊಳಿಸುತ್ತೇವೆ ಎಂದು ವಾಗ್ದಾನ ಮಾಡಿದ್ದರು. ತಿಂಗಳ ಹಿಂದಷ್ಟೇ ಕೇಂದ್ರದ ನಿಯೋಗ ಕಳಸಾ ಬಂಡೂರಿ ಯೋಜನಾ ಪ್ರದೇಶ ವೀಕ್ಷಿಸಿ ಹೋಗಿತ್ತು. ವಾಸ್ತವಾಂಶ ಅರಿವಿಗೆ ಬಂದಿದೆ ಎಂದೂ ಹೇಳಿತ್ತು. ಆದರೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ತನ್ನ ೭೯ನೇ ಸಭೆಯಲ್ಲಿ ಮಹದಾಯಿ ಯೋಜನೆ ವಿಷಯ ಕೈಗೆತ್ತಿಕೊಂಡಿಲ್ಲ. ಇದು ಉದ್ದೇಶಪೂರ್ವಕ ಎನ್ನುವ ಆರೋಪದಲ್ಲಿ ಸತ್ಯಾಂಶ ಇದೆ ಎನಿಸುತ್ತದೆ. ಹೀಗಾಗಿ ರಾಜ್ಯ ನಿಯೋಗ ಎರಡನೇ ಬಾರಿ ಪ್ರಧಾನಿ ಬಳಿ ತೆರಳಬೇಕಾಗಿರುವುದು ಸಾಂದರ್ಭಿಕ ಅನಿವಾರ್ಯತೆ. ಈ ಬಾರಿಯಾದರೂ ಪ್ರಧಾನಿ ಸ್ಪಂದಿಸಬೇಕಿದೆ.