For the best experience, open
https://m.samyuktakarnataka.in
on your mobile browser.

ಮಹದಾಯಿಗೆ 2 ತಿಂಗಳ ಗಡುವು

12:54 PM Jan 18, 2025 IST | Samyukta Karnataka
ಮಹದಾಯಿಗೆ 2 ತಿಂಗಳ ಗಡುವು

ಮಹದಾಯಿ ವಿಚಾರ ಬಂದಾಗ ಸಭೆ ಮುಂದಕ್ಕೆ ಹಾಕುವ ಕೆಲಸ ಮಾಡುತ್ತಾರೆ

ಹುಬ್ಬಳ್ಳಿ: ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರದ ಪರಿಸರ ಮತ್ತು ವನ್ಯಜೀವಿ ಮಂಡಳಿ ಮುಂದಿನ ಎರಡು ತಿಂಗಳ ಒಳಗಾಗಿ ಅನುಮತಿ ನೀಡಬೇಕು. ಇಲ್ಲದೇ ಹೋದಲ್ಲಿ ಮುಂದಿನ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಕಾನೂನು ಸಚಿವ ಹೆಚ್. ಕೆ.ಪಾಟೀಲ್ ಎಚ್ಚರಿಕೆ ನೀಡಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಡೆದ ಸಂಸತ್ ಅಧಿವೇಶನದಲ್ಲಿ ಫಾರೆಸ್ಟ್ ಕ್ಲಿಯರೆನ್ಸ್ ಸಿಗಬಹುದೆಂಬ ಆಶಾಭಾವಬನೆ ಇತ್ತು. ಆದರೆ ಕೇಂದ್ರ ಸರ್ಕಾರ ನಿರಾಶೆ ಮಾಡಿದೆ.‌ ಅದೇ ಚುನಾವಣೆಗಳು ಬಂದಾಗ ಪ್ರಧಾನಿ ಸೇರಿದಂತೆ ಕೇಂದ್ರ ಸಚಿವರು, ಸಂಸದರು ಈ ಬಗ್ಗೆ ಮಾತನಾಡುತ್ತಾರೆ. ಅದೇ ಮಹದಾಯಿ ವಿಚಾರ ಬಂದಾಗ ಸಭೆ ಮುಂದಕ್ಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಈ ರೀತಿಯಾಗಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದರು.

ಬೆಳಗಾವಿಯಲ್ಲಿ ಜ.21 ರಂದು ಗಾಂಧಿ ಭಾರತ ಕಾರ್ಯಕ್ರಮವನ್ನು ಪಕ್ಷ ಮತ್ತು ಸರ್ಕಾರದಿಂದ ಆಯೋಜಿಸಲಾಗಿದೆ. ಇದನ್ನು ಎಲ್ಲರೂ ಯಶಸ್ವಿ ಮಾಡಬೇಕು ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಪಕ್ಷದ ಮುಖಂಡರು ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿಯವರನ್ನು ಭೇಟಿಯಾಗಬಹುದು. ಆದರೆ ಮಾಧ್ಯಮದ ಎದುರು ಅಭಿಪ್ರಾಯ ಹಂಚಿಕೊಳ್ಳಬಾರದು ಎಂದು ಸುರ್ಜೇವಾಲಾ ಸೂಚನೆ ಕೊಟ್ಟಿದ್ದಾರೆ. ನಮ್ಮ ಪಕ್ಷದ ಶಿಸ್ತನ್ನು ನೋಡಿ ಇತರರು ಕಲಿಯಬೇಕು. ಆ ರೀತಿಯಲ್ಲಿ ನಾವು ಸುಮ್ಮನೆ ಇರಬೇಕು ಎಂದರು.

ಕಾಂಗ್ರೆಸ್ ಶಾಸಕರ ದುಬೈ ಪ್ರವಾಸದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಶಾಸಕರು ನಮ್ಮ ಜೊತೆಗೆ ಇದ್ದಾರೆ. ಜ. 21 ರಂದು ನಡೆಯುವ ಗಾಂಧಿ ಭಾರತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ಅದೇ ದಿನ ದುಬೈಗೆ ಪ್ರವಾಸ ಹೋಗುತ್ತಾರೆಂಬ ಮಾಹಿತಿ ತಪ್ಪು ಎಂದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಿಎಂ ಬದಲಾವಣೆ ಚರ್ಚೆ ವಿಚಾರವಾಗಿ ಮಾತನಾಡಿ, ಇವೆಲ್ಲ ವಿಚಾರಗಳು ಮುಗಿದು ಹೋದ ಅಧ್ಯಾಯಗಳು. ಯಾವಾಗ ಅಧ್ಯಕ್ಷರ ಬದಲಾವಣೆ ಮಾಡಬೇಕು, ಯಾವಾಗ ಸಿಎಂ ಬದಲಾವಣೆ ಮಾಡಬೇಕು ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಹೈಕಮಾಂಡ್ ಸಮರ್ಥವಾಗಿದೆ ಎಂದರು.
ಮುಡಾ ಹಗರಣದಲ್ಲಿ 300 ಕೋಟಿ ಆಸ್ತಿ ಜಪ್ತಿ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ( ಇಡಿ) ಪತ್ರಿಕಾ ಪ್ರಕಟಣೆ ನೀಡಿರುವುದು ಅತ್ಯಂತ ಆಶ್ಚರ್ಯಕರ. ಬೆಳಗಾವಿಯಲ್ಲಿ ಆಯೋಜಿಸಿರುವ ಗಾಂಧಿ ಭಾರತ ಕಾರ್ಯಕ್ರಮವನ್ನು ಹಾಳು ಗೆಡವಲು ಈ ರೀತಿ ಮಾಡಲಾಗಿದೆ. ಪತ್ರಿಕಾ ಪ್ರಕಟಣೆ ಕೊಡಲು ಇಡಿಗೆ ಯಾರು ಹೇಳಿದ್ದಾರೆ. ನಿಮ್ಮ ಕೆಲಸವನ್ನು ನೀವು ಮಾಡಬೇಕು. ತನಿಖೆ ಮಾಡಿ ಕೋರ್ಟ್‌ಗೆ ಚಾರ್ಜ್ ಶೀಟ್ ಹಾಕಲಿ. ಅದು ಬಿಟ್ಟು ಪತ್ರಿಕಾ ಪ್ರಕರಣೆ ಕೊಟ್ಟಿದ್ದು ರಾಜಕೀಯ ದುರುದ್ದೇಶದ ಹೆಜ್ಜೆಯಾಗಿದೆ ಎಂದರು.

Tags :