For the best experience, open
https://m.samyuktakarnataka.in
on your mobile browser.

ಮಹದಾಯಿ ಕಣದಲ್ಲಿ ರಾಜಕೀಯದ ಮಹಾದಾಟ

12:05 AM Sep 12, 2024 IST | Samyukta Karnataka
ಮಹದಾಯಿ ಕಣದಲ್ಲಿ ರಾಜಕೀಯದ ಮಹಾದಾಟ

ಖಂಡಿತ ಯಾರಿಗೂ ಬೇಕಿಲ್ಲ, ನಲವತ್ನಾಲ್ಕು ವರ್ಷಗಳ ಈ ವಿವಾದ ಬಗೆಹರಿಸುವ ಆಸಕ್ತಿ, ಕಾಳಜಿ, ಇಚ್ಛಾಶಕ್ತಿ ಯಾರಿಗೂ ಇಲ್ಲ…!
ಇನ್ನಷ್ಟು ವರ್ಷಗಳ ಕಾಲ ಇದನ್ನು ಜೀವಂತವಾಗಿಡುವುದೇ ಎಲ್ಲರ ಗೌಪ್ಯ ಒಡಂಬಡಿಕೆ.
ಹೌದು. ಇದು ಮಹದಾಯಿ (ಕಳಸಾ ಬಂಡೂರಿ)ಯೋಜನೆಯ ವಿವಾದ.
ಒಂದು ನದಿ-ಹಳ್ಳ ಜೋಡಣೆ ಯೋಜನೆ. ನಲವತ್ನಾಲ್ಕು ವರ್ಷಗಳನ್ನು ಜನರ ಬದುಕಿನೊಂದಿಗೆ ವ್ಯಯಿಸಿ ಚಲ್ಲಾಟ ವಾಡಲಾಗುತ್ತಿದೆ. ಮುನ್ಸಿಫ್ ನ್ಯಾಯಾಲಯದಿಂದ ಸುಪ್ರೀಂ ಕೋರ್ಟ್ವರೆಗೆ, ಹೋಬಳಿಯಿಂದ ದೆಹಲಿಯವರೆಗೆ, ಗ್ರಾಮ ಪಂಚಾಯ್ತಿಯಿಂದ ಸಂಸತ್ತಿನವರೆಗೆ, ಮಂಡಲ ಪಂಚಾಯ್ತಿ ಸದಸ್ಯನಿಂದ ಭಾರತದ ಪ್ರಧಾನಿಯವರೆಗೆ ಎಲ್ಲರ ಬಳಿಯೂ ಈ ವಿವಾದ ಪ್ರತಿಧ್ವನಿಸಿದೆ. ಸಾಕಷ್ಟು ಬಣ್ಣ ಸುಣ್ಣ ಬಳಿದಿದ್ದಾರೆ. ಎಲ್ಲರೂ ತಮ್ಮಿಂದ ಆಗಬಹುದಾದ ಕಲ್ಮಷ, ಕಲಸುಮೇಲೋಗರವನ್ನು ಚೆಲ್ಲಿದ್ದಾರೆ.
ಮಹದಾಯಿ ಯೋಜನೆ ಮೊಳಕೆಯೊಡೆದದ್ದು ೧೯೮೧ರಷ್ಟು ಹಿಂದೆ. ವಿರೋಧ ಪಕ್ಷದ ನಾಯಕರಾಗಿದ್ದ ಎಸ್.ಆರ್. ಬೊಮ್ಮಾಯಿಯವರನ್ನು ಅಂದಿನ ಮುಖ್ಯಮಂತ್ರಿ ಆರ್.ಗುಂಡೂರಾವ್, ರಾಜ್ಯದ ಪರವಾಗಿ ಮಾತುಕತೆ ಮಾಡಲು ಗೋವಾಗೆ ಕಳಿಸಿದ್ದರು. ಆಗ ಮಾತುಕತೆ ಫಲಪ್ರದವೂ ಆಗಿತ್ತು. ಆ ನಂತರ ರಾಜಕೀಯ ಬೆರೆತು, ಕಗ್ಗಂಟಾದದ್ದು ಇಂದಿಗೂ ಬಗೆಹರಿದಿಲ್ಲ.
ಇಂದಿನ ಸ್ಥಿತಿ ನೋಡಿದರೆ ಈ ವಿವಾದ ಬಗೆಹರಿಯು ವುದು ಯಾರಿಗೂ ಬೇಕಾಗಿಲ್ಲ. ಇದನ್ನು ಇನ್ನಷ್ಟು ಕಾಲ ಜೀವಂತವಾಗಿಟ್ಟುಕೊಂಡು ಅದರ ಸೆಖೆಯಲ್ಲಿ ಜನರ ಬೆವರಿಳಿಸಿ, ರಾಜಕಾರಣ ಮಾಡುವುದು ಒಟ್ಟಾರೆ ಇವರೆಲ್ಲರ ಘನ ಉದ್ದೇಶ ಎನ್ನುವುದು ಸ್ಪಷ್ಟ.
ಮಹದಾಯಿ ಯೋಜನೆ ಏನು ಮಹಾನಾ? ಅಂತಾ ರಾಷ್ಟ್ರೀಯ ವಿವಾದವನ್ನು ವಿಶ್ವಗುರು' ಬಗೆಹರಿಸಬೇಕಿದ್ದರೆ, ಇದೇನು ಮಹಾ!? ಪ್ರಧಾನಿ ಮನಸ್ಸು ಮಾಡಿದರೆ ಒಂದು ಕ್ಷಣದ ಕೆಲಸ. ಕಳೆದ ಹದಿನೈದು ವರ್ಷಗಳಿಂದ ಕೇಳುವ ಮಾತಿದು. ಮಹದಾಯಿ ವಿಷಯವಾಗಿ ಹಿಂದಿನ- ಈಗಿನ ಸರ್ಕಾರ ಗಳ ಮುಖ್ಯಸ್ಥರ ಬಗ್ಗೆ ಟೀಕೆ ಟಿಪ್ಪಣಿ, ಬೊಟ್ಟು ತೋರಿಸುವಿಕೆ ನಡೆದೇ ಇತ್ತು. ಮಹದಾಯಿ ನೀರಿಗೆ ಹರಿವಿಕೆಗಿಂತಲೂ ವೇಗವಾಗಿ, ಮತ್ತು ಅಷ್ಟೇ ತೀವ್ರ ಸುಳಿಯ ರಾಜಕೀಯ ವಿಷಯದ ಹಿಂದೆ ಅಡಗಿದೆ. ಮನಮೋಹನಸಿಂಗ್ ಪ್ರಧಾನಿಯಾಗಿದ್ದಾಗ ಏಕೆ ಬಗೆಹರಿಸಿಲ್ಲ? ಸೋನಿಯಾ ಗಾಂಧಿ ಗೋವಾದಲ್ಲಿ ಒಂದು ಹನಿ ಮಹದಾಯಿ ನೀರನ್ನು ಕೊಡುವ ಪ್ರಶ್ನೆ ಇಲ್ಲ ಎಂದು ಹೇಳಿದ್ದೇಕೆ? ಟ್ರಿಬ್ಯೂನಲ್ ರಚಿಸಿದ್ದೇಕೆ? ಎಂದು ಆರೋಪಿಸಿದರೆ ಡಬಲ್ ಎಂಜಿನ್, ಟ್ರಿಬಲ್ ಎಂಜಿನ್ ಸರ್ಕಾರವಿತ್ತಲ್ಲ, ಗೋವಾ-ಕರ್ನಾಟಕ ಎರಡಲ್ಲೂ ಅವರದ್ದೇ ಸರ್ಕಾರವಿತ್ತು. ಅವರೇಕೆ ಬಗೆಹರಿಸಲಿಲ್ಲ? ಪ್ರಧಾನಿ ಬಳಿ ನಿಯೋಗ ಹೋದಾಗ ಗೋವಾ ಮತ್ತು ಮಹಾರಾಷ್ಟ್ರವನ್ನು ಒಪ್ಪಿಸಿಕೊಂಡು ಬನ್ನಿ ಎಂದು ಹಿಂದಿರುಗಿಸಿದರಲ್ಲ? ಈಗ ಇದೇ ಮಹದಾಯಿ ಪ್ರದೇಶದಲ್ಲಿಯೇ ತಮ್ನಾರ್-ಗೋವಾ ಹೈಟೆನ್ಷನ್ ವಿದ್ಯುತ್ ಮಾರ್ಗಕ್ಕೆ ಕೇಂದ್ರ ವನ್ಯಜೀವಿ ಮಂಡಳಿ ಹಾಗೂ ಸರ್ಕಾರವೇ ಅನುಮತಿ ನೀಡಿರುವಾಗ ಮತ್ತು ಕರ್ನಾಟಕದ ಭಾಗದಲ್ಲಿ ಮರಕಡಿಯಲು ಸಹಕರಿಸಿ ಎಂದು ಪ್ರಧಾನಿಯೇ ಪತ್ರ ಬರೆಯುವಾಗ ಕಳಸಾ ಬಂಡೂರಿಗೆ ಏಕೆ ಪರವಾನಗಿ ನೀಡಿಲ್ಲ? ಅನುಮೋದನೆ ಕೋರಿದ ಪ್ರಸ್ತಾವನೆಯನ್ನು ಮರು ಕಳಿಸಿದ್ದೇಕೆ? ಎಂದು ರಾಜ್ಯದ ಕಾನೂನು ಸಚಿವರು ಆರೋಪ ಮಾಡುತ್ತಿದ್ದಾರೆ. ಇದಕ್ಕಾಗಿ ಪ್ರಧಾನಿ ಬಳಿಯೇ ಸರ್ವಪಕ್ಷಗಳ ನಿಯೋಗ ಒಯ್ಯುವುದು ಜಲಸಂಪನ್ಮೂಲ ಸಚಿವರ ನಿರ್ಧಾರ. ಈ ಆರೋಪ ಪ್ರತ್ಯಾರೋಪಗಳ ಹಿನ್ನೆಲೆಯಲ್ಲಿ ಕಳೆದ ಐದು ಲೋಕಸಭಾ ಚುನಾವಣೆಗಳು, ಆರು ವಿಧಾನಸಭಾ ಚುನಾವಣೆಗಳು, ಎಂಎಲ್‌ಸಿ ಚುನಾವಣೆಗಳು ಜರುಗಿವೆ. ಮತಭಿಕ್ಷೆಗೆ ಬಂದಾಗೆಲ್ಲ ಒಂದಲ್ಲೊಂದು ನಾಟಕ. ನಾನು ಮುಖ್ಯಮಂತ್ರಿಯಾದರೆ ಇಪ್ಪತ್ನಾಲ್ಕು ಗಂಟೆಗಳಲ್ಲಿ ವಿವಾದ ಬಗೆಹರಿಸುವುದಾಗಿ ರಕ್ತದಲ್ಲಿ ಬರೆದು ಕೊಡುವೆ ಎಂದು ಘೋಷಿಸಿದವರೂ ಇದ್ದರು. ಮುಖ್ಯಮಂತ್ರಿಗಳೂ ಆದರು. ಈ ವಿವಾದದ ಕಾವಿನಲ್ಲಿ ಮೈ ಕಾಯಿಸಿಕೊಂಡ ರಾಜಕೀಯ ನಾಯಕರಿಗೆ ಲೆಕ್ಕವಿಲ್ಲ. ಹುಬ್ಬಳ್ಳಿಯವರಾದ ಜಗದೀಶ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿ ಹೋಗಿದ್ದಾರೆ. ಪ್ರಲ್ಹಾದ ಜೋಶಿ ಐದು ಬಾರಿ ಆಯ್ಕೆಯಾಗಿ, ಪ್ರಸಕ್ತ ಅವಧಿಯೂ ಸೇರಿ ಎರಡು ಬಾರಿ ಕೇಂದ್ರ ಸಂಪುಟ ಸಚಿವರಾಗಿದ್ದಾರೆ. ಆದರೆ ಮಹದಾಯಿ ಪಾತ್ರದಲ್ಲಿ ಒಂದು ಕಡ್ಡಿಯೂ ಅಲುಗಾಡಿಲ್ಲ. ಎರಡೂ ರಾಜ್ಯಗಳಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೆ ವಿವಾದ ಬಗೆಹರಿಯುತ್ತೆ ಎಂದು ಘೋಷಿಸಿದರು. ರಾಜಕೀಯವಾದ ಈ ಸಾಧ್ಯತೆಯೂ ಈಡೇರಿತು. ಆದರೆ ಮಹದಾಯಿ ನೀರು ಸಮುದ್ರ ಸೇರುವುದು ಮಾತ್ರ ನಿಲ್ಲಲಿಲ್ಲ. ಅಷ್ಟೇ ಏಕೆ? ಮಹದಾಯಿ ವಿವಾದ ಬಗೆಹರಿದಂತೆಯೇ, ಲೋಕಸಭಾ ಚುನಾವಣೆ ಮುಗಿದ ಮೇಲೆ ಯೋಜನೆ ಜಾರಿಯಾಗುತ್ತದೆ ಎಂದು ಕೇಂದ್ರ ಗೃಹ ಸಚಿವರೇ ಘೋಷಿಸಿದ್ದರು. ಕೇಂದ್ರ ಡಿಪಿಆರ್‌ಗೆ ಅನುಮತಿ ನೀಡಿದೆ ಎಂದು ವಿಧಾನಸಭೆಯಲ್ಲೇ ಮುಖ್ಯಮಂತ್ರಿ ಪತ್ರ ಪ್ರದರ್ಶಿಸಿದರು. ಇದಕ್ಕೆ ದಿನಾಂಕವೇ ಇರಲಿಲ್ಲ! ಇತ್ತ ಡಿಪಿಆರ್‌ಗೆ ಅಂಗೀಕಾರ, ಅತ್ತ ಸುಪ್ರೀಂ ಕೋರ್ಟಿಗೆ ಹೋದ ಪಕ್ಕದ ರಾಜ್ಯದಿಂದ, ವನ್ಯಜೀವಿ ಮಂಡಳಿ ಮುಂದೆ ದೂರು ದಾಖಲು... ಕರ್ನಾಟಕ ಕೊಟ್ಟ ದೂರುಕಬು'ಗೆ. ಗೋವಾ ಕೊಟ್ಟ ದೂರಿಗೆ ತಜ್ಞರ ಸಮಿತಿ ನೇಮಕ ಮತ್ತು ಪರಿಶೀಲನೆಯ ನೀತಿ…!!
ಪಾಪ. ರೈತರು, ಹೋರಾಟಗಾರರು ಬೆತ್ತದ ಛಡಿ ತಿಂದು, ಜೈಲು ಸೇರಿದರು. ನ್ಯಾಯಾಲಯಕ್ಕೆ ಅಲೆದಾಡಿದರು. ಹೋರಾಟಕ್ಕಾಗಿಯೇ ಸನ್ಯಾಸ ದೀಕ್ಷೆ ಪಡೆದರು. ಪ್ರಾಣವನ್ನೂ ತೆತ್ತರು. ಮಹದಾಯಿ ನೀರು ಹುಬ್ಬಳ್ಳಿ-ಧಾರವಾಡ ಸೇರಿದಂತೆ ನಲವತ್ತು ಹಳ್ಳಿಗಳಿಗೆ ಹರಿಯಲಿಲ್ಲ. ಜನರ ದಾಹ ಇಂಗಿಸಿಲ್ಲ.
ಏಕೆ ಹೀಗೆ? ನ್ಯಾಯಾಲಯ, ವನ್ಯಜೀವಿ ಮಂಡಳಿ, ಕಾನೂನು ತೊಡಕಿನ ನೆಪಗಳನ್ನಿಟ್ಟುಕೊಂಡು ಒಂದು ವಿವಾದವನ್ನು ವ್ಯವಸ್ಥಿತವಾಗಿ, ಚಾಣಾಕ್ಷತನದಿಂದ ರಾಜಕೀಕರಣಗೊಳಿಸಿ ಜೀವಂತವಾಗಿಟ್ಟಿರುವುದಕ್ಕೆ ಬಹುಶಃ ಮಹದಾಯಿ ಒಳ್ಳೆಯ ಉದಾಹರಣೆ.
ಗೋವಾ ಚುನಾವಣೆಯಲ್ಲಿ ಮಹದಾಯಿ ಯೋಜನೆ ವಿರೋಧಿಸುವ ರಾಜಕೀಯ ಪಕ್ಷಗಳು, ನೇತಾರರು, ಕರ್ನಾಟಕಕ್ಕೆ ಬಂದಾಗ ಮಹದಾಯಿ ಉತ್ತರ ಕರ್ನಾಟಕಕ್ಕೆ ಹರಿಯಲೇಬೇಕು ಎಂದು ಪ್ರತಿಪಾದಿಸುತ್ತಾರೆ. ಮಹದಾಯಿ ನೀರಿಗೆ ಸಂಬಂಧಿಸಿದಂತೆ ಏನೊಂದೂ ಆಸಕ್ತಿ ಇಲ್ಲದ ಮಹಾರಾಷ್ಟ್ರದ ಸರ್ಕಾರವನ್ನು ಚೂಟುತ್ತಾರೆ. ಕರ್ನಾಟಕದ ಚುನಾವಣೆ ಬಂದಾಗ ಗೋವಾದಿಂದ ಪತ್ರ ಕಳಿಸುತ್ತಾರೆ, ನಮ್ಮದೇನೂ ಅಭ್ಯಂತರವಿಲ್ಲ, ಬಗೆಹರಿಸಿಕೊಳ್ಳಬಹುದು ಎಂದು. ಗೋವಾಕ್ಕೆ ತೆರಳಿ ವಿಧಾನಸಭೆಯಲ್ಲಿ ಮಹದಾಯಿ ವಿರುದ್ಧ ವೀರಾವೇಷದ ಮಾತಾಡುತ್ತಾರೆ. ದೆಹಲಿಗೆ ಹೋಗಿ ಎರಡೂ ಕಡೆಯವರು ಕಾಲಹರಣಕ್ಕೆ ಉಪಾಯ ಹುಡುಕುತ್ತಾರೆ. ಮತ್ತೆ ಇಲ್ಲಿಗೆ ಬಂದು ಅವರದ್ದೇ ಅಡ್ಡಿ, ಇವರದ್ದೇ ಅಡ್ಡಿ ಎಂದು ೨೦೦೨ರಿಂದ ೨೦೨೪ರವರೆಗಿನ ಇತಿಹಾಸವನ್ನು ಕೆದಕಿ ಠೇಂಕರಿಸುತ್ತಾರೆ. ಇಷ್ಟೇ!
ಈಗಲೇ ನೋಡಿ. ಜುಲೈನಲ್ಲಿ ನಡೆದ ವನ್ಯಜೀವಿ ಮಂಡಳಿಯ ೭೯ನೇ ಸಭೆಯಲ್ಲಿ ಮಹದಾಯಿ, ವಿಶೇಷವಾಗಿ ಬಂಡೂರಿ ನಾಲಾ ಯೋಜನೆಗೆ ೭೧ ಎಕರೆ ಅರಣ್ಯ ಭೂಮಿ ಮಂಜೂರಾತಿ ವಿಷಯ ಬಂದಿತ್ತು. ಈ ಹಿಂದೆ ಹಲವು ಸಭೆಗಳಲ್ಲಿಯೂ ಪ್ರಸ್ತಾಪವಾಗಿತ್ತು. ಹುಲಿ ಪ್ರಾಧಿಕಾರದ ಪತ್ರ ಬಂದಿಲ್ಲ, ಕರ್ನಾಟಕದಿಂದ ಸರಿಯಾದ ಸ್ಪಂದನೆ ಇಲ್ಲ, ನ್ಯಾಯಾಲಯದಲ್ಲಿ ಇದೆ' ಎಂದು ಮುಂದೂಡಿತು. ಅದೇ ತಮ್ನಾರ್-ಗೋವಾ ಹೈಟೆನ್ಷನ್ ವಿದ್ಯುತ್ ಲೈನ್‌ಗೆ ಕರ್ನಾಟಕದ ಒಂದು ಅಭಿಪ್ರಾಯವನ್ನೂ ಕೇಳದೇ, ಅದೇ ಹುಲಿ ಪ್ರಾಧಿಕಾರ, ಮಹದಾಯಿ ಕಣಿವೆಯಲ್ಲೇ ಹೈಟೆನ್ಷನ್ ಲೈನ್ ಎಳೆಯಲು ಪರವಾನಗಿ ನೀಡಿತು. ಈ ಯೋಜನೆಗೆ ಸಹಕಾರ ಕೊಡಿ ಎಂದು ಸ್ವತಃ ಪ್ರಧಾನಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುತ್ತಾರೆ! ಇದರ ಅರ್ಥ ಏನು? ಈ ಬಗ್ಗೆ ಪ್ರಶ್ನಿಸಿದರೆ ಮಹ ದಾಯಿಗಾಗಿ ಪಾದಯಾತ್ರೆ ಮಾಡಿದ್ದ ಬಸವರಾಜ ಬೊಮ್ಮಾಯಿ,ಗೋವಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಮಹದಾಯಿ ವಿರೋಧಿಸಿಲ್ಲವಾ? ಟ್ರಿಬ್ಯೂನಲ್ ಮಾಡಿಲ್ಲವಾ? ವಿಳಂಬಕ್ಕೆ ಅವರೇ ಕಾರಣ' ಎನ್ನುತ್ತಾರೆ.
೨೦೦೨ರಲ್ಲಿ ಕಳಸಾ ಬಂಡೂರಿಗೆ ಪರವಾನಗಿ ಕೊಟ್ಟು, ಗೋವಾ ಬಿಜೆಪಿ ಒತ್ತಡಕ್ಕೆ ಮಣಿದು, ಆರು ತಿಂಗಳಲ್ಲೇ ಆದೇಶವನ್ನು ಹಿಂಪಡೆದಿದ್ದು ಏಕೆ? ಗೋವಾದಲ್ಲೂ ಬಿಜೆಪಿ ಸರ್ಕಾರ ಇದೆ. ಮಹಾರಾಷ್ಟ್ರದಲ್ಲೂ ಇದೆ. ಅವ ರನ್ನು ಒಪ್ಪಿಸಿಕೊಂಡು ಬನ್ನಿ ಎಂದರಲ್ಲವೇ ಪ್ರಧಾನ ಮಂತ್ರಿ, ಅಂತಾರಾಷ್ಟ್ರೀಯ ವಿವಾದ ಬಗೆಹರಿಸುವಷ್ಟು ಚಾಣಾಕ್ಷರಿರುವಾಗ, ಅಂತಾರಾಜ್ಯ ವಿವಾದವಾಗಿರುವ ಮಹದಾಯಿಗೆ ಪರಿಹಾರ ಕಂಡುಕೊಳ್ಳಬಹುದಿತ್ತಲ್ಲ? ಮಹದಾಯಿ ಯೋಜನೆಗೆ ಒಪ್ಪಿಗೆ ಕೊಟ್ಟಾಯಿತು. ಇನ್ಯಾವ ಅಡೆತಡೆ ಇಲ್ಲ ಎಂದು ಕಳೆದ ವಿಧಾನಸಭೆ ಚುನಾವಣೆಯಲ್ಲಿ, ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಗೃಹ ಮಂತ್ರಿ, ಜಲಸಂಪನ್ಮೂಲ ಮಂತ್ರಿ ಎಲ್ಲ ಘೋಷಿಸಿದ್ದರಲ್ಲ, ಈಗೆಲ್ಲಿದ್ದಾರೆ? ಎಂದು ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಎಲ್ಲರೂ ಪ್ರಶ್ನಿಸುವವರೇ. ವನ್ಯಜೀವಿ ಮಂಡಳಿ ಸಭೆ ನಡೆದದ್ದು ಗೊತ್ತಾಗಲಿಲ್ಲ? ತಿರಸ್ಕರಿಸಿಲ್ಲ, ಮುಂದೂಡಲ್ಪಟ್ಟಿದೆ ಎಂದು ಈ ಭಾಗ ಪ್ರತಿನಿಧಿಸುವ ಕೇಂದ್ರಮಂತ್ರಿ ಹೇಳುತ್ತಾರೆ. ಇನ್ಯಾವಾಗ ಸಭೆ? ಆರು ತಿಂಗಳಿಗೋ, ವರ್ಷಕ್ಕೋ?
.೨೦೨೩ರ ಜನವರಿ ತಿಂಗಳಲ್ಲಿ ಮಹದಾಯಿ ವಿರುದ್ಧ ಗೋವಾ ಎತ್ತಿರುವ ಆಕ್ಷೇಪಗಳನ್ನು, ಹೆಚ್ಚೂ ಕಡಿಮೆ ಒಂದೂ ವರೆ ವರ್ಷದ ನಂತರ, ಅಂದರೆ ಮೊನ್ನೆಯ ವನ್ಯಜೀವಿ ಮಂಡಳಿ ಸಭೆಯ ನಂತರ ಕೈಗೆತ್ತಿಕೊಂಡು ರಾಜ್ಯದ ಬಂಡೂರಿ ಪ್ರಸ್ತಾವನೆಯನ್ನು ವಾಪಸ್ ಕಳಿಸಿರುವುದು ಏಕೆ?
ಈ ವಾದ ವಿವಾದದಲ್ಲೇ ಕಳೆದು ಹೋಯಿತಲ್ಲ, ನಲವತ್ನಾಲ್ಕು ವರ್ಷ? ಜನರ ಸಹನೆಗೆ ಭೇಷ್ ಎನ್ನಬೇಕಲ್ಲವೇ? ಎಂತಹ ಸ್ಥಿತಿಗೆ ಬಂದಿದ್ದೇವೆಂದರೆ, ಒಂದೇ ದೇಶದ ರಾಜ್ಯಗಳ ಮುಖ್ಯಮಂತ್ರಿಗಳು, ಸರ್ಕಾರ, ವಿವಿಧ ರಾಜಕೀಯ ಮುಖಂಡರು ಪರಸ್ಪರ ಕುಳಿತು ಮಾತನಾಡುವ ವಾತಾವರಣವೂ ಇಲ್ಲವಾಯಿತಲ್ಲವೇ?
ರಾಜ್ಯ ಸರ್ಕಾರವೇ ಮುಂದಾಗಿ ಮಹದಾಯಿಗಾಗಿ ಪ್ರಧಾನಿ ಬಳಿ ನಿಯೋಗ ಕೊಂಡೊಯ್ಯುವ ಘೋಷಣೆ ಮಾಡಿದೆ. ಇದು ಸರಿಯಾದ ಪ್ರತ್ಯುತ್ತರ. ಆದರೆ ಹಿಂದೊಮ್ಮೆ ಇದೇ ಸಿಎಂ ಸಿದ್ದರಾಮಯ್ಯನವರ ನೇತೃತ್ವಕ್ಕೆ ಪ್ರಧಾನಿಯಿಂದ ಸಿಕ್ಕಂತಹ ಪ್ರತಿಕ್ರಿಯೆಯೇ ಈ ಬಾರಿಯೂ ಸಿಗದಂತೆ ರಾಜಕೀಯವಾಗಿ ಮತ್ತು ಸಾಂಘಿಕವಾಗಿ ಯತ್ನಗಳು ಆಗಬೇಕಿದೆ.
ಕಳಸಾ ಬಂಡೂರಿಗಾಗಿ, ಮಹದಾಯಿಗಾಗಿ ಕರ್ನಾಟಕ ಮತ್ತು ಗೋವಾದಲ್ಲಿ ಸಾಕಷ್ಟು ಪ್ರತಿಭಟನೆಗಳು ಜರುಗಿವೆ. ಆಗಾಗ ವಿವಾದ ಭುಗಿಲೇಳುತ್ತದೆ. ರಾಜಕೀಯ ನಾಯಕರು ತಮಗನುಕೂಲಕರವಾಗಿ ವಿವಾದವನ್ನು ಬಳಸಿಕೊಂಡಿದ್ದಾರೆ. ಬಳಸಿಕೊಳ್ಳುತ್ತಲೂ ಇದ್ದಾರೆ. ಮುಂದೆಯೂ ಬಳಸಿಕೊಳ್ಳುತ್ತಾರೆ. `ದಮ್ಮು-ತಾಕತ್ತು' ಹೂಂಕರಿಸುತ್ತಾರೆ. ಇನ್ನೆಷ್ಟು ಕಾಲ, ಇನ್ನೆಷ್ಟು ಚುನಾವಣೆಗಳು ಇದೇ ವಿವಾದದಲ್ಲಿ ನಡೆಯಬೇಕು…?… ಗೊತ್ತಿಲ್ಲ !!