"ಮಹದಾಯಿ ವಿಷಯದಲ್ಲಿ ಗಂಭೀರವಾಗಿದ್ದೇವೆ"
ಪಣಜಿ: ಸುಪ್ರಿಂ ಕೋರ್ಟ್‌ನಲ್ಲಿ ಕರ್ನಾಟಕ ಸರ್ಕಾರವು ಮಹದಾಯಿ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೂ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ. ಗೋವಾ ರಾಜ್ಯವು ಸುಪ್ರೀಂ ಕೋರ್ಟ್‌ನಲ್ಲಿ ಮಹದಾಯಿ ವಿಷಯದಲ್ಲಿ ಬಲವಾದ ಸಾಕ್ಷ್ಯವನ್ನು ಹೊಂದಿದೆ ಎಂದು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಹೇಳಿದ್ದಾರೆ.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಗೋವಾ ಪರ ಮಹದಾಯಿ ಪ್ರಕರಣದಲ್ಲಿ ವಾದ ಮಂಡಿಸುತ್ತಿರುವ ಅಡ್ವೊಕೇಟ್ ಜನರಲ್ ದೇವಿದಾಸ್ ಪಾಂಗಮ್ ಸೇರಿದಂತೆ ಇಡೀ ಕಾನೂನು ತಂಡವು ಸುಪ್ರೀಂ ಕೋರ್ಟ್‌ನಲ್ಲಿ ಗೋವಾದ ಪ್ರಕರಣವನ್ನು ತೀವ್ರವಾಗಿ ವಾದಿಸಲು ಸಿದ್ಧವಾಗಿದೆ. ಎಜಿ ಮತ್ತು ವಕೀಲರ ಸಂಪೂರ್ಣ ಸಮಿತಿಯು ಕಳೆದ ಹಲವು ದಿನಗಳಿಂದ ಮಹದಾಯಿ ವಿಷಯವನ್ನು ಗಂಭೀರವಾಗಿ ಪರಿಶೀಲಿಸುತ್ತಿದೆ ಎಂದು ಸಿಎಂ ಸಾವಂತ್ ಹೇಳಿದರು.
ಪ್ರಕರಣಗಳು ದಾಖಲಾದ ರೀತಿಯಲ್ಲಿ ಗೋವಾ ರಾಜ್ಯವು ಮಹದಾಯಿ ಪ್ರಕರಣವನ್ನು ತನ್ನ ಪರವಾಗಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. "ನಾವು ತುಂಬಾ ಗಂಭೀರವಾಗಿದ್ದೇವೆ ಮತ್ತು ತುಂಬಾ ಬಲಶಾಲಿಯಾಗಿದ್ದೇವೆ" ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮತ್ತೆ ತಮ್ಮ ನಿಲುವು ಧೃಢಪಡಿಸಿದ್ದಾರೆ.
ಮಹದಾಯಿ ಸುಪ್ರೀಂ ವಿಚಾರಣೆ ಡಿ. 6ಕ್ಕೆ ಸಾಧ್ಯತೆ
ಮಹದಾಯಿ ನದಿ ನೀರು ಹಂಚಿಕೆ ಪ್ರಕರಣದ ವಿಚಾರಣೆ ನವೆಂಬರ್ 29ರಂದು ಬುಧವಾರ ನಡೆಯಲಿದೆ ಎಂದು ನಿಗದಿಯಾಗಿತ್ತು. ಆದರೆ ಬುಧವಾರ ಸುಪ್ರಿಂ ಕೋರ್ಟ್‌ನಲ್ಲಿ ವಿಚಾರಣೆ ನಡೆದಿಲ್ಲ. ಗುರುವಾರ ವಿಚಾರಣೆ ನಡೆಯುವ ಸಾಧ್ಯತೆಯಿದೆ ಎಂದು ಗೋವಾ ಪರ ವಕೀಲರು ಮಾಹಿತಿ ನೀಡಿದ್ದರಾದರೂ ಗುರುವಾರವೂ ಕೂಡ ಸುಪ್ರಿಂ ಕೋರ್ಟ್‌ನಲ್ಲಿ ಮಹದಾಯಿ ಪ್ರಕರಣದ ವಿಚಾರಣೆ ನಡೆದಿಲ್ಲ ಎಂದು ಗೋವಾ ಪರ ವಾದ ಮಂಡಿಸುವ ಅಡ್ವೊಕೇಟ್ ಜನರಲ್ ದೇವಿದಾಸ್ ಪಾಂಗಮ್ ಮಾಹಿತಿ ನೀಡಿದ್ದಾರೆ. ಪ್ರಕರಣ ಸುಪ್ರಿಂ ಕೋರ್ಟ್‌ನಲ್ಲಿ ಡಿಸೆಂಬರ್ ೬ರಂದು ವಿಚಾರಣೆಗೆ ಬರುವ ಸಾಧ್ಯತೆಯಿದೆ ಎಂದು ಗೋವಾ ಪರ ವಕೀಲರು ಮಾಹಿತಿ ನೀಡಿದ್ದಾರೆ.