For the best experience, open
https://m.samyuktakarnataka.in
on your mobile browser.

ಮಹಾಮೇಳಾವ ನಡೆಸಲು ಅವಕಾಶ ಕೊಡುವುದು ಸಲ್ಲ

11:14 AM Dec 05, 2023 IST | Samyukta Karnataka
ಮಹಾಮೇಳಾವ ನಡೆಸಲು ಅವಕಾಶ ಕೊಡುವುದು ಸಲ್ಲ

ಬೆಳಗಾವಿ ನಮಗೆ ಬೇಕೆಂದು ಒತ್ತಾಯಿಸಿ ಪ್ರತಿಭಟನೆ ಸಭೆ ನಡೆಸುವುದಕ್ಕೆ ಸಿದ್ಧರಾಗಿದ್ದ ಮಹಾರಾಷ್ಟçದವರಿಗೆ ಜಿಲ್ಲಾಧಿಕಾರಿ ಅನುಮತಿ ಕೊಡದೇ ಅವರನ್ನು ಗಡಿಯಿಂದ ಹೊರಹೋಗಬೇಕೆಂದು ಹೇಳಿರುವುದು ಸರಿಯಾಗಿದೆ. ಒಕ್ಕೂಟ ವ್ಯವಸ್ಥೆ ಕಾಪಾಡುವುದು ಎಲ್ಲರ ಕರ್ತವ್ಯ.

ಭಾಷಾವಾರು ಪ್ರಾಂತ್ಯ ರಚನೆಯಾದ ಮೇಲೆ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ನಿಗದಿಯಾಗಿ ಹೋಗಿದೆ. ಇದನ್ನು ಬದಲಿಸುವ ಸಾಮರ್ಥ್ಯ ಇರುವುದು ಸಂಸತ್ತಿಗೆ ಮಾತ್ರ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಹೀಗಿದ್ದೂ ಪ್ರತಿ ಬಾರಿ ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆದಾಗಲೂ ಮಹಾರಾಷ್ಟçದವರು ಪ್ರತಿಭಟನೆ ನಡೆಸುವುದನ್ನು ನಿಲ್ಲಿಸಿಲ್ಲ. ಇದಕ್ಕೆ ಜನಬೆಂಬಲವಂತೂ ಇಲ್ಲವೇ ಇಲ್ಲ. ಆದರೂ ರಾಜಕೀಯ ಕಾರಣಗಳಿಗೆ ಪ್ರತಿಭಟನೆ ನಡೆಸುವುದನ್ನು ನಿಲ್ಲಿಸಿಲ್ಲ. ಇದಕ್ಕೆ ಕೊನೆ ಹಾಡಲೇಬೇಕು. ಏನೇ ಪ್ರತಿಭಟನೆ ನಡೆಸಬೇಕಾದರೂ ಅವರು ತಮ್ಮ ರಾಜ್ಯದಲ್ಲಿ ನಡೆಸಬಹುದು. ಶಾಸನಸಭೆ ಅಧಿವೇಶನ ಸಂವಿಧಾನಬದ್ಧವಾಗಿ ನಡೆಯುವುದರಿಂದ ಅದನ್ನು ವಿರೋಧಿಸಲು ಬರುವುದಿಲ್ಲ. ಆಯಾ ರಾಜ್ಯಗಳಲ್ಲಿ ವಿಧಾನಸಭೆ ಅಧಿವೇಶನ ನಡೆಸುವುದು ಅಲ್ಲಿಯ ಶಾಸಕರ ತೀರ್ಮಾನ. ಹೀಗಾಗಿ ಬೆಳಗಾವಿಯಲ್ಲಿ ವರ್ಷಕ್ಕೊಮ್ಮೆ ಅಧಿವೇಶನ ನಡೆಸುವ ಸಂಪ್ರದಾಯ ಮುಂದುವರಿದಿದೆ. ಇದಕ್ಕೆ ಅಡ್ಡಿಪಡಿಸುವುದು ಸಂವಿಧಾನವನ್ನು ವಿರೋಧಿಸಿದಂತೆ. ಜನಸಾಮಾನ್ಯರು ಪ್ರತಿಭಟನೆ ನಡೆಸುವುದು ತಮ್ಮ ಬೇಡಿಕೆಗಳ ಈಡೇರಿಕೆಗೆ ಹೊರತು ರಾಜ್ಯದ ವಿರುದ್ಧ ಅಲ್ಲ. ಒಮ್ಮೆ ರಾಜ್ಯಗಳ ಗಡಿ ತೀರ್ಮಾನವಾದ ಮೇಲೆ ಅದನ್ನು ರಸ್ತೆಯಲ್ಲಿ ಪ್ರಶ್ನಿಸಲು ಬರುವುದಿಲ್ಲ. ಮಹಾರಾಷ್ಟ್ರದವರಿಗೆ ಏನಾದರೂ ಗಡಿ ಸಮಸ್ಯೆ ಇದ್ದಲ್ಲಿ ಸಂಸತ್ತಿನ ಮುಂದೆ ಅವರ ಸಂಸದರ ಮೂಲಕ ಪ್ರಶ್ನಿಸಬೇಕು. ಇಲ್ಲವೆ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಬೇಕು. ಅದನ್ನು ಬಿಟ್ಟು ಬೆಳಗಾವಿಯಲ್ಲಿ ಸಮಾವೇಶ ನಡೆಸಿದರೆ ಜನರ ನೆಮ್ಮದಿ ಕೆಡಿಸಬಹುದೇ ಹೊರತು ಉಪಯೋಗವೇನೂ ಆಗುವುದಿಲ್ಲ. ಹಿಂದೆ ಎಂಇಎಸ್ ಪಕ್ಷ ಬೆಳಗಾವಿ ಜಲ್ಲೆಯಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿತ್ತು. ಕೆಲವರು ಶಾಸನಸಭೆಗೆ ಚುನಾಯಿತರಾಗುತ್ತಿದ್ದರು. ಬಜೆಟ್ ಅಧಿವೇಶನದಲ್ಲಿ ಪ್ರತಿಭಟಿಸುವುದಕ್ಕೆ ಮಾತ್ರ ಅವರು ಸೀಮಿತಗೊಂಡಿದ್ದರು. ಈಗ ಚುನಾವಣೆಯಲ್ಲಿ ಗೆಲುವುದಕ್ಕೆ ಆಗುತ್ತಿಲ್ಲ. ರಾಜಕೀಯ ಪ್ರಭಾವ ಇಳಿಮುಖಗೊಂಡಿದೆ. ಈಗ ಜನಪ್ರಿಯತೆ ಬಹಿರಂಗ ಸಭೆಗೆ ಸೀಮಿತಗೊಂಡಿದೆ.
ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡ ಮೇಲೆ ಯಾರು ಯಾವ ರಾಜ್ಯದಲ್ಲಿದ್ದಾರೋ ಅಲ್ಲೇ ನೆಮ್ಮದಿಯ ಬದುಕು ಕಂಡುಕೊಳ್ಳಬೇಕು. ಇದೇ ತತ್ವದ ಮೇಲೆ ಹೊರನಾಡ ಕನ್ನಡಿಗರು ಯಾವ ರಾಜ್ಯದಲ್ಲಿದ್ದಾರೋ ಆ ರಾಜ್ಯಕ್ಕೆ ಹೊಂದಿಕೊಂಡು ಬದುಕುತ್ತಿದ್ದಾರೆ. ಅದೇರೀತಿ ಮಹಾರಾಷ್ಟ್ರದವರು ಬದುಕುವುದನ್ನು ಕಲಿಯುವುದು ಒಳಿತು. ಇಂದಿನ ಇಂಟರ್‌ನೆಟ್ ಯುಗದಲ್ಲಿ ಯಾರು ಎಲ್ಲೇ ಇದ್ದರೂ ಬದುಕಬಹುದು. ಹಳ್ಳಿಯಲ್ಲಿದ್ದರೂ ಅವಕಾಶವಂಚಿತರಾಗುವುದಿಲ್ಲ. ಜ್ಞಾನಾಧರಿತ ವೃತ್ತಿಗಳಿಗೆ ಬೇಡಿಕೆ ಇನ್ನೂ ಅಧಿಕಗೊಳ್ಳಲಿದೆ. ಹೀಗಿರುವಾಗ ಗಡಿ ವಿವಾದ ಕೆದಕುವುದು ಹಾಸ್ಯಾಸ್ಪದ. ಇಂದಿನ ಯುವ ಪೀಳಿಗೆ ಹೊಸ ಅವಕಾಶಗಳನ್ನು ಹುಡುಕಿಕೊಂಡು ದೇಶವಿದೇಶಗಳಿಗೆ ಹೋಗುತ್ತಿರುವಾಗ ಗಡಿ ವಿವಾದವನ್ನು ಕೆದಕುವುದು ಬಾಲಿಶ ವರ್ತನೆ. ಭಾಷಾವಾರು ಪ್ರಾಂತ್ಯ ರಚನೆಯಾದ ಮೇಲೆ ಎಲ್ಲವೂ ಚೆನ್ನಾಗಿದೆ ಎಂದು ಹೇಳಲು ಬರುವುದಿಲ್ಲ. ಹಾಗೆಂದು ಪ್ರತಿಭಟಿಸುತ್ತ ಇದ್ದಲ್ಲಿ ಇದಕ್ಕೆ ಪರಿಹಾರ ಎಂಬುದೇ ಇಲ್ಲ. ಇದನ್ನು ಅರಿತು ನಡೆಯುವುದು ವಿವೇಕ. ಮಹಾರಾಷ್ಟ್ರದ ಪ್ರಜ್ಞಾವಂತ ಸಮುದಾಯ ಮಧ್ಯಪ್ರವೇಶಿಸಿ ಇಂಥ ವರ್ತನೆಗಳಿಗೆ ಇತಿಶ್ರೀ ಹಾಡುವುದು ಅಗತ್ಯ. ಗಡಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಇಲ್ಲ ಎಂಬುದು ಎಲ್ಲ ರಾಜಕೀಯ ಪಕ್ಷಗಳಿಗೆ ತಿಳಿದಿದೆ. ಆದರೂ ಈ ಸತ್ಯವನ್ನು ಮುಚ್ಚಿಡಲಾಗುತ್ತಿದೆ. ಕಾವೇರಿ ವಿವಾದ ಬಂದಾಗ ನಮ್ಮಲ್ಲೇ ಬೇಕಾದಷ್ಟು ಪ್ರತಿಭಟನೆಗಳು ನಡೆದಿವೆ. ಕೆಲವು ಪ್ರತಿಭಟನೆಕಾರರು ಕರ್ನಾಟಕ ಗಡಿ ದಾಟಿ ಹೋಗಿಲ್ಲ. ತಮಿಳುನಾಡು ವಿಧಾನಸಭೆ ಅಧಿವೇಶನ ನಡೆದಾಗ ಎಂದೂ ನಾವು ಪ್ರತಿಭಟಿಸಿಲ್ಲ. ಪ್ರತಿಯೊಂದು ಹೋರಾಟಕ್ಕೂ ತಾತ್ವಿಕ ನೆಲೆಗಟ್ಟಿರಬೇಕು. ಮಹಾರಾಷ್ಟ್ರ ಗಡಿ ಹೋರಾಟ ಯಾವುದೇ ತಾತ್ವಿಕ ನೆಲೆಗಟ್ಟಿನ ಮೇಲೆ ನಿಂತಿಲ್ಲ. ನಾವು ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಿಸಿರುವುದೇ ಶಾಸನಸಭೆಯ ಅಧಿವೇಶನ ನಡೆಸುವುದಕ್ಕೇ ಎಂಬುದು ಸ್ಪಷ್ಟ. ಅಲ್ಲಿಗೆ ಪ್ರಾದೇಶಿಕ ಕಚೇರಿಗಳು ಸ್ಥಳಾಂತರಗೊಳ್ಳಬೇಕು. ಅಧಿಕಾರ ವಿಕೇಂದ್ರೀಕರಣಗೊಳ್ಳಬೇಕು. ದೂರದ ನಿಪ್ಪಾಣಿಯಿಂದ ಜನ ತಮ್ಮ ಕೆಲಸಕ್ಕೆ ಬೆಂಗಳೂರಿನವರೆಗೆ ಬಂದು ಹೋಗುವಂತೆ ಮಾಡಬಾರದು. ಬೆಳಗಾವಿ ಜನ ಸರ್ಕಾರಿ ಕಚೇರಿಗಳಿಗೆ ಪ್ರತಿದಿನ ಅಲೆಯುವುದನ್ನು ತಪ್ಪಿಸಬೇಕು. ಬೆಳಗಾವಿ ವಿಭಾಗದ ಎಲ್ಲ ನಿರ್ಧಾರಗಳು ಅಲ್ಲೇ ಅಗಬೇಕು.ಮಹಾರಾಷ್ಟçದ ಪರ ಕೂಗು ನಿಲ್ಲಬೇಕು. ಅರಾಜಕತೆಗೆ ಅವಕಾಶ ನೀಡಬಾರದು.