ಮಹಾ ನವಮಿಯಂದೇ ಜಳಪಿಸಿದ ಮಾರಕಾಸ್ತ್ರ, ಸ್ನೇಹಿತನ ಬರ್ಬರ ಕೊಲೆ: ಆರೋಪಿಗಳಿಗೆ ಗುಂಡೇಟು…!
ಹುಬ್ಬಳ್ಳಿ: ಹಳೇ ದ್ವೇಷ, ಹಣಕಾಸಿನ ವ್ಯವಹಾರದ ಸಂಬಂಧ ಮಹಾನವಮಿ ಹಬ್ಬದ ದಿನವೇ ಯುವಕನ ಮೇಲೆ ಆತನ ಸ್ನೇಹಿತರೇ ಚಾಕುವಿನಿಂದ ಸಿಕ್ಕ ಸಿಕ್ಕಲ್ಲಿ ಇರಿದು ಕೊಲೆಗೈದ ಘಟನೆ ಗೋಪನಕೊಪ್ಪದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಗೋಪನಕೊಪ್ಪದ ಶಿವರಾಜ (22) ಎಂಬಾತನೇ ಕೊಲೆಯಾದ ಯುವಕ, ಈತ ಗುರುವಾರ ಗೋಪನಕೊಪ್ಪದ ಕರಿಯಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವದ ವೇಳೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಶಿವರಾಜ ಹಾಗೂ ಸಂದೀಪ್ ಎಂಬ ಯುವಕರ ಜೊತೆಗೆ ಜಗಳ ಮಾಡಿಕೊಂಡಿದ್ದ. ಈ ಜಗಳವು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಆಗ ಅಲ್ಲೇ ಇದ್ದ ಕೆಲವರು ಇಬ್ಬರನ್ನು ತಡೆದು ಬುದ್ದಿ ಹೇಳಿ ಕಳುಹಿಸಿದ್ದರು. ಆದರೆ, ಶುಕ್ರವಾರ ರಾತ್ರಿ ಏಕಾಏಕಿ ಆತನ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಶಿವರಾಜ ಮನೆಯಲ್ಲಿ ಹಬ್ಬದ ನಿಮಿತ್ತ ಕುರಿಯನ್ನು ಕಡಿದು ಅಡುಗೆ ಮಾಡಲಾಗಿತ್ತು. ಶುಕ್ರವಾರ ಮಧ್ಯಾಹ್ನದವರೆಗೂ ತನ್ನ ಸ್ನೇಹಿತರ ಜೊತೆ ಸೇರಿ ದೇವರಿಗೆ ನೈವಿದ್ಯ ಅರ್ಪಣೆ ಮಾಡಿ ತನ್ನ ಗೆಳೆಯರಿಗೆ ಊಟವನ್ನು ಮಾಡಿಸಿ ಕಳುಹಿಸಿದ್ದಾನೆ. ರಾತ್ರಿ 10 ಗಂಟೆಗೆ ಊಟವನ್ನು ಮಾಡಿ ಇಲ್ಲೇ ಹೊರಗಡೆ ಹೋಗಿ ಬರ್ತೀನಿ ಅಂತ ಹೇಳಿದ್ದವ ಮನೆ ಬಿಟ್ಟು ಹೋದ ಕೆಲವೇ ಕೆಲವು ನಿಮಿಷಗಳಲ್ಲಿ ಕೊಲೆಗೀಡಾಗಿದ್ದಾನೆ.
ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ಮಾಡಿದ್ದಾರೆ ಎಂದು ಶಿವರಾಜನ ಸ್ನೇಹಿತರು ಹೇಳುತ್ತಿದ್ದಾರೆ. ನಿನ್ನೆ ಜಗಳ ತೆಗೆದ ಸಂದೀಪ್ ಎಂಬಾತ, 'ನಿನ್ನ ನಾಳೆ ನೋಡ್ಕೊತೀನಿ..' ಅಂತಾ ಶಿವರಾಜಗೆ ಧಮ್ಮಿ ಹಾಕಿದ್ದ. ಆತನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಕಿಮ್ಸ್ ಶವಾಗಾರಕ್ಕೆ ಕಮಿಷನರ್ ಎನ್ ಶಶಿಕುಮಾರ್ ಭೇಟಿ ನೀಡಿದ್ದಾರೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಕೊಲೆ ಆರೋಪಿಗಳಿಗೆ ಗುಂಡೇಟು : ಶಿವರಾಜನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿರುವ ಆರೋಪದಡಿ ಸುದೀಪ ಮತ್ತು ಕಿರಣ ಎಂಬುವವರನ್ನು ಬಂಧಿಸಲಾಗಿತ್ತು. ಇವರಿಬ್ಬರು ಇನ್ನುಳಿದ ಆರೋಪಿಗಳ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದ್ದ ಹಿನ್ನೆಲೆಯಲ್ಲಿ ಹಳೇ ಹುಬ್ಬಳ್ಳಿಯ ರೈಲ್ವೆ ಕ್ವಾಟ್ರಸ್ ಬಳಿ ಕರೆದೊಯ್ಯಲಾಗಿತ್ತು. ಇದೇ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿ ಆಗಲು ಯತ್ನಿಸಿದ್ದರು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಲಾಗಿದೆ. ಗಾಯಗೊಂಡ ಆರು ಜನ ಪೊಲೀಸರು ಹಾಗೂ ಆರೋಪಿಗಳನ್ನು ಚಿಕಿತ್ಸೆಗಾಗಿ ಕೆಎಂಸಿಆರ್‌ಐ ನಲ್ಲಿ ಚಿಕಿತ್ಸೆಯಾಗಿ ದಾಖಲು ಮಾಡಲಾಗಿದೆ.